/newsfirstlive-kannada/media/media_files/2026/02/28/iran-supreme-leader-aytholla-ali-khameni-in-bunker-2026-02-28-18-55-40.jpg)
ಇರಾನ್​ ವರ್ಸಸ್​ ಇಸ್ರೇಲ್​ ಹಾಗೂ ಅಮೆರಿಕ ನಡುವೆ ಇಷ್ಟು ದಿನ ನಡೆಯುತ್ತಿದ್ದ ಶೀತಲ ಸಮರಕ್ಕೆ ಅಂತ್ಯ ಬಿದ್ದಿದೆ. ಇಂದಿನಿಂದ ಇರಾನ್ ಮೇಲೆ ಇಸ್ರೇಲ್​, ಅಮೆರಿಕ ಜಂಟಿಯಾಗಿ ಯುದ್ಧ ಸಾರಿದ್ದು 30 ಕಡೆ ದಾಳಿ ನಡೆಸಿ ನಗರಗಳನ್ನ ಉಡೀಸ್ ಮಾಡಿವೆ. ಇದಕ್ಕೆ ಇರಾನ್ ಕೂಡ ಪ್ರತ್ಯುತ್ತರ ಕೊಟ್ಟಿದ್ದು ದೊಡ್ಡಣ್ಣನ ಸೇನಾ ನೆಲೆಗಳನ್ನೇ ಧ್ವಂಸ ಮಾಡಿದೆ. ಸದ್ಯ ಇರಾನ್ ಪರಮೋಚ್ಛ ನಾಯಕ ಜೀವಭಯದಿಂದ ಬಂಕರ್ ಸೇರಿದ್ರೆ ಇತ್ತ ಭಾರತೀಯರಿಗೆ ಎಚ್ಚರಿಕೆ ನೀಡಲಾಗಿದೆ.
ಆಗಸದಿಂದ ದಿಢೀರ್​ನೇ ಬಂದಪ್ಪಳಿಸಿದ ಕ್ಷಿಪಣಿಗಳು
ಪ್ರಾಣಭಯದಿಂದ ಚೆಲ್ಲಾಪಿಲ್ಲಿಯಾದ ಜನರು
ನೋಡನೋಡುತ್ತಲೇ ಕ್ಷಿಪಣಿಗಳಿಂದ ಉಡೀಸ್ ಆದ ಸೇನಾ ನೆಲೆ
ಆಗಸದಲ್ಲಿ ಜೋರಾದ ಯುದ್ಧ ವಿಮಾನಗಳ ಅಬ್ಬರ
ಕ್ಷಿಪಣಿ ದಾಳಿಗೆ ಧಗ ಧಗ ಹೊತ್ತಿ ಉರಿಯುತ್ತಿರುವ ತೆಹ್ರಾನ್​
ಆಪರೇಷನ್ ಸಿಂಹ ಘರ್ಜನೆ.. ಇರಾನ್​ ಮೇಲೆ ಇಸ್ರೇಲ್​ ಸಾರಿರುವ ಯುದ್ಧ.. ಪ್ರಧಾನಿ ಮೋದಿ ಇಸ್ರೇಲ್​ ಪ್ರವಾಸ ಮುಗಿಸಿ ವಾಪಸ್ಸಾದ ಬಳಿಕ ಇಸ್ರೇಲ್ ಹಾಗೂ ಅಮೆರಿಕ, ಇರಾನ್ ಮೇಲೆ ಯುದ್ಧ ಸಾರಿವೆ. ಇರಾನ್ ರಾಜಧಾನಿ ತೆಹ್ರಾನ್​ ನಗರದ ಮೇಲೆ ಇಸ್ರೇಲ್​​ ಸೇನೆ ಕ್ಷಿಪಣಿಗಳ ಮಳೆ ಸುರಿಸಿ ಧ್ವಂಸ ಮಾಡಿಹಾಕಿದೆ.
ಪರಮೋಚ್ಛ ನಾಯಕ ಖಮೇನಿ ಟಾರ್ಗೆಟ್ ಮಾಡಿ ಕ್ಷಿಪಣಿ ದಾಳಿ
ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಭವನ ಗುರಿಯಾಗಿಸಿ ದಾಳಿ ನಡೆದಿದ್ದು, ಹಲವೆಡೆ ಭಾರಿ ಸದ್ದಿನೊಂದಿಗೆ ಸ್ಫೋಟ ಸಂಭವಿಸಿವೆ. ಸರಣಿ ಕ್ಷಿಪಣಿ ದಾಳಿ ಹಾಗೂ ಸ್ಫೋಟದಿಂದ ಇರಾನ್ ತತ್ತರಿಸಿ ಹೋಗಿದೆ. ಇರಾನ್ ತನ್ನ ಅಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮ ಮುಂದುವರಿಸಿದರೆ ಮತ್ತೆ ದಾಳಿ ನಡೆಸುವುದಾಗಿ ಅಮೆರಿಕಾ ಮತ್ತು ಇಸ್ರೇಲ್ ಮುಂಚೆಯೇ ಎಚ್ಚರಿಸಿದ್ದವು. ಈ ಬಗ್ಗೆ ಮಾತುಕತೆಯ ನಡುವೆಯೇ ಈ ದಾಳಿ ನಡೆದಿದೆ. ಪರಮಾಣು ಶಸ್ತ್ರಾಸ್ತ್ರಗಳ ಒಪ್ಪಂದ ಕುರಿತು ಮಾತುಕತೆ ನಡೆಯುತ್ತಿರುವಾಗಲೇ ಇಸ್ರೇಲ್, ಅಮೆರಿಕ ಇರಾನ್ ಮೇಲೆ ಜಂಟಿ ದಾಳಿ ನಡೆಸಿವೆ. ಇರಾನ್‌ನ ಪರಮಾಣು ಕೇಂದ್ರ, ಇಂಟಲಿಜೆನ್ಸ್ ಹಾಗೂ ಗುಪ್ತಚರ ಸಂಸ್ಥೆ ಸೇರಿದಂತೆ ಸುಮಾರು 30 ಗುರಿ ಇಟ್ಕೊಂಡು ದಾಳಿ ನಡೆಸಿವೆ. ಈ ಪೈಕಿ ಖಮೇನಿಯನ್ನೇ ಟಾರ್ಗೆಟ್ ಮಾಡಿ 7 ಮಿಸೈಲ್ ಹಾರಿಸಲಾಗಿದೆ. ರಾಜಧಾನಿ ತೆಹ್ರಾನ್‌ಗೆ ಮಿಸೈಲ್‌ಗಳು ಅಪ್ಪಳಿಸುತ್ತಿದ್ದಂತೆ ಜೀವಭಯದಿಂದ ಖಮೇನಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಿದ್ದಾರೆ.
ಕ್ಷಿಪಣಿ ದಾಳಿ ಬಳಿಕ ಇಸ್ರೇಲ್​ನಲ್ಲಿ ತುರ್ತು ಪರಿಸ್ಥಿತಿ
ಇರಾನ್​​ ಮೇಲಿನ ದಾಳಿ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಇಸ್ರೇಲ್​​ ದೇಶಾದ್ಯಂತ ತುರ್ತು ಪರಿಸ್ಥಿತಿ ​​​​ಘೋಷಿಸಲಾಗಿದೆ. ಆಸ್ಪತ್ರೆ ಸೇರಿ ತುರ್ತುಸೇವೆ ಹೊರತುಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟವನ್ನೂ ಇಸ್ರೇಲ್​​ ನಿರ್ಬಂಧಿಸಿದೆ. ಜೆರುಸಲೆಮ್‌ನಲ್ಲಿ ಸೋಮವಾರ ಸಂಜೆ 6:00 ಗಂಟೆಯವರೆಗೆ ಶಾಲೆಗಳು ಮತ್ತು ಇತರ ಎಲ್ಲಾ ಕಚೇರಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಸಾರ್ವಜನಿಕರೂ ವರ್ಕ್ ಫ್ರಮ್ ಹೋಮ್ ಮಾಡಲು ಸೂಚನೆ ನೀಡಲಾಗಿದೆ. ಅಲ್ಲದೇ ದೇಶಾದ್ಯಂತ ಸೈರನ್ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.
ಶಸ್ತ್ರಾಸ್ತ್ರ ಬಿಡಿ ಇಲ್ಲವೇ ಜೀವ ಬಿಡಿ.. ಇರಾನ್​​​ಗೆ ಟ್ರಂಪ್ ಎಚ್ಚರಿಕೆ
ಇನ್ನು ಇರಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಮತ್ತೆ ಗುಡುಗಿದ್ದಾರೆ. ಶಸ್ತ್ರಾಸ್ತ್ರ ಬಿಡಿ ಇಲ್ಲವೇ ಜೀವ ಬಿಡಿ ಅಂತ ಇರಾನ್ ಸರ್ವೋಚ್ಚ ನಾಯಕ ಖಮೇನಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇರಾನ್ ಶಸ್ತ್ರಾಸ್ತ್ರ ತ್ಯಜಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ. ಇರಾನ್ ಸಶಸ್ತ್ರ ಪಡೆ, ಪೊಲೀಸರು ಶಸ್ತ್ರಾಸ್ತ್ರ ಬಿಡದಿದ್ರೆ ಮರಣ ಖಚಿತ ಎಂದಿದ್ದಾರೆ. ಇದೇ ವೇಳೆ ಇರಾನ್​ನ ಜನರಿಗೆ ನಿಮ್ಮ ಸ್ವಾಂತಂತ್ರ್ಯ ಸಮೀಪಿಸುತ್ತಿದೆ ಅಂತ ಹೇಳಿದ್ದಾರೆ.
ಇಸ್ರೇಲ್, ಅಮೆರಿಕ ದಾಳಿಗೆ ಇರಾನ್ ಕೌಂಟರ್​ ಅಟ್ಯಾಕ್
ಇನ್ನು ತನ್ನ ಮೇಲೆ ದಿಢೀರ್​ ದಾಳಿ ನಡೆಸಿದ ಇಸ್ರೇಲ್​, ಅಮೆರಿಕಕ್ಕೆ ಇರಾನ್ ಕೂಡ ಪ್ರತ್ಯುತ್ತರ ಕೊಟ್ಟಿದೆ. ಇಸ್ರೇಲ್​ನ ಜೆರುಸಲೇಮ್​, ಟೆಲ್​ಅವಿವ್​ನ ಮೇಲೆ ದಾಳಿ ಮಾಡಿದೆ. 9 ಕಟ್ಟಡಗಳು ಟಾರ್ಗೆಟ್ ಮಾಡಿ ಕ್ಷಿಪಣಿಗಳ ಸುರಿಮಳೆಗೈದಿದೆ. ಪರಿಣಾಮ ಭಾರೀ ಪ್ರಮಾಣದ ಹಾನಿಯಾಗಿದೆ. ಆದ್ರೆ ಹಲವು ಲಾಂಚರ್​ಗಳನ್ನು ಇಸ್ರೇಲ್​ ಹೊಡೆದುರುಳಿಸಿದೆ. ಇನ್ನು ಅಮೆರಿಕ ವಾಯುನೆಲೆ ಮೇಲೂ ಇರಾನ್​ ದಾಳಿ ಮಾಡಿದೆ. ಕುವೈತ್, ಬಹ್ರೇನ್, ಅಬುದಾಭಿಯಲ್ಲಿನ ವಾಯು ಸೇನಾ ನೆಲೆಗಳನ್ನ ಟಾರ್ಗೆಟ್ ಮಾಡಿ ಉಡೀಸ್ ಮಾಡಿದೆ. ಇರಾನ್ ಮಿಸೈಲ್​ಗಳನ್ನ ಯುಎಇ ತಡೆದಿದ್ದು ಈ ವೇಳೆ ಓರ್ವ ಸಾವನ್ನಪ್ಪಿರುವ ಮಾಹಿತಿ ಸಿಕ್ಕಿದೆ. ಇದೇ ವೇಳೆ ದಾಳಿ ಆಗ್ತಿದ್ದಂತೆ ಇರಾನ್​ನಲ್ಲಿ ಮೊಬೈಲ್, ಇಂಟರ್​ನೆಟ್​ ಸಂಪರ್ಕ ಕಡಿತಗೊಳಿಸಲಾಗಿದೆ.
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎನ್ನುವಂತೆ ಇಸ್ರೇಲ್​-ಅಮೆರಿಕ ದಾಳಿಗೆ ಇರಾನ್ ಪ್ರತಿದಾಳಿ ಮಾಡುತ್ತಿದೆ. ಇರಾನ್ ದಾಳಿಯ ಬೆನ್ನಲ್ಲೇ ಇಸ್ರೇಲ್ ಮತ್ತಷ್ಟು ತೀವ್ರವಾಗಿ ದಾಳಿ ಮುಂದುವರೆಸಿದೆ. ಯುದ್ಧದಿಂದ ಜನರೆಲ್ಲ ಭೀತಿಯಲ್ಲಿದ್ದಾರೆ. ಸದ್ಯ ಯುದ್ಧದಿಂದ ಮಧ್ಯಪ್ರಾಚ್ಯ ರಾಷ್ಟ್ರಗಳು ತಮ್ಮ ವಾಯು ಮಾರ್ಗಗಳ ಪ್ರವೇಶವನ್ನು ನಿರ್ಬಂಧಿಸಿವೆ. ಇದರಿಂದ ಭಾರತದಿಂದ ಹೋಗಬೇಕಿದ್ದ ವಿಮಾನಗಳು ವಾಪಸ್ಸಾಗಿವೆ. ಇದೇ ವೇಳೆ ಇಸ್ರೇಲ್​ನಲ್ಲಿರುವ ಭಾರತ ರಾಯಭಾರಿ ಕಚೇರಿ ಭಾರತೀಯರಿಗೆ ಸುರಕ್ಷತೆಯಿಂದ ಇರುವಂತೆ ಸೂಚಿಸಿದೆ.
ನ್ಯೂಸ್​ ಫಸ್ಟ್​ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us