/newsfirstlive-kannada/media/media_files/2025/08/23/backward-classes-commission-survey-2025-08-23-16-44-17.jpg)
ಇಂದಿನಿಂದ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಇಂದಿನಿಂದ ( ಆಗಸ್ಟ್ 23 ರಿಂದ) ಪ್ರಾರಂಭಿಸುತ್ತಿದೆ, ವಿದ್ಯುತ್ ಮೀಟರ್ ರೀಡರುಗಳು ಎಲ್ಲ ಮನೆಗಳನ್ನು ಜಿಯೋಟ್ಯಾಗಿಂಗ್ ಮಾಡುವ ಕಾರ್ಯ ಪ್ರಾರಂಭಿಸಲಿದ್ದಾರೆ. ಯಾವುದೇ ಮನೆಗಳು ತಪ್ಪಿ ಹೋಗದಂತೆ ಯಶಸ್ವಿಯಾಗಿ ಸಮೀಕ್ಷೆ ಕೈಗೊಳ್ಳಲು ರಾಜ್ಯದ ಜನತೆ ಸಹಕರಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ಆರ್ ನಾಯ್ಕ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಮಧುಸೂದನ್ ನಾಯ್ಕ್ ಅವರು, ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸುವ ಬದ್ಧತೆಯೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರವು ಮುಂದೆ ಈ ಸಮೀಕ್ಷೆಯ ಅಂಕಿಅಂಶಗಳ ಆಧಾರದ ಮೇಲೆಯೇ ಹಿಂದುಳಿದ ಜಾತಿಗಳಿಗೆ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿಯ ನೀಡಿಕೆಯ ತೀರ್ಮಾನ ಕೈಗೊಳ್ಳಬಹುದು. 10 ವರ್ಷಗಳ ಹಿಂದೆಯೂ ಕಾಂತರಾಜ್ ಆಯೋಗದ ಅಧ್ಯಕ್ಷರಾಗಿದ್ದ ವೇಳೆ ಸಮೀಕ್ಷೆಯನ್ನು ಮಾಡಲಾಗಿತ್ತು. ಆಗ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆದಾರರು ಎಲ್ಲರ ಮನೆಗಳಿಗೆ ಭೇಟಿ ನೀಡಿರಲಿಲ್ಲ. ಅದರ ಅಂಕಿಅಂಶಗಳು ನಿಖರವಾಗಿಲ್ಲ ಎಂಬ ಟೀಕೆ ಕೇಳಿ ಬಂದಿತ್ತು. ವಿಶೇಷವಾಗಿ ಲಿಂಗಾಯತ, ಒಕ್ಕಲಿಗ ಸಮುದಾಯಗಳು ತೀವ್ರವಾಗಿ ಕಾಂತರಾಜ್ ಆಯೋಗದ ಸಮೀಕ್ಷಾ ವರದಿಯನ್ನು ವಿರೋಧಿಸಿದ್ದರು. ಹೀಗಾಗಿ ಕಾಂಗ್ರೆಸ್ ಹೈಕಮ್ಯಾಂಡ್ ಹೊಸದಾಗಿ ಸಮೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯಗೆ ಸೂಚನೆ ನೀಡಿದೆ. ಹೀಗಾಗಿ ಈಗ ಇಂದಿನಿಂದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮತ್ತೊಮ್ಮೆ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಆರಂಭಿಸಿದೆ.
ಈಗಾಗಲೇ ಲಿಂಗಾಯತ, ಒಕ್ಕಲಿಗ ಸಮುದಾಯದ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಈ ಭಾರಿಯ ಸಮೀಕ್ಷೆಯಲ್ಲಿ ತಮ್ಮ ತಮ್ಮ ಜಾತಿಗಳ ಜನರು ಜಾತಿಯನ್ನು ಸರಿಯಾಗಿ ಸಮೀಕ್ಷೆ ವೇಳೆ ದಾಖಲಿಸುವಂತೆ ಸೂಚನೆ ನೀಡಿ ಜಾಗೃತಿ ಮೂಢಿಸಲು ನಿರ್ಧರಿಸಿದ್ದಾರೆ. ಲಿಂಗಾಯತ ಸಮುದಾಯದ ಎಲ್ಲ ಪಕ್ಷಗಳ ನಾಯಕರು ಮೊನ್ನೆ ಸಭೆ ನಡೆಸಿದ್ದಾರೆ. ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಒಕ್ಕಲಿಗ ನಾಯಕರೆಲ್ಲಾ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. 10 ವರ್ಷದ ಹಿಂದಿನ ಸಮೀಕ್ಷೆಯಲ್ಲಿ ಆದ ತಪ್ಪುಗಳು ಈ ಭಾರಿ ಆಗದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇನ್ನೂ ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಮೊದಲ ಹಂತದಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಕೆಲಸಗಳಾಗಿರುವ ಮನೆ ಪಟ್ಟಿ ಮತ್ತು ಅವುಗಳ ನಕ್ಷೆ (ಮ್ಯಾಪಿಂಗ್) ಸಿದ್ಧಪಡಿಸುವ ಕಾರ್ಯವನ್ನು ಒಳಗೊಂಡಿರುತ್ತದೆ. ಅದು ರಾಜ್ಯದಾದ್ಯಂತ ಎಲ್ಲಾ ಮನೆಗಳ ಸಂಪೂರ್ಣ ಎಣಿಕೆ, ಅನುಕ್ರಮ ಸಂಖ್ಯೆಗಳನ್ನು ನೀಡುವುದು, ಮ್ಯಾಪಿಂಗ್ ಮಾಡುವ ಕೆಲಸವನ್ನು ಸಾಧ್ಯವಾಗಿಸುತ್ತದೆ. ರಾಜ್ಯದಲ್ಲಿರುವ ಎಲ್ಲಾ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕವಿರುವುದರಿಂದ ವಾಸದ ಮನೆಗಳ ಆರ್. ಆರ್. ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ.
ಇದರಿಂದ ಎರಡನೇ ಹಂತದಲ್ಲಿ ಸಮೀಕ್ಷೆಯ ಕಾರ್ಯವನ್ನು ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ಕಾರ್ಯಗತಗೊಳಿಸಲು ಅನುಕೂಲವಾಗುತ್ತದೆ. ಎರಡನೇಯ ಹಂತದ ಸಮೀಕ್ಷೆಯ ಕಾರ್ಯವನ್ನು ದಸರಾ ರಜೆಯ ಅವಧಿಯಲ್ಲಿ 22 ನೇ ಸೆಪ್ಟೆಂಬರ್ ನಿಂದ 7 ನೇ ಅಕ್ಟೋಬರ್ 2025 ರವರೆಗೆ ನಡೆಸಲು ಗುರಿ ಹೊಂದಲಾಗಿದೆ. ಈ ಸಮಯದಲ್ಲಿ ಶಾಲಾ ರಜಾದಿನಗಳು ಇರುವುದರಿಂದ ಸಮೀಕ್ಷೆ ಕಾರ್ಯಕ್ಕೆ ಪೂರಕವಾಗುತ್ತದೆ.
ಇ-ಆಡಳಿತ ಮತ್ತು ಇಂಧನ ಇಲಾಖೆಗಳು ವಿದ್ಯುಚ್ಛಕ್ತಿ ಮೀಟರ್ ಸಂಪರ್ಕದ (ಆರ್.ಆರ್. ನಂಬರ್) ಆಧಾರದ ಮೇಲೆ ವಿನ್ಯಾಸಗೊಳಿಸಿದ ಈ ನವೀನ, ಕ್ರಿಯಾತ್ಮಕ ಮತ್ತು ವಿಶಿಷ್ಟ ವ್ಯವಸ್ಥೆಯು ಉತ್ತಮವಾಗಿದೆ. ಅದಕ್ಕನುಗುಣವಾಗಿ ಒಂದು ಅಗತ್ಯವಾದ 'ಆ್ಯಪ್' ಅಭಿವೃದ್ಧಿಪಡಿಸಲಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು ಸೇರಿದಂತೆ, ಆಯೋಗದ ಇಂಧನ ಇಲಾಖೆಯ, ಇ.ಡಿ.ಸಿ.ಎಸ್ ಸಂಸ್ಥೆಯ ಉತ್ಸಾಹಿ ಹಾಗೂ ಸೃಜನಶೀಲ ಸಲಹಾ ತಂಡದ ಸಹಕಾರದೊಂದಿಗೆ ಈ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಲಾಗಿದೆ. ಸಮೀಕ್ಷೆಯ ಕಾರ್ಯವನ್ನು ತ್ವರಿತವಾಗಿ ಪ್ರಾರಂಭಿಸಲು ಸಹಾಯ ಮಾಡುತ್ತದೆ.
ಇದು ರಾಜ್ಯದಾದ್ಯಂತ ಇರುವ ಇಂಧನ ಇಲಾಖೆಯ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ( ESCOM) ಗಳ ಅಪಾರ ಸಂಖ್ಯೆಯ 'ಮೀಟರ್ ರೀಡರ್' (Meter Readers) ಗಳನ್ನು ಒಳಗೊಂಡಿರುತ್ತದೆ. ಕರ್ನಾಟಕ ರಾಜ್ಯವು ಎಲ್ಲಾ ಮನೆಗಳನ್ನು ವಿದ್ಯುದ್ದೀಕರಣ ಗೊಳಿಸುವುದರಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ವಿಷಯವಾಗಿರುವುದರಿಂದ ಎಸ್ಕಾಂಗಳ ಮೀಟರ್ ರೀಡರ್ ಗಳು, ಗ್ರಾಹಕರ ಮನೆ ಬಳಕೆ ವಿದ್ಯುತ್ ಸಂಪರ್ಕದ ಮೀಟರ್ ಅನ್ನು ಓದುವುದು ಮತ್ತು ಬಿಲಿಂಗ್ ಮಾಡುವುದರ ಜೊತೆಗೆ ಮನೆಗಳನ್ನು 'ಜಿಯೋ ಟ್ಯಾಗ್' ಮಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವ್ಯಾಪ್ತಿಗೆ ಒಳಪಡಿಸುತ್ತಾರೆ.
/filters:format(webp)/newsfirstlive-kannada/media/media_files/2025/08/23/backward-classes-commission-survey02-2025-08-23-16-55-10.jpg)
ಮೀಟರ್ ರೀಡರ್ ಗಳು ಸೆರೆಹಿಡಿದ ಮನೆ ಪಟ್ಟಿ ಡೇಟಾವನ್ನು EDCS (ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣೆ) ನ ಸರ್ವರ‌್ ಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ನಂತರ ದ್ವಿತೀಯ ದತ್ತಾಂಶಗಳನ್ನು ಆಧರಿಸಿ, ಮೌಲೀಕರಿಸಿದ ನಂತರ 'ಮನೆ ಪಟ್ಟಿ' ಸಮೀಕ್ಷೆಯ ಉದ್ದೇಶಕ್ಕಾಗಿ 'ಮ್ಯಾಪಿಂಗ್' ಮಾಡಲಾಗುತ್ತದೆ. ಅಭಿವೃದ್ಧಿಪಡಿಸಲಾದ ಅಪ್ಲಿಕೇಶನ್ ನಲ್ಲಿ ಮನೆಯ 'ಸ್ಥಳ' (Location) ವನ್ನು ಸೆರೆಹಿಡಿಯಲಾಗುತ್ತದೆ ಮತ್ತು ಪ್ರತಿ ಮನೆಗಳಿಗೆ 'ವಿಶಿಷ್ಟ್ಯ (Unique Number) ಸಂಖ್ಯೆಯನ್ನು' ನೀಡಲಾಗುತ್ತದೆ. [ಅಪಾರ್ಟ್ ಮೆಂಟ್ ಗಳು / ವಾಸಸ್ಥಳಗಳ ಕ್ಲಸ್ಟರ್ ಸೇರಿದಂತೆ]
ತಮ್ಮ 'ಬಿಲ್ಲಿಂಗ್ ಸೈಕಲ್'ನಲ್ಲಿ ಮೀಟರ್ ರೀಡರ್ ಗಳು ಆಗಸ್ಟ್ 23, 2025 ರಿಂದ ಸದರಿ ಕೆಲಸವನ್ನು ಪ್ರಾರಂಭಿಸುತ್ತಾರೆ ಮತ್ತು ಅಭಿವೃದ್ಧಿ ಪಡಿಸಲಾದ ಆ್ಯಪ್ ನಲ್ಲಿ ದಾಖಲಿಸುತ್ತಾರೆ. ಇದಾದ ನಂತರ ಪ್ರತಿ ಮನೆಗೂ ಸ್ಟಿಕ್ಕರ್ ಅಂಟಿಸಿ ಸಮೀಕ್ಷಾ ದಾರರಿಗೆ ಮನೆಯ ಗುರುತಿಸುವಿಕೆ ಸುಲಭವಾಗುವಂತೆ ಮಾಡುತ್ತಾರೆ.
ಪ್ರಸ್ತಾವಿತ ಸಮೀಕ್ಷೆಯು ಹಿಂದುಳಿದ ವರ್ಗಗಳು ಮತ್ತು ಇತರ ಎಲ್ಲಾ ಜನರ 'ದತ್ತಾಂಶಗಳನ್ನು ಸೆರೆಹಿಡಿಯುವುದು' ಮಾತ್ರವಲ್ಲದೆ, ಅಂದಾಜು 7 ಕೋಟಿ ಜನರಿಗೆ ಸರ್ಕಾರಿ ಇಲಾಖೆಗಳಿಂದ ಪ್ರಾರಂಭಿಸಲಾಗಿರುವ ಹಾಗೂ ಮುಂದೆ ಪ್ರಾರಂಭಿಸಲಿರುವ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಬಹುದಾದ ಉಪಯುಕ್ತ ದತ್ತಾಂಶವಾಗಲಿದೆ.
ಮನೆ ಪಟ್ಟಿ ಕಾರ್ಯಾಚರಣೆಗಳ ಈ ಮೊದಲ ಹಂತವು ತುಂಬಾ ಸವಾಲಿನದ್ದಾಗಿದ್ದರೂ ರಾಜ್ಯದ ಎಲ್ಲಾ ಮನೆಗಳನ್ನು ಒಳಗೊಂಡಂತೆ ವ್ಯವಸ್ಥಿತವಾಗಿ ಸಮೀಕ್ಷೆಯನ್ನು ನಡೆಸುವ ಉದ್ದೇಶಕ್ಕಾಗಿ ಇದು ಬಹಳ ಪ್ರಮುಖ ಕಾರ್ಯವಾಗಿದೆ. ಆದ್ದರಿಂದ, ಸಾರ್ವಜನಿಕರು ಮತ್ತು ಪ್ರತಿಯೊಂದು ಕುಟುಂಬದ ಸದಸ್ಯರು [ವಿಶೇಷವಾಗಿ ಅಪಾರ್ಟೆಂಟ್ ಮತ್ತು ಕ್ಲಸ್ಟರ್ ವಾಸಸ್ಥಳಗಳಲ್ಲಿ ವಾಸಿಸುವವರು] ಮೀಟರ್ ರೀಡರ್ ಗಳಿಗೆ ವಹಿಸಲಾಗಿರುವ ಮನೆ ಪಟ್ಟಿ ಕೆಲಸವನ್ನು ಸುಗಮವಾಗಿ ಪೂರ್ಣಗೊಳಿಸುವ ದಿಸೆಯಲ್ಲಿ ಸಹಕರಿಸಲು ಮತ್ತು ಅನುಕೂಲ ಮಾಡಿಕೊಡಲು ಆಯೋಗ ಮನವಿ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us