/newsfirstlive-kannada/media/media_files/2025/08/06/refund-our-tax-campaign-2025-08-06-12-48-57.jpg)
ಕರ್ನಾಟಕದ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ಕೇಂದ್ರ ಸರ್ಕಾರಕ್ಕೆ ನಮ್ಮ ತೆರಿಗೆ ನಮ್ಮ ಹಕ್ಕು. ನಮ್ಮ ಕರ್ನಾಟಕದ ತೆರಿಗೆ ಹಣವನ್ನು ನಮಗೆ ಕೊಡಿ ಎಂದು ಡಿಮ್ಯಾಂಡ್ ಮಾಡಿದೆ. ಕೇಂದ್ರದ 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಕಡಿಮೆ ಹಣ ಹಂಚಿಕೆ ಮಾಡಲಾಗಿದೆ ಎಂದು ಕರ್ನಾಟಕದ ಕಾಂಗ್ರೆಸ್ ಪಕ್ಷ, ಸರ್ಕಾರ ಆರೋಪ ಮಾಡುತ್ತಿದೆ.
ಆದರೇ, ಈಗ ಇದೇ ರೀತಿಯ ವಾದವನ್ನು ಬೆಂಗಳೂರಿನ ನಾಗರಿಕರು ಕೂಡ ಕರ್ನಾಟಕ ರಾಜ್ಯ ಸರ್ಕಾರದ ಜೊತೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನಾವು ಕಟ್ಟಿದ ನಮ್ಮ ತೆರಿಗೆ ಹಣವನ್ನು ನಮಗೆ ವಾಪಸ್ ಕೊಡಿ, ನಮ್ಮ ಸಿಟಿಯ ಮೂಲಸೌಕರ್ಯವನ್ನು ನಾವೇ ಅಭಿವೃದ್ದಿಪಡಿಸುತ್ತೇವೆ. ನಾವು ತೆರಿಗೆ ಕಟ್ಟಿದ್ದು, ನಮ್ಮ ಸಿಟಿಯ ಮೂಲಸೌಕರ್ಯ ಅಭಿವೃದ್ದಿ ಆಗಲಿ ಎಂಬ ಉದ್ದೇಶದಿಂದ. ಆದರೇ, ಬೆಂಗಳೂರಿನ ವರ್ತೂರು ಬಳಿಯ ಬಾಳಗೆರೆಯಲ್ಲಿ ಮೂಲಸೌಕರ್ಯ ವ್ಯವಸ್ಥೆಯೇ ಹಾಳಾಗಿದೆ. ಭಾರಿ ಮಳೆಯಿಂದ ಅಂಗಡಿ ಮುಂಗಟ್ಟುಗಳು ನೀರಿನಲ್ಲಿ ಮುಳುಗಿ ಹೋಗಿವೆ. ಭಾರಿ ಮಳೆಗೆ ಬೆಂಗಳೂರು ಸಿಟಿಯೇ ಮುಳುಗಡೆಯಾಗುತ್ತಿದೆ. ಹೀಗಾಗಿ ನಮ್ಮ ತೆರಿಗೆ ಹಣವನ್ನು ನಮಗೆ ವಾಪಸ್ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.
ಬೆಂಗಳೂರಿನ ಸಹಕಾರ ನಗರದ ಇ ಬ್ಲಾಕ್ ನಲ್ಲೂ ರಾತ್ರಿಯ ಭಾರಿ ಮಳೆಯಿಂದ ಅಂಗಡಿ, ಹೋಟೇಲ್ ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಸಹಕಾರ ನಗರದ ಇ ಬ್ಲಾಕ್ ನ ದೊನ್ನೆ ಬಿರಿಯಾನಿ ಹೋಟೇಲ್ ಕೂಡ ಜಲಾವೃತ್ತವಾಗಿತ್ತು. ಹೋಟೇಲ್ ಮಾಲೀಕರು ಬೆಳಿಗ್ಗೆ ಬಂದು ಕೆಸರು ಅನ್ನು ಹೋಟೇಲ್ ನಿಂದ ಹೊರ ಹಾಕುವ ಕೆಲಸ ಮಾಡಬೇಕಾಯಿತು. ಹೋಟೇಲ್ ಮಾಲೀಕರೇ ತಮ್ಮ ಹೋಟೇಲ್ ಬಳಿಯ ಚರಂಡಿಗಳನ್ನು ಕ್ಲೀನ್ ಮಾಡಿಕೊಂಡಿದ್ದಾರೆ. ಮತ್ತೊಂದು ಮಾನ್ಸೂನ್ ಮಳೆಗೆ ಹೋಟೇಲ್, ಅಂಗಡಿ ಮುಂಗಟ್ಟುಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಹೀಗಾಗಿ ಇದೆಲ್ಲದರಿಂದ ಹತಾಶರಾಗಿ ರೊಚ್ಚಿಗೆದ್ದಿರುವ ಬೆಂಗಳೂರಿನ ವರ್ತೂರು ಬಳಿಯ ಬಾಳಗೆರೆಯ ಪ್ರಜ್ಞಾವಂತ ನಾಗರಿಕರು ಈಗ ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ. ರೀಫಂಡ್ ಟ್ಯಾಕ್ಸ್, ನಾವೇ ನಮ್ಮ ಸಿಟಿಯನ್ನು ನಿರ್ಮಾಣ ಮಾಡುತ್ತೇವೆ ಎನ್ನುವ ಬಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ನಗರಕ್ಕೆ ಸರಿಯಾದ ಮೂಲಸೌಕರ್ಯ ಕಲ್ಪಿಸಿ, ಇಲ್ಲವೇ ನಮ್ಮ ತೆರಿಗೆ ಹಣವನ್ನು ನಮಗೆ ವಾಪಸ್ ಕೊಡಿ, ನಾವೇ ನಮ್ಮ ಸಿಟಿಯನ್ನು ನಿರ್ಮಾಣ ಮಾಡುತ್ತೇವೆ ಎಂದು ಬಿತ್ತಿಪತ್ರ ಹಿಡಿದು ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ. ರೀಫಂಡ್ ಟ್ಯಾಕ್ಸ್ ಎಂದು ಹ್ಯಾಷ್ ಟ್ಯಾಗ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಕನ್ನಡ, ಇಂಗ್ಲೀಶ್, ಹಿಂದಿ ಭಾಷೆಯ ಬಿತ್ತಿಪತ್ರಗಳನ್ನು ಹಿಡಿದು ಬೆಂಗಳೂರಿನ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಮುಖ್ಯ ಬೇಡಿಕೆ ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ದಿ ಆಗಬೇಕು ಅನ್ನೋದು ಅಂತ ನಾಗರಿಕರು ಹೇಳಿದ್ದಾರೆ.
ನಾನು ತೆರಿಗೆ ಕಟ್ಟುತ್ತೇನೆ, ನಾನು ಎಲ್ಲ ಭಾಷೆಗಳನ್ನು ಮಾತನಾಡುತ್ತೇನೆ. ಆದರೇ, ನಮಗೆ ಸಿಕ್ಕಿರೋದು ಗುಂಡಿಬಿದ್ದ ರಸ್ತೆಗಳು, ಪ್ರವಾಹದ ರಸ್ತೆಗಳು. ಒಂದು ವೇಳೆ ಸರ್ಕಾರ, ಬಿಬಿಎಂಪಿ ಕನಿಷ್ಠ ಮೂಲಸೌಕರ್ಯ ಅಭಿವೃದ್ದಿಪಡಿಸಲು ಆಗಲಿಲ್ಲ ಅಂದರೇ, ನಮ್ಮ ತೆರಿಗೆ ಹಣವನ್ನು ನಮಗೆ ವಾಪಸ್ ಕೊಡಲಿ. ನಾವು ನಮ್ಮ ಕಾಮನ್ ಸೆನ್ಸ್ ಅನ್ನು ಬಳಸಿ, ನಮ್ಮ ಸಿಟಿಯನ್ನು ನಿರ್ಮಾಣ ಮಾಡುತ್ತೇವೆ ಎಂದು ನಾಗರಿಕರು ಹೇಳಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬೆಂಗಳೂರಿನಲ್ಲಿ ಸರಿಯಾದ ಚರಂಡಿ, ರಸ್ತೆ ನಿರ್ವಹಣೆ, ಪ್ರವಾಹ ನಿಭಾಯಿಸುವ ಸಿದ್ದತೆಗಳು ನಡೆದೇ ಇಲ್ಲ. ಬಿಬಿಎಂಪಿ ಗ್ರೌಂಡ್ ರಿಯಾಲಿಟಿಯಿಂದ ದೂರ ಉಳಿದಿದೆ. ಸಾರ್ವಜನಿಕರು ಸರಿಯಾದ ಮೂಲಸೌಕರ್ಯಕ್ಕಾಗಿ ಎಷ್ಟೇ ಪ್ರತಿಭಟನೆ ನಡೆಸಿದರೂ, ಬಿಬಿಎಂಪಿ ಕ್ಯಾರೇ ಅನ್ನುತ್ತಿಲ್ಲ.
ವರ್ತೂರು ಬಳಿಯ ಬಾಳಗೆರೆ ನಿವಾಸಿಗಳು ಈ ಮೊದಲು ಕೂಡ ಪ್ರತಿಭಟನೆ ನಡೆಸಿದ್ದಾರೆ. ಆದರೇ, ಈ ಭಾರಿ ಸಾಂಕೇತಿಕವಾಗಿ ರೀಫಂಡ್ ಟ್ಯಾಕ್ಸ್ ಎಂದು ಆನ್ ಲೈನ್ ಮತ್ತು ಆಫ್ ಲೈನ್ ಪ್ರತಿಭಟನೆ ನಡೆಸಿದ್ದಾರೆ.
ಸೆಪ್ಟೆಂಬರ್ ಅಂತ್ಯದವರೆಗೂ ಬೆಂಗಳೂರಿನಲ್ಲಿ ಮಾನ್ಸೂನ್ ಮಳೆ ಸುರಿಯುತ್ತೆ. ಇನ್ನೂ ಎಷ್ಟು ಅಂಗಡಿ ಮುಂಗಟ್ಟುಗಳು, ಹೋಟೇಲ್ ಗಳು ಮುಳುಗಡೆಯಾಗಬೇಕು? ಇದಕ್ಕೆ ಹೊಣೆ ಹೊರುವವರು ಯಾರು? ಬೆಂಗಳೂರಿನಲ್ಲಿ ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ನಮಗೆ ಉತ್ತಮ ಮೂಲಸೌಕರ್ಯ ಬೇಕು ಅಂತ ಜನರು ಡಿಮ್ಯಾಂಡ್ ಇಟ್ಟಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರ ಹೀಗೆಯೇ ತನ್ನ ದಿವ್ಯ ನಿರ್ಲಕ್ಷ್ಯ ಮುಂದುವರಿಸಿದರೇ, ಬೆಂಗಳೂರಿನ ಇತರೆ ಭಾಗಗಳಲ್ಲೂ ಜನರು, ರೀಫಂಡ್ ಟ್ಯಾಕ್ಸ್ ಅಭಿಯಾನ ಆರಂಭಿಸಬೇಕಾಗಬಹುದು.
ಚಂದ್ರಮೋಹನ್, ನ್ಯೂಸ್ ಫಸ್ಟ್, ಬೆಂಗಳೂರು.