/newsfirstlive-kannada/media/media_files/2025/08/06/banking-recruitment222-2025-08-06-13-28-07.jpg)
ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ಇಂದು ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಹಾಗಾಗಿ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳು ಮತ್ತಿತರ ಕಡೆ ಕೆಲಸ ಸಿಗುತ್ತದೆ. ಅದ್ರಲ್ಲೂ ಕಾಮರ್ಸ್ ನಿಮ್ಮ ಮೆಚ್ಚಿನ ಕ್ಷೇತ್ರವಾಗಿದ್ದರೆ ಜಾಬ್ ಗ್ಯಾರಂಟಿ ಎಂದು ಹೇಳಲಾಗುತ್ತದೆ. ಅದೇ ಕಾರಣಕ್ಕಾಗಿ ಡಿಗ್ರಿ ಮಾಡಿದವರು ಬ್ಯಾಂಕ್ನಲ್ಲಿ ಕೆಲಸ ಸಿಗುತ್ತೆ ಎಂದು ಎದುರು ನೋಡುತ್ತಲೇ ಇರ್ತಾರೆ.
ಬ್ಯಾಂಕ್ ಕೆಲಸ ಎಂದ್ರೆ ಮೊದಲು ನೆನಪಾಗೋದು ಕೈತುಂಬಾ ವೇತನ, ಸಾಕಷ್ಟು ರಜೆ, ಜೊತೆಗೆ ಉದ್ಯೋಗ ಭದ್ರತೆ. ಇದರಿಂದಾಗಿಯೇ ಸಾಕಷ್ಟು ಜನ ತಮ್ಮ ಶಿಕ್ಷಣ ಮುಗಿದ ಬಳಿಕ ಬ್ಯಾಂಕಿಂಗ್ ಎಕ್ಸಾಮ್ ಬರೆಯಲು ಮುಂದಾಗುತ್ತಾರೆ. ಹೇಗಾದ್ರೂ ಮಾಡಿ ಬ್ಯಾಂಕ್ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲೇಬೇಕು ಎಂದು ಕಾಯುತ್ತಿರುತ್ತಾರೆ. ಇಂಥವರಿಗೆ ಒಂದು ಸುವರ್ಣಾವಕಾಶ ಒದಗಿ ಬಂದಿದೆ.
ಹೌದು, ರಾಜ್ಯದ ಪ್ರಮುಖ 11 ಬ್ಯಾಂಕುಗಳಲ್ಲಿ ಒಟ್ಟು 1,170 ಕಸ್ಟಮರ್ ಗುಮಾಸ್ತ ಹುದ್ದೆಗಳಿಗೆ ಹಾಗೂ ದೇಶದಾದ್ಯಂತ ಒಟ್ಟು 10,277 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಆಯೋಗ ತನ್ನ ಸಾಮಾನ್ಯ ನೇಮಕಾತಿ ಪ್ರಕ್ರಿಯೆ ಅಧಿಸೂಚನೆ ಪ್ರಕಟಿಸಿದೆ. ಅದ್ರಲ್ಲೂ ಕರ್ನಾಟಕದಲ್ಲಿ ಕೆನರಾ ಬ್ಯಾಂಕ್ ಅತಿ ಹೆಚ್ಚು ಅಂದ್ರೆ 675 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಬ್ಯಾಂಕ್ ಆಫ್ ಬರೋಡಾ 253 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.
ಇನ್ನೂ ಕರ್ನಾಟಕದಲ್ಲಿ ಬ್ಯಾಂಕ್‌ವಾರು ಹುದ್ದೆಗಳ ವಿವರ ಎಷ್ಟಿದೆ? ಅಂತಾ ನೋಡೋದಾದ್ರೆ
ಬ್ಯಾಂಕ್ ಆಫ್ ಬರೋಡಾ 253, ಬ್ಯಾಂಕ್ ಆಫ್ ಇಂಡಿಯಾ 45, ಬ್ಯಾಂಕ್ ಆಫ್ ಮಹಾರಾಷ್ಟ್ರ 20, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 47, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 44, ಪಂಜಾಬ್ ನ್ಯಾಷನಲ್ ಬ್ಯಾಂಕ್ 06, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 30, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 50 ಹೀಗೆ ಒಟ್ಟು 1,170 ಹುದ್ದೆಗಳಿವೆ. ಇಡೀ ದೇಶಾದ್ಯಂತ ಹುದ್ದೆಗಳ ಸಂಖ್ಯೆ 10,277 ಇದೆ.
ಕರ್ನಾಟಕದ ಇರುವ ಬ್ಯಾಂಕ್ಗಳಲ್ಲಿ ಕೆಲಸ ಮಾಡಲು ಕನ್ನಡ ಭಾಷಾ ಜ್ಞಾನ ಕಡ್ಡಾಯ ಆಗಿದೆ. ಅಭ್ಯರ್ಥಿಗಳು ಕನ್ನಡದಲ್ಲೂ ಪರೀಕ್ಷೆ ಬರೀಬಹುದು. ಇತರ ರಾಜ್ಯದ ಅಭ್ಯರ್ಥಿಗಳು ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು.
ಇನ್ನೂ ವಿದ್ಯಾರ್ಹತೆ ಏನು ಅಂತಾ ನೋಡೋದಾದ್ರೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಮಾನ್ಯತೆ ಪಡೆದ ವಿವಿಯಲ್ಲಿ ಡಿಗ್ರಿ ಮಾಡಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ. ಕಂಪ್ಯೂಟರ್ ತರಬೇತಿ ಪ್ರಮಾಣಪತ್ರ ಅಥವಾ ಪದವಿ/ಪಿಯು/ಪ್ರೌಢಶಾಲಾ ಮಟ್ಟದಲ್ಲಿ ಕಂಪ್ಯೂಟರ್ ವಿಷಯ ಓದಿರಬೇಕು.
ವಯೋಮಿತಿ ಎಷ್ಟು ಅಂತಾ ಹೇಳೋದಾದ್ರೆ
ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ 28 ವರ್ಷವಾಗಿರಬೇಕು. ಮೀಸಲಾತಿ ಆಧಾರದ ಮೇರೆಗೆ SC ಮತ್ತು ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅವರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಸಾಮಾನ್ಯ, OBC ಮತ್ತು EWS ವರ್ಗದ ಅಭ್ಯರ್ಥಿಗಳು 850 ರೂ. ಮತ್ತು SC-ST ಹಾಗೂ ಮಹಿಳಾ ಅಭ್ಯರ್ಥಿಗಳು 175 ರೂ. ಅರ್ಜಿ ಶುಲ್ಕ ಕಟ್ಟಬೇಕು. ಅಪ್ಲಿಕೇಷನ್ ಫೀಸ್ ಆನ್ಲೈನ್ನಲ್ಲೇ ಕಟ್ಟಬೇಕು.
ಉದ್ಯೋಗ ಅಭದ್ರತೆಯ ಈ ಕಾಲದಲ್ಲಿ ಬಹುತೇಕರು ಸರ್ಕಾರಿ ಉದ್ಯೋಗ ಇಷ್ಟಪಡುತ್ತಾರೆ. ಕಾಲೇಜು ಮುಗಿಸಿದ ವಿದ್ಯಾರ್ಥಿಗಳಲ್ಲಿ ಯಾವ ಉದ್ಯೋಗ ಇಷ್ಟವೆಂದು ಕೇಳಿದರೆ, ಸರ್ಕಾರಿ ಜಾಬ್, ಎಂಜಿನಿಯರ್, ಡಾಕ್ಟರ್, ಬ್ಯಾಂಕ್ ಜಾಬ್ ಎಂದೆಲ್ಲ ಉತ್ತರ ನೀಡುತ್ತಾರೆ. ಸರ್ಕಾರದ ಉದ್ಯೋಗಗಳ ನಂತರ ಬ್ಯಾಂಕ್ ಉದ್ಯೋಗಗಳು ಹೆಚ್ಚು ಬೇಡಿಕೆ ಪಡೆದಿವೆ. ಹೀಗಾಗಿ ಇದು ಡಿಗ್ರಿ ಮಾಡಿದ ವಿದ್ಯಾರ್ಥಿಗಳ ಪಾಲಿಗೆ ಅದ್ಭುತ ಅವಕಾಶ ಎನ್ನಬಹುದು.
ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳಿವೆ. ಅಭ್ಯರ್ಥಿಗಳಿಗೆ ಉತ್ತಮ ಕ್ರೆಡಿಟ್ ಇತಿಹಾಸ ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸೋರು ಅಧಿಕೃತ ತಾಣ ibps.inನಲ್ಲಿ ನೋಂದಣಿ ಮಾಡಿಕೊಳ್ಳಿ. ಫೋಟೋಸ್, ಸಿಗ್ನೇಚರ್, ಎಡಗೈ ಹೆಬ್ಬೆರಳ ಗುರುತು, ಸ್ವಯಂ ಘೋಷಣಾ ಪತ್ರ, ಅಂಕಪಟ್ಟಿ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಆಗಸ್ಟ್ 21, 2025 ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ