/newsfirstlive-kannada/media/media_files/2025/08/25/bcci-and-dream-11-sponsor-end-2025-08-25-18-37-59.jpg)
ಡ್ರೀಮ್ 11 ಪ್ರಾಯೋಜಕತ್ವ ಅಂತ್ಯಗೊಳಿಸಿದ ಬಿಸಿಸಿಐ
ಕಳೆದ ಗುರುವಾರ ಸಂಸತ್‌ನ ಎರಡು ಸದನಗಳು ಆನ್ ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ-2025 ಅನ್ನು ಅಂಗೀಕರಿಸಿವೆ. ಇದಾದ ಬಳಿಕ ರಾಷ್ಟ್ರಪತಿಗಳು ಕೂಡ ಸಂಸತ್ ನಲ್ಲಿ ಅಂಗೀಕಾರಗೊಂಡ ಮಸೂದೆಗೆ ಸಹಿ ಹಾಕಿದ್ದಾರೆ. ಇನ್ನೇನಿದ್ದರೂ, ಕಾಯಿದೆ ಜಾರಿಗೆ ನಿಯಮ ರೂಪಿಸಿ ಜಾರಿಯ ದಿನಾಂಕ ನಿಗದಿಪಡಿಸಿ ಗೆಜೆಟ್ ಅಧಿಸೂಚನೆ ಹೊರಡಿಸುವುದು ಮಾತ್ರ ಬಾಕಿ ಇದೆ. ಆನ್ ಲೈನ್ ಗೇಮಿಂಗ್ ನಿಷೇಧಿಸಿದ್ದರಿಂದ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ 20-25 ಸಾವಿರ ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ. ಆದರೇ, ಕೇಂದ್ರ ಸರ್ಕಾರಕ್ಕೆ ಆದಾಯ ನಷ್ಟಕ್ಕಿಂತ ಜನರ ಜೀವ, ಜೀವನ ಮುಖ್ಯ. ಆನ್ ಲೈನ್ ಗೇಮಿಂಗ್ ನಿಂದಾಗಿ ಯುವಜನತೆ ಹಾಳಾಗುತ್ತಿದ್ದರು. ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿರಾರು ಮಂದಿ ಹಣ ಕಳೆದುಕೊಂಡು ದಿವಾಳಿಯಾಗಿದ್ದರು. ಹೀಗಾಗಿ ಕೇಂದ್ರ ಸರ್ಕಾರವು ದೇಶದಲ್ಲಿ ಆನ್ ಲೈನ್ ಗೇಮಿಂಗ್ ನಿಷೇಧಿಸುವ ದಿಟ್ಟ ತೀರ್ಮಾನ ಕೈಗೊಂಡಿದೆ.
ಈಗ ಬಿಸಿಸಿಐನ ಸರದಿ. ಬಿಸಿಸಿಐ ಮುಖ್ಯವಾಗಿ ಆನ್ ಲೈನ್ ಗೇಮಿಂಗ್ ಕಂಪನಿಗಳಾದ ಡ್ರೀಮ್ ಇಲೆವೆನ್ ಮತ್ತು ಮೈ11 ಸರ್ಕಲ್ ಜೊತೆ ಪ್ರಾಯೋಜಕತ್ವದ ಸಂಬಂಧ ಹೊಂದಿತ್ತು. ದೇಶದಲ್ಲಿ ಆನ್ ಲೈನ್ ಗೇಮಿಂಗ್ ನಿಷೇಧ ಆಗಿರುವುದರಿಂದ ಡ್ರೀಮ್ 11 ಮತ್ತು ಮೈ11 ಸರ್ಕಲ್ ಜೊತೆಗಿನ ಪ್ರಾಯೋಜಕತ್ವವನ್ನು ಅಂತ್ಯಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ನ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇದನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಿಸಿಸಿಐ ಭವಿಷ್ಯದಲ್ಲಿ ಆನ್ ಲೈನ್ ಗೇಮಿಂಗ್ ಕಂಪನಿಗಳ ಜೊತೆಗೆ ಯಾವುದೇ ಪ್ರಾಯೋಜಕತ್ವದಲ್ಲಿ ಭಾಗಿಯಾಗಲ್ಲ ಎಂದು ಬಿಸಿಸಿಐ ಹೇಳಿದೆ.
ಇನ್ನೂ ಡ್ರೀಮ್ 11 ಕೂಡ ಟೀಮ್ ಇಂಡಿಯಾದ ತನ್ನ ಪ್ರಾಯೋಜಕತ್ವವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಗೆ ತಿಳಿಸಿತ್ತು. ಈಗ ಇದಕ್ಕೆ ಪ್ರತಿಕ್ರಿಯೆಯಾಗಿ ಬಿಸಿಸಿಐ ಕಾರ್ಯದರ್ಶಿ ದೇವದತ್ ಸೈಕಿಯಾ ಕೂಡ ಡ್ರೀಮ್ 11 ಜೊತೆಗಿನ ಪ್ರಾಯೋಜಕತ್ವ ಅಂತ್ಯಗೊಳಿಸುವುದಾಗಿ ಹೇಳಿದ್ದಾರೆ.
"ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಮತ್ತು ಮಸೂದೆ ಕಾಯಿದೆಯಾಗಿ ಮಾರ್ಪಟ್ಟಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು, ಬಿಸಿಸಿಐ ಡ್ರೀಮ್ 11 ಅನ್ನು ಪ್ರಾಯೋಜಕತ್ವ ಮುಂದುವರಿಸುವುದು ನಿಜವಾಗಿಯೂ ಕಷ್ಟಕರವಾಗಿರುತ್ತದೆ. ಆದ್ದರಿಂದ, ಡ್ರೀಮ್ 11 ಜೊತೆಗಿನ ಸಂಬಂಧವು ಮುಗಿದಿದೆ ಮತ್ತು ಬಿಸಿಸಿಐ ಹೊಸ ಪ್ರಾಯೋಜಕರನ್ನು ಒಳಗೊಂಡಂತೆ ಭವಿಷ್ಯದ ಪ್ರಾಯೋಜಕರನ್ನು ಹುಡುಕುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವದತ್ತ್ ಸೈಕಿಯಾ ಹೇಳಿದ್ದಾರೆ.
ಡ್ರೀಮ್11 ಮತ್ತು ಮೈ11ಸರ್ಕಲ್ ಒಟ್ಟಾಗಿ ಭಾರತೀಯ ಕ್ರಿಕೆಟ್ ತಂಡ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನ ಶೀರ್ಷಿಕೆ ಪ್ರಾಯೋಜಕತ್ವದ ಮೂಲಕ ಬಿಸಿಸಿಐಗೆ ಸರಿಸುಮಾರು 1,000 ಕೋಟಿ ರೂ.ಗಳನ್ನು ನೀಡಿದ್ದವು . ನಿರ್ದಿಷ್ಟವಾಗಿ ಡ್ರೀಮ್11, 2023-2026ರ ವರ್ಷಕ್ಕೆ ಟೀಮ್ ಇಂಡಿಯಾಕ್ಕೆ ಟೈಟಲ್ ಪ್ರಾಯೋಜಕರಾಗಿ 44 ಮಿಲಿಯನ್ ಯುಎಸ್ ಡಾಲರ್ (ರೂ. 358 ಕೋಟಿ) ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆನ್ ಲೈನ್ ಗೇಮಿಂಗ್ ಬ್ಯಾನ್ ಕಾಯಿದೆ ಪ್ರಕಾರ, ದೇಶದಲ್ಲಿ "ಯಾವುದೇ ವ್ಯಕ್ತಿ ಆನ್‌ಲೈನ್ ಹಣದ ಗೇಮಿಂಗ್ ಸೇವೆಗಳನ್ನು ನೀಡಬಾರದು, ಸಹಾಯ ಮಾಡಬಾರದು, ಪ್ರೋತ್ಸಾಹಿಸಬಾರದು, ಪ್ರೇರೇಪಿಸಬಾರದು, ತೊಡಗಿಸಿಕೊಳ್ಳಬಾರದು ಅಥವಾ ಯಾವುದೇ ವ್ಯಕ್ತಿಯನ್ನು ಯಾವುದೇ ಆನ್‌ಲೈನ್ ಹಣದ ಆಟವನ್ನು ಆಡಲು ನೇರವಾಗಿ ಅಥವಾ ಪರೋಕ್ಷವಾಗಿ ಉತ್ತೇಜಿಸುವ ಯಾವುದೇ ಜಾಹೀರಾತಿನಲ್ಲಿ ಭಾಗಿಯಾಗಬಾರದು" ಎಂದು ಸ್ಪಷ್ಟವಾಗಿ ಹೇಳುವ ಸರ್ಕಾರಿ ಮಸೂದೆಯ ಅಂಗೀಕಾರವು ಭಾರತದ ಎಲ್ಲಾ ಪ್ರಮುಖ ಫ್ಯಾಂಟಸಿ ಕ್ರೀಡಾ ಕಂಪನಿಗಳ ಆದಾಯದ ಹರಿವಿಗೆ ದೊಡ್ಡ ಹೊಡೆತ ನೀಡಿದೆ. ಆನ್ ಲೈನ್ ಗೇಮಿಂಗ್ ಕಂಪನಿಗಳು ಯಾವುದೇ ಚಟುವಟಿಕೆಗಳನ್ನು ನಡೆಸಲೇಬಾರದು ಎಂದು ಸ್ಪಷ್ಟವಾಗಿ ಹೊಸ ಕಾಯಿದೆ ಹೇಳಿದೆ.
ಹೀಗಾಗಿ ಬಿಸಿಸಿಐ ಕೂಡ ಈಗ ಆನ್ ಲೈನ್ ಗೇಮಿಂಗ್ ಕಂಪನಿಗಳ ಜೊತೆಗಿನ ತನ್ನ ಪ್ರಾಯೋಜಕತ್ವವನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. ಈಗ ಕ್ರಿಕೆಟ್ ಟೀಮ್‌ಗೆ ಹೊಸ ಪ್ರಾಯೋಜಕರನ್ನು ಬಿಸಿಸಿಐ ಹುಡುಕಿಕೊಳ್ಳಬೇಕಾಗಿದೆ.
ಇನ್ನೂ ಮುಂದೆ ದೇಶದಲ್ಲಿ ಯಾವುದೇ ಆನ್ ಲೈನ್ ಅಥವಾ ಆಫ್ ಲೈನ್ ಗೇಮಿಂಗ್ ಕಂಪನಿಗಳು ತಮ್ಮ ಚಟುವಟಿಕೆ ನಡೆಸುವುದನ್ನು ಹೊಸ ಕಾಯಿದೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಡ್ರೀಮ್ 11 ಕಂಪನಿ ಹಾಗೂ ಮೈ 11 ಸರ್ಕಲ್ ಕಂಪನಿ ಸೇರಿದಂತೆ ಎಲ್ಲ ಆನ್ ಲೈನ್ ಕಂಪನಿಗಳು ತಮ್ಮ ಬಾಗಿಲು ಮುಚ್ಚಬೇಕು. ಈ ಕ್ಷೇತ್ರಗಳಲ್ಲಿ ಉದ್ಯೋಗ ಕಂಡುಕೊಂಡಿದ್ದವರು ಈಗ ನಿರುದ್ಯೋಗಿಗಳಾಗಿ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕಿಕೊಳ್ಳಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.