/newsfirstlive-kannada/media/media_files/2025/09/22/mysore-dasara-4-2025-09-22-10-32-40.jpg)
ಚಾಮುಂಡಿ ದೇವರ ಮಂಗಳಾರತಿ ಪಡೆದ ಸಾಹಿತಿ ಭಾನು ಮುಷ್ತಾಕ್
ಯಾವುದೇ ಗೊಂದಲ- ಗದ್ದಲ, ಅಡ್ಡಿ ಆತಂಕವಿಲ್ಲದೆ ನಾಡಹಬ್ಬ ದಸರಾ ಮಹೋತ್ಸವ 2025 ಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಚಾಮುಂಡಿ ಸನ್ನಿಧಿಯಲ್ಲಿ ಖ್ಯಾತ ಲೇಖಕಿ ಭಾನುಮುಷ್ತಾಕ್ ನಾಡ ಅಧಿದೇವತೆಗೆ ಪುಷ್ಪನಮನ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಮತ್ತೊಂದೆಡೆ, ಅರಮನೆ ಅಂಗಳದಲ್ಲಿ ಖಾಸಗಿ ದರ್ಬಾರ್ ನ ರಾಜವೈಭವ ಮೇಳೈಸಿದೆ. ದಸರೆಯ ಆರಂಭ ಅರಮನೆ ನಗರಿಯಲ್ಲಿ ಹೇಗಿತ್ತು? ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ, ಓದಿ.
ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಚಾಲನೆ
ಖ್ಯಾತ ಲೇಖಕಿ ಭಾನುಮುಷ್ತಾಕ್ ಅವರಿಂದ ಉದ್ಘಾಟನೆ
ಬೆಳಗಿನವರೆಗೂ ಮನೆಮಾಡಿದ್ದ ಆತಂಕ ದೂರವಾಗಿ ನಾಡ ಅಧಿದೇವತೆ ಚಾಮುಂಡಿ ಸನ್ನಿಧಾನದಲ್ಲಿ ಸಂಭ್ರಮದ ಕ್ಷಣ ಮನೆಮಾಡಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಬಾನುಮುಷ್ತಾಕ್ ಅವರನ್ನ ಸಿಎಂ ಸಿದ್ದರಾಮಯ್ಯ ಮಹಿಷಪ್ರತಿಮೆ ಬಳಿ ಬರ ಮಾಡಿಕೊಂಡ್ರು. ಜಾನಪದ ಕಲಾತಂಡಗಳು, ಕಳಸಹೊತ್ತ ಮುತ್ತೈದೆಯರ ಸಮ್ಮುಖದಲ್ಲಿ, ಅರ್ಚಕರು, ಆಗಮಿಕರ ವೇದ-ಪಠಣದೊಂದಿಗೆ ಚಾಮುಂಡಿ ಸನ್ನಿಧಾನಕ್ಕೆ ಗಣ್ಯರು ಹೆಜ್ಜೆ ಹಾಕಿದ್ರು. ಹಳದಿ ಬಣ್ಣದ ಸೀರೆಯುಟ್ಟು, ಮುಡಿಯಲ್ಲಿ ಮಲ್ಲಿಗೆ ಹೂವು ಮುಡಿದ ಸಾಹಿತಿ ಭಾನುಮುಷ್ತಾಕ್ ಚಾಮುಂಡಿ ಸನ್ನಿಧಾನದಲ್ಲಿರುವ ಗಣೇಶನಿಗೆ ನಮನ ಸಲ್ಲಿಸಿ ಅಡ್ಡಿ ಆತಂಕ ದೂರವಾಗಲಿ ಎಂದು ಪ್ರಾರ್ಥಿಸಿದರು
ಬಳಿಕ ಚಾಮುಂಡಿಯ ಗರ್ಭಗುಡಿ ಪ್ರವೇಶಿಸಿದ ಭಾನುಮುಷ್ತಾಕ್, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರು ಮಹಾಮಂಗಳಾರತಿ ಸ್ವೀಕರಿಸಿದರು. ಈ ವೇಳೆ ದೇವಸ್ಥಾನದ ಮಂಡಳಿ ನೀಡಿದ ಸೀರೆ, ಮಲ್ಲಿಗೆಹಾರ ಸ್ವೀಕರಿಸಿದ ಭಾನುಮುಷ್ತಾಕ್ ಭಾವುಕರಾದರು. ಕಣ್ಣಂಚಲ್ಲಿ ಜಿನುಗಿದ ನೀರನ್ನು ಒರೆಸಿಕೊಂಡು ಕುಟುಂಬ ಸಮೇತ ನಾಡ ಅಧಿದೇವತೆ ದರ್ಶನ ಪಡೆದರು.
ನಂತರ ವೇದಿಕೆಗೆ ಆಗಮಿಸಿದ ಭಾನು ಮುಷ್ತಾಕ್ ಹಾಗು ಗಣ್ಯರು ಬೆಳ್ಳಿ ಮಂಟಪದಲ್ಲಿ ವಿರಾಜಮಾನಳಾಗಿದ್ದ ನಾಡ ಅಧಿದೇವಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಐತಿಹ್ಯ ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆದರು.
ಹಿಂದೂ ಸಂಪ್ರದಾಯದಂತೆ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಈ ಬಾರಿಯ ದಸರಾ ಉದ್ಘಾಟಿಸಿದ ಭಾನು ಮುಷ್ತಾಕ್ ಮಾತು ಆರಂಭಿಸುತ್ತಲೇ ಮುಸ್ಲಿಂ ಮಹಿಳೆಯಾಗಿ ಹಿಂದೂ ಪದ್ದತಿ, ಆಚಾರ, ವಿಚಾರ ಕುರಿತು ತಮ್ಮ ನಿಲುವು ತಿಳಿಸಿದರು.
ಟೀಕಾಕಾರರಿಗೆ ತಮ್ಮ ನಡೆ ಮೂಲಕ ಉತ್ತರ ಕೊಟ್ಟ ಭಾನು ಮುಷ್ತಾಕ್
ಇದೇ ವೇಳೆ ತಮ್ಮ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿಗೆ ಪರೋಕ್ಷ ಟಾಂಗ್ ನೀಡಿ, ಬಾಗಿನ ಕವನ ವಾಚಿಸಿ ಎಲ್ಲರ ಮನಗೆದ್ದರು. ಇನ್ನೂ ಭಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ನಾಯಕರು ಹಾಗೂ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಎಲ್ಲ ಟೀಕೆಗಳಿಗೂ ಇಂದು ಭಾನು ಮುಷ್ತಾಕ್ ತಮ್ಮ ನಡೆಯಿಂದ ಉತ್ತರ ಕೊಟ್ಟರು. ಚಾಮುಂಡಿ ಬೆಟ್ಟ ಹಾಗೂ ದೇವಸ್ಥಾನಕ್ಕೆ ಆಗಮಿಸಿದ ಭಾನು ಮುಷ್ತಾಕ್ ಹಿಂದೂ ಧರ್ಮದ ಸಂಪ್ರದಾಯ, ನಡೆ, ಸಂಸ್ಕೃತಿ, ಸಂಸ್ಕಾರವನ್ನು ಪಾಲಿಸಿದರು. ಮೊದಲಿಗೆ ರೇಷ್ಮೆ ಸೀರೆಯುಟ್ಟು ಚಾಮುಂಡಿ ದೇವಸ್ಥಾನಕ್ಕೆ ಆಗಮಿಸಿದ್ದರು. ದೇವರ ಸನ್ನಿಧಿಯಲ್ಲಿ ನಿಂತು , ದೇವರ ಮಂಗಳಾರತಿಯನ್ನು ಪಡೆದರು. ಚಾಮುಂಡಿ ಎದುರಿಗೆ ಕೈ ಮುಗಿದು ನಿಂತರು. ಬಳಿಕ ಚಾಮುಂಡಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆಯನ್ನು ಸಿಎಂ ಸಿದ್ದರಾಮಯ್ಯ ಜೊತೆ ನೆರವೇರಿಸಿದ್ದರು. ಹಿಂದೂ ದೇವರಲ್ಲಿ ನಂಬಿಕೆ ಇಲ್ಲದಿದ್ದರೂ, ದಸರಾ ಉದ್ಘಾಟಕರಾಗಿ ಚಾಮುಂಡಿ ದೇವರ ಎದುರು ಕೈ ಮುಗಿದು ನಿಂತು, ಮಂಗಳಾರತಿ ಪಡೆದು ದೇವರಿಗೆ ಭಕ್ತಿ, ಗೌರವ ತೋರಿಸಿದರು.
ಭಾನುಮುಷ್ತಾಕ್ ಅವರ ಆಯ್ಕೆ ಯಾಕೆ ಮಾಡಿದ್ದೇವು? ರಾಜ್ಯ ಸರ್ಕಾರದ ನಿಲುವೇನು ಎಂಬುದರ ಕುರಿತು ಸಿಎಂ ಕೂಡ ಸ್ಪಷ್ಟಪಡಿಸಿದ್ರು.
ಮತ್ತೊಂದೆಡೆ, ಅರಮನೆ ಅಂಗಳದಲ್ಲಿ ಯದುವಂಶದ ಅರಸ ಶ್ರೀಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಿದರು. ಚಿನ್ನದ ಸಿಂಹಾಸನದಲ್ಲಿ ಕಂಕಣ ತೊಟ್ಟು ಕುಳಿದು ಧಾರ್ಮಿಕ ವಿಧಿವಿಧಾನಗಳನ್ನ ನೆರವೇರಿಸಿದರು
ಬೆಳಗಿನ ಜಾವ 5 ಗಂಟೆಗೆ ಎಣ್ಣೆಮಜ್ಜನದಿಂದ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳು ದಿನವಿಡೀ ಜರುಗಿದವು. ಪಟ್ಟದಾನೆ, ಕುದುರೆ,ಹಸು, ಒಂಟೆ ಸೇರಿ ಮುತ್ತೈದೆಯರು, ಆಸ್ಥಾನದ ಸಿಬ್ಬಂದಿಯ ಕಲವರ ಗತಕಾಲದ ವೈಭವವನ್ನ ಸಾರಿ ಸಾರಿ ಹೇಳುತ್ತಿತ್ತು. ಒಟ್ಟಾರೆ, ನಾಡಹಬ್ಬ ದಸರಾ ಮಹೋತ್ಸವ ಯಶಸ್ವಿಯಾಗಿ ಉದ್ಘಾಟನೆಗೊಂಡರೆ, ಅರಮನೆಯ ಖಾಸಗಿ ದರ್ಬಾರ್ ಕಣ್ಮನಸೂರೆಗೊಳ್ಳುವಂತೆ ಮಾಡಿತು. ಆ ಮೂಲಕ ಐತಿಹ್ಯದ ಪುಟಕ್ಕೆ ಈ ಬಾರಿಯ ನಾಡಹಬ್ಬ ಮುನ್ನುಡಿ ಬರೆಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.