/newsfirstlive-kannada/media/media_files/2025/08/20/tirupathi-thimappa-gold02-2025-08-20-15-55-41.jpg)
ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ 121 ಕೆಜಿ ಚಿನ್ನ ಕಾಣಿಕೆಯಾಗಿ ನೀಡಿಕೆ
ಉದ್ಯಮ ಸ್ಥಾಪಿಸಿ ಯಶಸ್ವಿಯಾದ ಉದ್ಯಮಿ!
ಹೆಸರು ಹೇಳಲು ಬಯಸದ ತಿರುಪತಿ ವೆಂಕಟೇಶ್ವರನ ಭಕ್ತರೊಬ್ಬರು ಉದ್ಯಮವೊಂದನ್ನು ಸ್ಥಾಪಿಸಿ ಯಶಸ್ವಿಯಾಗಿದ್ದರು. ಇತ್ತೀಚೆಗೆ ಆ ಕಂಪನಿಯಲ್ಲಿನ ಶೇ.60ರಷ್ಟು ಷೇರು ಮಾರಾಟ ಮಾಡಿದ ಪರಿಣಾಮ ಅವರಿಗೆ 6000-7000 ಕೋಟಿ ರು. ಹಣ ಸಿಕ್ಕಿತ್ತು. ತಮಗೆ ಈ ಸಂಪತ್ತು ಸಿಗಲು ಕಾರಣನಾದ ಭಗವಂತನಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ತಿರುಪತಿ ತಿಮ್ಮಪ್ಪನಿಗೆ ಚಿನ್ನವನ್ನು ಕಾಣಿಕೆಯಾಗಿ ನೀಡಲು ಆ ಉದ್ಯಮಿ ನಿರ್ಧರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ತಮ್ಮ ಉದ್ಯಮ ಯಶಸ್ಸು ಕಂಡ ಹಿನ್ನೆಲೆಯಲ್ಲಿ 140 ಕೋಟಿ ರೂಪಾಯಿ ಮೌಲ್ಯದ ಬಂಗಾರವನ್ನು ಕಾಣಿಕೆಯಾಗಿ ನೀಡಿದ್ದಾರೆ. ಓರ್ವ ಅನಾಮಧೇಯ ಭಕ್ತರೊಬ್ಬರು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಗೆ 121 ಕೆಜಿ ಬಂಗಾರವನ್ನು ಕಾಣಿಕೆಯಾಗಿ ನೀಡುವುದಾಗಿ ಹರಕೆ ಹೊತ್ತಿದ್ದಾರೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮಂಗಳವಾರ ಪ್ರಕಟಿಸಿದ್ದಾರೆ. ಈ ಚಿನ್ನದ ಮೌಲ್ಯ ಬರೋಬ್ಬರಿ 140 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮಾಹಿತಿ ನೀಡಿದ ಸಿಎಂ ಚಂದ್ರಬಾಬು ನಾಯ್ಡು
ಮಂಗಳಗಿರಿಯಲ್ಲಿ ನಡೆದ 'ಬಡತನ ನಿರ್ಮೂಲನೆ' (ಪಿ4) ಕಾರ್ಯಕ್ರಮದಲ್ಲಿ ಮಾತನಾಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, "ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತರೊಬ್ಬರು ಕಂಪನಿಯೊಂದನ್ನು ಸ್ಥಾಪಿಸುವ ಸಂಕಲ್ಪ ಮಾಡಿದ್ದರು. ಇದೀಗ ಅವರು ಅದರಲ್ಲಿ ಪೂರ್ಣ ಯಶಸ್ಸನ್ನು ಕಂಡಿದ್ದಾರೆ. ದೈವಾನುಗ್ರಹದಿಂದ ದೊರೆತ ಈ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಲು ಅವರು ಮುಂದಾಗಿದ್ದಾರೆ. ಅದಕ್ಕಾಗಿ ಇದೀಗ 121 ಕೆಜಿ ಬಂಗಾರವನ್ನು ಸ್ವಾಮಿಗೆ ಅರ್ಪಿಸುತ್ತಿದ್ದಾರೆ," ಎಂದು ತಿಳಿಸಿದರು.
ಪ್ರತಿನಿತ್ಯ ತಿಮ್ಮಪ್ಪನಿಗೆ 120 ಕೆಜಿ ಆಭರಣ!
ಪ್ರತಿದಿನ ತಿರುಪತಿಯಲ್ಲಿ ಇರುವ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ಸುಮಾರು 120 ಕೆಜಿ ತೂಕದ ಚಿನ್ನದ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಈ ವಿಷಯವನ್ನು ತಿಳಿದುಕೊಂಡ ಆ ಅನಾಮಧೇಯ ಭಕ್ತರು, ಅದಕ್ಕಿಂತ ಒಂದು ಕೆಜಿ ಹೆಚ್ಚಿಗೆ, ಅಂದರೆ 121 ಕೆಜಿ ಚಿನ್ನವನ್ನು ದಾನ ಮಾಡಲು ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ವಿವರಿಸಿದರು.
ತಿರುಪತಿ ತಿಮ್ಮಪ್ಪ ದೇವಾಲಯ
ಇತ್ತೀಚಿಗೆ ಯಾರು ಏನು ದಾನ ಕೊಟ್ಟಿದ್ದಾರೆ?
ಈ ವರ್ಷದ ಮೇ ತಿಂಗಳಿನಲ್ಲಿ, ಉದ್ಯಮಿ ಸಂಜೀವ್ ಗೋಯೆಂಕಾ ಅವರು 3.63 ಕೋಟಿ ರೂ. ಮೌಲ್ಯದ ವಜ್ರ ಖಚಿತ ಚಿನ್ನಾಭರಣಗಳನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದರು. ಇದರ ಬೆನ್ನಲ್ಲೇ, ಜುಲೈ ತಿಂಗಳಿನಲ್ಲಿ ಚೆನ್ನೈ ಮೂಲದ ಸುದರ್ಶನ್ ಎಂಟರ್‌ಪ್ರೈಸಸ್ ಸಂಸ್ಥೆಯು 2.4 ಕೋಟಿ ರೂ. ಮೌಲ್ಯದ, 2.5 ಕೆ.ಜಿ ತೂಕದ ಚಿನ್ನದ ಶಂಖ ಮತ್ತು ಚಕ್ರವನ್ನು ಸ್ವಾಮಿಗೆ ಅರ್ಪಿಸಿತು. ಇದಲ್ಲದೆ, ಇದೇ ವರ್ಷದ ಆರಂಭದಲ್ಲಿ ನಿವೃತ್ತ ಐಆರ್‌ಎಸ್ ಅಧಿಕಾರಿಯಾದ ವೈವಿಎಸ್ಎಸ್ ಭಾಸ್ಕರ್ ರಾವ್ ಅವರು ತಮ್ಮ 3.66 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದೇವಸ್ಥಾನದ ಟ್ರಸ್ಟ್‌ಗೆ ನೀಡಿದ್ದರು. ಹೀಗೆ ಸರಣಿ ದೇಣಿಗೆಗಳು ಹರಿದುಬರುತ್ತಿದ್ದು, ತಿರುಪತಿ ತಿಮ್ಮಪ್ಪ ದೇವರ ಮೇಲಿನ ಭಕ್ತರ ಅಚಲ ನಂಬಿಕೆಗೆ ಸಾಕ್ಷಿಯಾಗಿದೆ.
ತಿಮ್ಮಪ್ಪನ ಬಳಿ ಇದೆ 11300 ಕೆಜಿ ಚಿನ್ನ!
ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ವರ್ಷ ವರ್ಷ ಕೋಟಿ ಕೋಟಿ ದಾನವನ್ನು ಪಡೆದುಕೊಳ್ಳುತ್ತಿದೆ. 2022ರಲ್ಲಿನ ವರದಿಯ ಪ್ರಕಾರ, ತಿರುಪತಿ ದೇವಸ್ಥಾನವು ಒಟ್ಟು 2.5 ಲಕ್ಷ ಕೋಟಿ ರೂಪಾಯಿ ಅನುದಾನವನ್ನು ಪಡೆದುಕೊಂಡಿತ್ತು. ದೇವಾಲಯದಲ್ಲಿ ಸುಮಾರು 11,329 ಕೆಜಿ ಚಿನ್ನವಿದ್ದು, ಇದರ ಮೌಲ್ಯ ಸುಮಾರು 18,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ . 25,000 ಕೆಜಿ ಬೆಳ್ಳಿಯನ್ನು ಹೊಂದಿದೆ. ಇದರೊಂದಿಗೆ ವಜ್ರವೂ ಇದೆ. ಇದಲ್ಲದೆ, ದೇವಾಲಯದ ಟ್ರಸ್ಟ್ ವಿವಿಧ ಬ್ಯಾಂಕುಗಳಲ್ಲಿ 13,287 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಠೇವಣಿಗಳನ್ನು ಹೊಂದಿದ್ದು ಇದು ಪ್ರತಿ ವರ್ಷ 1,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬಡ್ಡಿ ಆದಾಯವೂ ಬರುತ್ತೆ. ಇನ್ನೂ ಈ ದೇವಾಲಯದ ಟ್ರಸ್ಟ್ 2023ರಲ್ಲಿ 1,161 ಕೋಟಿ ರೂಪಾಯಿಗಳ ಹೊಸ ಎಫ್‌ಡಿ ಕೂಡ ಮಾಡಿದೆ. ಕೆಲವು ವರ್ಷಗಳ ಹಿಂದೆ, ದಕ್ಷಿಣ ಭಾರತದ ನಟಿ ಕಾಂಚನಾ 15 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ದಾನ ಮಾಡಿದ್ದರು. ಗಿರಿಜಾ ಪಾಂಡೆಯಂತಹ ಭಕ್ತರು ಸಹ ತಮ್ಮ ಆಸ್ತಿಯನ್ನು ಟಿಟಿಡಿ ಟ್ರಸ್ಟ್‌ಗೆ ವರ್ಗಾಯಿಸಿದ್ದರು.
ಲಡ್ಡು ಮಾರಾಟದಿಂದ 500 ಕೋಟಿ ರೂಪಾಯಿ ಆದಾಯ!
ತಿರುಪತಿ ದೇವಸ್ಥಾನವು ಭಕ್ತರಿಂದ ದಾನವಾಗಿ ಪಡೆದುಕೊಂಡ ಹಣ, ಆಸ್ತಿ, ಆಭರಣಗಳಿಂದ ಶ್ರೀಮಂತವಾಗಿರುವುದಲ್ಲದೇ, ದೇವಸ್ಥಾನದ ಲಡ್ಡುಗಳನ್ನು ಪ್ರಸಾದವಾಗಿ ಮಾರುವ ಮೂಲಕ ಸುಮಾರು 500 ಕೋಟಿ ರೂಪಾಯಿಗೂ ಅಧಿಕ ಆದಾಯ ಬರುತ್ತಿದೆ. ತಿರುಪತಿಯಲ್ಲಿ ಭಕ್ತರು ದಾನ ಮಾಡುವ ಕೂದಲನ್ನು ಟಿಟಿಡಿ ಹರಾಜು ಹಾಕುತ್ತದೆ. 2018 ರಲ್ಲಿ ದೇವಾಲಯದ ಟ್ರಸ್ಟ್ 1,87,000 ಕೆಜಿ ಕೂದಲನ್ನು ಮಾರಾಟ ಮಾಡುವ ಮೂಲಕ 1.35 ಕೋಟಿ ರೂಪಾಯಿ ಹಣವನ್ನು ಗಳಿಸಿದೆ. ಕೂದಲು ಹರಾಜಿನಿಂದಲೂ ದೇವಾಲಯದ ಟ್ರಸ್ಟ್ ಗೆ ಆದಾಯ ಬರುತ್ತೆ.