/newsfirstlive-kannada/media/media_files/2025/08/08/dr-vishnuvardhan-2025-08-08-19-20-27.jpg)
ಸಾಹಸಸಿಂಹ ವಿಷ್ಣುವರ್ಧನ್
ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ವಿಷ್ಣುವರ್ಧನ್ ಅವರಿಗೆ ಸಿನಿಮಾ ಕ್ಷೇತ್ರದಲ್ಲಿನ ಕೊಡುಗೆ ಪರಿಗಣಿಸಿ ಕರ್ನಾಟಕ ರತ್ನ ಪುರಸ್ಕಾರ ನೀಡಬೇಕೆಂದು ಅವರ ಪತ್ನಿ ಭಾರತೀ ವಿಷ್ಣುವರ್ಧನ್ , ಅಳಿಯ ಅನಿರುದ್ಧ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಜೊತೆಗೆ ನಟಿಯರಾದ ತಾರಾ, ಶೃತಿ, ಮಾಳವಿಕಾ ಅವಿನಾಶ್ ಕೂಡ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರನ್ನು ಭೇಟಿಯಾಗಿ ಕರ್ನಾಟಕ ರತ್ನ ಪುರಸ್ಕಾರ ನೀಡಲು ಮನವಿ ಮಾಡಿದ್ದರು.
ಇದರ ಬಗ್ಗೆ ಇಂದು ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಲು ಒಪ್ಪಿಗೆ ನೀಡಲಾಗಿದೆ.
ಈ ಹಿಂದೆ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪುರಸ್ಕಾರ ನೀಡಲಾಗಿತ್ತು.
ಈಗ ಮರಣೋತ್ತರವಾಗಿ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪುರಸ್ಕಾರ ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಈ ವಿಷಯವನ್ನು ಕ್ಯಾಬಿನೆಟ್ ಸಭೆಯ ಬಳಿಕ ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಎಚ್.ಕೆ.ಪಾಟೀಲ್ ಮಾಧ್ಯಮಗಳಿಗೆ ಅಧಿಕೃತವಾಗಿ ತಿಳಿಸಿದ್ದಾರೆ.
ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೂ ಮುನ್ನ ಕರ್ನಾಟಕ ರತ್ನ ಘೋಷಣೆ
ಇನ್ನೂ ಇದೇ ತಿಂಗಳ 18 ರಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಇದೆ. ಹುಟ್ಟುಹಬ್ಬಕ್ಕೂ ಮುನ್ನ ರಾಜ್ಯ ಸರ್ಕಾರ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ವಿಶೇಷ. ಇದು ವಿಷ್ಣುವರ್ಧನ್ ಅಭಿಮಾನಿಗಳ ಸಂಭ್ರಮ, ಸಂತೋಷಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ವಿಷ್ಣುಗೆ ಕರ್ನಾಟಕ ರತ್ನ ಪುರಸ್ಕಾರ ನೀಡಿಕೆಗೆ ಮನವಿ ಸಲ್ಲಿಸಿದ್ದ ಭಾರತಿ ವಿಷ್ಣುವರ್ಧನ್
ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಜಾಗ ನೀಡಿಕೆಗೆ ಬಗ್ಗೆ ತೀರ್ಮಾನವಿಲ್ಲ
ಆದರೇ, ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಅವರನ್ನು ಅಂತ್ಯಸಂಸ್ಕಾರ ಮಾಡಿದ್ದ ಅಭಿಮಾನ್ ಸ್ಟುಡಿಯೋದಲ್ಲಿ ಕನಿಷ್ಠ 10-15 ಗುಂಟೆ ಜಾಗವನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ನೀಡಬೇಕೆಂದು ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ ಭಾರತಿ ವಿಷ್ಣುವರ್ಧನ್ ಅವರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಈ ಮನವಿ ಬಗ್ಗೆ ರಾಜ್ಯದ ಕ್ಯಾಬಿನೆಟ್ ನಲ್ಲಿ ಇಂದು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಭಿಮಾನ್ ಸ್ಟುಡಿಯೋ ಜಾಗವನ್ನು ಲೀಸ್‌ಗೆ ನೀಡಿದ್ದು, ಲೀಸ್ ಷರತ್ತು ಉಲಂಘನೆ ಮಾಡಲಾಗಿದೆ. ಹೀಗಾಗಿ ಆ ಜಾಗವನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಂಡು ಅರಣ್ಯ ಇಲಾಖೆಯ ವಶಕ್ಕೆ ನೀಡಬೇಕೆಂದು ಬೆಂಗಳೂರು ನಗರ ಜಿಲ್ಲೆಯ ಡಿಸಿಎಫ್, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಆಧಾರದ ಮೇಲೆ ಅಭಿಮಾನ್ ಸ್ಟುಡಿಯೋದ 20 ಎಕರೆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದಾದ ಬಳಿಕ ಅಲ್ಲಿನ 10 ಗುಂಟೆ ಜಾಗವನ್ನು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ನೀಡುವ ಬಗ್ಗೆ ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ