/newsfirstlive-kannada/media/post_attachments/wp-content/uploads/2023/10/LPG_Cylinder_Price.jpg)
ಕರ್ನಾಟಕ ಹಾಗೂ ದೇಶದ ಜನರು ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಮನೆ ಮನೆಗೆ ಲಕ್ಷ್ಮಿಯನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಮನೆಗಳಲ್ಲಿ ಲಕ್ಷ್ಮಿ, ಮಹಾಲಕ್ಷ್ಮಿಯನ್ನು ಕೂರಿಸಿ ಪೂಜಿಸುತ್ತಿದ್ದಾರೆ. ಲಕ್ಷ್ಮಿಯನ್ನು ಆರಾಧಿಸುತ್ತಿದ್ದಾರೆ. ಈಗ ಲಕ್ಷ್ಮಿ ಹಬ್ಬದ ವೇಳೆಯೇ ಜನರಿಗೆ ಲಕ್ಷ್ಮಿ ಗಿಫ್ಟ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ಮಧ್ಯಮ ವರ್ಗದ ಜನರ ಹೊರೆಯನ್ನು ಕಡಿಮೆ ಮಾಡಲು ಮಹತ್ವದ ತೀರ್ಮಾನವೊಂದನ್ನು ಇಂದಿನ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಕೈಗೊಳ್ಳುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರವು ದೇಶದ ತೈಲ ಕಂಪನಿಗಳಿಗೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಸಲು ಅನುಕೂಲವಾಗುವಂತೆ 30 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡುವ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ದೇಶದ ತೈಲ ಕಂಪನಿಗಳಿಗೆ ಎಲ್‌ಪಿಜಿ ಸಿಲಿಂಡರ್ ಮಾರಾಟದಿಂದ ಆಗಿರುವ ನಷ್ಟ ಭರಿಸಲು ಇದರಿಂದ ಅನುಕೂಲವಾಗುತ್ತೆ. ಬಳಿಕ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಬಹುದು ಎಂಬ ನಿರೀಕ್ಷೆ ಆರ್ಥಿಕ ತಜ್ಞರಲ್ಲಿದೆ. ಜಾಗತಿಕ ಮಟ್ಟದಲ್ಲಿ ರಷ್ಯಾ- ಉಕ್ರೇನ್ ಯುದ್ಧ, ಇಸ್ರೇಲ್- ಗಾಜಾ, ಪ್ಯಾಲೆಸ್ಟೈನ್ ಯುದ್ಧ, ಇಸ್ರೇಲ್- ಇರಾನ್ ಯುದ್ಧಗಳಿಂದಾಗಿ ಗ್ಯಾಸ್ ಬೆಲೆ ಏರಿಳಿತವಾಗುತ್ತಿದೆ. ಭಾರತವು ರಷ್ಯಾದಿಂದ ಕಡಿಮೆ ಬೆಲೆಗೆ ಗ್ಯಾಸ್ ಅನ್ನು ಖರೀದಿಸುತ್ತಿದೆ. ಆದರೂ, ಭಾರತದ ತೈಲ ಕಂಪನಿಗಳು ಆರ್ಥಿಕವಾಗಿ ನಷ್ಟದಲ್ಲೇ ಇವೆಯಂತೆ. ಜಾಗತಿಕ ಮಟ್ಟದ ಯುದ್ಧ, ಅನಿಶ್ಚಿತತೆಯ ಕಾರಣದಿಂದ ಭಾರತದ ತೈಲ ಕಂಪನಿಗಳು ನಷ್ಟದಲ್ಲಿ ಮುಳುಗಿವೆ. ಈಗ ಕೇಂದ್ರ ಸರ್ಕಾರವು 30 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡುವುದರಿಂದ ನಷ್ಟವನ್ನು ಸರಿದೂಗಿಸಿಕೊಳ್ಳಲು ಸಾಧ್ಯವಾಗುತ್ತೆ. ಬಳಿಕ ಮಧ್ಯಮ ವರ್ಗಕ್ಕೆ ಕಡಿಮೆ ಬೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಗಳನ್ನು ನೀಡಲು ಸಾಧ್ಯವಾಗುತ್ತೆ. ಇದರಿಂದ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮ ವರ್ಗಕ್ಕೆ ರಿಲೀಫ್ ನೀಡಲು ಮೋದಿ ಸರ್ಕಾರ ತೈಲ ಕಂಪನಿಗಳಿಗೆ 30 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡಲು ಈ ಮೂಲಕ ಮುಂದಾಗಿದೆ ಎಂದೇ ದೇಶದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕೇಂದ್ರದ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ತೈಲ ಕಂಪನಿಗಳಿಗೆ 30 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡುವುದು ಬಹುತೇಕ ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಕ್ಯಾಬಿನೆಟ್ ಸಭೆಯ ಬಳಿಕ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನ್ ವೈಷ್ಣವ್ ಕ್ಯಾಬಿನೆಟ್ ತೀರ್ಮಾನವನ್ನು ಪ್ರಕಟಿಸುವರು.
ತೈಲ ಕಂಪನಿಗಳಿಗೆ 30 ಸಾವಿರ ಕೋಟಿ ರೂಪಾಯಿ ನೀಡಿದರೇ, ಇದು ನೇರವಾಗಿ ತೈಲ ಕಂಪನಿಗಳಿಗೆ ಹಣ ನೀಡಿದಂತೆ ಆಗುತ್ತೆ. ಬಳಿಕ ಮಧ್ಯಮ ವರ್ಗಕ್ಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆಯ ಮೂಲಕ ರಿಲೀಫ್ ನೀಡುವ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ