/newsfirstlive-kannada/media/media_files/2025/09/13/socio-and-education-survey-2025-09-13-14-55-22.jpg)
ಹಿಂದೂ ಜಾತಿ ಹೆಸರಿನ ಜೊತೆ ಕ್ರಿಶ್ಚಿಯನ್ ಹೆಸರು ಸೇರ್ಪಡೆಗೆ ಬ್ರೇಕ್!
ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶುರುವಾಗಲಿದೆ. ಆದರೇ, ಜಾತಿಯ ಕಾಲಂನಲ್ಲಿ ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ದಲಿತ ಕ್ರಿಶ್ಚಿಯನ್ ಎಂದೆಲ್ಲಾ ಉಲ್ಲೇಖ ಮಾಡಲಾಗಿತ್ತು. ಹಿಂದೂ ಧರ್ಮದ ವಿವಿಧ ಜಾತಿಗಳಿಂದ ಕ್ರಿಶ್ಚಿಯನ್ ಧರ್ಮದ ಮತಾಂತರವಾದವರು ಹಿಂದೂ ಜಾತಿಯ ಜೊತೆಗೆ ಕ್ರಿಶ್ಚಿಯನ್ ಧರ್ಮದ ಹೆಸರಿನಿಂದಲೂ ಕರೆದುಕೊಳ್ಳಲು ಸಮೀಕ್ಷೆಯ ಕಾಲಂನಲ್ಲಿ ಅವಕಾಶ ನೀಡಲಾಗಿತ್ತು. ಇದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇಲ್ಲದೇ ಇರೋ ಹೊಸ ಜಾತಿಗಳನ್ನೇ ಈ ಸಮೀಕ್ಷೆ ವೇಳೆ ಹುಟ್ಟು ಹಾಕಲಾಗಿದೆ ಎಂಬ ಆಕ್ರೋಶವನ್ನು ವಿರೋಧ ಪಕ್ಷ ಬಿಜೆಪಿ ವ್ಯಕ್ತಪಡಿಸಿತ್ತು.
ಒಮ್ಮೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದವರು ಸಂಪೂರ್ಣ ಕ್ರಿಶ್ಚಿಯನ್. ಅಂಥವರನ್ನು ಹಿಂದೂ ಧರ್ಮದ ಜಾತಿಗಳ ಹೆಸರಿನಿಂದ ಗುರುತಿಸುವುದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ರಾಜಭವನದ ಮೆಟ್ಟಿಲು ಹತ್ತಿ ಬಿಜೆಪಿ ನಾಯಕರು ಲಿಖಿತ ದೂರು ಸಲ್ಲಿಸಿದ್ದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಿಎಂ ಸೂಚನೆ.
ಈಗ ಅಂತಿಮವಾಗಿ ಹಿಂದೂ ಜಾತಿಗಳ ಜೊತೆ ಕ್ರೈಸ್ತ್ ಪದ ಹಾಗೂ ಹೆಚ್ಚುವರಿ ಜಾತಿಗಳ ಸೇರ್ಪಡೆಯನ್ನು ಕೈ ಬಿಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಎಂದೆಲ್ಲಾ ಜಾತಿ ಹೆಸರು ನಮೂದಿಸುವುದನ್ನು ಕೈ ಬಿಡುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಯಾವುದೇ ಹೊಸ ಜಾತಿಗಳ ಹೆಸರು ಅನ್ನು ಸಮೀಕ್ಷೆ ವೇಳೆ ಸೇರ್ಪಡೆ ಮಾಡಬಾರದೆಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಇದರಿಂದಾಗಿ ಸಮೀಕ್ಷೆ ವೇಳೆ ಇದ್ದ ಒಂದು ಗೊಂದಲ ನಿವಾರಣೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.