/newsfirstlive-kannada/media/media_files/2025/08/08/cm-siddaramaiah-2025-08-08-16-35-30.jpg)
ಸಿಎಂ ಸಿದ್ದರಾಮಯ್ಯ Photograph: (@siddaramaiah)
ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಹೆಸರು ಗೊಂದಲ ವಿಷಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಗದಗ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಎಲ್ಲರ ಅಭಿಪ್ರಾಯ ಕೇಳಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅನಗತ್ಯ ಇರುವುದನ್ನು ತೆಗೆದು ಹಾಕುತ್ತಾರೆ. ಅಗತ್ಯ ಇರೋದನ್ನು ಇಟ್ಟುಕೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗಣತಿಗೆ 1,45,000 ಶಿಕ್ಷಕರನ್ನು ನೇಮಿಸಲಾಗಿದೆ. 15 ದಿನಗಳ ಕಾಲ ಮನೆ ಮನೆಗೂ ಹೋಗಿ ಸಮೀಕ್ಷೆ ಮಾಡುತ್ತಾರೆ. ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮಿಕ್ಷೆ ಮಾಡ್ತಾರೆ. ಇದು ಬರೀ ಜಾತಿ ಸಮಿಕ್ಷೆಯಲ್ಲ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ . ಅವಕಾಶದಿಂದ ವಂಚಿತರಾದವರಿಗೆ ಮೊದಲ ಆದ್ಯತೆ ನೀಡುವುದಕ್ಕಾಗಿ ಸಮೀಕ್ಷೆ ಮಾಡಲಾಗುತ್ತಿದೆ.
ಗಣತಿ ಯಡವಟ್ಟುಗಳ ಹಿಂದೆ ಷಡ್ಯಂತ್ರ ಇದೆ ಎಂಬ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಯಿಸಿದ್ದರು. ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತಿದೆ. ಅಲ್ಲಿಯೂ ಷಡ್ಯಂತ್ರ ಇದೆನಾ...? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 1931 ಜಾತಿ ಗಣತಿ ನಿಲ್ಲಿಸಿದ್ರು.. ಈಗ ಮತ್ತೆ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಿದ್ದಾರೆ. 2028 ಕ್ಕೆ ಜಾತಿ ಗಣತಿಯಾಗುತ್ತೆ, ಅಲ್ಲೂ ಷಡ್ಯಂತ್ರ ಇದೆಯಾ? ಎಂದು ಪ್ರಶ್ನಿಸಿದ್ದರು.
ಸಚಿವ ಸಂಪುಟದಲ್ಲಿ ಜಾತಿ ಸಮೀಕ್ಷೆ ವಿಷಯವಾಗಿ ವಿರೋಧ ವ್ಯಕ್ತವಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸಮೀಕ್ಷೆಗೆ ಯಾರೂ ವಿರೋಧ ಮಾಡಿಲ್ಲ. ಸಮೀಕ್ಷೆ ಮಾಡಿ ಅಂತಾನೇ ಎಲ್ಲರೂ ಹೇಳಿದ್ದಾರೆ. ಸಮಾಜದಲ್ಲಿ ಸಮಾನತೆ ತರಬೇಕಿದ್ರೆ ಅವಕಾಶದಿಂದ ವಂಚಿತರಾದವರಿಗೆ ಅವಕಾಶ ಕೊಡಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ತಿಳಿಯಲು ಸಮಿಕ್ಷೆ ಮಾಡಲಾಗುತ್ತಿದೆ. ಹಿಂದುಳಿದ ವರ್ಗಗಳ ಆಯೋಗ ಸಮಿಕ್ಷೆ ಮಾಡುತ್ತಿದೆ. ಅದರಲ್ಲಿ ನಾವು ಮಧ್ಯ ಪ್ರವೇಶಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸಮೀಕ್ಷೆಯ ಕೆಲ ಪ್ರಶ್ನೆಗಳ ಬಗ್ಗೆ ರಾಜ್ಯ ಪಾಲರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅದು ಬಿಜೆಪಿಯವ್ರು ನೀಡಿದ ಪತ್ರ ನನಗೆ ಕಳುಹಿಸಿದ್ದಾರೆ. ಬಿಜೆಪಿಯವರು ರಾಜಕಿಯಕ್ಕಾಗಿ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ವಿರೋಧ, ಉತ್ತರ ಕೊಡುತ್ತ ಕುಳಿತುಕೊಳ್ಳಲೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಜಾತಿ ಒಡೆಯುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಹುಲ್ ಗಾಂಧಿ ಸತ್ಯ ಹೇಳಿದ್ದಾರೆ. 6 ಸಾವಿರ ಮತಗಳನ್ನು ಕೈಬಿಡಲಾಗಿದೆ. ಆಳಂದ ಮತಗಳ್ಳತನ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿಯವರಿದ್ದಾಗ ಕುರುಬರನ್ನು ಎಸ್.ಟಿ. ಕೆಟಗರಿಗೆ ಸೇರಿಸಬೇಕೆಂದು ಶಿಫಾರಸ್ಸು ಮಾಡಿದ್ದಾರೆ. ಕೆ.ಎಸ್. ಈಶ್ವರಪ್ಪ, ಕಾಗಿನೇಲೆ ಸ್ವಾಮಿಜಿಗಳು ಈ ಬಗ್ಗೆ ಶಿಫಾರಸ್ಸು ಕೇಂದ್ರಕ್ಕೆ ಕಳುಹಿಸಿದ್ದಾರೆ . ಈ ಬಗ್ಗೆ ಅವರು ಉತ್ತರಿಸಬೇಕು. ಎಸ್.ಸಿ ಪಟ್ಟಿಗೆ ಸೇರಿಸುವುದು ಕೇಂದ್ರದ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಳೆ ಹಾನಿ ಬಗ್ಗೆ ಸರ್ವೆ ನಡೆಸಿ ಪರಿಹಾರ ಕೊಡ್ತಿವಿ. ಬಿಜೆಪಿಯಿಂದ ರಸ್ತೆ ಗುಂಡಿ ವಿಷಯವಾಗಿ ರಾಜ್ಯಾದ್ಯಂತ ಹೋರಾಟ ವಿಷಯಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಈ ಭಾರಿ ಮಳೆ ಜಾಸ್ತಿ ಆಗಿದೆ, ಮಳೆ ಆಗಿರೊದ್ರಿಂದ ರಸ್ತೆಗಳು ಕೆಟ್ಟು ಹೋಗಿವೆ. ಸ್ವಲ್ಪ ಕೆಟ್ಟು ಹೋಗಿವೆ, ಗುಂಡಿ ಬಿದ್ದಿವೆ ನಿಜ. ಇವತ್ತು ಬೆಂಗಳೂರಿನಲ್ಲಿ ಮೀಟಿಂಗ್ ಮಾಡ್ತೀನಿ. ರಾಜ್ಯದ ವಿಷಯವಾಗಿಯೂ ಮೀಟಿಂಗ್ ಮಾಡ್ತೀನಿ.. ಎಲ್ಲೆಲ್ಲಿ ಸಂಚಾರಕ್ಕೆ ತೊಂದರೆ ಇದೆಯೋ ಅದನ್ನು ಸರಿಪಡಿಸುತ್ತೇವೆ. ಬಿಜೆಪಿ 4 ವರ್ಷದಲ್ಲಿ ಒಮ್ಮೆಯೂ ರಸ್ತೆ ಗುಂಡಿ ಮುಚ್ಚಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.