/newsfirstlive-kannada/media/media_files/2025/09/29/no-electricity-in-new-houses-2025-09-29-18-06-09.jpg)
ರಾಜ್ಯದಲ್ಲಿ 10 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ!
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಸಿ ಮತ್ತು ಓ.ಸಿ. ಇಲ್ಲದೇ ಇರುವ ಮನೆ, ಕಟ್ಟಡಗಳಿಗೆ ಸುಪ್ರೀಂಕೋರ್ಟ್ ಆದೇಶದಿಂದಾಗಿ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ. ಸಂಬಂಧಪಟ್ಟ ಸ್ಥಳೀಯ ಅಡಳಿತ ಸಂಸ್ಥೆಗಳಿಂದ ಕಾಮಗಾರಿ ಆರಂಭ ಪ್ರಮಾಣ ಪತ್ರ( ಸಿ.ಸಿ.) ಹಾಗೂ ಮನೆ, ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಸೇರಿದಂತೆ ವಾಸ ಯೋಗ್ಯ ಪ್ರಮಾಣ ಪತ್ರ ಹೊಂದಿಲ್ಲದ ಕಟ್ಟಡಗಳಿಗೆ ವಿದ್ಯುತ್ , ನೀರಿನ ಸಂಪರ್ಕ ನೀಡಬಾರದು. ಇದರಿಂದ ಅಕ್ರಮವಾಗಿ ಮನೆ, ಕಟ್ಟಡ ನಿರ್ಮಾಣವಾಗುವುದನ್ನು ತಡೆಯಲು ಸಾಧ್ಯ ಎಂದು ಸುಪ್ರೀಂಕೋರ್ಟ್ ಕಳೆದ ವರ್ಷದ ಡಿಸೆಂಬರ್ 17 ರಂದು ತೀರ್ಪು ನೀಡಿದೆ. ಈ ತೀರ್ಪು ದೇಶಾದ್ಯಂತ ಅನ್ವಯವಾಗಿ ಜಾರಿಯಾಗಲಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ಆದೇಶದಿಂದಾಗಿ ಈಗ ಕರ್ನಾಟಕದಲ್ಲಿ ಹೊಸದಾಗಿ ನಿರ್ಮಾಣವಾದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ. ಆದರೇ, 1,200 ಚದರ ಅಡಿಯವರೆಗಿನ ಕಟ್ಟಡ, ಮನೆಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಓ.ಸಿ. ಮತ್ತು ಸಿ.ಸಿ. ( ವಾಸಯೋಗ್ಯ ಪ್ರಮಾಣಪತ್ರ) ಪಡೆಯುವುದರಿಂದ ವಿನಾಯಿತಿ ನೀಡಿ ರಾಜ್ಯದ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಂಡಿದೆ. ಆದರೂ, ಮನೆ, ಕಟ್ಟಡಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗಿರುವ 10 ಲಕ್ಷ ಮನೆಗಳು ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲಲ್ಲಿ ಮುಳುಗಿವೆ.
ಹೀಗಾಗಿ ಈ ಸಮಸ್ಯೆ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಇಂದು ವಿವಿಧ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಆದರೇ, ಸಭೆಯಲ್ಲಿ ಸಮಸ್ಯೆಗೆ ಯಾವುದೇ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಯಾವುದೇ ಅಂತಿಮ, ಸ್ಪಷ್ಟ ತೀರ್ಮಾನವನ್ನು ಇಂದಿನ ಸಭೆಯಲ್ಲಿ ಕೈಗೊಂಡಿಲ್ಲ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದ ಇತರೆ ಕಡೆಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಲು ಇರುವ ಸಮಸ್ಯೆಗಳ ಕುರಿತಂತೆ ನಡೆದ ಸಭೆಯ ಪ್ರಸಕ್ತ ಎದುರಾಗಿರುವ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಲಾಗಿದೆ.
ದಿನಾಂಕ: 17-12-2024ರ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಗ್ರೇಟರ್ ಬೆಂಗಳೂರು ಸೇರಿದಂತೆ ರಾಜ್ಯ ವ್ಯಾಪ್ತಿಯಲ್ಲಿ ಸಿಸಿ ಮತ್ತು ಓಸಿ ಇಲ್ಲದೇ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸಮಸ್ಯೆ ಉಂಟಾಗಿರುವ ಬಗ್ಗೆ ಚರ್ಚೆ ನಡೆಸಲಾಯಿತು.
ಸುಪ್ರೀಂಕೋರ್ಟ್ ನ ಆದೇಶ ಭಾರತದ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತಿದ್ದೂ, ಎಲ್ಲ ರಾಜ್ಯಗಳೂ ಆದೇಶವನ್ನು ಅನುಷ್ಠಾನಗೊಳಿಸುತ್ತಿವೆಯೇ? ಎಂಬ ಬಗ್ಗೆ ಪರಿಶೀಲಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಅನುಮತಿ ನೀಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಸಲಾಗಿ, ನಿರ್ಮಾಣಗೊಂಡಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಸಾಧ್ಯವಿಲ್ಲ. ಸರ್ಕಾರದ ನಿರ್ಧಾರದಿಂದ ಜನರಿಗೆ ಅನುಕೂಲವಾಗಬೇಕು.
ಸೂಕ್ತ ಅನುಮತಿಗಳಿಲ್ಲದೇ ಈಗಾಗಲೇ ಮನೆ ನಿರ್ಮಿಸಿ ವಾಸವಿದ್ದಾರೆ. ಅಂತಹವರಿಗೆ ಒಂದು ಬಾರಿಗೆ ಅನ್ವಯವಾಗುವಂತೆ ನಿಯಮಿತಗೊಳಿಸಲು ಕಾನೂನಿನಲ್ಲಿ ಅವಕಾಶವಿರುವ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಸುಪ್ರೀಂಕೋರ್ಟ್ ಆದೇಶ ಅನುಷ್ಠಾನಗೊಳ್ಳುವ ಮುಂಚೆ ಸಲ್ಲಿಕೆಯಾಗಿರುವ ಮಾರ್ಚ್ 2025 ರವರೆಗಿನ ಅರ್ಜಿಗಳನ್ನು ಪರಿಗಣಿಸಿ ಒಸಿ ಮತ್ತು ಸಿಸಿಯಿಂದ ವಿನಾಯ್ತಿಗೊಳಿಸಿ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವ ಬಗ್ಗೆ ಕಾನೂನಿನ ಸಾಧ್ಯತೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲು ಅಕ್ಟೋಬರ್ 8 ರಂದು ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಸಂಬಂಧಪಟ್ಟ ಇಲಾಖಾ ಸಚಿವರು, ಸರ್ಕಾರದ ಅಡ್ವೋಕೇಟ್ ಜನರಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.