/newsfirstlive-kannada/media/media_files/2025/09/24/swami-chaitanyananda-swamiji02-2025-09-24-16-45-51.jpg)
ಸ್ವಾಮಿ ಚೈತನ್ಯಾನಂದ ಸರಸ್ವತಿ ಸ್ವಾಮಿ ವಿರುದ್ಧ ಲೈಂಗಿಕ ಕಿರುಕುಳದ ಕೇಸ್ ದಾಖಲು
ನನ್ನ ರೂಮಿಗೆ ಬಾ.. ನಾನು ನಿನ್ನನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯುವೆ, ನೀನು ಯಾವುದಕ್ಕೂ ದುಡ್ಡು ಕೊಡಬೇಕಾಗಿಲ್ಲ- ಹೀಗೆ ಮ್ಯಾನೇಜ್ ಮೆಂಟ್ ನ ವಿದ್ಯಾರ್ಥಿನಿಯರಿಗೆ ಮೇಸೇಜ್ ಮಾಡಿರುವುದು ಸ್ವಾಮಿ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ. ದೆಹಲಿಯ ವಸಂತಕುಂಜ್ ನಲ್ಲಿರುವ ಕರ್ನಾಟಕದ ಶೃಂಗೇರಿ ಶಾರದಾ ಪೀಠದ ಮ್ಯಾನೇಜ್ ಮೆಂಟ್ ಕಾಲೇಜಿನ ಡೈರೆಕ್ಟರ್ ಆಗಿದ್ದ ಸ್ವಾಮಿ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಹೀಗೆ ವಿದ್ಯಾರ್ಥಿನಿಯರನ್ನು ಕಾಮದಾಟಕ್ಕೆ ಆಹ್ವಾನಿಸಿದ್ದಾರೆ.
ಶಾರದಾ ಇನ್ಸಿ ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ನ 50 ವಿದ್ಯಾರ್ಥಿನಿಯರು, ಮಹಿಳೆಯರಿಗೆ ಇದೇ ರೀತಿಯ ವಾಟ್ಸಾಫ್ ಮೇಸೇಜ್ ಗಳನ್ನು ಸ್ವಾಮಿ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಕಳಿಸಿದ್ದಾನೆ.
ಕಳೆದ 16 ವರ್ಷಗಳಿಂದ ಬೇರೆ ಬೇರೆ ಮಹಿಳೆಯರಿಗೆ ಇದೇ ರೀತಿ ಅಶ್ಲೀಲ, ಅಸಭ್ಯ, ಲೈಂಗಿಕತೆಗೆ ಆಹ್ವಾನಿಸುವ ಮೇಸೇಜ್ ಗಳನ್ನು ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಕಳಿಸಿದ್ದಾನೆ. ಬಲವಂತವಾಗಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ.
ಇನ್ನೂ ಮತ್ತೊಂದು ಮೇಸೇಜ್ ನಲ್ಲಿ ಮಹಿಳೆಯೊಬ್ಬರಿಗೆ ಹಣ, ಆಸ್ತಿ ನೀಡುವುದಾಗಿ ಹೇಳಿ ತನ್ನತ್ತ ಸೆಳೆಯುವ ಯತ್ನ ಮಾಡಿದ್ದಾನೆ. ಇನ್ನೂ ಮತ್ತೊಬ್ಬ ವಿದ್ಯಾರ್ಥಿನಿಗೆ ನೀನು ನಾನು ಹೇಳಿದಂತೆ ಕೇಳದಿದ್ದರೇ, ನಿನ್ನನ್ನು ಫೇಲ್ ಮಾಡುತ್ತೇನೆ ಎಂದು ಮ್ಯಾನೇಜ್ ಮೆಂಟ್ ವಿದ್ಯಾರ್ಥಿನಿಯೊಬ್ಬರಿಗೆ ಬೆದರಿಕೆ ಹಾಕಿದ್ದಾನೆ.
ಸ್ವಾಮಿ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಕಳಿಸಿದ್ದ ವಾಟ್ಸಾಫ್ ಮೇಸೇಜ್ ಗಳ ಸಾಕ್ಷ್ಯವನ್ನೆಲ್ಲಾ ದೆಹಲಿಯ ವಸಂತ್ ಕುಂಜ್ ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ.
ಈ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಯಾರು? ಎಲ್ಲಿಯವನು? ಎಂಬ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಈತ ಮೂಲತಃ ಒರಿಸ್ಸಾ ರಾಜ್ಯದವನು. ಈತನ ಮೂಲ ಹೆಸರು ಪಾರ್ಥಸಾರಥಿ. ಕಳೆದ 16 ವರ್ಷಗಳಿಂದ ಮಹಿಳೆಯರಿಗೆ ಲೈಂಗಿಕವಾಗಿ ಬಲೆ ಬೀಸುತ್ತಿದ್ದಾನೆ ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈತನ ವಿರುದ್ಧ 2009 ಹಾಗೂ 2016ರಲ್ಲೂ ದೆಹಲಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ. ಒಂದು ಕೇಸ್ ನಲ್ಲಿ ಜೈಲಿಗೂ ಹೋಗಿ ಬಂದಿದ್ದಾನೆ. ಆದಾದ ಬಳಿಕ ಕರ್ನಾಟಕದ ಶೃಂಗೇರಿ ಶಾರದಾ ಪೀಠಕ್ಕೆ ಸೇರಿದ ಮ್ಯಾನೇಜ್ ಮೆಂಟ್ ಕಾಲೇಜಿನ ಡೈರೆಕ್ಟರ್ ಆಗಿ ನೇಮಕಗೊಂಡಿದ್ದು ಅಚ್ಚರಿಯ ವಿಷಯ.
ಇನ್ನೂ ಈತ ಇದ್ದ ವಸಂತ್ ಕುಂಜ್ ಆಶ್ರಯದಲ್ಲಿದ್ದ ಮಹಿಳೆಯೊಬ್ಬರು ಈತನ ವಿರುದ್ಧ ಕೇಸ್ ದಾಖಲಿಸಿದ್ದರು. ಆಗ ಈತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈ ಸ್ವಘೋಷಿತ ದೇವಮಾನವ, ಮೊದಲಿಗೆ ವಾಟ್ಸಾಫ್ ಕಾಲ್ ಗಳ ಮೂಲಕ ವಿದ್ಯಾರ್ಥಿನಿಯರಿಗೆ ಕಾಲ್ ಮಾಡುತ್ತಿದ್ದ ಇಲ್ಲವೇ ವಾಟ್ಸಾಫ್ ಮೇಸೇಜ್ ಮಾಡುತ್ತಿದ್ದ. ಮೊದಲ ಮೇಸೇಜ್ ನಲ್ಲಿ ಬೆದರಿಕೆ ಹಾಕುತ್ತಿರಲಿಲ್ಲ. ಮೊದಲ ಮೇಸೇಜ್‌ಗೆ ಯಾವುದೇ ರೆಸ್ಪಾನ್ಸ್ ಬಾರದೇ ಇದ್ದರೇ, ನಂತರ ಈ ಸ್ವಾಮೀ, ಮ್ಯಾನೇಜ್ ಮೆಂಟ್ ಕೋರ್ಸ್ ನಲ್ಲಿ ನಿನಗೆ ಮಾರ್ಕ್ಸ್ ಕೊಡಲ್ಲ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದ.
ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ. ಆರ್ಥಿಕವಾಗಿ ದುರ್ಬಲವಾಗಿರುವವರು, ಈತನ ವಿರುದ್ಧ ಧ್ವನಿ ಎತ್ತಲ್ಲ ಎಂಬ ಧೈರ್ಯ ಈತನಿಗೆ ಇತ್ತು. ಈತನ ಈ ದುಷ್ಟ ಕೆಲಸಕ್ಕೆ ಹಾಸ್ಟೆಲ್ ನ ಮೂವರು ವಾರ್ಡನ್ ಗಳು ಸಹಾಯ ಮಾಡಿದ್ದಾರೆ. ಈಗ ಪೊಲೀಸರು ವಾರ್ಡನ್ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಚೈತನ್ಯಾನಂದ ಸ್ವಾಮೀಜಿ ಈಗ ಎಲ್ಲಿದ್ದಾನೆ?
ಪೊಲೀಸರು ಈತನ ವಿರುದ್ಧ ಕೇಸ್ ದಾಖಲಿಸಿದಾಗ, ಈತ ಲಂಡನ್ ನಲ್ಲಿದ್ದ. ಬಳಿಕ ಕೊನೆಯದಾಗಿ ಉತ್ತರ ಪ್ರದೇಶದ ಆಗ್ರಾದಲ್ಲಿದ್ದ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಇನ್ನೂ 2009ರ ಕೇಸ್ ಲೈಂಗಿಕ ಕಿರುಕುಳ ಮತ್ತು ವಂಚನೆಗೆ ಸಂಬಂಧಿಸಿದ್ದು. ಈ ಕೇಸ್ ನಲ್ಲಿ ಕೆಲಕಾಲ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ.
ಇನ್ನೂ ಸ್ವ ಘೋಷಿತ ದೇವಮಾನವನ ವಿರುದ್ಧ ಇನ್ನೆರೆಡು ಕೇಸ್ ಗಳೂ ಇವೆ. ರಾಜತಾಂತ್ರಿಕರ ಕಾರಿನ ನಕಲಿ ನಂಬರ್ ಪ್ಲೇಟ್ ಅನ್ನು ಬಳಕೆ ಮಾಡಿದ್ದಾನೆ. ವಿಶ್ವಸಂಸ್ಥೆಯ ಕಾರಿನ ನಂಬರ್ ಪ್ಲೇಟ್ ಅನ್ನು ಈತ ಬಳಕೆ ಮಾಡಿದ್ದಾನೆ. ಇನ್ನೂ ಆಶ್ರಮದ ಬೇಸ್ ಮೆಂಟ್ ನಲ್ಲಿ ಇನ್ನೂ ಅನೇಕ ನಕಲಿ ನಂಬರ್ ಪ್ಲೇಟ್ ಗಳೂ ಪತ್ತೆಯಾಗಿವೆ.
ಶೃಂಗೇರಿ ಶಾರದಾ ಪೀಠದಿಂದ ಈತನ ವಿರುದ್ಧ ನೀಡಿರುವ ಪತ್ರಿಕಾ ಹೇಳಿಕೆ
ಇನ್ನೂ ಈತನ ವಿರುದ್ಧ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಮುರುಳಿ ಎಂಬುವವರು ಕೂಡ ಪೊಲೀಸರಿಗೆ ಈತನ ದುರ್ವರ್ತನೆ ವಿರುದ್ಧ ದೂರು ನೀಡಿದ್ದಾರೆ. ಆಶ್ರಮದಿಂದ ಈತನನ್ನು ಹೊರ ಹಾಕಲಾಗಿದೆ ಎಂದು ಕರ್ನಾಟಕದ ಶೃಂಗೇರಿ ಶಾರದಾ ಪೀಠ ಹೇಳಿದೆ.
ಆಗಸ್ಟ್ ತಿಂಗಳ 8ನೇ ತಾರೀಖಿನಂದೇ ಕರ್ನಾಟಕದ ಶೃಂಗೇರಿ ಶಾರದಾ ಪೀಠವು ಈತನನ್ನು ತಮ್ಮ ಇನ್ಸ್ ಟಿಟ್ಯೂಟ್ ನಿಂದ ಹೊರ ಹಾಕಿದೆ ಹಾಗೂ ಈತನ ವಿರುದ್ಧ ಪೊಲೀಸರಿಗೂ ದೂರು ನೀಡಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈತನೊಂದಿಗಿನ ಶಾರದಾ ಪೀಠದ ಎಲ್ಲ ಸಂಬಂಧ ಕಡಿದುಕೊಂಡಿರುವುದಾಗಿ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.