/newsfirstlive-kannada/media/media_files/2025/10/10/kannada-rajyosatva-awards-2025-10-10-18-55-42.jpg)
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ಭಾರಿ ಅರ್ಜಿ ಮತ್ತು ನಾಮನಿರ್ದೇಶನಗಳನ್ನು ಆಹ್ವಾನಿಸದೇ ಇರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಅರ್ಹರನ್ನು ಆಯ್ಕೆ ಮಾಡಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಲಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರ ಆಯ್ಕೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಈಗಾಗಲೇ ಆಯ್ಕೆ ಸಮಿತಿಯೊಂದನ್ನು ರಚಿಸಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಮಿತಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಕಳೆದ ಭಾರಿ ಕೂಡ ಸಮಿತಿ ಇತ್ತು. ಈ ಭಾರಿ ಎಲ್ಲಾ ಅಕಾಡೆಮಿ ಅಧ್ಯಕ್ಷರನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಿದ್ದೇವೆ. ಹೀಗಾಗಿ ಸಮಿತಿಯ ಸದಸ್ಯರ ಸಂಖ್ಯೆ ಜಾಸ್ತಿಯಾಗಿದೆ. ಸಾಹಿತ್ಯ, ನಾಟಕ, ಶಿಕ್ಷಣ ಕ್ಷೇತ್ರ ಎಲ್ಲದರಲ್ಲೂ ಒಬ್ಬರು ಇಬ್ಬರನ್ನು ಆಯ್ಕೆ ಮಾಡಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಅಕ್ಟೋಬರ್ 15ನೇ ತಾರೀಕು ಮೊದಲ ಸಭೆ ಕರೆದಿದ್ದೇನೆ. ಈ ಸಮಿತಿಯ ಜೊತೆ ಕನಿಷ್ಠ 2-3 ಸಭೆ ಮಾಡುತ್ತೇನೆ. ಎಲ್ಲಾ ಜಿಲ್ಲೆಗಳಿಂದ ಒಬ್ಬರು, ಇಬ್ಬರನ್ನು ಆಯ್ಕೆ ಮಾಡಿದ್ದೇವೆ . ಈ ಭಾರಿ ಮೆರಿಟ್ ಮೇಲೆ ಆಯ್ಕೆ ಮಾಡುತ್ತೇವೆ . ಹೀಗಾಗಿ ಎಲ್ಲರೂ ಸಲಹೆ ನೀಡಲಿ ಅಂತ ನಾವು ಸಮಿತಿ ಮಾಡಿದ್ದೇವೆ . ಅಕ್ಟೋಬರ್ ಅಂತ್ಯಕ್ಕೆ ಪಟ್ಟಿ ಫೈನಲ್ ಮಾಡುತ್ತೇವೆ . ಹೊಸ ಮಾನದಂಡಗಳು ಏನು ಇಲ್ಲ . ಎರಡು ವರ್ಷಗಳಿಂದಲೂ ಒಳ್ಳೆಯ ಆಯ್ಕೆಯಾಗಿದೆ . ಅದೇ ರೀತಿ ಈ ವರ್ಷ ಕೂಡ ಒಳ್ಳೆ ಆಯ್ಕೆಗಳು ಆಗುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಇನ್ನೂ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೆ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಸದಸ್ಯರಾಗಿ ಮಾರುತಿ ಬೌದ್ಧೆ, ಕೆ ಪಿ ಸುರೇಶ್, ಇ.ಟಿ ರತ್ನಾಕರ್ ತಳವಾರ, ಸಾಮಾಜಿಕ ಕಾರ್ಯಕರ್ತೆ ದು. ಸರಸ್ವತಿ, ಫಾದರ್ ಟಿಯೋಲ, ಸಾಹಿತಿ ಡಾ. ಮಾಲತಿ ಪಟ್ಟಣಶೆಟ್ಟಿ, ಪ್ರೊ. ಜಿ ಅಬ್ದುಲ್ ಬಷೀರ್, ಚಂದ್ರಶೇಖರ ನಂಗ್ಲಿ, ಡಾ. ಎಂ.ಕೆ ಮಾಸ್ಕೇರಿ ನಾಯಕ್, ಸುಬ್ಬು ಹೊಲೇಯಾರ್, ಡಿ.ಬಿ. ರಜಿಯಾ, ಸಬಿಹಾ ಭೂಮಿಗೌಡ, ರೈತ ಹೋರಾಟಗಾರ್ತಿ ಸುನಂದ ಜಯರಾಂ, ಪ್ರೊ. ಶಿವರಾಂ ಶೆಟ್ಟಿ ಸೇರಿದಂತೆ 63 ಮಂದಿಯ ಆಯ್ಕೆ ಸಮಿತಿಯಲ್ಲಿದ್ದಾರೆ. ಎಲ್ಲ ಅಕಾಡೆಮಿಗಳ ಅಧ್ಯಕ್ಷರು ಕೂಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಹೀಗಾಗಿ ಆಯ್ಕೆ ಸಮಿತಿಯ ಸದಸರ ಸಂಖ್ಯೆಯೇ 63 ಕ್ಕೇರಿಕೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.