/newsfirstlive-kannada/media/media_files/2025/08/25/dks-versus-bkh-2025-08-25-16-03-34.jpg)
ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹಾಗೂ ಡಿ.ಕೆ.ಶಿವಕುಮಾರ್
ಸಿದ್ದು ಬಣಕ್ಕೆ ಡಿಕೆಶಿ ವಿರುದ್ಧ ಸಿಕ್ತಾ ಅಸ್ತ್ರ? ಹೈಕಮಾಂಡ್ ಹೇಗೆ ನೋಡುತ್ತೆ?
ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಡಿಸಿಎಂ ಡಿಕೆಶಿ ಆರ್ಎಸ್ಎಸ್ ಗೀತೆ ಹಾಡಿದ್ದರ ಚರ್ಚೆ ಈಗ ಬಿರುಗಾಳಿಯಾಗಿದೆ. ಪರ-ವಿರೋಧ ಚರ್ಚೆ ಜೋರಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಾಡಿನ ಬಗ್ಗೆ ಭಾರೀ ಚರ್ಚೆ, ನಡೆಯುತ್ತಿದೆ. ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧಾನಸಭೆ ಅಧಿವೇಶನದ ವೇಳೆಯೇ ಆರ್‌ಎಸ್‌ಎಸ್ ಗೀತೆಯಾದ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎಂದು ಹಾಡು ಹಾಡಿದ್ದು ಕಾಂಗ್ರೆಸ್ ಪಕ್ಷದೊಳಗೆ ವಿವಾದಕ್ಕೆ ನಾಂದಿ ಹಾಡಿದೆ. ಸಂಘದ ಗೀತೆ ನನಗೆ ಬಹಳ ಇಷ್ಟ ಎಂದು ಕಾಂಗ್ರೆಸ್ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ಕೂಡ ಹೇಳಿದ್ದು, ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎಂದು ಒಂದೆರೆಡು ಸಾಲು ಹಾಡಿದ್ದಾರೆ.
ಒಂದು ಕಡೆ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿಯ ಮೇಲೆ ಬೆಂಕಿ ಉಗುಳುತ್ತಿರುವ ವಿಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಇನ್ನೊಂದು ಕಡೆ, ವಿಧಾನ ಮಂಡಲದ ಅಧಿವೇಶನದ ವೇಳೆಯೇ ಸಂಘದ ಗೀತೆಯನ್ನು ಕಾಂಗ್ರೆಸ್ ಹಿರಿಯ ನಾಯಕರು ಹೇಳಿದರೆ ಹೇಗಾಗಬೇಡ?
ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾದ ಡಿಕೆಶಿಯ ಆರ್‌ಎಸ್‌ಎಸ್ ಹಾಡು!
ನಾನು ಬಿಜೆಪಿ ಮತ್ತು ಜೆಡಿಎಸ್ ನಾಯಕರ ಬಗ್ಗೆ ಸ್ಟಡಿ ಮಾಡಿದ್ದೇನೆ, ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳುತ್ತೇನೆ. ಅದೇ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆಯೂ ತಿಳಿದುಕೊಂಡಿದ್ದೇನೆ. ಸಂಘದವರು ಯಾವರೀತಿ ಬೆಳೆಯುತ್ತಿದ್ದಾರೆ, ಕರ್ನಾಟಕದಲ್ಲಿ ಅವರ ಹೆಜ್ಜೆ ಹೇಗೆ ಎನ್ನುವುದನ್ನೂ ಅರಿತುಕೊಂಡಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಆವೇಳೆ, ನೀವು ಹಿಂದೆ ಆರ್‌ಎಸ್‌ಎಸ್ ಚಡ್ಡಿ ಹಾಕಿಕೊಂಡಿದ್ದೆ ಎಂದು ಹೇಳಿದ್ದೀರಿ ಎನ್ನುವ ವಿಪಕ್ಷದ ನಾಯಕ ಆರ್.ಅಶೋಕ್ ಮಾತಿಗೆ, ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಎಂದು ಸಂಘದ ಹಾಡನ್ನು ಡಿಕೆಶಿ ಹಾಡಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.
ನಾನು ಹುಟ್ಟು ಕಾಂಗ್ರೆಸ್ಸಿಗ ಎಂದ ಡಿಸಿಎಂ ಡಿಕೆಶಿ
ತಾವು ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ಮಾರನೇ ದಿನವೇ ಡಿಸಿಎಂ ಡಿಕೆಶಿ ,ತಾನು ಹುಟ್ಟು ಕಾಂಗ್ರೆಸ್ಸಿಗ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುತ್ತೇನೆ. ನನ್ನ ನಾಯಕತ್ವ ಮುಂದುವರಿಯುತ್ತೆ ಎಂದು ಕೂಡ ಹೇಳಿದ್ದಾರೆ.
ಆರ್‌ಎಸ್‌ಎಸ್ ಗೀತೆ ಹಾಡಿದರೆ ಸಿಎಂ ಮಾಡ್ತಾರೆ ಅಂದ್ರೆ ನಾನು ಹಾಡುವೆ: ಸತೀಶ್ ಜಾರಕಿಹೊಳಿ
ಆರ್‌ಎಸ್‌ಎಸ್ ಗೀತೆ ಹಾಡಿದ ಕೂಡಲೇ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡುತ್ತಾರೆ ಎನ್ನುವುದಾದರೆ ನಾನು ಹಾಗೂ ನಮ್ಮ ಶಾಸಕರು ಸಹ ಹಾಡುತ್ತಾರೆ, ನಮ್ಮನ್ನು ಸಿಎಂ ಮಾಡುತ್ತಾರೆಯೇ? ಎಂದು ಸಚಿವ ಸತೀಶ್ ಜಾರಕಿಹೊಳಿ ವ್ಯಂಗವಾಡಿದ್ದಾರೆ.
ಸದನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆ ‘ನಮಸ್ತೇ ಸದಾ ವತ್ಸಲೇ’ ಹಾಡಿರುವ ವಿಚಾರವಾಗಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಯಾಕೆ ಹಾಗೆ ಹೇಳಿದ್ದಾರೆ ? ಏನು ಹೇಳಿದ್ದಾರೆ? ಎನ್ನುವ ಬಗ್ಗೆ ಅವರೇ ಸ್ಪಷ್ಟೀಕರಣ ಕೊಡಬೇಕು. ಆರೆಸ್ಸೆಸ್ ಗೀತೆ ಹಾಡಿದಾಕ್ಷಣ ಡಿಕೆಶಿ ಬಿಜೆಪಿ ಪರವಾಗಿ ಅಂತ ಹೇಗೆ ಹೇಳುತ್ತೀರಾ? ಎಂದರು. ಮಾಜಿ ಸಚಿವ ಕೆ.ಎನ್.ರಾಜಣ್ಣ ವಜಾ ಆಗಿರೋ ವಿಷಯವೇ ಬೇರೆ, ಡಿಕೆಶಿ ಆರೆಸ್ಸೆಸ್ ಗೀತೆ ಹಾಡಿದ್ದೇ ಬೇರೆ. ನನಗೂ ಆರೆಸ್ಸೆಸ್ ಗೀತೆ ಪರಿಚಯವಿದೆ ಹಾಡಬೇಕು ಅಂತೇನಿಲ್ಲ. ಆರೆಸ್ಸೆಸ್ ಗೀತೆ ಹಾಡಿದ ಕೂಡಲೇ ಡಿಕೆಶಿಗೆ ಬಿಜೆಪಿಯವರು ಸಿಎಂ ಮಾಡುತ್ತಾರೆ ಎಂದರೆ ನನ್ನ ಜತೆಗೆ ನಮ್ಮ ಶಾಸಕರು ಹಾಡುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕಾಂಗ್ರೆಸ್ಸಿಗೆ ಆರೆಸ್ಸೆಸ್ ಎಂದಿಗೂ ಶತ್ರು : ಪ್ರಿಯಾಂಕ್ ಖರ್ಗೆ
ಆರ್‌ಎಸ್‌ಎಸ್ ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಎಂದಿಗೂ ಶತ್ರುವಾಗಿಯೇ ನೋಡುತ್ತದೆ. ಪ್ರಬುದ್ಧ ಭಾರತ ನಿರ್ಮಾಣ ಆಗಬೇಕಾದರೆ ದೇಶದ ಪ್ರತಿ ಪ್ರಜೆಯೂ ಆರ್‌ಎಸ್‌ಎಸ್‌ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂಬ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ.
ಡಿಕೆಶಿ ಏನು ಬೇಕಾದ್ರು ಮಾಡ್ಬಹುದು, ನಾವು ಮಾತನಾಡುವಂತಿಲ್ಲ: ಕೆ.ಎನ್.ರಾಜಣ್ಣ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆ ಹಾಡಬಹುದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ವೇದಿಕೆಯಲ್ಲಿ ಕೂರಬಹುದು. ಹೀಗೆ ಏನು ಬೇಕಾದರೂ ಮಾಡಬಹುದು. ಆದರೆ, ನಾವು ಮಾತ್ರ ಏನು ಮಾತನಾಡುವಂತಿಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತುಮಕೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಂಭಮೇಳದ ಸಂದರ್ಭದಲ್ಲಿ ಪ್ರಯಾಗರಾಜ್‌ನ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಬಡತನ ನಿವಾರಣೆಯಾಗುವುದಿಲ್ಲ ಎಂದಿದ್ದರು. ಅವರ ಹೇಳಿಕೆ ಬಳಿಕವೂ ಡಿ.ಕೆ.ಶಿವಕುಮಾರ್ ಅವರು ಗಂಗೆಯಲ್ಲಿ ಸ್ನಾನ ಮಾಡಿದರು. ಅಲ್ಲದೇ ಅಂಬಾನಿ ಮಗನ ಮದುವೆಯ ಆಮಂತ್ರಣವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ವೀಕರಿಸಲಿಲ್ಲ. ಆದರೆ, ಡಿಕೆಶಿ ಕುಟುಂಬ ಸಮೇತರಾಗಿ ಅಂಬಾನಿ ಮಗನ ಮದುವೆಗೆ ಹೋದರು. ನಾವು ಮಂತ್ರಿಗಳ, ಶಾಸಕರ ಸಭೆ ಕರೆಯುವಂತಿಲ್ಲ. ಆದರೆ ಬೇರೆಯವರು ಕರೆಯಬಹುದು ಎಂದು ಡಿಕೆಶಿಗೆ ತಿರುಗೇಟು ನೀಡಿ, ಸೂಕ್ತ ಸಮಯದಲ್ಲಿ ಉತ್ತರ ನೀಡುವುದಾಗಿ ಹೇಳಿದರು.
ಹೈಕಮ್ಯಾಂಡ್ ಚರ್ಚಿಸಬೇಕೆಂದ ಸಚಿವ ಜಾರಕಿಹೊಳಿ
ಇನ್ನೂ ಡಿಸಿಎಂ ಡಿ.ಕೆ. ಶಿವಕುಮಾರ್ ಆರ್‌ಎಸ್‌ಎಸ್ ನ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಹಾಡು ಹಾಡಿದ್ದರ ಬಗ್ಗೆ ಇಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಡಿಸಿಎಂ ಡಿಕೆಶಿ ಅವ್ರೇ ಉತ್ತರ ಕೊಡಬೇಕು.ಅದಕ್ಕೆ ನಾನು ಹೇಳಲಿಕ್ಕೆ ಆಗಲ್ಲ. ಇದರ ಬಗ್ಗೆ ಸಿಎಂ ಮತ್ತು ಹೈ ಕಮಾಂಡ್ ಚರ್ಚೆ ಮಾಡಬೇಕು.ಇದರ ಬಗ್ಗೆ ನಮ್ಮ ಮಟ್ಟದಲ್ಲಿ ಚರ್ಚೆ ಮಾಡಲಿಕ್ಕೆ ಆಗೋದಿಲ್ಲ. ಡಿಕೆಶಿ ವಿಚಾರದಲ್ಲಿ ಕೈ ಹೈಕಮಾಂಡ್ ಮೃದು ದೋರಣೆ ಅನುಸರಿಸ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ರಾಜ್ಯದಲ್ಲಿ ಏನು ನಡೆಯುತ್ತೇ ಅನ್ನೋದು ಹೈಕಮಾಂಡ್ ಗಮನಕ್ಕೆ ಬರೋದಿಲ್ಲ. ಕೆಲವೊಂದು ವಿಷಯ ರಾಹುಲ್ ಗಾಂಧಿ ಅವರಿಗೆ ಮುಟ್ಟುತ್ತೆ, ಕೆಲವೊಂದು ವಿಷಯ ರಾಹುಲ್ ಗಾಂಧಿಗೆ ಮುಟ್ಟೋದಿಲ್ಲ. ಈ ಎಲ್ಲ ವಿಷಯ ಮುಟ್ಟಿಸೋ ಕೆಲಸಾ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸೂಕ್ಷ್ಮವಾಗಿ ಹೈಕಮಾಂಡ್ ಗಮನಿಸಬೇಕು ಅಷ್ಟೇ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಡಿಕೆಶಿ ಕ್ಷಮೆಗೆ ಬಿ.ಕೆ.ಹರಿಪ್ರಸಾದ್ ಆಗ್ರಹ
ಇನ್ನೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್ ಎಸ್ ಗೀತೆ ಹಾಡಿದ್ದಕ್ಕೆ ತೀವ್ರ ವಿರೋಧವೂ ಕಾಂಗ್ರೆಸ್ ನೊಳಗೆಯೇ ವ್ಯಕ್ತವಾಗುತ್ತಿದೆ. ಡಿ.ಕೆ.ಶಿವಕುಮಾರ್ ಪಾರ್ಟಿ ಅಧ್ಯಕ್ಷರಾಗಿ ಆರ್‌ಎಸ್ಎಸ್ ಗೀತೆ ಹಾಡಿದ್ರೆ, ಪಕ್ಷದ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಈ ಮೂಲಕ ಡಿಕೆಶಿ ಆರ್ಎಸ್ಎಸ್ ಗೀತೆ ಹಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನೂ ಕಾಂಗ್ರೆಸ್ ನೊಳಗೆ ನಡೆಯುತ್ತಿರುವ ಚರ್ಚೆ, ವಿವಾದಕ್ಕೆ ಬಿಜೆಪಿ ನಾಯಕರು ಕೂಡ ಪ್ರತಿಕ್ರಿಯಿಸಿದ್ದಾರೆ. ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ಎಲ್ಲ ಕಡೆ ಆರ್‌ಎಸ್ಎಸ್ ವ್ಯಾಪಿಸಿದೆ. ಆರ್‌ಎಸ್ಎಸ್ ಗಾಳಿ ನಮಗೆ ಸೋಕಬಾರದು ಎಂದು ಪ್ರಿಯಾಂಕ್ ಖರ್ಗೆ ಹೇಳಿರುವಂತೆ ಆಗಲ್ಲ. ಕೆಪಿಸಿಸಿ ಅಧ್ಯಕ್ಷರು ಡಿಕೆ ಶಿವಕುಮಾರ್, ಕುಣಿಗಲ್ ಎಂಎಲ್ಎ ರಂಗನಾಥ ಕೂಡ ಹಾಡು ಹಾಡಿದ್ದಾರೆ, ನಿಲ್ಲಿಸಿ ನೋಡೋಣ ಎಂದು ಹೇಳಿದ್ದಾರೆ. ಯಾರು ಬೇರೆಯವರ ಬಾಯನ್ನು ನಿಲ್ಲಿಸುವುದಕ್ಕೆ ಆಗೋದಿಲ್ಲ. ಸರ್ವರೂ ಸರ್ವ ಸ್ವತಂತ್ರರು ಆಗಿದ್ದಾರೆ. ಇಲ್ಲದನ್ನು ಮಾತಾಡಕ್ಕೆ ಪ್ರಚಾರ ಪ್ರಚಾರದ ಗೀಳಿಗೆ ಇಡಬೇಡಿ. ಪರಿವರ್ತನೆ ಜಗದ ನಿಯಮ. ನಾನು ಪರಿವರ್ತನೆ ಆಗಿದ್ದೇನೆ . ಎಲ್ಲರೂ ಪರಿವರ್ತನೆ ಆಗಬೇಕು. ಎಲ್ಲರೂ ನನ್ನ ಹಾಗೆ ಆಗಲಿ ಅನ್ನೋದೇ ನನ್ನ ಅಭಿಪ್ರಾಯ . ಕೆಲವರು ಅಭಿಪ್ರಾಯಗಳು, ಎಲ್ಲಾದಕ್ಕೂ ಉತ್ತರ ನೀಡುವ ಅವಶ್ಯಕತೆ ಇಲ್ಲ . ಅವರದ್ದೇ ಪಕ್ಷದವರು ಯಾಕೆ ಅವರು ಕ್ಷಮೆ ಕೇಳಬೇಕು. ಅಧ್ಯಕ್ಷರನ್ನೇ ಕ್ಷಮೆ ಕೇಳು ಅಂತ ಹೇಳುವಷ್ಟು ಅಧಿಕಾರ ಕಾರ್ಯಕರ್ತರಿಗೆ ಬರುತ್ತಾ ಎಂದು ಮಾಜಿ ಕಾಂಗ್ರೆಸ್ಸಿಗ, ಹಾಲಿ ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.