/newsfirstlive-kannada/media/media_files/2025/09/10/ut-khadar-vs-basavaraj-horatti-2025-09-10-08-32-54.jpg)
ಸ್ಪೀಕರ್ ಖಾದರ್ ಮತ್ತು ಸಭಾಪತಿ ಹೊರಟ್ಟಿ
ಕರ್ನಾಟಕದ ವಿಧಾನಸಭೆ ಸಭಾಧ್ಯಕ್ಷ ಹಾಗೂ ವಿಧಾನಪರಿಷತ್ ಸಭಾಪತಿಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಕೆಲವೊಂದು ವಿಷಯಗಳ ಬಗ್ಗೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇರವಾಗಿ ಯು.ಟಿ. ಖಾದರ್ ಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನೂ ಹೊರಟ್ಟಿ ಅವರ ಪತ್ರಕ್ಕೆ ಉತ್ತರ ನೀಡಿದ್ದ ಸ್ಪೀಕರ್ ಯು.ಟಿ. ಖಾದರ್, ತಾವು ಏಕಪಕ್ಷೀಯವಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಪ್ರತ್ಯುತ್ತರ ನೀಡಿದ್ದರು.
ಹೀಗಾಗಿ ಈ ವಿಷಯದ ಬಗ್ಗೆ ಮಾತನಾಡಲು ಇಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ನೇರವಾಗಿ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಇರುವ ಸಭಾಪತಿ ಬಸವರಾಜ ಹೊರಟ್ಟಿ ಅವರ ಸರ್ಕಾರಿ ಮನೆಗೆ ಬಂದಿದ್ದರು. ಇಬ್ಬರು 15 ನಿಮಿಷಗಳ ಕಾಲ ಮನೆಯಲ್ಲಿ ಮಾತುಕತೆ ನಡೆಸಿದ್ದರು. ಮಾತುಕತೆಯ ಬಳಿಕ ಸಭಾಪತಿ ಬಸವರಾಜ್ ಹೊರಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ನಾನು ವಿದೇಶ ಪ್ರವಾಸ ಕೈಗೊಂಡಿದ್ದೆ. ಈ ಸಂದರ್ಭದಲ್ಲಿ ಸ್ವಲ್ಪ ಕಮ್ಯುನಿಕೇಷನ್ ಗ್ಯಾಪ್ ಆಗಿತ್ತು . ಹೀಗಾಗಿ ನಾನು ಪತ್ರ ಬರೆದಿದ್ದೆ. ಈಗ ಖಾದರ್ ಅವರು ನನ್ನ ಗಮನಕ್ಕೆ ತಂದಿದ್ದಾರೆ . ಅವರು ಯುವಕರಿದ್ದಾರೆ, ಅವರು ಮಾಡುವ ಕೆಲಸಕ್ಕೆ ನಾನು ಸಹಿ ಹಾಕುವ ಕೆಲಸ ಮಾಡಿದ್ದೇನೆ . ವಿದೇಶ ಪ್ರವಾಸದಲ್ಲಿದ್ದಾಗ ಮೊಬೈಲ್ ನಲ್ಲಿ ನೋಟ್ ಮಾಡಿದ್ದೆ. ನಮ್ಮ ಕಾರ್ಯದರ್ಶಿಗಳಿಗೂ ಮಾಹಿತಿ ಇರಲಿಲ್ಲ . ಪತ್ರದ ಡ್ರಾಫ್ಟ್ ಮಾಡಿದ್ದು ಕೂಡ ಅಲ್ಲಿಯೇ. ಇದೀಗ ಎಲ್ಲವೂ ಸರಿ ಹೋಗಿದೆ ಎಂದು ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಇನ್ನೂ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಮಾತನಾಡಿ, ಈಗ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ . ಎಲ್ಲವೂ ಈಗ ಬಗೆಹರಿದಿದೆ. ನಾವು ಒಟ್ಟಿಗೆ ಸುದ್ದಿಗೋಷ್ಠಿ ನಡೆಸುತ್ತೇವೆ ಎಂದು ಖಾದರ್ ಹೇಳಿದ್ದಾರೆ. ಹೀಗೆ ವಿಧಾನಪರಿಷತ್ ಸಭಾಪತಿ ಹಾಗೂ ವಿಧಾನಸಭೆ ಸಭಾಧ್ಯಕ್ಷರ ನಡುವಿನ ಭಿನ್ನಾಭಿಪ್ರಾಯಗಳು ಶಮನವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.