/newsfirstlive-kannada/media/media_files/2025/09/25/dharamasthala-pil-case-2025-09-25-20-50-01.jpg)
ಸುಪ್ರೀಂಕೋರ್ಟ್ ಗೆ ಬುರುಡೆ ಗ್ಯಾಂಗ್ ಸಲ್ಲಿಸಿದ್ದ ಅರ್ಜಿಯ ಆದೇಶ ಪ್ರತಿ
ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬುರುಡೆ ಗ್ಯಾಂಗ್ ರಾಜ್ಯ ಸರ್ಕಾರವನ್ನೇ ಯಾಮಾರಿಸಿರುವುದು ಈಗ ಬೆಳಕಿಗೆ ಬಂದಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯನೇ ಈ ವರ್ಷದ ಏಪ್ರಿಲ್ ನಲ್ಲಿ ಸುಪ್ರೀಂಕೋರ್ಟ್ ಗೆ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಆಕ್ರಮವಾಗಿ, ಹೂತಿದ್ದು, ಅವುಗಳ ಹೊರತೆಗೆದು ತನಿಖೆ ನಡೆಸಬೇಕೆಂದು ಕೋರಿ ಪಿಐಎಲ್ ಸಲ್ಲಿಸಿದ್ದ ವಿಚಾರ ಈಗ ಸಾಕ್ಷಿ, ಆಧಾರ ಸಮೇತ ಬೆಳಕಿಗೆ ಬಂದಿದೆ.
ಸುಪ್ರೀಂಕೋರ್ಟ್‌ನ ಜಸ್ಟೀಸ್ ಬಿ.ವಿ.ನಾಗರತ್ನ ನೇತೃತ್ವದ ಪೀಠದಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯೂ ನಡೆದಿದೆ. ಮೂಲತಃ ಕರ್ನಾಟಕದವರೇ ಆದ ಜಸ್ಟೀಸ್ ಬಿ.ವಿ.ನಾಗರತ್ನ ಅವರ ನೇತೃತ್ವದ ಪೀಠವು 20 ವರ್ಷ ಹಳೆಯ ಕೇಸ್ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಾಗಲೀ, ಕೋರ್ಟ್ ನಲ್ಲಾಗಲೀ ಕೇಸ್ ದಾಖಲಿಸದೇ, ಸೀದಾ ಸುಪ್ರೀಂಕೋರ್ಟ್ ಗೆ ಬಂದು ಪಿಐಎಲ್ ಸಲ್ಲಿಸಿದ್ದಕ್ಕೆ ಅರ್ಜಿದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಆದೇಶ ನೀಡಿದ್ದಾರೆ. ಆದೇಶದಲ್ಲೂ ಪಿಐಎಲ್ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಿಟ್ ಅರ್ಜಿಯಲ್ಲಿ 1995 ರಿಂದ 2004 ರವರೆಗಿನ ವಿಷಯ ಪ್ರಸ್ತಾಪಿಸಿದ್ದಾರೆ. ಆದರೇ, 2025 ರಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ವಿಳಂಬದ ಕಾರಣಕ್ಕಾಗಿ ಈ ರಿಟ್ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ. ಅರ್ಜಿದಾರರೇ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅರ್ಜಿದಾರರು ಕೋರಿರುವುದಕ್ಕೆ ಮನ್ನಣೆ ನೀಡುವುದಕ್ಕೆ ಸಾಧ್ಯವಿಲ್ಲ. ನಮಗೆ ಈ ಅರ್ಜಿಯನ್ನು ವಜಾಗೊಳಿಸದೇ ಬೇರೆ ಆಯ್ಕೆಗಳಿಲ್ಲ. ಪ್ರತಿವಾದಿಗಳ ವಿರುದ್ಧ ಯಾವುದೇ ರಿಲೀಫ್ ಅನ್ನು ಕೇಳಿಲ್ಲ. ಹೀಗಾಗಿ ಇಂಥ ಅರ್ಜಿ ಸಲ್ಲಿಸುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ಈ ರಿಟ್ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಸಲ್ಲಿಸಿರುವುದು, ಅದರ ಉದಾತ್ತ ಉದ್ದೇಶ, ಧ್ಯೇಯಕ್ಕೆ ಧಕ್ಕೆ ತಂದಂತೆ.
ಇದು ನಿಜವಾದ ಅರ್ಥದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ಇದು ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಷನ್, ಪೈಸಾ ಇಂಟರೆಸ್ಟ್ ಲಿಟಿಗೇಷನ್. ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್ ಅಥವಾ ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್. ಹೀಗಾಗಿ ಈ ರಿಟ್ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ. ಅರ್ಜಿದಾರರ ಗುರುತು ಅನ್ನು ಬಹಿರಂಗಪಡಿಸಬಾರದೆಂದು ಮನವಿ ಮಾಡಿದ್ದಾರೆ. ನಾವು ಆ ರೀತಿ ಗುರುತು ಅನ್ನು ಬಹಿರಂಗಪಡಿಸಿಲ್ಲ ಎಂದು ಸುಪ್ರೀಂಕೋರ್ಟ್ ಮೇ, 5, 2025ರ ತನ್ನ ಆದೇಶದಲ್ಲಿ ಹೇಳಿದೆ.
ಇನ್ನೂ ಮಾಸ್ಕ್ ಮ್ಯಾನ್ ಚಿನ್ನಯ್ಯ ಪರವಾಗಿ ಹಿರಿಯ ವಕೀಲ ಕೆ.ವಿ.ಧನಂಜಯ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ, ವಾದ ಮಾಡಿದ್ದಾರೆ. ಕೆ.ವಿ.ಧನಂಜಯ ಅವರ ಹೆಸರು ಅನ್ನು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರತಿ
ಇನ್ನೂ ಸುಪ್ರೀಂಕೋರ್ಟ್ ಗೆ ಧರ್ಮಸ್ಥಳದ ತಲೆ ಬುರುಡೆಯೊಂದನ್ನು ಚಿನ್ನಯ್ಯ ಅಂಡ್ ಗ್ಯಾಂಗ್ ತೆಗೆದುಕೊಂಡು ಹೋಗಿತ್ತು. ತಲೆ ಬುರುಡೆಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ, ರಾಜ್ಯ ಡಿಜಿಪಿ, ಧರ್ಮಸ್ಥಳದ ಸರ್ಕಲ್ ಇನ್ಸ್ ಪೆಕ್ಟರ್, ಸಿಬಿಐ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮ್ಯಾನೇಜ್ ಮೆಂಟ್ ಟ್ರಸ್ಟ್ ಅನ್ನು ಪ್ರತಿವಾದಿಗಳಾಗಿ ಉಲ್ಲೇಖಿಸಿದ್ದಾರೆ. ’
ತಮ್ಮ ಈ ಪಿಐಎಲ್ ಸುಪ್ರೀಂಕೋರ್ಟ್ ನಲ್ಲಿ ವಜಾ ಆಗಿರುವ ಬಗ್ಗೆ ಎಲ್ಲೂ ಸಾರ್ವಜನಿಕವಾಗಿ ಬಾಯಿಬಿಟ್ಟಿರಲಿಲ್ಲ. ಜೊತೆಗೆ ರಾಜ್ಯ ಸರ್ಕಾರಕ್ಕೂ ತಿಳಿಸಿರಲಿಲ್ಲ. ಸೀದಾ ಧರ್ಮಸ್ಥಳ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಬಳಿಕ ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್ ನಲ್ಲಿ ಚಿನ್ನಯ್ಯ ಹೇಳಿಕೆ ದಾಖಲಿಸಿದ್ದಾನೆ. ಆದಾದ ಬಳಿಕ ರಾಜ್ಯ ಸರ್ಕಾರ , ಚಿನ್ನಯ್ಯ ಕೊಟ್ಟ ದೂರಿನ ತನಿಖೆಗೆ ಎಸ್‌ಐಟಿ ರಚಿಸಿದೆ.
ರಾಜ್ಯ ಸರ್ಕಾರಕ್ಕೂ ಚಿನ್ನಯ್ಯ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಪಿಐಎಲ್ ಮೇ, 5, 2025 ರಲ್ಲಿ ವಜಾ ಆಗಿದೆ ಎಂಬ ಮಾಹಿತಿಯೇ ಇರಲಿಲ್ಲ. ರಾಜ್ಯ ಸರ್ಕಾರವನ್ನು ಈ ಬಗ್ಗೆ ಕತ್ತಲಲ್ಲಿ ಇಟ್ಟು, ಎಸ್‌ಐಟಿ ರಚನೆಯಾಗುವಂತೆ ಮಾಡಿದ್ದಾರೆ ಎಂಬ ಚರ್ಚೆ ಈಗ ನಡೆಯುತ್ತಿದೆ.
ತಮ್ಮ ದೂರಿನ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು ಎಂಬುದನ್ನು ರಾಜ್ಯ ಸರ್ಕಾರಕ್ಕೆ ತಿಳಿಸುವ ಕೆಲಸವನ್ನು ಮಾಸ್ಕ್ ಮ್ಯಾನ್ ಚಿನ್ನಯ್ಯ ಮಾಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.