/newsfirstlive-kannada/media/media_files/2025/09/04/luxury-cars-in-india-2025-09-04-18-31-51.jpg)
BMW, ಔಡಿ, ರೇಂಜ್ ರೋವರ್ ಕಾರ್ ಗಳು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್‌ಟಿ ದರಗಳನ್ನು ಪರಿಷ್ಕರಣೆ ಮಾಡಿರುವುದನ್ನು ಪ್ರಕಟಿಸಿದ್ದಾರೆ. ಆಟೋಮೊಬೈಲ್ ಕ್ಷೇತ್ರಕ್ಕೆ ಹಲವಾರು ಬದಲಾವಣೆ ಮಾಡಲಾಗಿದೆ. ಐಷಾರಾಮಿ ಹಾಗೂ ದೊಡ್ಡ ಕಾರ್ ಗಳ ಜಿಎಸ್‌ಟಿ ಸ್ಲ್ಯಾಬ್ ಅನ್ನು ಮೊದಲಿದ್ದ ಶೇ.28 ರ ಬದಲಿಗೆ ಶೇ.40 ಕ್ಕೆ ಬದಲಾವಣೆ ಮಾಡಲಾಗಿದೆ. ಸಾಮಾನ್ಯ ಜನರಿಗೆ ಇದು ದೊಡ್ಡ ಹಾಗೂ ಐಷಾರಾಮಿ ಕಾರ್ ಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದನ್ನು ತೋರಿಸುತ್ತೆ. ಆದರೇ ಜಿಎಸ್‌ಟಿ ದರ ಪರಿಷ್ಕರಣೆಯಿಂದ ದೊಡ್ಡ ಹಾಗೂ ಐಷಾರಾಮಿ ಕಾರ್ ಗಳ ಬೆಲೆಯಲ್ಲಿ ಹೆಚ್ಚಳವಾಗಿಲ್ಲ, ಬದಲಿಗೆ ಐಷಾರಾಮಿ ಕಾರ್ ಗಳ ಬೆಲೆಯಲ್ಲಿ ಕುಸಿತವಾಗಿದೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ .
ನಿನ್ನೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ದೊಡ್ಡ, ದುಬಾರಿ ಹಾಗೂ ಐಷಾರಾಮಿ ಕಾರ್ ಗಳಿಗೆ ವಿಧಿಸುತ್ತಿದ್ದ ಸೆಸ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇದರಿಂದಾಗಿ ಮರ್ಜಿಡಿಸ್ ಬೆನ್ಜ್, ಬಿಎಂಡಬ್ಲ್ಯು, ರೇಂಜ್ ರೋವರ್ , ಔಡಿ ಸೇರಿದಂತೆ ಐಷಾರಾಮಿ ಕಾರ್ ಗಳ ಬೆಲೆ ಕಡಿಮೆಯಾಗಲಿದೆ.
ಇದುವರೆಗೂ ಜಿಎಸ್‌ಟಿ ಸ್ಲ್ಯಾಬ್ ಗಳ ಪ್ರಕಾರ, ಐಸಿಇ ಕಾರ್ ಗಳಿಗೆ ಶೇ.28 ರಷ್ಟು ಜಿಎಸ್‌ಟಿ ದರವನ್ನು ವಿಧಿಸಲಾಗುತ್ತಿತ್ತು. ಇದರ ಜೊತೆಗೆ ಹೆಚ್ಚುವರಿಯಾಗಿ ಸೆಸ್ ಅನ್ನು ಕೂಡ ವಿಧಿಸಲಾಗುತ್ತಿತ್ತು. ಸೆಸ್ ನಿಂದಾಗಿ ಆನ್ ರೋಡ್ ಬೆಲೆಯು ಶೇ.17 ರಿಂದ 22 ರವರೆಗೂ ಹೆಚ್ಚಾಗುತ್ತಿತ್ತು. ಒಟ್ಟಾರೆಯಾಗಿ ಐಷಾರಾಮಿ , ಲಕ್ಷುರಿ ಕಾರ್ ಗಳ ತೆರಿಗೆ ಪ್ರಮಾಣ ಶೇ.45 ರಿಂದ ಶೇ.50 ರವರೆಗೆ ಇರುತ್ತಿತ್ತು.
ಇನ್ನೂ ಮುಂದೆ ಲಕ್ಷುರಿ, ಐಷಾರಾಮಿ ಕಾರ್ ಗಳ ಬೆಲೆ ಅಗ್ಗ!!
ಆದರೇ, ಈಗ ಹೊಸ ಜಿಎಸ್‌ಟಿ ದರ ಪರಿಷ್ಕರಣೆಯಿಂದಾಗಿ ದೊಡ್ಡ, ಐಷಾರಾಮಿ, ಲಕ್ಷುರಿ ಕಾರ್ ಗಳಿಗೆ ಯಾವುದೇ ಸೆಸ್ ಇರಲ್ಲ. ಪ್ರೀಮಿಯಂ, ಐಷಾರಾಮಿ, ಲಕ್ಷುರಿ ಕಾರ್ ಗಳು ಶೇ.40 ರಷ್ಟು ಜಿಎಸ್‌ಟಿ ಯನ್ನು ಮಾತ್ರ ಪಾವತಿಸಬೇಕಾಗಿದೆ. ಯಾವುದೇ ಸೆಸ್ ಇಲ್ಲದೇ ಇರುವುದರಿಂದ ಐಷಾರಾಮಿ, ಲಕ್ಷುರಿ ಕಾರ್ ಗಳ ಬೆಲೆ ಮೊದಲಿಗಿಂತ ಇನ್ನೂ ಮುಂದೆ ಅಗ್ಗವಾಗಲಿವೆ. ಇದು ಗ್ರಾಹಕರಿಗೆ ಹಾಗೂ ಐಷಾರಾಮಿ ಕಾರ್ ಉತ್ಪಾದಿಸುವ ಕಂಪನಿಗಳೆರೆಡರಕ್ಕೂ ಲಾಭ!. ಇನ್ನೂ ಮುಂದೆ ಶೇ.50 ರವರೆಗೂ ಲಕ್ಷುರಿ, ಐಷಾರಾಮಿ ಕಾರ್ ಖರೀದಿಗೆ ತೆರಿಗೆ ಪಾವತಿಸಬೇಕಾಗಿಲ್ಲ. ಶೇ.40 ರಷ್ಟು ಜಿಎಸ್‌ಟಿ ಯನ್ನು ಮಾತ್ರ ಪಾವತಿಸಿದರೇ, ಸಾಕು. ಐಷಾರಾಮಿ ಕಾರ್ ನಿಮ್ಮದಾಗುತ್ತೆ. ಸೆಸ್ ಇಲ್ಲದೇ ಇರೋದರಿಂದ ಗ್ರಾಹಕರಿಗೆ ಭರ್ಜರಿ ಲಾಭ ಸಿಕ್ಕಂತಾಗುತ್ತೆ.
ಇದಲ್ಲದೆ, ಬಸ್‌ಗಳು, ಟ್ರಕ್‌ಗಳು ಮತ್ತು ಆಂಬ್ಯುಲೆನ್ಸ್‌ಗಳಂತಹ ವಾಣಿಜ್ಯ ವಾಹನಗಳು ಈಗ 18 ಪ್ರತಿಶತದಷ್ಟು ಏಕರೂಪದ ಜಿಎಸ್‌ಟಿಯನ್ನು ಹೊಂದಿರುತ್ತವೆ. ಇದು 28 ಪ್ರತಿಶತದಿಂದ ಕಡಿಮೆಯಾಗಿದೆ. ಅದೇ ರೀತಿ, ಆಟೋ ಬಿಡಿಭಾಗಗಳು ಅವುಗಳ ಎಚ್‌ಎಸ್ ಕೋಡ್‌ಗಳನ್ನು ಲೆಕ್ಕಿಸದೆ 18 ಪ್ರತಿಶತದಷ್ಟು ಜಿಎಸ್‌ಟಿಯನ್ನು ಹೊಂದಿರುತ್ತವೆ. ತ್ರಿಚಕ್ರ ವಾಹನಗಳು 18 ಪ್ರತಿಶತದಷ್ಟು ಜಿಎಸ್‌ಟಿಯೊಂದಿಗೆ ಇದೇ ವರ್ಗಕ್ಕೆ ಸೇರುತ್ತವೆ.
ಹೊಸ ಜಿಎಸ್‌ಟಿ ಪದ್ಧತಿಗಳ ಕುರಿತು ಮಾತನಾಡಿದ ಮರ್ಸಿಡಿಸ್-ಬೆನ್ಜ್ ಇಂಡಿಯಾದ ಎಂಡಿ ಮತ್ತು ಸಿಇಒ ಸಂತೋಷ್ ಅಯ್ಯರ್, "ಜಿಎಸ್‌ಟಿ ದರಗಳನ್ನು ತರ್ಕಬದ್ಧಗೊಳಿಸಬೇಕೆಂಬ ಆಟೋಮೋಟಿವ್ ಉದ್ಯಮದ ದೀರ್ಘಕಾಲದ ಆಶಯವನ್ನು ಸರ್ಕಾರ ಆಲಿಸಿದೆ. ಈ ಜಿಎಸ್‌ಟಿ ಪರಿಷ್ಕರಣೆ ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ, ಇದು ಪ್ರಗತಿಪರವಾಗಿದೆ ಮತ್ತು ಬಳಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಭಾರತೀಯ ಆರ್ಥಿಕತೆಯ ನಾಡಿಮಿಡಿತವಾಗಿ ಉಳಿದಿರುವ ಆಟೋಮೋಟಿವ್ ಉದ್ಯಮಕ್ಕೆ ಹೆಚ್ಚಿನ ವೇಗವನ್ನು ತರುವ ಮೂಲಕ ಹೆಚ್ಚು ಅಗತ್ಯವಿರುವ ಮಾರಾಟವನ್ನು ಪ್ರೇರೇಪಿಸುತ್ತದೆ. ಬಿಇವಿಗಳ ಜಿಎಸ್‌ಟಿ ದರವನ್ನು ಬದಲಾಗದೆ ಇರಿಸಿದ್ದಕ್ಕಾಗಿ ಮತ್ತು ಡಿಕಾರ್ಬನೈಸ್ಡ್ ಭವಿಷ್ಯಕ್ಕೆ ವೇಗವಾಗಿ ಪರಿವರ್ತನೆಗೊಳ್ಳುವುದನ್ನು ಖಚಿತಪಡಿಸಿದ್ದಕ್ಕಾಗಿ ನಾವು ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ" ಎಂದು ಮರ್ಸಿಡಿಸ್ ಬೆನ್ಜ್ ಕಂಪನಿಯ ಎಂ.ಡಿ. ಹಾಗೂ ಸಿಇಓ ಸಂತೋಷ್ ಅಯ್ಯರ್ ಹೇಳಿದ್ದಾರೆ.
ಜಿಎಸ್‌ಟಿ ದರ ಪರಿಷ್ಕರಣೆಯು ಮರ್ಸಿಡಿಸ್ ಬೆನ್ಜ್ , ಔಡಿ, ಬಿಎಂಡಬ್ಲ್ಯು ಸೇರಿದಂತೆ ಲಕ್ಷುರಿ ಕಾರ್ ಉತ್ಪಾದಿಸುವ ಕಂಪನಿಗಳಿಗೂ ಖುಷಿ ಕೊಟ್ಟಿದೆ ಎಂಬುದು ಇದರಿಂದಲೇ ಅರ್ಥವಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.