/newsfirstlive-kannada/media/media_files/2025/08/23/backward-classes-commission-survey-2025-08-23-16-44-17.jpg)
ಸೆಪ್ಟೆಂಬರ್ 22 ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭ
ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಎಲ್ಲ ವರ್ಗದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗುತ್ತಿದೆ. ಜನರ ಸಾಮಾಜಿಕ, ಶೈಕ್ಷಣಿಕ ವಿವರಗಳನ್ನು ಈ ಸಮೀಕ್ಷೆ ವೇಳೆ ಸಂಗ್ರಹಿಸಲಾಗುತ್ತೆ. ಮುಖ್ಯವಾಗಿ ಕುಟುಂಬದ ಎಲ್ಲ ಸದಸ್ಯರ ಸಾಮಾಜಿಕ, ಶೈಕ್ಷಣಿಕ ವಿವರಗಳನ್ನು ಸಂಗ್ರಹಿಸಲಾಗುತ್ತೆ. 60 ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರವನ್ನು ಜನರಿಂದ ಪಡೆದುಕೊಳ್ಳಲಾಗುತ್ತೆ. ಈ ಸಮೀಕ್ಷೆ ವೇಳೆ ಏನೆಲ್ಲಾ ಮಾಹಿತಿ ಸಂಗ್ರಹಿಸಲಾಗುತ್ತೆ ಎಂಬ ಸಮೀಕ್ಷೆಯ ಪ್ರಶ್ನಾವಳಿಯು ನ್ಯೂಸ್ ಫಸ್ಟ್ ಗೆ ಲಭ್ಯವಾಗಿದೆ.
ಮೊದಲನೇಯದಾಗಿ ಕುಟುಂಬದ ಮುಖ್ಯಸ್ಥರ ಹಾಗೂ ಮಾಹಿತಿ ನೀಡುವ ಸದಸ್ಯರ ಪೋನ್ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತೆ. ಬಳಿಕ ಕುಟುಂಬದ ಮುಖ್ಯಸ್ಥರ ವಿದ್ಯಾರ್ಹತೆ, ಉದ್ಯೋಗದ ಮಾಹಿತಿಯನ್ನು ಸಂಗ್ರಹಿಸಲಾಗುತ್ತೆ. ಕುಟುಂಬದ ಮುಖ್ಯಸ್ಥರ, ಸದಸ್ಯರ ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತೆ. ಕುಟುಂಬದ ಪಡಿತರ ಚೀಟಿ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತೆ. ಕುಟುಂಬದ ಎಲ್ಲ ಸದಸ್ಯರುಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತೆ. ಕುಟುಂಬದ ಎಲ್ಲ ಸದಸ್ಯರುಗಳ ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತೆ.
ವಿವಾಹ ಆದ ಸಮಯದಲ್ಲಿ ವಯಸ್ಸು ಎಷ್ಟು ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಕುಟುಂಬದ ಸದಸ್ಯರ ವಿದ್ಯಾಭ್ಯಾಸದ ವಿವರಗಳನ್ನು ಸಂಗ್ರಹಿಸಲಾಗುತ್ತೆ. ಶಾಲೆ ಬಿಟ್ಟಾಗಿನ ತರಗತಿ ಯಾವುದು? ಶಾಲೆ ಬಿಟ್ಟಾಗಿನ ವಯಸ್ಸು? 6 ರಿಂದ 16 ವರ್ಷದೊಳಗೆ ಶಾಲೆ ಬಿಡಲು ಕಾರಣವೇನು? 16-40 ವರ್ಷದವರು ಶಿಕ್ಷಣ ಮುಂದುವರಿಸದೇ ಇರಲು ಕಾರಣವೇನು? ಅನಕ್ಷರಸ್ಥರಾಗಿದ್ದರೇ ಕಾರಣವೇನು ? ಎಂಬ ಪ್ರಶ್ನೆಗಳಿವೆ. ಸರ್ಕಾರದಿಂದ ಶೈಕ್ಷಣಿಕ ಸೌಲಭ್ಯಗಳು ಏನೇನು ಪಡೆಯಲಾಗಿದೆ? ಸರ್ಕಾರದಲ್ಲಿ ಉದ್ಯೋಗ ಸೌಲಭ್ಯಗಳು ? ವಸತಿ ಶಾಲೆ, ಹಾಸ್ಚೆಲ್ ಸೌಲಭ್ಯಗಳ ವಿವರ ಕೇಳಲಾಗಿದೆ. ಮೀಸಲಾತಿಯಿಂದ ಪಡೆದ ಇತರೆ ಸೌಲಭ್ಯಗಳು ಏನೇನು ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ನೀವು ಭಾರತದ ಸಂವಿಧಾನದ 371(ಜೆ) ಅಡಿ ಮೀಸಲಾತಿ ಪಡೆದಿದ್ದೀರಾ ಎಂಬ ಪ್ರಶ್ನೆಯೂ ಇದೆ.
ಇನ್ನೂ ಜನರ ಔದ್ಯೋಗಿಕ ವಿವರ ಮತ್ತು ರಾಜಕೀಯ ಪ್ರಾತಿನಿಧ್ಯದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ನೀವು ಸದ್ಯ ಕೆಲಸ ಮಾಡುತ್ತಿದ್ದೀರಾ? ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೀರಾ? ನೀವು ತೊಡಗಿರುವ ಹಾಲಿ ಉದ್ಯೋಗ ಯಾವುದು? ನೀವು ಕೈಗಾರಿಕಾ ಇಲಾಖೆಯಲ್ಲಿ ಎಂಎಸ್‌ಎಂಇ ನೋಂದಾಯಿಸಿದ್ದೀರಾ? ನಿಮ್ಮ ಕುಟುಂಬದ ಕುಲ ಕಸುಬು ಯಾವುದು? ನಿಮ್ಮ ಕುಲ ಕುಸುಬು ಮುಂದುವರಿದಿದೆಯೇ? ನಿಮ್ಮ ಕುಲಕಸುಬುನಿಂದ ಬಂದ ಖಾಯಿಲೆಗಳು ಮತ್ತು ಸ್ಥಾನಿಕ ವಿಶಿಷ್ಟ ಕಾಯಿಲೆಗಳು ಯಾವುವು? ನಿಮ್ಮ ವೈಯಕ್ತಿಕ ವಾರ್ಷಿಕ ಆದಾಯ ಎಷ್ಟು? ಆದಾಯ ತೆರಿಗೆ ಪಾವತಿದಾರರೇ? ನೀವು ಬ್ಯಾಂಕ್ ಖಾತೆ ಹೊಂದಿದ್ದೀರಾ? ನೀವು ಯಾವ ಕೌಶಲ್ಯಾಭಿವೃದ್ದಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುತ್ತೀರಿ? ನೀವು ಕಂಪ್ಯೂಟರ್ ಸಾಕ್ಷರತೆ ಹೊಂದಿದ್ದೀರಾ? ಆರೋಗ್ಯ ವಿಮೆಯ ವಿವರ ಕೇಳಲಾಗಿದೆ. ಜನಪ್ರತಿನಿಧಿಗಳಾಗಿದ್ದಲ್ಲಿ ವಿವರ ಕೇಳಲಾಗಿದೆ. ನಿಗಮ -ಮಂಡಳಿ, ಸಹಕಾರಿ ಸಂಘದ ಪದಾಧಿಕಾರಿಯಾಗಿದ್ದಲ್ಲಿ ವಿವರಗಳನ್ನು ಕೇಳಲಾಗಿದೆ.
ಇನ್ನೂ ಕುಟುಂಬದ ವಿವರಗಳಲ್ಲಿ ನೀವು ಭೂಮಿ ಹೊಂದಿದ್ದೀರಾ? ಎಂಬ ಪ್ರಶ್ನೆಯಡಿ ಅನೇಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತೆ. ಕುಟುಂಬವು ಹೊಂದಿರುವ ಒಟ್ಟು ಜಮೀನು ಎಷ್ಟು ? ಜಮೀನು ಸ್ವಾಧೀನತೆಯ ರೀತಿಯನ್ನು ತಿಳಿಸಬೇಕು. ಅಂದರೇ, ಜಮೀನು ಪಿತ್ರಾರ್ಜಿತವಾಗಿ ಬಂದಿದೆಯೇ? ಜಮೀನು ಖರೀದಿಯ ಮೂಲಕ ಬಂದಿದೆಯೇ ಎಂಬ ವಿವರಗಳನ್ನು ನೀಡಬೇಕು. ಎಷ್ಟು ಎಕರೆ ಜಮೀನು ಹೊಂದಿದ್ದೀರಿ ಎಂಬ ಮಾಹಿತಿಯನ್ನು ನೀಡಬೇಕು.
ಇನ್ನೂ ಜಮೀನು ನೀರಾವರಿಯೋ, ಬರಡು ಭೂಮಿಯೋ ಎಂಬ ಮಾಹಿತಿಯನ್ನು ನೀಡಬೇಕು. ಕುಟುಂಬವು ಪಡೆದ ಸಾಲ, ಸಹಾಯ ಧನದ ಮಾಹಿತಿಯನ್ನು ನೀಡಬೇಕು. ಸಾಲದ ಉದ್ದೇಶ, ಸಾಲದ ಮೂಲವನ್ನು ತಿಳಿಸಬೇಕು. ಕುಟುಂಬವು ಹೊಂದಿರುವ ಜಾನುವಾರಗಳ ವಿವರವನ್ನು ಸಂಖ್ಯೆಯ ಸಹಿತ ನೀಡಬೇಕು.
ಕುಟುಂಬವು ಹೊಂದಿರುವ ಸ್ಥಿರಾಸ್ಥಿಯ ಮೌಲ್ಯ ಹಾಗೂ ಚರಾಸ್ಥಿಯ ಮೌಲ್ಯವನ್ನು ತಿಳಿಸಬೇಕು. ಕುಟುಂಬವು ಸರ್ಕಾರದಿಂದ ಪಡೆದ ಸವಲತ್ತುಗಳು ಏನೇನು ಎಂಬ ಮಾಹಿತಿಯನ್ನು ನೀಡಬೇಕು. ವಾಸ ಇರುವ ಮನೆಯ ವಿಧ ಮತ್ತು ಉಪಯೋಗವನ್ನು ತಿಳಿಸಬೇಕು. ಅಂದರೇ, ವಾಸ ಇರುವ ಮನೆಯೂ ಆರ್‌ಸಿಸಿ ಮನೆಯೋ, ಹೆಂಚಿನ ಮನೆಯೋ ಎಂಬ ಮಾಹಿತಿಯನ್ನು ನೀಡಬೇಕು. ಕುಡಿಯುವ ನೀರಿನ ಮೂಲ, ಅಡುಗೆಗೆ ಬಳಸುವ ಇಂಧನ ಯಾವುದು? ಹಾಲಿ ವಾಸ ಇರುವ ಮನೆಯ ಮಾಲೀಕತ್ವದ ಸ್ವರೂಪ, ನಿವೇಶನ ಹೊಂದಿದ್ದೀರಾ? ಶೌಚಾಲಯ ವ್ಯವಸ್ಥೆ, ದೀಪದ ಮೂಲ, ನಿಮ್ಮ ಕುಟುಂಬದಲ್ಲಿ ಅನಿವಾಸಿ ಭಾರತೀಯರಿದ್ದಾರೆಯೇ? ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ಕೋರ್ಟ್ ವ್ಯಾಜ್ಯಗಳಿವೆಯೇ? ನಿಮ್ಮ ಕುಟುಂಬ ಯಾವುದಾದರೂ ಕಾರಣದಿಂದ ನಿರ್ವಸಿತಗೊಂಡಿದೆಯೇ?
ಇನ್ನೂ ವ್ಯಕ್ತಿಗಳ ಧರ್ಮದ ಕಾಲಂನಲ್ಲಿ ಹಿಂದೂ, ಇಸ್ಲಾಂ, ಕ್ರೈಸ್ತ್, ಜೈನ್ ಸಿಖ್ಖ್, ಬೌದ್ದ, ಪಾರ್ಸಿನ, ನಾಸ್ತಿಕ, ಗೊತ್ತಿಲ್ಲ, ತಿಳಿಸಲು ನಿರಾಕರಿಸುತ್ತಾರೆ. ಇತರೆ( ನಮೂದಿಸಿ) ಎಂದು ವಿವರ ನೀಡಲಾಗಿದೆ.
ಜಾತಿಯ ಕಾಲಂ ಕೂಡ ಇದೆ. ಉಪಜಾತಿಯ ಕಾಲಂ ಕೂಡ ಇದೆ. ಜಾತಿಗೆ ಇರುವ ಇನ್ನಿತರ ಸಮಾನಾರ್ಥದ ಪರ್ಯಾಯ ಹೆಸರು, ಇದ್ದಲ್ಲಿ ತಿಳಿಸಬಹುದು. ಜಾತಿ ಪ್ರಮಾಣಪತ್ರ ಪಡೆದಿರುತ್ತೀರಾ? ಎಂಬ ಪ್ರಶ್ನೆಗಳಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.