/newsfirstlive-kannada/media/media_files/2025/08/14/dr-ravikumar-mukartihal-2025-08-14-17-57-26.jpg)
ಅಮ್ಮ ಅಂದರೇ, ಎಲ್ಲರಿಗೂ ಪ್ರೀತಿ. ಅಮ್ಮ ಮಮತೆಯ ಕಡಲು. ಅಮ್ಮನ ಪ್ರೀತಿಗೆ ಬೇರೆ ಯಾವುದೂ ಸಾಟಿ ಇಲ್ಲ. ಅಮ್ಮನ ಪ್ರೀತಿ ಪಡೆದ ಮಕ್ಕಳೇ ಧನ್ಯರು. ಹೀಗೆ ಅಮ್ಮನ ಪ್ರೀತಿಯ ಅಪ್ಪುಗೆಯಲ್ಲೇ ಬೆಳೆದವರು ಬೆಂಗಳೂರಿನ ಇನ್ ಫ್ಯಾಂಟ್ರಿ ರಸ್ತೆಯ ಸ್ಪರ್ಶ್ ಆಸ್ಪತ್ರೆಯ ಅರ್ಥೋಪೆಡಿಕ್ ಮತ್ತು ಜಾಯಿಂಟ್ ರಿಪ್ಲೇಸ್ ಮೆಂಟ್ ಸರ್ಜನ್ ಡಾಕ್ಟರ್ ರವಿಕುಮಾರ್ ಮುಕಾರ್ತಿಹಾಳ್ ಅವರು. ಡಾಕ್ಟರ್ ರವಿಕುಮಾರ್ ಮುಕಾರ್ತಿಹಾಳ್ ಅವರ ತಾಯಿ ಬೋರಮ್ಮ ತೀರಿಕೊಂಡ ಇಂದಿಗೆ ಒಂದು ವರ್ಷ ಪೂರ್ತಿಯಾಗಿದೆ. ಇಂದು ಬಸವನಬಾಗೇವಾಡಿ ತಾಲ್ಲೂಕಿನ ಹಂಗರಗಿ ಗ್ರಾಮದಲ್ಲಿ ಡಾಕ್ಟರ್ ರವಿಕುಮಾರ್ ಮುಕಾರ್ತಿಹಾಳ್ ಅವರು ತಾಯಿ ಬೋರಮ್ಮ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ನಡೆಸುತ್ತಿದ್ದಾರೆ. ತಾಯಿಯ ನೆನಪಿನಲ್ಲಿ ಡಾಕ್ಟರ್ ರವಿಕುಮಾರ್ ಅವರು ತಾಯಿ ಬೋರಮ್ಮನವರ ಬಗ್ಗೆ ಭಾವುಕವಾಗಿ ಬರೆದಿದ್ದಾರೆ. ತಾಯಿಯ ಬಗೆಗಿನ ತಮ್ಮ ಭಾವನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಬಯಕೆ ಡಾಕ್ಟರ್ ರವಿಕುಮಾರ್ ಮುಕಾರ್ತಿಹಾಳ್ ಅವರದ್ದು. ಹೀಗಾಗಿ ಡಾಕ್ಟರ್ ರವಿಕುಮಾರ್ ಮುಕಾರ್ತಿಹಾಳ್ ಅವರು ತಮ್ಮ ತಾಯಿ ಬಗ್ಗೆ ಬರೆದ ಲೇಖನವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.
ಅಮ್ಮಾ... ಅಮ್ಮಾ ಅನ್ನೋ ಈ ಕರೆ, ನನಗೆ ಕಿವಿ ಬಂದಾಗಿನಿಂದ ಇಲ್ಲಿಯ ತನಕ, ಕಿವಿಗೆ ಅಮೃತ ಸುರಿದಂತಾಗಿಸುತ್ತೆ. ಕೋಟಿ ಅಕ್ಷರಗಳು, ಲಕ್ಷ ಪುಸ್ತಕಗಳು ಹೇಳದ ಪ್ರೀತಿ ನನ್ನಮ್ಮನದ್ದು. ಅಂತ್ಯವೇ ಇಲ್ಲದ ಸ್ವಂತ ಆಕೆ.. ಪಂಥವೇ ಇಲ್ಲದ ಬಂಧ ಆಕೆ, ಸ್ವಾರ್ಥ ಇಲ್ಲದ ರೂಪ ನನ್ನಮ್ಮ. ಡಾಕ್ಟರ್​ ಆಗಿರೋ ನನಗೆ ಪಂಚಪ್ರಾಣಗಳ ಬಗ್ಗೆ ಗೊತ್ತು.. ಆದ್ರೆ ಅಮ್ಮನಿಂದ ನನ್ನಲ್ಲಿ ಆರನೇ ಪ್ರಾಣ ಇದೆ ಅಂತ ಅರ್ಥವಾಯ್ತು.. ಆ ಪ್ರಾಣವೇ ನನ್ನಮ್ಮ.
ಅಮ್ಮನ ಹೆಸರು ಬೋರಮ್ಮ ಸಿ ಮುಕಾರ್ತಿಹಾಳ್. ನನ್ನಮ್ಮ ಹುಟ್ಟಿದಾಗಿನಿಂದ ಪ್ರೀತಿಯ ಅಮೃತವನ್ನ ಹಂಚುತ್ತಲೇ ಬೆಳೆದವಳು. ಇಡೀ ಕುಟುಂಬದಲ್ಲಿ ಅವಳೇ ಪ್ರೀತಿಗೆ ಮತ್ತೊಂದು ಹೆಸರಾಗಿದ್ದವಳು. ಅವ್ಳ ಯೌವನದಲ್ಲಿ ಶ್ರೀ ಸಿ ಸಿ ಮುಕಾರ್ತಿಹಾಳ್ ಅವ್ರನ್ನ ಕೈ ಹಿಡಿದು, ಹೊಸ ಬದುಕನ್ನ ಆರಂಭಿಸಿದ್ಲು. ಮುಂದೆ ಆಕೆಗೆ ನನ್ನ ಸೇರಿ ಆರು ಮಕ್ಳು, ಮೂವರು ಹೆಣ್ಣು, ಮೂವರು ಗಂಡು. ನಾನೇ ಚಿಕ್ಕವನು ಆಕೆಗೆ. ನನಗೆ ವಯಸ್ಸು ಬೆಳೆದಂತೆ ಅಮ್ಮನ ವಯಸ್ಸು ಕರಗಿ ಹೋಗ್ತಿತ್ತು. ಮುಂದೆ ಅವ್ಳಿಗೆ ಮೂವರು ಅಳಿಯಂದ್ರು ಬಂದ್ರು.. ಮೂವರು ಸೊಸೆಯಂದ್ರು ಬಂದ್ರು.. 12 ಮೊಮ್ಮಕ್ಳು ಅವ್ಳ ಮಡಿಲಲ್ಲೇ ಆಡಿದ್ರು. ಹೆಂಡತಿಯಾಗಿ,ತಾಯಿಯಾಗಿ, ಅಜ್ಜಿಯಾಗಿ ಜೀವನದ ಪ್ರತಿ ಸಂಬಂಧವನ್ನ ಪರಿಪೂರ್ಣವಾಗಿ ಮುಗಿಸಿದವಳು ನನ್ನಮ್ಮ.
/filters:format(webp)/newsfirstlive-kannada/media/media_files/2025/08/14/boramma-2025-08-14-17-09-28.jpeg)
ಇಡೀ ಜೀವಮಾನದಲ್ಲಿ ಆಜಾತಶತ್ರು ನನ್ನಮ್ಮ.ಅವ್ಳ ತ್ಯಾಗ,ಅವ್ಳ ಬದುಕಿದ ರೀತಿಯನ್ನ ನೆನಪಿಸಿಕೊಂಡರೇ ನನಗೆ ಈಗಲೂ ಸೋಜಿಗ ಅನಿಸುತ್ತೆ.. ಯಾಕಂದ್ರೆ ಅವ್ಳ ಎಷ್ಟೋ ಉತ್ತಮ ಗುಣಗಳು ಆಕೆಗೆ ಹೇಗೆ ಬಂದವು.. ಹೇಗೆ ಕಲಿತಳು, ಅವು ಹುಟ್ಟಿನ ಕೊಡುಗೆಗಳಾ ಅನ್ನೋ ಸೋಜಿಗ ನನಗೆ. ಮನೆಯಲ್ಲಿ ನಾನು ಚಿಕ್ಕವನಾಗಿದ್ದರಿಂದ ಅಮ್ಮನ ಸೆರಗ ತುದಿ ನನ್ನದೇ. ಅವ್ಳೊಟ್ಟಿಗೆ ಎಷ್ಟೋ ವಿಷಯಗಳನ್ನ ಹಂಚಿಕೊಳ್ತಿದ್ದೆ. ಆಕೆ ನನ್ನ ಮಾತನ್ನ ತುಂಬಾ ಪ್ರೀತಿಯಿಂದ ಕೇಳಿಸಿಕೊಳ್ತಿದ್ಲು. ಆಕೆಯಿಂದ ನನಗೆ ಬಂದ ಬಳುವಳಿ ಪ್ರೀತಿಯನ್ನ ಹಂಚುವುದು. ಬದುಕು,ಗುರಿ, ಸಾಧನೆ, ಪ್ರೀತಿ ಎಲ್ಲಾವನ್ನೂ ಕಲಿಸಿದ್ದ ನನ್ನಮ್ಮ ಆಕೆಯನ್ನ ಬಿಟ್ಟು, ಆಕೆಯ ನೆನಪುಗಳನ್ನ ಮರೆತು ಬದುಕುವುದನ್ನ ಕಲಿಸಿರ್ಲಿಲ್ಲ. ಬಹುಶಃ ಅದಕ್ಕಾಗಿನೇ ಏನೋ ಅವ್ಳ ನೆನೆಪು, ಅವಳ ಮಾತು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಲೇ ಇರ್ತವೆ. ಅವ್ಳಿಲ್ಲ ಅನ್ನೋ ಸತ್ಯವನ್ನ ಒಪ್ಪಿಕೊಳ್ಳದಂತೆ ಮಾಡ್ತಿವೆ.
/filters:format(webp)/newsfirstlive-kannada/media/media_files/2025/08/14/dr-ravikumar-mukartihal-1-2025-08-14-17-58-00.jpg)
ನನ್ನಮ್ಮಾ ಈ ದಿನ ನನ್ನೊಟ್ಟಿಗಿಲ್ಲ.. ಆಕೆ ಉಸಿರಿನ ಲೆಕ್ಕ ಮುಗಿಸುವವರೆಗೂ, ಯಾರೊಟ್ಟಿಗೂ ದ್ವೇಷ ಸಾಧಿಸಿಲ್ಲ.. ಯಾರಿಗೂ ಪ್ರೀತಿ ಕಮ್ಮಿ ಮಾಡಿಲ್ಲ. ಸಾವು ಕೂಡ ಆಕೆಯನ್ನ ನೋಯಿಸಿಲ್ಲ, ಬರೀ 60 ಸೆಕೆಂಡುಗಳಲ್ಲಿ ಅವ್ಳನ್ನ ಸ್ವರ್ಗಕ್ಕೆ ಸೇರಿಸಿಬಿಟ್ಟಿಡ್ತು. ಆದ್ರೆ ಆಕೆ ನನ್ನ ಸುತ್ತಲೂ ಬಿಟ್ಟು ಹೋದ ಆ ಪಾಸಿಟಿವ್​ ವೈಬ್ಸ್​​.. ಅವ್ಳ ಸ್ವರ್ಶದ ಫೀಲ್​ ಇನ್ನೂ ಹಾಗೆ ಇದೆ. ಇಲ್ಲೆ ನನ್ನ ಜೊತೆಗೆನೇ ಉಳಿದುಕೊಂಡಿದೆ. ನನ್ನ ಪ್ರೀತಿ ಅಮ್ಮನಿಗೆ ಗೊತ್ತು.. ಅವ್ಳ ಪ್ರೀತಿ ನನಗೆ ಗೊತ್ತು. ನಮ್ಮಿಬ್ಬರ ಅನುಬಂಧ ಬಹುಶಃ ಆ ದೇವರಿಗೂ ಸಿಕ್ಕಿರಲ್ಲ.. ಅದಕ್ಕಾಗಿನೆ ಆಕೆಯನ್ನ ಕರೆಸಿಕೊಂಡಿರಬಹುದು.
ಅದು ನನ್ನಮ್ಮ ಬೋರಮ್ಮ ಸಿ, ಮುಕಾರ್ತಿಹಾಳ್ ಅಂದ್ರೆ.. ಅಮ್ಮನಿಗಾಗಿ ನಾನು ಕಣ್ಣೀರು ಸುರಿಸಿದ್ದೇನೆ ಅದು ಒಂದು ಸಣ್ಣ ಭಾಗ ಆಗುತ್ತೆ ಅಷ್ಟೇ. ಆದ್ರೆ ಅವ್ಳ ನನ್ನ ನಡುವಿನ ಜೀವನ ಪಯಣಕ್ಕೆ ಏನೂ ಕೊಟ್ಟರೂ ಸಾಲದು.. ಏನೂ ಕೊಟ್ಟು ತೀರಿಸಲಿ ಆಕೆಯ ಋಣವನ್ನ. ಐ ಲವ್​​ಯು ಅಮ್ಮಾ.. ಲವ್​​ ಯೂ ಲಾಟ್​.
ಅಮ್ಮಾ ಜೀವ ಬಿಡುವಾಗಲೂ ಒದ್ದಾಡಿಲ್ಲ.. ಅವ್ಳು ಮರಣವನ್ನೂ ಪ್ರೀತಿಸಿದವಳು, ಆದ್ದರಿಂದ ಅವ್ಳನ್ನ ಕಂಡರೇ ಮರಣಕ್ಕೂ ಪ್ರೀತಿ. ಆದ್ರೆ ಆಕೆ ಕಲಿಸಿದ್ದನ್ನ ನಾನು ಯಾವತ್ತಿಗೂ ನನ್ನ ಜೊತೆಯಲ್ಲೇ ಉಳಿಸಿಕೊಳ್ತೇನೆ. ಆಕೆ ಕೊಟ್ಟ ಈ ನನ್ನ ಪ್ರಾಣ, ಈಗಲೂ ಅವ್ಳ ಒಡನಾಟವನ್ನೇ ಉಸಿರಾಡ್ತಿದೆ. ಈ ಕ್ಷಣ ನನಗನಿಸೋದು ಏನಂದರೇ.. ಅಮ್ಮನ ಋಣ ತೀರಿಸೋ ಮಾರ್ಗ ಇದೆ ಅಂದ್ರೆ ಖಂಡಿತ ನಾನು ಆ ಮಾರ್ಗವನ್ನ ತುಳಿಯೋಕೆ ಸಿದ್ಧ. ಯಾಕಂದ್ರೆ ಅಮ್ಮ ನನಗೆ ಕೊಟ್ಟ ಜನ್ಮದ ಋಣ ತೀರಿಸೋ ಪ್ರಯತ್ನ ಮಾಡ್ಬೇಕು. ಬೆಟ್ಟದಷ್ಟು ಪ್ರೀತಿ ಕೊಟ್ಟ ಆಕೆಗೆ ತಿರುಗಿ ಅದೇ ಪ್ರೀತಿಯನ್ನ ಹಂಚಬೇಕು. ಮತ್ತೆ ಆಕೆಯ ಮಡಿಲಲ್ಲಿ ಮಗುವಾಗಬೇಕು.. ಅವ್ಳ ಸ್ವರ್ಶ ಬೆಚ್ಚುಗೆಯಲ್ಲಿ ನಿದ್ರಿಸಬೇಕು. ನನ್ನ ಬಿಟ್ಟು ಹೋಗ್ಬೇಡ ಅಮ್ಮಾ ಅಂತ ಕೇಳಿಕೊಳ್ಬೇಕು.
ಭಾರ ಹೃದಯದಲ್ಲಿ.. ಗಂಟಲು ಬಿಗಿದು ನಾನು ಜಪಿಸುವ ಮಾತು..
/filters:format(webp)/newsfirstlive-kannada/media/media_files/2025/08/14/boramma-2025-08-14-17-09-28.jpeg)
ಮಿಸ್​ ಯೂ ಅಮ್ಮಾ.. ಮಿಸ್​ ಯೂ.
ಅಮ್ಮ ನನ್ನನ್ನ ಬಿಟ್ಟು ಹೋಗಿ ಒಂದು ವರ್ಷ ಕಳೆದು ಹೋಯ್ತು.. ಆದ್ರೆ ಅಮ್ಮಾ.. ಆ ಕೊನೆ ದಿನದ ನೋವು ಅಲ್ಲೇ, ಆ ಕೊನೆ ಕ್ಷಣದಲ್ಲೆ ನಿಂತುಬಿಟ್ಟಿದೆ ಅಮ್ಮಾ. ಆ ಕ್ಷಣದ ನೋವಿನ ಅನುಭವಕ್ಕೆ ಸಾವೇ ಇಲ್ಲದಂತಾಗಿದೆ. ಕಡಲಿಗೆ ಹಂಬಲಿಸುವ ಹನಿಯಂತೆ, ಈಗಲೂ ನನ್ನ ಹೃದಯ ನಿನ್ನ ಧ್ವನಿಗಾಗಿ ಹಂಬಲಿಸುತ್ತೆ. ಆ ನೆನಪು ಇಲ್ಲದೇ ಯಾವ ದಿನಕ್ಕೂ ಕತ್ತಲು ಬರುತ್ತಿಲ್ಲ. ನನ್ನ ತಲೆ ಮೇಲೆ ನೀ ಸವರುತ್ತಿದ್ದ ಬೆಚ್ಚನೇ ಬೆರಳಿನ ಸ್ವರ್ಶಕ್ಕೆ ಕೊರತೆ ಇದೆ. ನಿನ್ನ ನಗುವು ಕಣ್ಮುಂದೆ ಬರದೇ ಈ ಕಣ್ಣು ನಿದ್ರಿಸುತ್ತಿಲ್ಲ. ಮತ್ತೆ ನಿನ್ನ ಜೊತೆ ಇದ್ದ ದಿನಗಳಿಗೆ ಹೋಗ್ಬೇಕು ಅನಿಸ್ತಿದೆ ಅಮ್ಮಾ. ನೀನು ನನ್ನ ಪ್ರೀತಿಸಿದಷ್ಟೇ ಮತ್ತೆ ನಾನು ನಿನ್ನ ಪ್ರೀತಿಸಬೇಕು ಅನಿಸ್ತಿದೆ. ನೀನಿಲ್ಲದ ಬದುಕು ಮಾತೆ ಬರದ ಮೌನಕ್ಕೆ ಜಾರಿಬಿಟ್ಟಿದೆ.
ಅಮ್ಮಾ.. ನೀನೆ ನನ್ನ ಶಕ್ತಿ.. ನೀನೇ ನನ್ನಗೆ ಶಾಂತಿ.. ನೀನೇ ನನಗೆ ರಕ್ಷೆ. ಪ್ರತಿ ರಾತ್ರಿ ಆಕಾಶಕ್ಕೆ ಮುಖ ಮಾಡಿ, ಕಣ್ಣು ಮುಚ್ಚಿ ನನ್ನ ಕನಸಲ್ಲಿ ನಿನ್ನನ್ನ ಹುಡುಕಾಡ್ತೇನೆ. ನೀನಿಲ್ಲದ ಕ್ಷಣ ಕಾಡಿ, ಈ ಜಗತ್ತು ಭಾರ ಅನಿಸಿದಾಗ, ಮೌನವಾಗಿ ನಿನ್ನನ್ನ ಕರೀತಲೇ ಇರ್ತೇನೆ.
ಅಮ್ಮಾ.. ಇವತ್ತಿಗೂ ನನ್ನ ಮನಸ್ಸು ಮಿಸ್​​ ಯೂ ಅಮ್ಮಾ ಅಂತಲೇ ಪಿಸುಗುಡುತ್ತೆ
ಪ್ರಾರ್ಥನೆಯಂತೆ.. ನೀನು ಹಾಡುತ್ತಿದ್ದ ಜೋಗುಳದಂತೆ, ಹೃದಯಕ್ಕೆ ಮಾತ್ರ ಕೇಳಿಸುವಂತೆ.
ಪ್ರತಿ ದಿನ, ಪ್ರತೀ ಕ್ಷಣ, ಪ್ರತಿ ಉಸಿರಲ್ಲೂ, ಪ್ರತಿ ಹೆಜ್ಜೆಯಲ್ಲೂ ನಾನು ನಿನ್ನನ್ನ ಹೊತ್ತು ಸಾಗ್ತಿದೇನೆ.
ನೀನು ಈ ದಿನ ಈ ಲೋಕ ಬಿಟ್ಟು ಹೋಗಿರ್ಬೋದು.. ಆದ್ರೇ ನಿನ್ನ ಪ್ರಾಣ ನನ್ನ ಜೊತೆಯೇ ಇದೆ. ಯಾವಾಗಲೂ ನೀನು ನನ್ನ ಜೊತೆಯೇ ಇರ್ತೀಯಾ.. ನನ್ನೊಟ್ಟಿಗೆ ಹೆಜ್ಜೆ ಹಾಕ್ತಿಯಾ.. ನನ್ನ ಮುನ್ನಡೆಸ್ತಿರ್ತೀಯ.. ಕಣ್ಮರೆಯಾಗಿ ಮತ್ತೆ ಜನ್ಮ ಪಡೆದು ನಂಗೆ ತಾಯಿ ಆಗಿದೀಯ.. ನೀನು ನನ್ನಲ್ಲಿ ಜೀವಂತವಾಗಿ ಇದೀಯ ಅಮ್ಮಾ..
ಇವತ್ತಿಗೂ.. ಯಾವತ್ತಿಗೂ.. ಜೀವನದುದ್ದಕ್ಕೂ
ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ ವೈದ್ಯ ಡಾಕ್ಟರ್ ರವಿಕುಮಾರ್ ಮುಕಾರ್ತಿಹಾಳ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us