/newsfirstlive-kannada/media/media_files/2025/09/25/bar-license-auction02-2025-09-25-14-01-50.jpg)
ರಾಜ್ಯದಲ್ಲಿ CL-2 ಮತ್ತು CL-9 ಲೈಸೆನ್ಸ್ ಗಳ ಹರಾಜಿಗೆ ಕರಡು ನಿಯಮ ಬಿಡುಗಡೆ
ಕರ್ನಾಟಕ ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ಅಬಕಾರಿ ಲೈಸೆನ್ಸ್ ಗಳನ್ನು ಹರಾಜು ಹಾಕಲು ಕರಡು ನಿಯಮಗಳನ್ನು ರಾಜ್ಯದ ಹಣಕಾಸು ಇಲಾಖೆಯು ಬಿಡುಗಡೆ ಮಾಡಿದೆ. ಅಬಕಾರಿ ಲೈಸೆನ್ಸ್ ಹರಾಜು ಮೂಲಕ ಬರೋಬ್ಬರಿ 500 ಕೋಟಿ ರೂಪಾಯಿ ಆದಾಯ ಸಂಗ್ರಹಿಸಲು ರಾಜ್ಯ ಹಣಕಾಸು ಇಲಾಖೆ ಉದ್ದೇಶಿಸಿದೆ. ಗ್ಯಾರಂಟಿ ಸ್ಕೀಮ್ ಗಳಿಗೆ ಹಣ ಹೊಂದಿಸುವ ಸವಾಲು ಹಾಗೂ ಕೃಷ್ಣಾ ಮೇಲ್ದಂಡೆ ಹಂತ-3ರ ಯೋಜನೆಗೆ ಹಣ ಹೊಂದಿಸುವ ಸವಾಲಿನಲ್ಲಿ ಸಿಲುಕಿರುವ ಹಣಕಾಸು ಇಲಾಖೆಯ ಕಣ್ಣು ಈಗ ಅಬಕಾರಿ ಇಲಾಖೆಯ ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ಮೇಲೆ ಬಿದ್ದಿದೆ.
ಹೆಚ್ಚುವರಿ ಆದಾಯ, ಸಂಪನ್ಮೂಲ ಸಂಗ್ರಹಕ್ಕಾಗಿ ನಿಷ್ಕ್ರಿಯವಾಗಿರುವ ಸಿಎಲ್-2 ( ಚಿಲ್ಲರೆ ಮದ್ಯ ಮಳಿಗೆ) ಮತ್ತು ಸಿಎಲ್-9 ( ಬಾರ್ ಅಂಡ್ ರೆಸ್ಟೋರೆಂಟ್) ಲೈಸೆನ್ಸ್ ಗಳನ್ನು ಹರಾಜು ಹಾಕಲಾಗುತ್ತೆ. ಜೊತೆಗೆ ಬಳಕೆಯಾಗದ ಸಿಎಲ್-11(ಸಿ) ಲೈಸೆನ್ಸ್ ಗಳನ್ನು ಹರಾಜು ಹಾಕಲು ಪ್ಲ್ಯಾನ್ ಮಾಡಲಾಗುತ್ತಿದೆ. ಎಂಎಸ್‌ಐಎಲ್ ನಡೆಸುವ ಮಳಿಗೆಗಳಿಗೆ ಸಿಎಲ್- 11 (ಸಿ) ಲೈಸೆನ್ಸ್ ನೀಡಲಾಗಿದೆ.
ರಾಜ್ಯದಲ್ಲಿ ಒಟ್ಟಾರೆ 579 ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ಗಳನ್ನು ಹರಾಜು ಹಾಕಲಾಗುತ್ತೆ ಎಂದು ಅಬಕಾರಿ ಸಚಿವರ ಕಚೇರಿ ತಿಳಿಸಿದೆ.
ಆನ್ ಲೈನ್ ನಲ್ಲಿ ಲಿಕ್ಕರ್ ಮಾರಾಟ ಮಳಿಗೆಗಳ ಲೈಸೆನ್ಸ್ ಅನ್ನು ಹರಾಜು ಹಾಕಲಾಗುತ್ತೆ. ಅತಿ ಹೆಚ್ಚು ಬಿಡ್ ಮಾಡಿದವರಿಗೆ ಮದ್ಯ ಮಾರಾಟದ ಬಾರ್ ಅಂಡ್ ರೆಸ್ಟೊರೆಂಟ್ ಲೈಸೆನ್ಸ್ ಸಿಗುತ್ತೆ ಎಂದು ಕರಡು ನಿಯಮದಲ್ಲಿ ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 1992 ರಿಂದ ಹೊಸದಾಗಿ ಸಿಎಲ್-2 ಮತ್ತು ಸಿಎಲ್- 9 ಲೈಸೆನ್ಸ್ ಗಳನ್ನ ಯಾರಿಗೂ ನೀಡಿಲ್ಲ. ಹೀಗಾಗಿ ಸಿಎಲ್-2 ಮತ್ತು ಸಿಎಲ್-9 ಲೈಸೆನ್ಸ್ ಗಳಿಗೆ ಭಾರಿ ಬೇಡಿಕೆ ಇದೆ. ಕರ್ನಾಟಕ ರಾಜ್ಯದಲ್ಲಿ ವಾರ್ಷಿಕವಾಗಿ 3995 ಸಿಎಲ್-2 ಲೈಸೆನ್ಸ್ ಮತ್ತು 3,637 ಸಿಎಲ್-9 ಲೈಸೆನ್ಸ್ ಗಳನ್ನು ನವೀಕರಣ ಮಾಡಲಾಗುತ್ತಿದೆ.
ಹೊಸದಾಗಿ ಲೈಸೆನ್ಸ್ ನೀಡದೇ ಇರೋದರಿಂದ, ಹಾಲಿ ಇರುವ ಲೈಸೆನ್ಸ್ ಗಳನ್ನೇ ಮಾಲೀಕರು ಬೇರೆಯವರಿಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಅತ್ತ ಸರ್ಕಾರಕ್ಕೆ ವಾರ್ಷಿಕ ಶುಲ್ಕವಾಗಿ ಸಿಎಲ್ -2 ಲೈಸೆನ್ಸ್ ನವೀಕರಣಕ್ಕೆ 4-6 ಲಕ್ಷ ರೂಪಾಯಿ ಶುಲ್ಕವನ್ನು ಲೈಸೆನ್ಸ್ ದಾರರು ಪಾವತಿಸುತ್ತಿದ್ದಾರೆ. ಸಿಎಲ್-9 ಲೈಸೆನ್ಸ್ ನವೀಕರಣಕ್ಕೆ ವಾರ್ಷಿಕ ಶುಲ್ಕವಾಗಿ 4- 7.5 ಲಕ್ಷ ರೂಪಾಯಿ ಪಾವತಿಸುತ್ತಿದ್ದಾರೆ.
ಆದರೇ, ಬೆಂಗಳೂರಿನಲ್ಲಿ ಸಿಎಲ್ -9 ಲೈಸೆನ್ಸ್ ಬರೋಬ್ಬರಿ 3.8 ಕೋಟಿ ರೂಪಾಯಿಗೆ ಮಾರಾಟವಾದ ಉದಾಹರಣೆಯೂ ಇದೆ.
ಹೀಗಾಗಿ ಈಗ ಲೈಸೆನ್ಸ್ ಹರಾಜಿನಲ್ಲಿ ಪ್ರತಿಯೊಂದು ಲೈಸೆನ್ಸ್ ಹರಾಜಿನಿಂದ ಬೆಂಗಳೂರಿನಲ್ಲಿ 3 ಕೋಟಿ ರೂಪಾಯಿವರೆಗೂ ಹರಾಜು ಆಗಬಹುದು ಎಂಬ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ಸಿಎಂ ಹಣಕಾಸು ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಇನ್ನೂ ಬೆಂಗಳೂರಿನ ಹೊರಗೆ 1 ಕೋಟಿ ರೂಪಾಯಿವರೆಗೂ ಮದ್ಯ ಮಾರಾಟದ ಲೈಸೆನ್ಸ್ ಹರಾಜು ಆಗಬಹುದು ಎಂಬ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ಇದೆ. ಈ ಮದ್ಯ ಮಾರಾಟದ ಲೈಸೆನ್ಸ್ ಗಳಿಂದ 500 ಕೋಟಿ ರೂಪಾಯಿ ಸಂಗ್ರಹ ಆಗಬಹುದು ಎಂದು ಶಾಸಕ ಹಾಗೂ ಸಿಎಂ ಹಣಕಾಸು ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಇನ್ನೂ ಹಣಕಾಸು ಇಲಾಖೆ ಬಿಡುಗಡೆ ಮಾಡಿರುವ ಕರಡು ನಿಯಮದಲ್ಲಿ 2 ಹೊಸ ಕೆಟಗರಿ ಸೃಷ್ಟಿಸಲಾಗಿದೆ. ಸಿಎಲ್-2 ಎ ಮತ್ತು ಸಿಎಲ್-9ಎ ಎಂಬ ಎರಡು ಹೊಸ ಕೆಟಗರಿ ಸೃಷ್ಟಿಸಲಾಗಿದೆ.
ಇನ್ನೂ ಕರಡು ನಿಯಮಗಳಲ್ಲಿ ಹಾಲಿ ಇರುವ ಲೈಸೆನ್ಸ್ ಗಳನ್ನು ಅಥವಾ ವ್ಯಾಲಿಡ್ ಲೈಸೆನ್ಸ್ ಗಳನ್ನು ಮಾಲೀಕರ ಸಾವಿನಂಥ ಸಂದರ್ಭಗಳಲ್ಲಿ ಕಾನೂನುಬದ್ದ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲು ಅವಕಾಶ ನೀಡಲಾಗಿದೆ.
ಇನ್ನೂ ವರ್ಷದಿಂದ ವರ್ಷಕ್ಕೆ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಯಿಂದ ಸಂಗ್ರಹಿಸುವ ಮೊತ್ತವೂ ಹೆಚ್ಚಾಗುತ್ತಿರುವುದು ವಿಶೇಷ. 2024-25ರ ಹಣಕಾಸು ವರ್ಷದಲ್ಲಿ 35,783 ಕೋಟಿ ರೂಪಾಯಿ ಆದಾಯ ಸಂಗ್ರಹಿಸಲಾಗಿತ್ತು. ಈಗ 2025-26ರ ಹಣಕಾಸು ವರ್ಷಕ್ಕೆ ಅಬಕಾರಿ ಇಲಾಖೆಗೆ ಮದ್ಯ ಮಾರಾಟದಿಂದ 40 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿ ನೀಡಿದೆ. ಈ ವರ್ಷದ ಏಪ್ರಿಲ್ 1 ರಿಂದ ಆಗಸ್ಟ್ ಅಂತ್ಯದವರೆಗೂ 16,358 ಕೋಟಿ ರೂಪಾಯಿ ಆದಾಯ ಸಂಗ್ರವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.