/newsfirstlive-kannada/media/media_files/2025/08/12/mandya-school-egg-contraversy-2025-08-12-13-26-23.jpg)
ಒಂದು ಮೊಟ್ಟೆ ಕಥೆ
ಶಾಲಾ ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಾಹ್ನದ ಬಿಸಿಯೂಟ ಜಾರಿಗೆ ತಂದಿವೆ. ಜೊತೆಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆಯನ್ನು ನೀಡಲಾಗುತ್ತಿದೆ. ಪೌಷ್ಠಿಕಾಂಶದ ಆಹಾರ ನೀಡುವ ಉದ್ದೇಶ ಇದರ ಹಿಂದೆ ಇದೆ. ಮಾಂಸಹಾರಿಗಳು ಮೊಟ್ಟೆಯನ್ನು ಸೇವಿಸುತ್ತಾರೆ. ಆದರೇ, ಮಾಂಸಹಾರಿಗಳೇ ಹೆಚ್ಚಾಗಿರುವ ನಮ್ಮ ಕರ್ನಾಟಕದ ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಶಾಲೆಯಲ್ಲಿ ಮೊಟ್ಟೆ ನೀಡಿಕೆಗೆ ವಿರೋಧ ವ್ಯಕ್ತವಾಗಿದೆ. ಇದು ವಿಚಿತ್ರವಾದರೂ ಸತ್ಯ. ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡಿದ ಕಾರಣಕ್ಕಾಗಿಯೇ 70 ಶಾಲಾ ಮಕ್ಕಳು ಶಾಲಾ ವರ್ಗಾವಣೆ ಪತ್ರ ತೆಗೆದುಕೊಂಡು ಬೇರೆ ಶಾಲೆಗಳಿಗೆ ದಾಖಲಾಗಿದ್ದಾರೆ.
ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ 124 ವಿದ್ಯಾರ್ಥಿಗಳಿದ್ದರು. ಎಲ್‌ಕೆಜಿ- ಯುಕೆಜಿ ಯಲ್ಲಿ 20 ವಿದ್ಯಾರ್ಥಿಗಳು ಓದುತ್ತಿದ್ದರು. ಆದರೇ, ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ವಿಷಯಕ್ಕೆ ಗ್ರಾಮದ ಸವರ್ಣೀಯರು ಮತ್ತು ಪರಿಶಿಷ್ಟ ಜಾತಿಯ ಜನರ ಮಧ್ಯೆ ಭಿನ್ನಾಭಿಪ್ರಾಯ ಮೂಢಿದೆ. ಶಾಲೆಯ ಪಕ್ಕದಲ್ಲೇ ಗ್ರಾಮದಲ್ಲಿ ವೀರಭದ್ರೇಶ್ವರ ದೇವಾಲಯ ಇದೆ. ದೇವಾಲಯದ ಪಕ್ಕದಲ್ಲೇ ಮೊಟ್ಟೆ ಬೇಯಿಸುವುದಕ್ಕೆ ಗ್ರಾಮದ ಸವರ್ಣೀಯರ ವಿರೋಧ ಇದೆ. ಹೀಗಾಗಿ ಶಾಲೆಯಲ್ಲಿ ಮೊಟ್ಟೆ ಬೇಯಿಸುವುದು ಬೇಡ, ಮೊಟ್ಟೆಯನ್ನು ಮಕ್ಕಳ ಕೈಯಲ್ಲೇ ಮನೆಗೆ ಕಳಿಸಿಕೊಡಿ ಎಂದು ಸವರ್ಣೀಯರು ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದರು. ಶಾಲೆಯಲ್ಲಿ ಮೊಟ್ಟೆಯ ಬದಲು ಕೆಲವು ದಿನ ಬಾಳೆಹಣ್ಣು ಅನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು.
ಮೊಟ್ಟೆ ನೀಡಿಕೆಗೆ ಸವರ್ಣೀಯರ ವಿರೋಧ
ಆದರೇ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ಸಂಘಟನೆ ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿತ್ತು. ಶಾಲೆಯಲ್ಲಿ ಮೊಟ್ಟೆಯನ್ನು ನೀಡಬೇಕೆಂದು ಆಗ್ರಹಿಸಿದ್ದರು. ಶಾಲೆಯಲ್ಲಿ ಪರಿಶಿಷ್ಟ ಜಾತಿಯ 20 ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಮೊಟ್ಟೆ ನೀಡದೇ ಇರೋದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದರಿಂದಾಗಿ ಮತ್ತೆ ಶಾಲೆಯಲ್ಲಿ ಮೊಟ್ಟೆಯನ್ನು ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಯಿತು. ಇದರಿಂದ ಅಸಮಾಧಾನಗೊಂಡ ಗ್ರಾಮದ ಸವರ್ಣೀಯ ಮಕ್ಕಳ ಪೋಷಕರು, ತಮ್ಮ ಮಕ್ಕಳ ಶಾಲಾ ವರ್ಗಾವಣೆ ಪತ್ರವನ್ನು ತೆಗೆದುಕೊಂಡು ತಮ್ಮ ಮಕ್ಕಳನ್ನು ಹತ್ತಿರದ ಹನಕೆರೆ, ಕೀಲಾರ ಹಾಗೂ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಗ್ರಾಮದ ಶಾಲೆಗಳಿಗೆ ಸೇರಿಸಿದ್ದಾರೆ. ಹೀಗೆ 124 ಶಾಲಾ ವಿದ್ಯಾರ್ಥಿಗಳ ಪೈಕಿ 70 ಕ್ಕೂ ಶಾಲಾ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗಳಿಗೆ ದಾಖಲಾಗಿದ್ದಾರೆ. ಮೊಟ್ಟೆ ನೀಡಿದ್ದನ್ನು ವಿರೋಧಿಸಿಯೇ ಗ್ರಾಮದ ಸವರ್ಣೀಯ ಪೋಷಕರು ತಮ್ಮ ಮಕ್ಕಳನ್ನು ತಮ್ಮ ಗ್ರಾಮದ ಶಾಲೆಯಿಂದ ಬಿಡಿಸಿದ್ದಾರೆ.
ಆಲಕೆರೆ ಗ್ರಾಮದ ಮೊಟ್ಟೆಯ ಬಗ್ಗೆ ದಲಿತರು ಮತ್ತು ಸವರ್ಣೀಯರ ನಡುವೆ ಜಟಾಪಟಿಯು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಯಾರ ಪರವೂ, ವಿರೋಧವು ತೀರ್ಮಾನ ಕೈಗೊಳ್ಳಲಾಗದ ಸ್ಥಿತಿಯಲ್ಲಿ ಅಧಿಕಾರಿಗಳು ಇದ್ದಾರೆ. ಸವರ್ಣೀಯ ಸಮುದಾಯದ ಜನರನ್ನು, ಪೋಷಕರನ್ನು ಮನವೊಲಿಸುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ. ಆದರೇ, ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಶಾಲೆಯಲ್ಲಿ ನಮ್ಮ ಮಕ್ಕಳು ಓದುವುದೇ ಬೇಡ ಎಂಬ ತೀರ್ಮಾನಕ್ಕೆ ಸವರ್ಣೀಯ ಸಮುದಾಯದ ಜನರು, ಪೋಷಕರು ಬಂದಿದ್ದಾರೆ.
ಮೊಟ್ಟೆ ನೀಡಲು ವಿರೋಧ ಇಲ್ಲ. ಆದರೇ, ವೀರಭದ್ರೇಶ್ವರ ದೇವಾಲಯದ ಪಕ್ಕದಲ್ಲೇ ಶಾಲೆ ಕಟ್ಟಡ ಇದೆ. ಹೀಗಾಗಿ ಶಾಲೆಯಲ್ಲಿ ಮೊಟ್ಟೆ ಬೇಯಿಸುವುದು ಬೇಡ. ಮೊಟ್ಟೆಯನ್ನು ಮನೆಗೆ ಕಳಿಸಿಕೊಡಲಿ, ಶಾಲೆಯಲ್ಲೇ ಮೊಟ್ಟೆ ಬೇಯಿಸಿ ಕೊಡಬೇಕೆಂದು ಒತ್ತಡ ಹಾಕಿದ್ದರಿಂದ ನಮ್ಮ ಮಕ್ಕಳನ್ನು ಬೇರೆ ಗ್ರಾಮದ ಶಾಲೆಗೆ ಸೇರಿಸಿದ್ದೇವೆ ಎಂದು ಸವರ್ಣೀಯ ಸಮುದಾಯದ ವಿದ್ಯಾರ್ಥಿಯ ತಂದೆ ಚಂದ್ರು ಎಂಬುವವರು ಹೇಳಿದ್ದಾರೆ.
ಈ ಶಾಲೆಯಲ್ಲಿ ಮೊಟ್ಟೆ ನೀಡಿಕೆಯು ವಿವಾದಕ್ಕೆ ಕಾರಣವಾಗಿರುವುದರ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿತ್ತು. ಅದರ ವಿಡಿಯೋ ಲಿಂಕ್ ಕೂಡ ಇಲ್ಲಿದೆ. ಇದನ್ನು ತಾವು ನೋಡಬಹುದು.
ಇನ್ನೂ ಮಂಡ್ಯದ ಬಿಇಓ ಸೌಭಾಗ್ಯ ಅವರು ಸವರ್ಣೀಯ ಸಮುದಾಯದ ಜನರನ್ನು , ಪೋಷಕರನ್ನು ಮನವೊಲಿಸಿ, ಮಕ್ಕಳನ್ನು ಆಲಕೆರೆ ಗ್ರಾಮದ ಶಾಲೆಯಲ್ಲೇ ಉಳಿಸಿಕೊಳ್ಳಲು ಮೂರು ಸಭೆಗಳನ್ನು ಗ್ರಾಮದ ಪೋಷಕರೊಂದಿಗೆ ನಡೆಸಿದ್ದಾರೆ. ಆದರೇ, ಸಭೆಗಳ್ಯಾವು ಯಶಸ್ವಿಯಾಗಿಲ್ಲ. ಹೀಗಾಗಿ ಇದುವರೆಗೂ 70 ಮಕ್ಕಳು ಶಾಲಾ ವರ್ಗಾವಣೆ ಪತ್ರ ಪಡೆದು ಬೇರೆ ಗ್ರಾಮದ ಶಾಲೆಗಳಿಗೆ ದಾಖಲಾಗಿದ್ದಾರೆ.
ಆಲಕೆರೆ ಗ್ರಾಮದ ಶಾಲೆಯಲ್ಲಿ ಮೊಟ್ಟೆಯ ಬದಲು ಬಾಳೆಹಣ್ಣು ನೀಡುವಂತೆ ಗ್ರಾಮದ ಸವರ್ಣೀಯರು ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ. ಆದರೇ, ಬಾಳೆಹಣ್ಣು ನೀಡಲು ದಲಿತ ಸಮುದಾಯದ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸಮಸ್ಯೆ ಜಟಿಲವಾಗಿದೆ. ಎರಡು ಸಮುದಾಯಗಳಿಗೂ ಒಪ್ಪಿಗೆಯಾಗುವ ಬೇರೆ ಯಾವುದಾದರೂ ಪೌಷ್ಠಿಕಾಂಶದ ಆಹಾರವನ್ನ ಮಕ್ಕಳಿಗೆ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಅಷ್ಟೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.