/newsfirstlive-kannada/media/media_files/2025/09/04/mandya-son-blackmail-father-2025-09-04-16-10-10.jpg)
ತಂದೆಯನ್ನು ಬ್ಲ್ಯಾಕ್ ಮೇಲ್ ಮಾಡಿದ ಮಗ ಪ್ರಣಮ್, ತಂದೆ ಸತೀಶ್
ಸಕ್ಕರೆಯ ನಾಡು, ಅಕ್ಕರೆಯ ಬೀಡು ಎಂದೇ ಹೆಸರಾದ ಮಂಡ್ಯ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಇದು ಅಪ್ಪ- ಮಕ್ಕಳ ಕಿತ್ತಾಟದ ಸಾಮಾನ್ಯದ ಕೇಸ್ ಅಲ್ಲ. ಮಗನೇ ಅಪ್ಪನನ್ನು ಹನಿಟ್ರ್ಯಾಪ್ ಖೆಡ್ಡಾದಲ್ಲಿ ಕೆಡವಿ ಅದರ ವಿಡಿಯೋ, ಆಡಿಯೋ ರೆಕಾರ್ಡ್ ಮಾಡಿಕೊಂಡು ತಂದೆಯ ಮರ್ಯಾದೆ ಕಳೆದು ಬ್ಲ್ಯಾಕ್ ಮೇಲ್ ಮಾಡಿರುವ ವಿಚಿತ್ರ ಪ್ರಕರಣ ಇದು.
ಭೂಮಿಯ ಮೇಲೆ ತಂದೆಗಿಂತ ಭಾರವಾದ್ದು ಯಾವುದು ಇಲ್ಲ ಅಂತಾರೆ. ತಂದೆಯ ಘನತೆ, ಗೌರವವನ್ನು ಮಗನಾದವನು ಕಾಪಾಡಬೇಕು. ಆದರೇ, ಮಂಡ್ಯ ಜಿಲ್ಲೆಯಲ್ಲಿ ಮಗನೇ ತಂದೆಯ ಘನತೆ, ಗೌರವವನ್ನು ಕಳೆಯುವ, ಹರಾಜು ಹಾಕುವ ಕೆಲಸ ಮಾಡಿದ್ದಾನೆ. ಜನ್ಮ ಕೊಟ್ಟ ತಂದೆಗೆ ಮಗನೇ ಖೆಡ್ಡಾ ತೋಡಿದ್ದಾನೆ. ಇದನ್ನು ಕೇಳಿದರೇ, ಯಾರಿಗಾದರೂ ಶಾಕ್ ಆಗುತ್ತೆ. ಅಂಥಾ ಘಟನೆಯೊಂದು ಮಂಡ್ಯ ಜಿಲ್ಲೆಯ ಮದ್ದೂರುನಲ್ಲಿ ನಡೆದಿದೆ. ಹಣ ಆಸ್ತಿಗಾಗಿ ಮಗನೇ ತಂದೆಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ವಾಟ್ಸಾಫ್ ಗ್ರೂಪ್‌ಗೆ ತಂದೆಯ ಅಶ್ಲೀಲ ವಿಡಿಯೋ, ಅಡಿಯೋ ಕಳಿಸಿ, ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.
ಇದು ಮಗನೇ ಮಾಡಿರುವ ಕಿತಾಪತಿ ಎಂದು ಗೊತ್ತಾದ ಮೇಲೆ ತಂದೆ ರೊಚ್ಚಿಗೆದ್ದಿದ್ದಾನೆ. ಮಗನ ವಿರುದ್ಧ ತಂದೆಯೇ ಪೊಲೀಸರಿಗೆ ದೂರು ನೀಡಿದ್ದಾರೆ. ತಂದೆಯ ದೂರಿನ ಆಧಾರದ ಮೇಲೆ ಮದ್ದೂರು ಪೊಲೀಸರು ಆರೋಪಿ ಮಗನ ವಿರುದ್ಧ ಕೇಸ್ ದಾಖಲಿಸಿ, ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್‌ಗೆ ಮಗನಿಂದಲೇ ಬ್ಲ್ಯಾಕ್ ಮೇಲ್!
ಮದ್ದೂರು ಟೌನ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಸತೀಶ್ ಬಡವರಿಗೆ ಕಡಿಮೆ ರೇಟ್ ನಲ್ಲಿ ಸೈಟ್, ಮನೆ ಕೊಡುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಹೆಸರು ಗಳಿಸಿದ್ದಾರೆ. ಮದ್ದೂರು, ಮಂಡ್ಯ, ಚಾಮರಾಜನಗರ ಸೇರಿದಂದೆ ವಿವಿಧೆಡೆ ಬರೀ 9 ಲಕ್ಷ ರೂಪಾಯಿಗೆ 1,200 ಚದರ ಅಡಿಯ ಅಳತೆಯ ನಿವೇಶನಗಳನ್ನು ಜನರಿಗೆ ಮಾರಾಟ ಮಾಡಿದ್ದಾರೆ.
ಕಡಿಮೆ ರೇಟ್ ಗೆ ಸೈಟ್ ಮಾರುವ ಮೂಲಕ ಹೆಸರು ಗಳಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದ ಮೂಲಕ ಸತೀಶ್ ಹಣ, ಹೆಸರು, ಖ್ಯಾತಿ ಎಲ್ಲವನ್ನೂ ಗಳಿಸಿದ್ದಾರೆ. ರಾಣಿ ಐಶ್ಚರ್ಯ ಡೆವಲಪರ್ಸ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಅನ್ನು ಸತೀಶ್ ನಡೆಸುತ್ತಿದ್ದಾರೆ. ಸತೀಶ್ ಗೆ ಪ್ರಣಾಮ್ ಹೆಸರಿನ ಮಗನಿದ್ದಾನೆ. ಮಗನ ಮೇಲೆ ತಂದೆ ಸತೀಶ್ ಗೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೇನೇ ಮಗ 19 ವರ್ಷ ವಯಸ್ಸಿನವನಿದ್ದಾಗಲೇ ಇವನ ಹೆಸರಿಗೆ ಕೋಟಿ ಕೋಟಿ ಆಸ್ತಿ ಮಾಡಿದ್ದರು..ಆದ್ರೆ, ಅಪ್ಪನ ಆಸ್ತಿ ಡಬಲ್ ಮಾಡಬೇಕಾಗಿದ್ದ ಮಗ ಬೆಳೀತಾ ಬೆಳೀತಾ ದುಷ್ಟಟಗಳಿಗೆ ದಾಸನಾಗಿ ಹೋದ..ಕುಡಿತ, ಮೋಜು ಮಸ್ತಿ, ಜೊತೆಗೆ ಜೂಜು, ಶೇರ್ ಮಾರ್ಕೆಟ್ಗಳಲ್ಲಿ ಹಣ ವ್ಯಯಿಸಲು ಶುರುಮಾಡಿದ..ಹೀಗೆ ಹಣ ಕಳೀತಾ ಕಳೀತಾ ಬರೋಬ್ಬರಿ 2 ಕೋಟಿ ರೂಪಾಯಿ ಆಸ್ತಿಯನ್ನ ಮಾರೇಬಿಟ್ಟಿದ್ದಾನಂತೆ..ಅದ್ಯಾವಾಗ ತಾನು ಕಷ್ಟಪಟ್ಟು ದುಡಿದ ಹಣವನ್ನ ಮಗ ಈ ರೀತಿ ನೀರುಪಾಲು ಮಾಡಿದ್ನೋ ಸತೀಶ್ ಒಂದು ಐಡಿಯಾ ಮಾಡಿದ್ದಾರೆ..ಮಗನ ಹೆಸರಿಗೆ ಮಾಡಿದ್ದ ಇನ್ನಷ್ಟು ಆಸ್ತಿಯನ್ನ ಆತ ಯಾರಿಗೂ ಮಾರದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಅದ್ಯಾವಾಗ ಅಪ್ಪ, ತನ್ನ ಹೆಸರಲ್ಲಿದ್ದ ಆಸ್ತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು ಗೊತ್ತಾಯ್ತೋ ಪ್ರಣಾಮ್ ಅಕ್ಷರಶಃ ಕುಪಿತನಾಗಿದ್ದ..ಅಪ್ಪನಿಗೇ ₹5 ಕೋಟಿ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದ..ಕೇಳಿದ 5 ಕೋಟಿ ಕೊಡಲ್ಲ ಅಂತಾ ಅಪ್ಪ ಹೇಳಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ?
ತಂದೆಯ ಅಶ್ಲೀಲ ಪೋಟೋ, ವಿಡಿಯೋ ಹರಿಬಿಟ್ಟ ಮಗ ಪ್ರಣಮ್
ಕೇಳಿದಷ್ಟು ಹಣ ಕೊಡಲಿಲ್ಲ ಅನ್ನೋ ಸಿಟ್ಟಿಗೆ ಪ್ರಣಾಮ್ ತನ್ನ ತಂದೆಯ ವಿರುದ್ಧವೇ ಒಂದು ಖತರ್ನಾಕ್ ಐಡಿಯಾ ಮಾಡಿದ್ದಾನೆ..ಕಳೆದ ಆಗಸ್ಟ್ 31ನೇ ತಾರೀಖು ರಾತ್ರಿ ಎಂಟೂವರೆ ಸುಮಾರಿಗೆ ತನ್ನ ತಂದೆಯದ್ದೇ ಖಾಸಗಿ ಫೋಟೋಗಳು, ಕರೆಗಳು, ವಿಡಿಯೋಗಳನ್ನ ಮದ್ದೂರು ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿಬಿಟ್ಟಿದ್ದಾನೆ.ಇದು ಗೊತ್ತಾಗಿ ಸತೀಶ್ ಮಗನನ್ನ ತನ್ನ ವಿರುದ್ಧ ಎತ್ತಿಕಟ್ಟಿದವರ ವಿರುದ್ಧ ಠಾಣೆಯ ಮೆಟ್ಟಿಲೇರಿದ್ದಾರೆ..ಅವ್ರು ಹಾಕಿರೋ ವಿಡಿಯೋ ಆಡಿಯೋಗಳು ನನ್ನದಲ್ಲ, ಎಲ್ಲವೂ ಎಡಿಟೆಡ್ ಅಂತಿದ್ದಾರೆ..ಜೊತೆಗೆ ನನ್ನ ತೇಜೋವಧೆ ಮಾಡೋದಕ್ಕೆ ಮಗನೇ ನನಗೆ ಆಗದಿರುವವರ ಜೊತೆಗೆ ಕೈ ಜೋಡಿಸಿದ್ದಾನೆ ಅನ್ನೋದು, ಕೋಟ್ಯಾಧಿಪತಿ ಉದ್ಯಮಿ ಸತೀಶ್ ಅಳಲು
ಆರೋಪಿ ಮಹೇಶ್, ಪ್ರೀತಂ, ಈಶ್ವರ್ ಬಂಧನ, ಜೈಲುಪಾಲು
ಅವನ ಶೋಕಿಗೆ ಸ್ವಂತ ಅಪ್ಪನ ತೇಜೋವಧೆ ಮಾಡಿದ!
ಸಿನಿಮಾ ಮಾಡ್ತೀನಿ ಅಂತಾ ಪೋಸ್ಟರ್ ಹಂಚಿದ್ದನಂತೆ!
ನನ್ನ ಮಗನೇ ನನಗೆ ಶತ್ರುವಾಗ್ಬಿಟ್ಟ ಅಂತಾ ಈ ಉದ್ಯಮಿ ಬಂದು ಹೇಳ್ತಿರೋದು ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ ಅಲ್ವಾ? ಯಾವ್ ತಂದೆ ತಾನೇ ಹೀಗ್ ಬಂದ್ ಹೇಳ್ತಾರೆ..ಅಂದಹಾಗೇ, ನಿಮ್ಮ ಮಗ ನಿಮ್ಮ ವಿರುದ್ಧವೇ ಈ ರೀತಿ ಹನಿವ್ಯೂಹ ರಚಿಸೋದಕ್ಕೆ ಬೇರೇನಾದ್ರೂ ಕಾರಣ ಇದ್ಯಾ ಅಂತಾ ಕೇಳಿದ್ರೆ, ಸತೀಶ್ ಹೇಳೋ ಕಥೆಯೇ ಬೇರೆ..ಅವನಿಗೆ ಎಲ್ಲಾ ಮಾಡಿದ್ದೆ..ಆದ್ರೆ, ಅವನದ್ದು ಶೋಕಿ ಜಾಸ್ತಿಯಾಗೋಯ್ತು..ಅವನಿಗೆ ಐಷಾರಾಮಿ ಕಾರಲ್ಲಿ ತಿರುಗಾಡ್ಬೇಕಿತ್ತು, ಇತ್ತೀಚೆಗೆ ಕೆಜಿಎಫ್ ರೇಂಜಿಗೆ ಸಿನಿಮಾ ಮಾಡ್ತೀನಿ ಅಂತಾ ಪೋಸ್ಟರ್ ಎಲ್ಲಾ ಹಂಚಿದ್ದ, ಅದಕ್ಕೂ ಕಾಸು ಕೇಳಿದ್ದ..ಆಗಲ್ಲ ಅಂದಿದ್ದಕ್ಕೆ ಹಿಂಗ್ ಮಾಡಿದ್ದಾನೆ, ಅಂತಾ ಸತೀಶ್ ಬೇಸರ ತೋಡಿಕೊಳ್ತಾರೆ..
ಸತೀಶ್ ಪುತ್ರ ಆರೋಪಿ ಪ್ರಣಮ್
ತನ್ನ ಅಪ್ಪನ ವಿರುದ್ಧವೇ ಹನಿಟ್ರ್ಯಾಪ್ ವ್ಯೂಹ ರಚಿಸೋದಕ್ಕೆ ಒಂದು ಗ್ಯಾಂಗನ್ನೇ ಕಟ್ಟಿದ್ದನಂತೆ ಪ್ರಣಮ್..ಆ ಗ್ಯಾಂಗ್ನಲ್ಲಿದ್ದವರೆಲ್ಲಾ ಸತೀಶ್ ಜೊತೆಗೇ ಕೆಲಸ ಮಾಡಿಕೊಂಡಿದ್ದವರೇ.. ಈಶ್ವರ್, ಪ್ರೀತಮ್, ಮಹೇಶ್ ಅಲಿಯಾಸ್ ಗುಂಡ ಇವರ ಜೊತೆಗೂಡಿ ಮಹಿಳೆಯರನ್ನ ಅಪ್ಪನ ವಿರುದ್ಧ ಛೂಬಿಟ್ಟಿದ್ದನಂತೆ ಭೂಪ ಪ್ರಣಾಮ್..ಆದ್ರೆ, ಸತೀಶ್ ಮಾತ್ರ ಅವರ ಅಟೆಂಪ್ಟ್ಗೆ ನಾನು ಸಿಗಲಿಲ್ಲ, ಅವರು ಹರಿಬಿಟ್ಟಿರೋ ಆಡಿಯೋ, ವಿಡಿಯೋ ಎಲ್ಲವೂ ನಕಲಿ ಅಂತಾ ಹೇಳಿದ್ದಾರೆ. ತಮ್ಮ ಮಗ ಮಾಡಿದ ಘನಕಾರ್ಯದಿಂದ ತುಂಬಾನೇ ಕುಗ್ಗಿಹೋಗಿರೋ ಸತೀಶ್, ಈ ರೀತಿ ಮಗ ಯಾರಿಗೂ ಬೇಡ ಅಂತಾರೆ ಕಣ್ರೀ
ನಾನ್ ಮುಂದೆ ಆಸ್ತಿ ಮಾಡಿದ್ರೆ, ಅದ್ರಿಂದ ಸಮಾಜಕ್ಕೆ ಒಳ್ಳೇದಾಗೋ ಥರಾ ಏನಾದ್ರೂ ಮಾಡ್ತೀನಿ..ಇಂಥಾ ಮಗನಿಗೆ ಏನೇನೂ ಮಾಡೋದಿಲ್ಲ..ನನ್ನ ಮಗ ಅಡ್ಡದಾರಿ ಹಿಡಿದ ಅಂತಾ ಎಲ್ಲಾ ಮಕ್ಕಳು ಕೆಟ್ಟವರಾಗಲ್ಲ, ಆದ್ರೆ, ನನ್ನ ಮಗ ಮಾಡಿದಂತ ಯಾವ ಮಗನೂ ಹೀಗೆ ತಂದೆಯ ತೇಜೋವಧೆ ಮಾಡಬಾರದು ಅನ್ನೋದು ಸತೀಶ್ ಅಳಲು..ಒಟ್ಟಾರೆ, ದುಶ್ಚಟಗಳಿಗೆ ಬಲಿಯಾಗಿ ವಿರೋಧಿಗಳ ಜೊತೆ ಸೇರಿ ಆಸ್ತಿಗಾಗಿ ಜನ್ಮಕೊಟ್ಟ ತಂದೆಯನ್ನೇ ಟ್ರ್ಯಾಪ್ ಮಾಡಲು ಹೋಗಿ ಮಗನೇ ಕೊನೆಗೂ ತಾನೇ ಹಳ್ಳಕ್ಕೆ ಬಿದಿದ್ದಾನೆ. ಸತೀಶ್ ಮಗ ಪ್ರಣಾಮ್ಗೆ ಪ್ರಚೋದಿಸಿದವರು ಸೇರಿ ಎಲ್ಲರಿಗೂ ಈಗ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಣಮ್ ಜೊತೆ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಮಹೇಶ್, ಪ್ರೀತಂ, ಈಶ್ವರ್ ರನ್ನು ಮದ್ದೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಣಮ್ ಜೊತೆ ಈ ಮೂವರು ಕೂಡ ಈಗ ಜೈಲುಪಾಲಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.