/newsfirstlive-kannada/media/media_files/2025/08/07/kalburagi-nati-medicines-deaths-2025-08-07-16-24-16.jpg)
ನಾಟಿ ಔಷಧಿ ಸೇವಿಸಿ ಮೃತಪಟ್ಟ ಗಣೇಶ್, ನಾಗಯ್ಯ, ಲಕ್ಷ್ಮೀ
ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರೆದರು ಸಹ ಇಂದಿಗೂ ನಮ್ಮ ಜನ ಗ್ರಾಮೀಣ ಪ್ರದೇಶಗಳಲ್ಲಿನ ನಾಟಿ ಔಷಧಿಗಳ ಮೊರೆ ಹೋಗುತ್ತಿದ್ದಾರೆ. ಇಲ್ಲಿಯೂ ಕೂಡ ಆಗಿದ್ದು ಅದೇ. ನಿತ್ಯವೂ ಕುಡಿದು ಬಂದು ರಂಪಾಟ ಮಾಡ್ತಿದ್ದವರಿಗೆ ಕುಡಿತದ ಚಟ ಬಿಡಿಸಲು ಕುಟುಂಬಸ್ಥರು ಗ್ರಾಮವೊಂದಕ್ಕೆ ಕರೆದೊಯ್ದು ನಾಟಿ ಔಷಧಿ ಕುಡಿಸಿದ್ದಾರೆ. ಇಷ್ಟೇ ನೋಡಿ, ನಾಟಿ ಔಷಧಿ ಕುಡಿದಂತಹ ಐವರ ಪೈಕಿ, ನಾಲ್ವರು ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ನಾಲ್ವರ ಸಾವಿಗೆ ಕಾರಣವಾದ ನಾಟಿ ಔಷಧಿ ನೀಡಿದ್ದ ವ್ಯಕ್ತಿಯನ್ನ ಖಾಕಿ ಪಡೆ ಬಂಧಿಸಿದೆ.
ಕಲಬುರಗಿಯಲ್ಲಿ ನಾಟಿ ಔಷಧಿಗೆ ನಾಲ್ವರು ಬಲಿ
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಮದಾಪುರ ಗ್ರಾಮದಲ್ಲಿ ಸಾರಾಯಿ ಕುಡಿತದ ಚಟ ಬಿಡಿಸುವ ನಾಟಿ ಔಷಧಿ ಸೇವಿಸಿ ನಾಲ್ವರು ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಇಮದಾಪುರ ಗ್ರಾಮದಲ್ಲಿ ಘೋರ ದುರಂತ ನಡೆದಿದೆ. ಇಮದಾಪುರ ಗ್ರಾಮದಲ್ಲಿ ಫಕೀರಪ್ಪ ಮುತ್ಯಾ ಕಳೆದ ಐದು ವರ್ಷಗಳಿಂದ ಕುಡಿತದ ಚಟ ಬಿಡಿಸುವ ನಾಟಿ ಔಷಧಿ ನೀಡುತ್ತಿದ್ದನು. ಅದರಂತೆ ಕಳೆದ ಭಾನುವಾರ ಕೆಲವರು ನಾಟಿ ಔಷಧಿ ಪಡೆಯಲು ಬಂದಿದ್ದಾರೆ.
ಈ ವೇಳೆ ಗಿಡಮೂಲಿಕೆಗಳ ರಸ ಮೂಗಿನಲ್ಲಿ ಹಾಕಿದ್ದಾರೆ. ಬಳಿಕ ಬುಧವಾರ ಬರೋದಕ್ಕೆ ಹೇಳಿದ್ದಾರೆ. ಅದರಂತೆ ನಿನ್ನೆ ಬುಧವಾರ ಗಿಡಮೂಲಿಕೆಗಳ ಔಷಧಿಯನ್ನ ಮಡಿಕೆಯಲ್ಲಿ ಮೊಸರಿನಲ್ಲಿ ಮಿಶ್ರಣ ಮಾಡಿ ಕುಡಿಯೋಕೆ ಹೇಳಿದ್ದಾರೆ. ಅದರಂತೆ ನಾಟಿ ಔಷಧಿ ಕುಡಿದ ಶಹಾಬಾದ್ ಪಟ್ಟಣದ ಗಣೇಶ ರಾಠೋಡ್ (21) ನರಳಿ ನರಳಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಭುರಪಲ್ಲಿ ಗ್ರಾಮದ ಲಕ್ಷ್ಮೀ, ಮದಕಲ್ ಗ್ರಾಮದ ನಾಗೇಶ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಇನ್ನೂ ಭೀಮನಳ್ಳಿ ಗ್ರಾಮದ ಮನೋಹರ್ ಚೌವ್ಹಾಣ್ ತಡರಾತ್ರಿ ಮನೆಯಲ್ಲಿ ಮೃತಪಟ್ಟಿದ್ದಾನೆ. ನಿಂಗೇಶ್ ಎಂಬಾತ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ಫಕ್ಕೀರಪ್ಪ
ಗಿಡಮೂಲಿಕೆಯ ನಾಟಿ ಔಷಧಿ ಕೊಡುವ ಫಕೀರಪ್ಪ ಈ ವಿದ್ಯೆ ಕಲಿತಿದ್ದು ತನ್ನ ಅಜ್ಜ ಸಾಯಪ್ಲ ಅವರಿಂದ. ಅವರ ಸಾವಿನ ನಂತ್ರ ನಾಟಿ ಔಷಧಿ ಕೊಡುವ ಕೆಲಸ ಫಕೀರಪ್ಪ ಶುರುಮಾಡಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಹನುಮಾನ್ ದೇವಸ್ಥಾನದ ಆವರಣದಲ್ಲಿ ಕಳೆದ ಐದು ವರ್ಷಗಳಿಂದ ನಾಟಿ ಔಷಧಿ ನೀಡುತ್ತಿದ್ದನು. ಫಸ್ಟ್ ಟೈಂ ಬಂದವರು 200 ರೂಪಾಯಿ ಕೊಟ್ಟು ಟೋಕನ್ ತೆಗೆದುಕೊಳ್ಳಬೇಕಂತೆ. ಸಾರಾಯಿ ಚಟ ಬಿಡಿಸುವ ಔಷಧಿ ಹಾಕಲು 2000/- ರೂಪಾಯಿ ಶುಲ್ಕ ಇದೆಯಂತೆ. ಸದ್ಯ ಔಷಧಿ ಸೇವಿಸಿದ ಬಳಿಕ ನಾಲ್ವರು ನೆಲಕ್ಕೆ ಬಿದ್ದು ನರಳಾಡುತ್ತಿದ್ದ ವೇಳೆ ಗಣೇಶ ರಾಠೋಡ್ ಗ್ರಾಮದಲ್ಲೇ ಸಾವನ್ನಪ್ಪಿದ್ದಾನೆ. ಉಳಿದವರನ್ನ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಫಕೀರಪ್ಪ ಮುತ್ಯಾ ತಲೆಮರೆಸಿಕೊಂಡಿದ್ದ. ತೆಲಂಗಾಣದ ಗ್ರಾಮವೊಂದರಲ್ಲಿ ತನ್ನ ಸಹೋದರಿ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಫಕೀರಪ್ಪನನ್ನ ತಡರಾತ್ರಿ ಸೇಡಂ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಾಟಿ ಔಷಧಿ ನೀಡಿದ ಫಕೀರಪ್ಪ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕುತ್ತ, ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ. ನಾಟಿ ಔಷಧಿ ನೀಡಿ ನಾಲ್ವರ ಸಾವಿಗೆ ಕಾರಣವಾದ ಫಕಿರಪ್ಪನನ್ನ ಸೇಡಂ ಠಾಣೆ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅದೇನೇ ಇದ್ದರೂ ಕುಡಿತದ ಚಟ ಬಿಡಿಸುವ ನಾಟಿ ಔಷಧಿ ಕುಡಿದು ನಾಲ್ವರು ಜೀವವನ್ನೇ ಬಿಟ್ಟಿದ್ದು ಘೋರ ದುರಂತವೇ ಸರಿ.
ವಿಶೇಷ ವರದಿ: ಬಜರಂಗಿ ನ್ಯೂಸ್ ಫಸ್ಟ್ ಕಲಬುರಗಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ