/newsfirstlive-kannada/media/media_files/2026/01/17/engineering-2026-01-17-14-51-37.jpg)
ಭಾರತೀಯ ಸೇನೆಯು ಎಂಜಿನಿಯರಿಂಗ್ ಪದವೀಧರರಿಗಾಗಿ 67ನೇ ಶಾರ್ಟ್ ಸರ್ವಿಸ್ ಕಮಿಷನ್ (SSC Tech) ಕೋರ್ಸ್‌ಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 350 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತರು ಫೆಬ್ರವರಿ 5ರ ಒಳಗೆ ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನೂ ಅಪ್ಲೈ ಮಾಡೋಕೆ ಅರ್ಹತೆ ಏನು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಬಿಇ ಅಥವಾ ಬಿಟೆಕ್ ಪೂರ್ಣಗೊಳಿಸಿರಬೇಕು. ಅಕ್ಟೋಬರ್ 1, 2026ರ ಒಳಗೆ ಪದವಿ ಮುಗಿಸುವ ಅಂತಿಮ ವರ್ಷದ ವಿದ್ಯಾರ್ಥಿಗಳೂ ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದವರಿಗೆ ಒಂದು ವರ್ಷದ ಅವಧಿಯ ತರಬೇತಿಯು ಅಕ್ಟೋಬರ್ 2026 ರಿಂದ ಅಕಾಡೆಮಿಯಲ್ಲಿ ಆರಂಭವಾಗಲಿದೆ.
ಅಭ್ಯರ್ಥಿಗಳ ವಯಸ್ಸು 20 ರಿಂದ 27 ವರ್ಷಗಳ ನಡುವೆ ಇರಬೇಕು (1999ರ ಅಕ್ಟೋಬರ್ 1 ರಿಂದ 2006ರ ಸೆಪ್ಟೆಂಬರ್ 30ರ ನಡುವೆ ಜನಿಸಿದವರು). ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ನಂತರ ಎಸ್‌ಎಸ್‌ಬಿ (SSB) ಸಂದರ್ಶನದ ಮೂಲಕ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ.
ಸೇನೆಗೆ ಸೇರಬಯಸುವ ಅಭ್ಯರ್ಥಿಗಳು ಉತ್ತಮ ದೈಹಿಕ ಸಾಮರ್ಥ್ಯ ಹೊಂದಿರಬೇಕು. ಇವರು 10.30 ನಿಮಿಷಗಳಲ್ಲಿ 2.4 ಕಿ.ಮೀ ಓಟವನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದರೊಂದಿಗೆ 40 ಪುಷ್-ಅಪ್‌ಗಳು, 6 ಪುಲ್-ಅಪ್‌ಗಳು ಹಾಗೂ 30 ಸಿಟ್-ಅಪ್‌ಗಳನ್ನು ಮಾಡುವ ಸಾಮರ್ಥ್ಯವಿರಬೇಕು. ಅಲ್ಲದೆ, ಅಭ್ಯರ್ಥಿಗಳಿಗೆ ಈಜುವ ಕನಿಷ್ಠ ಜ್ಞಾನವಿರುವುದು ಅವಶ್ಯಕ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ ₹56,100 ರಷ್ಟು ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿ ಯಶಸ್ವಿಯಾಗಿ ಮುಗಿಸಿ ಅಧಿಕಾರಿಯಾಗಿ ಕರ್ತವ್ಯಕ್ಕೆ ಸೇರಿದ ನಂತರ, ಮಾಸಿಕ ವೇತನವು ₹1,77,500 ರವರೆಗೆ ಇರಲಿದೆ. ದೇಶ ಸೇವೆ ಮಾಡಲು ಮತ್ತು ಉನ್ನತ ಮಟ್ಟದ ಉದ್ಯೋಗ ಪಡೆಯಲು ಎಂಜಿನಿಯರಿಂಗ್ ಪದವೀಧರರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us