/newsfirstlive-kannada/media/media_files/2025/08/19/umesh-yadav-death-in-rajasthan-03-2025-08-19-16-12-28.jpg)
ಮೃತ ಉಮೇಶ್ ಯಾದವ್ ಹಾಗೂ ಜಿಲ್ಲಾಸ್ಪತ್ರೆ
ಭಾರತದಲ್ಲಿ ಜನಸಾಮಾನ್ಯರ ಜೀವಗಳಿಗೆ ಬೆಲೆಯೇ ಇಲ್ಲ. ರಾಜಸ್ಥಾನದಲ್ಲಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಆಧಾರ್ ಕಾರ್ಡ್ ನಂಬರ್ ನೀಡಲಿಲ್ಲ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಲ್ಲಿ ಭಾರಿ ವಿಳಂಬ ಮಾಡಿದ್ದಾರೆ. ಮೊದಲು ಚಿಕಿತ್ಸೆ ನೀಡಿ, ನಂತರ ಆಧಾರ್ ಕಾರ್ಡ್ ನಂಬರ್ ನೀಡುತ್ತೇವೆ ಎಂದು ಹೇಳಿದರೂ, ಆಸ್ಪತ್ರೆಯ ವೈದ್ಯರು ಕೇಳಿಲ್ಲ. ಅಷ್ಟರಲ್ಲಾಗಲೇ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ನಮ್ಮ ದೇಶದ ಮೆಡಿಕಲ್ ನಿರ್ಲಕ್ಷ್ಯಕ್ಕೆ ಇದೊಂದು ತಾಜಾ ಉದಾಹರಣೆ.
ರಾಜಸ್ಥಾನದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ಉಮೇಶ್ ಯಾದವ್ ಕಾರ್ ಡ್ರೈವ್ ಮಾಡುವಾಗ ಅಪಘಾತವಾಗಿದೆ. ಶಿಕ್ಷಕ ಉಮೇಶ್ ಯಾದವ್ ರನ್ನು ಸಂಬಂಧಿಕರು, ಅಲ್ವಾರ್ ಜಿಲ್ಲಾ ಕೇಂದ್ರದ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಯ ಅಪಘಾತ ವಿಭಾಗಕ್ಕೆ ತಕ್ಷಣವೇ ಸಾಗಿಸಿದ್ದಾರೆ. ಆದರೇ, ಗಾಯಾಳುವಿನ ಆಧಾರ್ ನಂಬರ್ ನೀಡಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ತಕ್ಷಣವೇ ಚಿಕಿತ್ಸೆ ನೀಡದೇ ವಿಳಂಬ ಮಾಡಿದ್ದಾರೆ.
ಅಷ್ಟರಲ್ಲೇ ಶಿಕ್ಷಕ ಉಮೇಶ್ ಯಾದವ್ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡಿದ್ದರು. ಮೊದಲು ಚಿಕಿತ್ಸೆ ನೀಡಿ, ನಂತರ ಆಧಾರ್ ಕಾರ್ಡ್ ನಂಬರ್ ನೀಡುತ್ತೇವೆ ಎಂದು ಹೇಳಿದರೂ, ಆಸ್ಪತ್ರೆ ಸಿಬ್ಬಂದಿ ಕೇಳಲಿಲ್ಲ ಎಂದು ಉಮೇಶ್ ಯಾದವ್ ಕುಟುಂಬಸ್ಥರು ಆರೋಪಿಸಿದ್ದಾರೆ.
ನಮ್ಮ ದೇಶದಲ್ಲಿ ರಸ್ತೆ ಅಪಘಾತದಲ್ಲಿ ಯಾರೇ ಗಾಯಗೊಂಡರೂ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆಯನ್ನು ಕೇಂದ್ರದ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆಯೂ ಆರಂಭಿಸಿದೆ. ಈ ಯೋಜನೆಯಡಿ ಚಿಕಿತ್ಸೆ ನೀಡಲು ಗಾಯಾಳು ವ್ಯಕ್ತಿಯ ಆಧಾರ್ ನಂಬರ್ ಬೇಕೆಂದು ಆಸ್ಪತ್ರೆ ಸಿಬ್ಬಂದಿ ಕೇಳಿದ್ದಾರೆ. ಅದನ್ನು ತಕ್ಷಣ ನೀಡಿಲ್ಲ ಎಂದು ಗಾಯಾಳು ವ್ಯಕ್ತಿಗೆ ಚಿಕಿತ್ಸೆ ನೀಡದೇ, ಆಸ್ಪತ್ರೆಯ ಸಿಬ್ಬಂದಿ ಸಾವಿಗೆ ಕಾರಣವಾಗಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂದಾಯ ಇಲಾಖೆಯ ಪರೀಕ್ಷೆಯನ್ನು ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ವಾಪಸ್ ಬರುವಾಗ ಉಮೇಶ್ ಯಾದವ್ ಡ್ರೈವ್ ಮಾಡುತ್ತಿದ್ದ ಕಾರ್ ನೌರಂಗಬಾದ್ ನಲ್ಲಿ ಅಪಘಾತಕ್ಕೀಡಾಗಿದೆ. ಉಮೇಶ್ ಯಾದವ್ ಪಡಿಸಾಲ ಗ್ರಾಮದವರು. ಮಹಾಲ್ ಚೌಕ್ ನ ಸರ್ಕಾರಿ ಗಾಂಧಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು.
ಆಸ್ಪತ್ರೆಯ ವೈದ್ಯರಿಗೆ, ಸಿಬ್ಬಂದಿಗೆ ಮೊದಲು ಚಿಕಿತ್ಸೆ ನೀಡಿ, ನಂತರ ಆಧಾರ್ ಕಾರ್ಡ್ ನಂಬರ್ ಪಡೆದು ದಾಖಲೆಯ ಔಪಚಾರಿಕತೆಯನ್ನು ಪೂರೈಸಿ ಎಂದು ಬೇಡಿಕೊಂಡರೂ ಕೇಳಲಿಲ್ಲ. ವೈದ್ಯರು, ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯ, ಅಮಾನವೀಯ ವರ್ತನೆಯಿಂದ ಉಮೇಶ್ ಯಾದವ್ ಸಾವನ್ನಪ್ಪಿದ್ದಾರೆ ಎಂದು ಮೃತ ಉಮೇಶ್ ಯಾದವ್ ಸಂಬಂಧಿಕರು ಆರೋಪಿಸಿದ್ದಾರೆ.
ಉಮೇಶ್ ಯಾದವ್ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆ ಹೊರಗೆ ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ. ಶಾಲೆಯಲ್ಲಿ ಉಮೇಶ್ ಯಾದವ್ ಕರ್ತವ್ಯಬದ್ದತೆ ಹೊಂದಿದ್ದ ಶಿಕ್ಷಕರಾಗಿದ್ದರು. ಮಗಳ ಉತ್ತಮ ಭವಿಷ್ಯಕ್ಕಾಗಿ ದುಡಿಯುತ್ತಿದ್ದರು ಎಂದು ಕುಟುಂಬಸ್ಥರು, ಸಂಬಂಧಿಕರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ