Advertisment

ಗ್ರಾ.ಪಂ. ʻಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿʼ ಆಗಿ ನಾಮಕರಣ : ವಿಬಿ ರಾಮ್‌ಜಿ ಯೋಜನೆಗೆ ಟೀಕೆೆ

ಇಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಆಗಿ ನಾಮಕರಣ ಮಾಡುವ ಘೋಷಣೆ ಮಾಡಲಾಗಿದೆ. ನರೇಗಾ ಯೋಜನೆ ಬದಲಿಸಿ ಜಾರಿಗ ತಂದಿರುವ ವಿಬಿ ರಾಮ್ ಜೀ ಯೋಜನೆಯನ್ನು ತೀವ್ರವಾಗಿ ಟೀಕಿಸಲಾಗಿದೆ.

author-image
Chandramohan
gram panchayat renamed as gandhi gram panchayat

ಗ್ರಾಪಂಗಳನ್ನು ಮಹಾತ್ಮ ಗಾಂಧೀ ಗ್ರಾಪಂ ಎಂದು ನಾಮಕರಣ

Advertisment
  • ಗ್ರಾಪಂಗಳನ್ನು ಮಹಾತ್ಮ ಗಾಂಧೀ ಗ್ರಾಪಂ ಎಂದು ನಾಮಕರಣ
  • ಜಲಜೀವನ್ ಮಿಷನ್‌ಗೆ ಹೆಚ್ಚುವರಿಯಾಗಿ 15,500 ಕೋಟಿ ರೂ. ಬಿಡುಗಡೆ
  • ಗ್ರಾಪಂಗಳಲ್ಲಿ ಸೋಲಾರ್ ಮೈಕ್ರೋ ಗ್ರಿಡ್ ಸ್ಥಾಪನೆ

ಐದನೇ ರಾಜ್ಯ ಹಣಕಾಸು ಆಯೋಗವು 2026-2030ರ ವರದಿಯನ್ನು ಸಲ್ಲಿಸಿದೆ. ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡುತ್ತಿರುವ ರಾಜ್ಯ ಸರ್ಕಾರದ ಸಾಲೇತರ ನಿವ್ವಳ ಸ್ವಂತ ರಾಜಸ್ವ ಆದಾಯದ (NLNORR) ಪ್ರಮಾಣವನ್ನು ಶೇ.48ರಿಂದ ಶೇ.50ಕ್ಕೆ ಹೆಚ್ಚಿಸಲಾಗುವುದು. ಇದರಲ್ಲಿ ಶೇ.35ರಷ್ಟನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಾಗೂ ಶೇ.15ರಷ್ಟನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು.
 ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಒಟ್ಟಾರೆ  69,488 ಕೋಟಿ ರೂ. ಮೊತ್ತದ ಕಾಮಗಾರಿಗಳು ಅನುಮೋದನೆಯಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಪಾಲು 30,888 ಕೋಟಿ ರೂ.ಗಳಾಗಿದ್ದು, ರಾಜ್ಯ ಸರ್ಕಾರದ ಪಾಲು 38,600 ಕೋಟಿ ರೂ.ಗಳಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಇದುವರೆಗೆ ಕೇವಲ 11,786 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದ್ದು, ಇನ್ನೂ 19,102 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಾಗಿರುತ್ತದೆ. 
ರಾಜ್ಯ ಸರ್ಕಾರದಿಂದ ಒದಗಿಸಬೇಕಾದ ಅನುದಾನದಲ್ಲಿ ಈಗಾಗಲೇ 27,098 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು,  11,502 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಬೇಕಾಗಿರುತ್ತದೆ. ಕೇಂದ್ರ ಸರ್ಕಾರ 2025-26ನೇ ಸಾಲಿನಲ್ಲಿ ಯಾವುದೇ ಅನುದಾನ ಬಿಡುಗಡೆ ಮಾಡದಿದ್ದರೂ ಸಹ ಈ ಯೋಜನೆಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದಿಂದ ಒಟ್ಟಾರೆ 15,500 ಕೋಟಿ ರೂ.ಗಳಷ್ಟು ಅನುದಾನವನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ.

Advertisment

 
*    ಗ್ರಾಮೀಣ ಕುಟುಂಬಗಳಿಗೆ ಜೀವನೋಪಾಯ ಭದ್ರತೆಯನ್ನು ಒದಗಿಸುವ ಮಹತ್ವಾಕಾಂಕ್ಷೆಯಿಂದ ಯು.ಪಿ.ಎ. ಸರ್ಕಾರವು 2004ರಲ್ಲಿ ಜಾರಿಗೆ ತಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು (MGNREGS) ಗ್ರಾಮೀಣ ಭಾಗದಲ್ಲಿ ವಿಕೇಂದ್ರೀಕೃತ ಯೋಜನೆಯನ್ನು ರೂಪಿಸುವುದಕ್ಕೆ ಉತ್ತೇಜನ ನೀಡುವುದರೊಂದಿಗೆ ಗ್ರಾಮೀಣ ಮೂಲಸೌಕರ್ಯ ಮತ್ತು ದೀರ್ಘಕಾಲೀನ ಬಾಳಿಕೆ ಬರುವ ಸಮುದಾಯ ಆಸ್ತಿಗಳ ಸೃಷ್ಟಿಗೆ ಮಹತ್ವದ ಕೊಡುಗೆಯನ್ನು ನೀಡಿರುತ್ತದೆ. 
ಈ ಯೋಜನೆಯಡಿ ರಾಜ್ಯದಲ್ಲಿ ಸುಮಾರು 182 ಕೋಟಿ ಮಾನವ ದಿನಗಳ ಉದ್ಯೋಗವು ಸೃಜನೆಯಾಗಿರುತ್ತದೆ. ಒಟ್ಟಾರೆ 61,000 ಕೋಟಿ ರೂ. ವೇತನ ಪಾವತಿಸಲಾಗಿದ್ದು, ಸುಮಾರು 77 ಲಕ್ಷ ಆಸ್ತಿಗಳು ನಿರ್ಮಾಣವಾಗಿರುತ್ತವೆ. ಪ್ರಸಕ್ತ ವರ್ಷದಲ್ಲೇ ಸುಮಾರು 71 ಲಕ್ಷ ಗ್ರಾಮೀಣ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದಿರುತ್ತವೆ.
*    ಇದೀಗ ಕೇಂದ್ರ ಸರ್ಕಾರವು ಈ ಯೋಜನೆಯನ್ನು ರದ್ದುಗೊಳಿಸಿ VB-G-RAM-G ಯೋಜನೆಯನ್ನು ಜಾರಿಗೆ ತಂದಿದ್ದು, ಇದು ನರೇಗಾ ಯೋಜನೆಯ ಮೂಲೋದ್ದೇಶವಾದ ಹಕ್ಕು ಆಧಾರಿತ (Rights-based) ದೃಷ್ಟಿಕೋನವನ್ನು ದುರ್ಬಲಗೊಳಿಸುವ ಕ್ರಮವಾಗಿದೆ ಹಾಗೂ ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆಗೆ ವಿರುದ್ಧವಾಗಿರುತ್ತದೆ.

*    ಈ ಯೋಜನೆಯ ಜಾರಿಯಿಂದ ಈ ಕೆಳಗಿನ ಅನಾಹುತಗಳು ಸೃಷ್ಟಿಯಾಗಿರುತ್ತವೆ: 
•    ಬೇಡಿಕೆ ಆಧಾರಿತ ಉದ್ಯೋಗ ಖಾತರಿಯಿಂದ ದೂರ ಸರಿದು ಕೇಂದ್ರದಿಂದ ನಿರ್ಧರಿಸಲ್ಪಡುವ ಉದ್ಯೋಗ ಹಂಚಿಕೆ ವ್ಯವಸ್ಥೆಗೆ ಅವಕಾಶವಾಗುವುದು.
•    ಸಂವಿಧಾನದ 73ನೇ ತಿದ್ದುಪಡಿಯ ಮೂಲ ತತ್ವಕ್ಕೆ ವಿರುದ್ಧವಾಗಿದ್ದು, ಪಂಚಾಯಿತಿಗಳ ನಿರ್ಧರಣಾಧಿಕಾರಕ್ಕೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. 
•    ಯೋಜನೆಯ ರೂಪಿಸುವಿಕೆ ಮತ್ತು ಅನುಷ್ಠಾನಗಳ ಕೇಂದ್ರೀಕರಣ ಹೆಚ್ಚಳವಾಗುವುದು.
•    ಪರೋಕ್ಷವಾಗಿ ಗುತ್ತಿಗೆದಾರರ ಭಾಗವಹಿಸುವಿಕೆಗೆ ಅವಕಾಶ ನೀಡುವ ವ್ಯವಸ್ಥೆಯಿಂದಾಗಿ ಗ್ರಾಮೀಣ ಕಾರ್ಮಿಕರಿಗೆ ನೇರ ಉದ್ಯೋಗ ಅವಕಾಶಗಳು ಕಡಿಮೆಯಾಗುವವು.
•    ಕೇಂದ್ರದಿಂದ ಹೇರಲ್ಪಡುವ ಆಡಳಿತಾತ್ಮಕ ಮತ್ತು ನಿಯಾಮಕ ನಿಯಂತ್ರಣಗಳಿಂದ ಕಾಮಗಾರಿಗಳ ಸಮಯೋಚಿತ ಜಾರಿಗೆ ಅಡಚಣೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

 *   ಗ್ರಾಮ ಪಂಚಾಯಿತಿಗಳನ್ನು ಸಬಲಗೊಳಿಸಿ ಗ್ರಾಮೀಣ ಜೀವನೋಪಾಯವನ್ನು ಬಲಪಡಿಸಿದ್ದ ಹಿಂದಿನ ವ್ಯವಸ್ಥೆಯನ್ನು ಪುನಃಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ನಮ್ಮ ಸರ್ಕಾರವು ತೀವ್ರವಾಗಿ ಆಗ್ರಹಿಸುತ್ತದೆ. ಗ್ರಾಮೀಣ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಹಾಗೂ ವಿಕೇಂದ್ರೀಕೃತ ಆಡಳಿತದ ತತ್ವಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು, ಅಗತ್ಯವಿದ್ದಲ್ಲಿ ಕಾನೂನು ಹೋರಾಟವನ್ನೂ ಸಹ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ.
*    ಕಲ್ಯಾಣ ಕರ್ನಾಟಕದ ರಸ್ತೆ ಅಭಿವೃದ್ಧಿಗಾಗಿ ʻಕಲ್ಯಾಣ ಪಥʼ ಯೋಜನೆಯಡಿ 1,000 ಕೋಟಿ ರೂ.ಗಳ ವೆಚ್ಚದಲ್ಲಿ 1,125 ಕಿ.ಮೀ ಉದ್ದದ ರಸ್ತೆ ಕಾಮಗಾರಿಗಳನ್ನು ತೆಗೆದುಕೊಂಡಿದ್ದು, ವಿವಿಧ ಹಂತದ ಪ್ರಗತಿಯಲ್ಲಿರುತ್ತವೆ. ಇದುವರೆಗೆ ಈ ಉದ್ದೇಶಕ್ಕಾಗಿ 238 ಕೋಟಿ ರೂ.ಗಳ ವೆಚ್ಚ ಭರಿಸಿದ್ದು, ಉಳಿಕೆ ಕಾಮಗಾರಿಗಳನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು.
*   ADB ನೆರವಿನೊಂದಿಗೆ ಗ್ರಾಮೀಣ ರಸ್ತೆ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ಮತ್ತು ಗುಣಾತ್ಮಕವಾಗಿ ಅಭಿವೃದ್ಧಿಪಡಿಸುವ ʻಪ್ರಗತಿ ಪಥʼ ಯೋಜನೆಯಡಿ 7,110 ಕಿ.ಮೀ. ಉದ್ದದ 1,೨92 ರಸ್ತೆಗಳ ಅಭಿವೃದ್ಧಿಯನ್ನು 5,190 ಕೋಟಿ ರೂ.ಗಳ ವೆಚ್ಚದಲ್ಲಿ ಅನುಮೋದಿಸಲಾಗಿದೆ. ಇದರಲ್ಲಿ 783 ರಸ್ತೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, 655 ರಸ್ತೆಗಳ ಡಿ.ಪಿ.ಆರ್.ಗಳನ್ನು ತಯಾರಿಸಲಾಗಿದೆ. ಇದಕ್ಕಾಗಿ 2026-27ನೇ ಸಾಲಿನಲ್ಲಿ 500 ಕೋಟಿ ರೂ.ಗಳನ್ನು ಒದಗಿಸಲಾಗಿರುತ್ತದೆ.
*    ಕುಡಿಯುವ ನೀರಿನ ಮೇಲ್ಮಟ್ಟ ಜಲಾಗಾರಗಳ (OHT) ದೀರ್ಘಕಾಲಿಕ ಕಾರ್ಯಕ್ಷಮತೆಯನ್ನು ಖಚಿತಪಡಿಸುವ ಉದ್ದೇಶದಿಂದ 1,000 ಮೇಲ್ಮಟ್ಟ ಜಲಾಗಾರಗಳ ಸ್ವಚ್ಛತೆ, ಸುರಕ್ಷತೆ, ದುರಸ್ಥಿ ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಗಳ ಸುಧಾರಣೆ ಮತ್ತು ಪುನಃಶ್ಚೇತನ ಕಾರ್ಯವನ್ನು ಒಟ್ಟಾರೆ 30 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
*    ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ ಹಾಗೂ 23 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು 125 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
* ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ʻಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿʼ ಎಂದು ನಾಮಕರಣ ಮಾಡಲಾಗುವುದು.
*  ಗ್ರಾಮ ಪಂಚಾಯಿತಿಗಳ ಆಸ್ತಿಗಳ ನಗದೀಕರಣ ಮತ್ತು ಮೌಲ್ಯವರ್ಧನೆಗೆ ಸ್ಥಳೀಯ ಆರ್ಥಿಕ ಬಲವರ್ಧನೆ ಕಾರ್ಯಕ್ರಮವನ್ನು (Local Economy Accelerator Program) ಆರಂಭಿಸಲಾಗುವುದು. ಈ ಯೋಜನೆಯಡಿ ಪ್ರಾಯೋಗಿಕವಾಗಿ ಪ್ರತಿ ವಿಭಾಗದ ಐದು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದಲ್ಲಿ ಅವಶ್ಯವಿರುವ ಸೌಲಭ್ಯಗಳನ್ನು ಒಳಗೊಂಡ ಆದಾಯೋತ್ಪನ್ನ ಘಟಕಗಳನ್ನು ಪ್ರಸಕ್ತ ವರ್ಷ 25 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಿ ನಿರ್ವಹಿಸಲಾಗುವುದು.
*  ವಿದ್ಯುಚ್ಛಕ್ತಿ ಬಿಲ್ಲುಗಳ ಪಾವತಿಯಲ್ಲಿ ಗ್ರಾಮ ಪಂಚಾಯಿತಿಗಳನ್ನು ಸ್ವಯಂ ಸುಸ್ಥಿರಗೊಳಿಸಲು (Self-Sustainable) ಹಾಗೂ ಅವಶ್ಯವಿರುವ ವಾರ್ಷಿಕ ಅಂದಾಜು 4,000 MW ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ Solar Micro Grid ಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವ ʻಅನಂತʼ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

Advertisment

gram panchayat renamed as gandhi gram panchayat (1)




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

fund allocation to Rural development and panchayat raj
Advertisment
Advertisment
Advertisment