/newsfirstlive-kannada/media/media_files/2025/08/01/china-bejing-rain-affect-city-2025-08-01-14-41-31.jpg)
ಭಾರತದ ನೆರೆಯ ರಾಷ್ಟ್ರ ಚೀನಾದ ರಾಜಧಾನಿ ಬೀಜಿಂಗ್ ಭಾರಿ ಮಳೆಗೆ ತತ್ತರಿಸಿ ಹೋಗಿದೆ. ಬೀಜಿಂಗ್ ನಲ್ಲಿ ಮಳೆಯ ಅನಾಹುತಗಳಿಂದ 44 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 9 ಮಂದಿ ನಾಪತ್ತೆಯಾಗಿದ್ದಾರೆ. ಮೃತಪಟ್ಟವರ ಪೈಕಿ 31 ಮಂದಿ ಮಿಯೂನ್ ಜಿಲ್ಲೆ ಸೀನಿಯರ್ ಸಿಟಿಜರ್ ಕೇರ್ ಸೆಂಟರ್ ನಲ್ಲಿ ಮೃತಪಟ್ಟಿದ್ದಾರೆ. ನಾಪತ್ತೆಯಾದವರ ಪೈಕಿ ನಾಲ್ವರು ಗ್ರಾಮಗಳ ಪಾರ್ಟಿ ಸೆಕ್ರೆಟೇರಿಗಳು . ಈ ಪಾರ್ಟಿ ಸೆಕ್ರೆಟೇರಿಗಳೇ ಚೀನಾದಲ್ಲಿ ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.
ಬೀಜಿಂಗ್ ನಲ್ಲಿ ಪ್ರವಾಹದಿಂದ 3 ಲಕ್ಷ ನಾಗರಿಕರಿಗೆ ತೊಂದರೆಯಾಗಿದೆ. 24 ಸಾವಿರ ಮನೆಗಳಿಗೆ ಡ್ಯಾಮೇಜ್ ಆಗಿದೆ. ಬೀಜಿಂಗ್‌ನ ಉತ್ತರ ಭಾಗದಲ್ಲಿ ಭಾರಿ ಮಳೆಯಿಂದ 40 ಟೌನ್ ಷಿಪ್ ಗಳು ಮತ್ತು 312 ಆಡಳಿತಾತ್ಮಕ ಗ್ರಾಮಗಳ ಮೂಲಸೌಕರ್ಯಕ್ಕೆ ಭಾರಿ ಪ್ರಮಾಣದಲ್ಲಿ ಡ್ಯಾಮೇಜ್ ಆಗಿದೆ ಎಂದು ಕ್ಸಿನ್ಯೂಹಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಚೀನಾದ ರಾಜಧಾನಿ ಬೀಜಿಂಗ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಿರಂತರ ಮಳೆಯಿಂದ ಧೀಡೀರ್ ಪ್ರವಾಹದ ಸ್ಥಿತಿ ಸೃಷ್ಟಿಯಾಗಿದೆ. ನದಿಗಳಲ್ಲೂ ನೀರು ಉಕ್ಕಿ ಹರಿಯುತ್ತಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.
ಮಿಯೂನ್ ಜಲಾಶಯದ ಬಳಿ ಕಾರ್ಯಾಚರಣೆಗೆ ಮಳೆಯಿಂದ ಭಾರಿ ತೊಂದರೆಯಾಗಿದೆ. ಮಿಯೂನ್ ಜಲಾಶಯವು ಬೀಜಿಂಗ್‌ನ ಅತಿ ದೊಡ್ಡ ಜಲಾಶಯ.
ಮಿಯೂನ್ ಜಲಾಶಯಕ್ಕೆ ಕೇವಲ ಏಳೇ ದಿನದಲ್ಲಿ 910 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಹರಿದು ಬಂದಿದೆ ಎಂದು ಬೀಜಿಂಗ್ ಮುನ್ಸಿಪಾಲಿಟಿ ನೀರು ವ್ಯವಹಾರಗಳ ಬ್ಯೂರೋದ ಮುಖ್ಯಸ್ಥ ಲಿಯೂ ಬಿನ್ ಹೇಳಿದ್ದಾರೆ. 1974 ರಲ್ಲಿ ಇದೇ ಜಲಾಶಯಕ್ಕೆ 710 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಹರಿದು ಬಂದಿತ್ತು. ಗುರುವಾರ ಡ್ಯಾಂ ನೀರಿನ ಮಟ್ಟ 155 ಮೀಟರ್ ಗೆ ಕುಸಿದಿತ್ತು. ಆದರೂ ಜಲಾಶಯ ಸಂಪೂರ್ಣ ಸುರಕ್ಷಿತ, ಸ್ಥಿರವಾದ ಸ್ಥಿತಿಯಲ್ಲಿದೆ ಎಂದು ಲಿಯೂ ಬಿನ್ ಹೇಳಿದ್ದಾರೆ. ಜುಲೈ 23 ರಿಂದ 29 ರವರೆಗೆ ಬೀಜಿಂಗ್ ನಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ. ಬೆಟ್ಟಗುಡ್ಡಗಳ ಜಿಲ್ಲೆಗಳಾದ ಮಿಯೂನ್, ಹುಐರೂ, ಯಾಂಕಿಂಗ್, ಪಿಂಗೂ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಿದೆ.
ಬೀಜಿಂಗ್ ನಲ್ಲಿ ಅಧಿಕಾರಿಗಳು ಜನರಿಗೆ ಎಮರ್ಜೆನ್ಸಿ ರೆಸ್ಪಾನ್ಸ್ ಪ್ರವಾಹದ ಲೆವೆಲ್ 1 ಅನ್ನು ಫಾಲೋ ಮಾಡುವಂತೆ ಸೂಚಿಸಿದ್ದಾರೆ. ಜನರಿಗೆ ಎಚ್ಚರಿಕೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಲಾಗಿದೆ. ಜನರ ರಕ್ಷಣೆ ಮತ್ತು ಸ್ಥಳಾಂತರ ಮಾಡುವ ಕಾರ್ಯಾಚರಣೆ ಕೂಡ ನಡೆಯುತ್ತಿದೆ. ಇದುವರೆಗೂ 1 ಲಕ್ಷದ 4 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ. ಸಂಕಷ್ಟಕ್ಕೆ ಸಿಲುಕಿದ್ದ 5,400 ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡವರಿಗೂ ಸಹಾಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗ್ರಾಮೀಣಾ ಭಾಗದಲ್ಲಿ 424 ಹಾಳಾಗಿದ್ದ ರಸ್ತೆಗಳ ಪೈಕಿ 364 ರಸ್ತೆಗಳಲ್ಲಿ ಜನರು, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗ್ರಾಮಗಳಲ್ಲೂ ತುರ್ತಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಕಡಿತವಾಗಿದ್ದ 213 ಗ್ರಾಮಗಳ ಪೈಕಿ 105 ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಮತ್ತೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ