/newsfirstlive-kannada/media/media_files/2025/08/18/mumubai-heavy-rain-2025-08-18-11-58-00.jpg)
ಮುಂಬೈನಲ್ಲಿ ಇಂದು ಭಾರಿ ಮಳೆಯಿಂದ ರಸ್ತೆಗಳು ಜಲಾವೃತ್ತ
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇಂದು ಬೆಳಿಗ್ಗೆಯಿಂದ ಭಾರಿ ಪ್ರಮಾಣದ ಮಳೆಯಾಗಿದೆ. ಮುಂಬೈನ ತಗ್ಗು ಪ್ರದೇಶಗಳೆಲ್ಲಾ ಜಲಾವೃತ್ತವಾಗಿವೆ. ಮಳೆ ಬಂದಾಗಲೆಲ್ಲಾ ಮುಳುಗಡೆಯಾಗುವ ಅಂಧೇರಿ ಸಬ್ ವೇ ಇವತ್ತು ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ಅಂಧೇರಿ ಸಬ್ ವೇ ಅನ್ನು ವಾಹನ ಸಂಚಾರಕ್ಕೆ ಬಂದ್ ಮಾಡಲಾಗಿದೆ. ಮುಂಬೈನಲ್ಲಿ ವಾರದ ಮೊದಲ ದಿನವೇ ಟ್ರಾಫಿಕ್ ಜಾಮ್ ಆಗಿದೆ. ಮುಂಬೈಗೆ ಇಂದು ಭಾರತೀಯ ಹವಾಮಾನ ಇಲಾಖೆಯು ಆರೇಂಜ್ ಆಲರ್ಟ್ ನೀಡಿದೆ.
ಮಹಾರಾಷ್ಟ್ರದಲ್ಲಿ ಮುಂಬೈ ಮಾತ್ರವಲ್ಲದೇ, ರಾಯಗಢ, ರತ್ನಗಿರಿ, ಸತಾರಾ, ಕೊಲ್ಲಾಪುರ, ಪುಣೆ ಸೇರಿದಂತೆ ಅನೇಕ ಜಿಲ್ಲೆಗಳಿಗೆ ರೆಡ್ ಆಲರ್ಟ್ ನೀಡಲಾಗಿದೆ.
ಮುಂಬೈನಲ್ಲಿ ಭಾನುವಾರವಾದ ನಿನ್ನೆಯೂ(ಆಗಸ್ಟ್ 17) ಭಾರಿ ಮಳೆಯಾಗಿದೆ. ಬಿಎಂಸಿ ಮಾಹಿತಿ ಪ್ರಕಾರ, ಮುಂಬೈನಲ್ಲಿ ಭಾರಿ ಮಳೆಯಿಂದ ಆರು ಕಡೆಗಳಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. 19 ಮರದ ಕೊಂಬೆಗಳು ವಿವಿಧೆಡೆ ಮುರಿದು ಬಿದ್ದಿವೆ. ಎರಡು ಕಡೆ ಗೋಡೆ ಕುಸಿದು ಬಿದ್ದಿವೆ. ಆದರೇ, ಈ ಎಲ್ಲ ಘಟನೆಗಳಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಮುಂಬೈನಲ್ಲಿ ಕಳೆದ ಶನಿವಾರದಿಂದ( ಆಗಸ್ಟ್ 16) ಭಾರಿ ಮಳೆಯಾಗುತ್ತಿದೆ. ಶನಿವಾರ ಭಾರಿ ಮಳೆಯಿಂದ ವಿಕ್ರೋಲಿ ಪ್ರದೇಶದಲ್ಲಿ ಮಳೆ ಅನಾಹುತಗಳಿಂದ ಇಬ್ಬರು ಸಾವನ್ನಪ್ಪಿದ್ದರು.
ಮುಂಬೈನ ಕೆಲವು ಪ್ರದೇಶಗಳಲ್ಲಿ ಇಂದು ಮುಂಜಾನೆಯಿಂದ 200 ಮಿಲಿಮೀಟರ್ ನಷ್ಟು ಭಾರಿ ಮಳೆಯಾಗಿದೆ. ಮುಂಬೈನಲ್ಲಿ ಇಂದು ಬೆಳಿಗ್ಗೆ 9 ರಿಂದ 10 ಗಂಟೆ ಅವಧಿಯಲ್ಲಿ ಸರಾಸರಿ 39 ಮಿಲಿಮೀಟರ್ ನಷ್ಟು ಮಳೆಯಾಗಿದೆ. ಮುಂಬೈನ ವೆಸ್ಟರ್ನ್ ಎಕ್ಸ್ ಪ್ರೆಸ್ ವೇ ನಲ್ಲೂ ಭಾರಿ ಟ್ರಾಫಿಕ್ ಜಾಮ್ ಆಗಿದೆ.
ಮುಂಬೈನಲ್ಲಿ ಇಂದು ಭಾರಿ ಮಳೆಯಾಗುತ್ತಿರುವುದರಿಂದ ಶಾಲಾ ಕಾಲೇಜುಗಳಿಗೆ ಬೃಹನ್ ಮುಂಬೈ ಕಾರ್ಪೋರೇಷನ್ ರಜೆ ಘೋಷಿಸಿದೆ.
ಮಹಾರಾಷ್ಟ್ರದ ಪಾಲ್ಗಾರ್, ಸಿಂಧುದುರ್ಗ ಜಿಲ್ಲೆಗಳಿಗೆ ಮುಂದಿನ ಮೂರು ನಾಲ್ಕು ಗಂಟೆಗಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.