ದಸರಾ ಉದ್ಘಾಟಕರಾಗಿ ಭಾನು ಮುಷ್ತಾಕ್ ಗೆ ಆಹ್ವಾನ ಪ್ರಶ್ನಿಸಿದ್ದ ಮೂರು ಅರ್ಜಿ ವಜಾ- ಹೈಕೋರ್ಟ್: ಪ್ರತಾಪ್‌, ಸಿಂಹ, ಬಿಜೆಪಿಗೆ ಹಿನ್ನಡೆ

ಈ ಭಾರಿಯ ಮೈಸೂರು ದಸರಾ ಉದ್ಘಾಟಕರಾಗಿ ರಾಜ್ಯ ಸರ್ಕಾರ ಲೇಖಕಿ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿದೆ. ಇದನ್ನು ಪ್ರಶ್ನಿಸಿ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿಗಳನ್ನ ಹೈಕೋರ್ಟ್ ವಜಾಗೊಳಿಸಿದೆ.

author-image
Chandramohan
Banu Mushtaq and pratap shimah

ಲೇಖಕಿ ಭಾನು ಮುಷ್ತಾಕ್ ಮತ್ತು ಪ್ರತಾಪ್ ಸಿಂಹ

Advertisment


ಲೇಖಕಿ ಭಾನು ಮುಷ್ತಾಕ್ ರನ್ನು ಈ ಭಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದನ್ನು ಪ್ರಶ್ನಿಸಿ  ಸಲ್ಲಿಸಲಾಗಿದ್ದ ಮೂರು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ . ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಮೂರು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. 

ಲೇಖಕಿ ಬಾನು ಮುಷ್ತಾಕ್‌ರನ್ನು ದಸರಾಗೆ ಸರ್ಕಾರ ಆಹ್ವಾನಿಸಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಿಚಾರಣೆ  ನಡೆಸಿದೆ. 

ಅರ್ಜಿದಾರರ ಪರ ವಕೀಲರು ವಾದ ಮಂಡನೆ ಮಾಡಿದ್ದರು.  ಲೇಖಕಿ ಭಾನು ಮುಷ್ತಾಕ್  ಕನ್ನಡ ಮತ್ತು ಹಿಂದೂ ವಿರುದ್ಧವಾಗಿ ಮಾತನಾಡಿದ್ದಾರೆ. ಜನ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ತಾಯಿ ಭುವನೇಶ್ವರಿ ಬಗ್ಗೆ  ಮಾತನಾಡಿದ್ದರ  ಮಾಹಿತಿಯನ್ನು ಅರ್ಜಿದಾರ ಪ್ರತಾಪ್ ಸಿಂಹ ಪರ ವಕೀಲರು ಹೈಕೋರ್ಟ್ ಗೆ ನೀಡಿದ್ದರು.  ಭುವನೇಶ್ವರಿ ಹಿಂದೂ ದೇವರು, ಅಲ್ಲದೇ ಕುಂಕುಮದ ಬಗ್ಗೆ ಮಾತನಾಡಿದ್ದಾರೆ‌. ಭಾನು ಮುಷ್ತಾಕ್  ಅವರ ಇಸ್ಲಾಂ ಧರ್ಮದಲ್ಲಿ ಈ ಅವಕಾಶ ಇಲ್ಲ. ಭಾನು ಮುಷ್ತಾಕ್   ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದು ಸರಿಯಲ್ಲ.  ಹಿಂದೂ ವಿರೋಧಿ, ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ವಕೀಲ ಸುದರ್ಶನ್ ಹೈಕೋರ್ಟ್ ನಲ್ಲಿ ವಾದಿಸಿದ್ದರು.

ವಾಕ್ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಮಾಡಲು ಹೇಗೆ ಸಾಧ್ಯ?  ಎಂದು ಹೈಕೋರ್ಟ್  ಜಡ್ಜ್, ಪ್ರತಾಪ್ ಸಿಂಹ ಪರ ವಕೀಲರನ್ನು ಪ್ರಶ್ನಿಸಿತು.

ಆಗ ಅರ್ಜಿದಾರರ ಪರ ವಕೀಲ ಸುದರ್ಶನ್,  ಇದು ಹಿಂದೂ ಧರ್ಮದ ಆಚರಣೆ ಎಂದು ಹೇಳಿದ್ದರು.  ಈ ದೇಶದಲ್ಲಿ ಯಾರೂ ಕೂಡ ತಮ್ಮ ಹೇಳಿಕೆ ನೀಡಬಾರದು ಎಂದಿದೆಯೇ? ಎಂದು ಜಡ್ಜ್ ಪ್ರಶ್ನೆ ಕೇಳಿದ್ದರು. ಅದಕ್ಕೆ ನಾವು ಹಾಗೆ ಹೇಳುತ್ತಿಲ್ಲ ಎಂದು ವಕೀಲ ಸುದರ್ಶನ್ ವಾದಿಸಿದ್ದರು.  
ಭಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಲು ನಿಮಗೆ ಸಂವಿಧಾನಿಕ ಹಕ್ಕು ಏನಿದೆ ಎಂದು ಹೈಕೋರ್ಟ್ ಪೀಠ, ಪ್ರತಾಪ್ ಸಿಂಹ ಪರ ವಕೀಲರನ್ನು ಪ್ರಶ್ನಿಸಿತು. 
ಉದ್ಘಾಟನೆಗೆ ಬಂದವರು ಹೂವಿನ ಅಭಿಷೇಕ ಮಾಡಬೇಕು. ದಸರಾ ಉದ್ಘಾಟನೆಯಲ್ಲಿ ಸಾಕಷ್ಟು ಧಾರ್ಮಿಕ ಕೆಲಸ ಇವೆ ಎಂದು  ಅರ್ಜಿದಾರರ ಪರ ವಕೀಲರು ವಾದಿಸಿದ್ದರು.  ನಿಮ್ಮ ಅಭಿಪ್ರಾಯವನ್ನು ಕೂಡ ಸೂಕ್ತ ವೇದಿಕೆಯಲ್ಲಿ ಹೇಳಬಹುದು. ಆದರೆ  ಸಂವಿಧಾನ ನೀಡಿರುವ ಯಾವ ಹಕ್ಕು ಉಲ್ಲಂಘನೆಯಾಗಿದೆ ಹೇಳಿ ಎಂದು  ಹೈಕೋರ್ಟ್  ಸಿಜೆ, ಅರ್ಜಿದಾರರ ಪರ ವಕೀಲ ಸುದರ್ಶನ್ ಅವರನ್ನು ಪ್ರಶ್ನಿಸಿತು. 
ಇದು ಹಿಂದೂ ಧರ್ಮದ ಹಬ್ಬ, ಇದಕ್ಕೆ ಸಾಕಷ್ಟು ನ್ಯಾಯಾಲಯದ ತೀರ್ಪುಗಳು ಇದ್ದಾವೆ ಎಂದು ವಕೀಲ ಸುದರ್ಶನ್ ಹೈಕೋರ್ಟ್ ನ ಕೆಲ ತೀರ್ಪುಗಳನ್ನು ಉಲ್ಲೇಖಿಸಿ ವಾದಿಸಿದ್ದರು. ಭಾನು ಮುಷ್ತಾಕ್ ಅವರಿಗೆ ಅರಿಶಿನ ಕುಂಕುಮದ ಮೇಲೆ ನಂಬಿಕೆ ಇಲ್ಲ. ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ಇದು ಜಾತ್ಯಾತೀತ ಹಬ್ಬವಲ್ಲ ಎಂದು  ವಕೀಲ ಸುದರ್ಶನ್ ವಾದಿಸಿದ್ದರು. 
ಆದರೇ, ಹೈಕೋರ್ಟ್ ನ ಸಿಜೆ ಅವರ ನೇತೃತ್ವದ ಪೀಠವು ಮೈಸೂರು ದಸರಾ ಜಾತ್ಯಾತೀತ ಹಬ್ಬ ಎಂದು ಹೇಳಿತು
ಮತ್ತೋರ್ವ ಅರ್ಜಿದಾರರ ಪರ ವಕೀಲ ರಂಗನಾಥ್ ಕೂಡ ಹೈಕೋರ್ಟ್ ಸಿಜೆ ಪೀಠದಲ್ಲಿ ಇದೇ ಕೇಸ್ ಗೆ ಬಗ್ಗೆ ವಾದ ಮಂಡನೆ ಮಾಡಿದ್ದರು. 
ಇಲ್ಲಿ ಬೇರೊಂದು ಧರ್ಮದ ವ್ಯಕ್ತಿ ದಸರಾ ಉದ್ಘಾಟನೆ ಮಾಡಬಹುದೇ ಅನ್ನೋದು ಪ್ರಶ್ನೆ‌ ಆಗಿದೆ . ಹಿಂದೂ ದೇವರ ಪೂಜೆಯನ್ನ ಆಗಮ ಶಾಸ್ತ್ರದಿಂದ ಪ್ರತ್ಯೇಕಿಸಲಾಗದು. ಹಿಂದೂವಲ್ಲದ ವ್ಯಕ್ತಿ ಉದ್ಘಾಟನೆ ಮಾಡಬಹುದಾ ಅನ್ನೋದು ಪ್ರಶ್ನೆ ಎಂದು ವಕೀಲ ರಂಗನಾಥ್ ಪ್ರಶ್ನಿಸಿದ್ದರು. 
ಆ ಪ್ರಶ್ನೆ ಇಲ್ಲಿ ಬರೋದಿಲ್ಲ ಎಂದು ಹೈಕೋರ್ಟ್  ಪೀಠ ಹೇಳಿತು. 
ನಂಬಿಕೆ ಇಲ್ಲದವರು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಬಾರದು ಎಂದು ದೇವಸ್ಥಾನ ಅಥವಾ ಟ್ರಸ್ಟ್ ನವರು ಯಾರೂ ನಮ್ಮ ಮುಂದೆ ಬಂದಿಲ್ಲ ಎಂದು ಹೈಕೋರ್ಟ್  ಪೀಠ ಹೇಳಿತು. 
 ಹಿಂದೂ ದೇವರ ಮೇಲೆ ನಂಬಿಕೆ‌ ಇದೆ ಅಂತಾ ಭಾನು ಮುಷ್ತಾಕ್ ಹೇಳಲಿ. ಆಗ ನಾವು ಅದನ್ನ ಪ್ರಶ್ನೆ ಮಾಡಲ್ಲ ಎಂದು  ವಕೀಲ ರಂಗನಾಥ್ ವಾದಿಸಿದ್ದರು. ಕೆಲ ಪ್ರಕರಣಗಳ ಬಗ್ಗೆ ಉಲ್ಲೇಖಿಸಿ ವಾದ ಮಂಡನೆಯನ್ನು ವಕೀಲ ರಂಗನಾಥ್ ಮಾಡಿದ್ದರು. 
ಇನ್ನೂ  ರಾಜ್ಯ  ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದ್ದರು.  ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೊದಲು ಅರ್ಜಿ ಹಾಕಿದ್ದಾರೆ. ಸರ್ಕಾರದ ಆಹ್ವಾನ ಪ್ರಶ್ನೆ ಮಾಡಿ ಅರ್ಜಿ ಹಾಕಿದ್ದಾರೆ. ಮುಸ್ಲಿಂ ವ್ಯಕ್ತಿಯನ್ನ ಕರೆಯ ಬಾರದು ಅಂತಾ ಹೇಳ್ತಿದ್ದಾರೆ. ಅವರೇ ಸಂಸದರಾಗಿದ್ದಾಗ ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ರು. ಈ ವಿಚಾರವನ್ನ ಬಹಿರಂಗಪಡಿಸಿರಲಿಲ್ಲ. ಈಗ ಅರ್ಜಿ ಹಾಕಿದ್ದಕ್ಕೆ ಪ್ರತಾಪ್ ಸಿಂಹರಿಗೆ ದಂಡ ವಿಧಿಸಬೇಕು. ಆದ್ರೆ ಮುಸ್ಲಿಂ ವ್ಯಕ್ತಿಯನ್ನ ಕಾರ್ಯಕ್ರಮಕ್ಕೆ ಕರೆಯುತ್ತಿರೋದು ಇದು ಮೊದಲೇನಲ್ಲ. ಇಲ್ಲಿ ಕಾರ್ಯಕ್ರಮದ ಉದ್ಘಾಟನೆಗೆ ಅಷ್ಟೇ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಲಾಗಿದೆ. ಆದ್ರೆ ಧರ್ಮಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಅವರನ್ನ ಆಹ್ವಾನ ಮಾಡಿಲ್ಲ. ಭಾನು ಮುಷ್ತಾಕ್ ಅವರು ಬೂಕರ್ ಪ್ರಶಸ್ತಿ ಪುರಸ್ಕೃತರು. ಹೀಗಾಗಿ ಅವರನ್ನು ಆಹ್ವಾನ ಮಾಡಲಾಗಿದೆ.‌ ಈ ಮುಂಚೆ ಲೇಖಕರಾದ ನಿಸಾರ್  ಅಹಮದ್‌ ರನ್ನ ಆಹ್ವಾನ ಮಾಡಲಾಗಿತ್ತು. ಈಗ ಭಾನು ಮುಷ್ತಾಕ್ ರನ್ನ ಆಹ್ವಾನ ಮಾಡಲಾಗಿದೆ. ದಸರಾ ಕಮಿಟಿ, ಅಧಿಕಾರಿಗಳ ಜೊತೆ ನಿರ್ಧಾರ ಮಾಡಿಯೇ ಆಹ್ವಾನ ಮಾಡಲಾಗಿದೆ. ಆದ್ರೆ ಈ ಭಾರಿ ಮಾತ್ರ ಹಿಂದೂ ಮುಸ್ಲಿಂ ಅಂತಾ ವಿಚಾರ ಚರ್ಚೆ ಮಾಡ್ತಿದ್ದಾರೆ. ಇದು ಸಮಾಜಕ್ಕೆ ಬೇರೆ ರೀತಿ ಮೆಸೇಜ್ ಹೋಗ್ತಿದೆ ಎಂದು ರಾಜ್ಯ  ಸರ್ಕಾರದ ಪರ ಎ.ಜಿ. ಶಶಿಕಿರಣ್ ಶೆಟ್ಟಿ ವಾದಿಸಿದ್ದರು. ಕೆಲ ಫೋಟೋಗಳನ್ನು ಹೈಕೋರ್ಟ್ ಗೆ  ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸಲ್ಲಿಸಿದ್ದರು. 
ವಾದ- ಪ್ರತಿವಾದ ಆಲಿಸಿದ ಬಳಿಕ ಹೈಕೋರ್ಟ್ ಸಿಜೆ ನೇತೃತ್ವದ ಪೀಠವು ಎಲ್ಲ ಮೂರು ಅರ್ಜಿಗಳನ್ನು ವಜಾಗೊಳಿಸಿ ಆದೇಶ ನೀಡಿದೆ. 
ಈ ಭಾರಿಯ ಮೈಸೂರು ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ಪುರಸ್ಕೃತ ಭಾನು ಮುಷ್ತಾಕ್ ಗೆ ಆಹ್ವಾನ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೂರು ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್ ಸಿ.ಜೆ. ಪೀಠವು ಆದೇಶ ನೀಡಿದೆ. ಇದರಿಂದಾಗಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಉಳಿದ  ಇಬ್ಬರು ಅರ್ಜಿದಾರರಿಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದೆ. 
ವಿಸ್ತ್ರತ ಆದೇಶ ಪ್ರಕಟಿಸೋದಾಗಿ ತಿಳಿಸಿ ಮೂರು ಅರ್ಜಿಗಳನ್ನು ಹೈಕೋರ್ಟ್  ವಜಾಗೊಳಿಸಿದೆ

Banu Mushtaq

 ಆದೇಶದ ಬಳಿಕವೂ ವಕೀಲ ಸುದರ್ಶನ್‌, ವಾದ ಮಂಡನೆಯನ್ನು ಮುಂದುವರಿಸಿದ್ದರು. 

ನಮ್ಮ ಆದೇಶ ನೀಡಲಾಗಿದೆ. ನಿಮ್ಮ ಮೇಲೆ ದಂಡ ವಿಧಿಸಬೇಕೇ ಎಂದು ಹೈಕೋರ್ಟ್ ಕೋಪಗೊಂಡು ವಕೀಲ ಸುದರ್ಶನ್ ರನ್ನು ಪ್ರಶ್ನಿಸಿತು. 

ಶಿಷ್ಟಾಚಾರ ಪಾಲಿಸುವುದು ಬೇರೆ ವಿಚಾರ. ಆದರೆ ನಿಮ್ಮ ಕಾನೂನಾತ್ಮಕ ಹಕ್ಕಿನ ಬಗ್ಗೆ ವಾದ ಮಂಡಿಸಿ.  ಧರ್ಮವನ್ನು ಪಾಲಿಸುವ ಹಕ್ಕನ್ನು ಸಂವಿಧಾನದಲ್ಲಿ ಗುರುತಿಸಲಾಗಿದೆ ಎಂದು ಸಿಜೆ ಹೇಳಿದ್ದರು. 
ಈ ವೇಳೆ ಸುಪ್ರೀಂ ಕೋರ್ಟ್ ತೀರ್ಪು  ಅನ್ನು ಅರ್ಜಿದಾರರ ಪರ ವಕೀಲರು ಉಲ್ಲೇಖಿಸಿದ್ದರು. 
ಪೂಜಾರಿಯ ಪೂಜೆಯ ಹಕ್ಕನ್ನು ಕಿತ್ತುಕೊಂಡಿದ್ದರೆ ಪ್ರಶ್ನಿಸಬಹುದು.  ವ್ಯಕ್ತಿಯ ಆಸ್ತಿಯನ್ನು ಕಿತ್ತುಕೊಂಡಿದ್ದರೆ ಪ್ರಶ್ನಿಸಬಹುದು.  ಆದರೆ ಇಲ್ಲಿ ನಿಮ್ಮ ಯಾವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು  ಸಿಜೆ ಪ್ರಶ್ನಿಸಿದ್ದರು. 

KARNATAKA HC CJ VIBHU BAKRU


ಕರ್ನಾಟಕ ಹೈಕೋರ್ಟ್ ಸಿಜೆ ವಿಭು ಬಖ್ರು 


 ಹಿಂದೂ ಸಂಸ್ಕೃತಿಯಲ್ಲಿ ಮೂರ್ತಿ ಪೂಜೆಗೆ ಮಹತ್ವವಿದೆ .  ಭಾನು ಮುಷ್ತಾಕ್ ಅವರಿಗೆ ಅರಿಶಿನ‌ ಕುಂಕುಮದಲ್ಲಿ ನಂಬಿಕೆಯಿಲ್ಲ. ಧಾರ್ಮಿಕ ಆಚರಣೆಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿದೆ ಎಂದು ್ಱಅರ್ಜಿದಾರರ ಪರ  ವಕೀಲರ ವಾದಿಸಿದ್ದರು. ನೀವು ಓದುತ್ತಿರುವ ತೀರ್ಪಿನ ಮೊದಲ ಲೈನ್ ಓದಿ ಎಂದು ಸಿಜೆ ಹೇಳಿದ್ದರು. 
ಸನಾತನ ಧರ್ಮ ಎಲ್ಲ ವಿಧದ‌ ನಂಬಿಕೆಯನ್ನು ಒಳಗೊಂಡಿದೆ ಎಂದಿದೆ. ಭಾನು ಮುಷ್ತಾಕ್ ತಮ್ಮ ಹಿಂದಿನ ಹೇಳಿಕೆ ಹಿಂಪಡೆಯಬೇಕು. ಹಿಂದೂ ಧರ್ಮವನ್ನು  ಅಗೌರವಯುತವಾಗಿ ಕಾಣುವವರಿಗೆ ಉದ್ಘಾಟನೆ ಅವಕಾಶ ಬೇಡವೆಂದು  ವಕೀಲರು ವಾದಿಸಿದ್ದರು. 

 ದೇವಾಲಯಗಳಿಗೆ ಯಾರು ಬೇಕಾದರೂ ಬರಲು ಅವಕಾಶವಿದೆ  ಎಂದು ಎಜಿ ಶಶಿ ಕಿರಣ್ ಶೆಟ್ಟಿ ಹೇಳಿದ್ದರು. ಲೇಖಕಿಯನ್ನು ಹಿಂದೂ ವಿರೋಧಿ ಎನ್ನುವುದು ಸರಿಯಲ್ಲ. ಚಾಮುಂಡಿ ಬೆಟ್ಟಕ್ಕೆ ಹೋಗಬೇಕೆಂದು ಅವರಿಗೂ ಇಚ್ಚೆಯಿತ್ತೆಂದು ಹೇಳಿದ್ದಾರೆ . ಧರ್ಮದ ಆಧಾರದಲ್ಲಿ ತಾರತಮ್ಯಕ್ಕೆ ಅವಕಾಶ ನೀಡಬಾರದೆಂದು ಎಜಿ ವಾದಿಸಿದ್ದರು. ಸರ್ಕಾರ ಜಾತ್ಯಾತೀತ ಕಾರ್ಯಕ್ರಮ ನಡೆಸುತ್ತಿದೆ . ಹಿಂದೂಗಳಲ್ಲದವರು ದೇಗುಲಕ್ಕೆ ಬರಬಾರದೆಂಬುದು ನಮ್ಮ ವಾದವಲ್ಲ. ನಿಸಾರ್ ಅಹಮದ್ ಕೃಷ್ಣನ ಕುರಿತು ಕವಿತೆ ಬರೆದಿದ್ದಾರೆ. ಭಾನು ಮುಷ್ತಾಕ್ ಗೂ ನಿಸಾರ್ ಅಹಮದ್ ಗೂ ಹೋಲಿಕೆಯಿಲ್ಲ  ಎಂದು ಎ.ಜಿ. ಶಶಿಕಿರಣ್ ಶೆಟ್ಟಿ ವಾದಿಸಿದ್ದರು. 

 ಭಾನು ಮುಷ್ತಾಕ್ ತಮ್ಮ ಹೇಳಿಕೆ ಹಿಂಪಡೆದರೆ ಮಾತ್ರ ಪರಿಗಣಿಸಬೇಕು ಎಂದು ಪ್ರತಾಪ್ ಸಿಂಹ ಪರ ವಕೀಲ ಸುದರ್ಶನ್ ವಾದಿಸಿದ್ದರು. ಯಾವುದೇ ಹಕ್ಕು ಉಲ್ಲಂಘನೆಯಿಲ್ಲದಿರುವುದರಿಂದ ಪಿಐಎಲ್ ವಜಾಗೊಳಿಸಲಾಗಿದೆ ಎಂದು ಸಿ.ಜೆ ವಿಭು ಬಖ್ರು, ನ್ಯಾ. ಸಿ.ಎಂ. ಜೋಶಿ ಅವರಿದ್ದ ಪೀಠ ಆದೇಶ ನೀಡಿದೆ. 

ಅರ್ಜಿದಾರ ಪ್ರತಾಪ್ ಸಿಂಹ ಅವರಿಗೆ ದಂಡ ವಿಧಿಸಬೇಕೆಂದು ಮತ್ತೆ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದ್ದರು. ವಿಜಯದಶಮಿ ಎಂದರೇನು ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ. ದೇಶಾದ್ಯಂತ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು  ಸಿ.ಜೆ. ವಿಭು ಬಖ್ರು ಹೇಳಿದ್ದರು. ಕೊನೆಗೆ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ನ  ಸಿ.ಜೆ. ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿ ಆದೇಶ ನೀಡಿತು.  


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Pratap Simha vs Banu Mushtaq Banu Mushtaq Dasara
Advertisment