/newsfirstlive-kannada/media/media_files/2025/09/27/russian-lady-nina-kutina-2025-09-27-12-19-17.jpg)
ಗೋಕರ್ಣ ಗುಹೆಯಲ್ಲಿ ಸಿಕ್ಕ ರಷ್ಯಾದ ಮಹಿಳೆ ನೀನಾ ಕುಟೀನಾ, ಇಬ್ಬರು ಮಕ್ಕಳು
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಗುಹೆಯಲ್ಲಿ ಪತ್ತೆಯಾಗಿದ್ದ ತಾಯಿ ಮತ್ತು ಮಕ್ಕಳನ್ನು ರಷ್ಯಾಕ್ಕೆ ವಾಪಸ್ ಕಳಿಸಲು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ತಾಯಿ ಮತ್ತು ಮಕ್ಕಳನ್ನು ರಷ್ಯಾ ದೇಶಕ್ಕೆ ಕಳಿಸವು ಅಗತ್ಯ ಪ್ರಯಾಣದ ದಾಖಲೆಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ಹೈಕೋರ್ಟ್‌ನ ಜಸ್ಟೀಸ್ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಪೀಠವು ಇಸ್ರೇಲ್ ನಾಗರಿಕ ಡ್ರೋರ್ ಶಲೋಮೋ ಗೋಲ್ಡ್ ಸ್ಟೀನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ರಷ್ಯಾದ ಮಹಿಳೆ ನೀನಾ ಕುಟಿನಾ ಕೆಲ ತಿಂಗಳ ಹಿಂದೆ ಗೋಕರ್ಣದ ಗುಹೆಯಲ್ಲಿ ಪತ್ತೆಯಾಗಿದ್ದರು. ಬಳಿಕ ಪೊಲೀಸರು ಅವರನ್ನು ತುಮಕೂರು ನಗರದ ಹೊರವಲಯ ದಿಬ್ಬೂರಿನಲ್ಲಿರುವ ವಿದೇಶಿಯ ಡೀಟೇನ್ಷನ್ ಸೆಂಟರ್‌ಗೆ ಕಳಿಸಿದ್ದರು.
ಬಳಿಕ ಡ್ರೋರ್ ಶೆಲೋಮೋ ಗೋಲ್ಡ್ ಸ್ಟೀನ್ ಭಾರತಕ್ಕೆ ಬಂದು ಕರ್ನಾಟಕ ಹೈಕೋರ್ಟ್ ನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳನ್ನು ರಷ್ಯಾ ದೇಶಕ್ಕೆ ಕಳಿಸಬಾರದೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ತಾನು ಮಹಿಳೆ ನೀನಾ ಕುಟಿನಾ ಪತಿ ಹಾಗೂ ಇಬ್ಬರು ಮಕ್ಕಳಿಗೆ ತಾನು ತಂದೆ. ಹೀಗಾಗಿ ತಾಯಿ ಮತ್ತು ಮಕ್ಕಳನ್ನು ರಷ್ಯಾ ದೇಶಕ್ಕೆ ಕಳಿಸಬಾರದು ಎಂದು ಡ್ರೋರ್ ಶಲೋಮೋ ಗೋಲ್ಡ್ ಸ್ಟೀನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ತಾನು ನೀನಾ ಕುಟಿನಾ ಮತ್ತು ಇಬ್ಬರು ಮಕ್ಕಳ ಖರ್ಚುವೆಚ್ಚಕ್ಕೂ ಹಣ ಕಳಿಸುತ್ತಿದುದ್ದನ್ನು ಹೈಕೋರ್ಟ್ ಗಮನಕ್ಕೆ ತಂದಿದ್ದರು.
ಆದರೇ, ಕೇಂದ್ರ ಸರ್ಕಾರದ ಪರ ವಕೀಲ ಅಡಿಷನಲ್ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಮಕ್ಕಳ ಡಿಎನ್‌ಎ ವರದಿಯ ಬಗ್ಗೆ ಹೈಕೋರ್ಟ್ ಗಮನಕ್ಕೆ ತಂದರು. ಇದನ್ನು ರಷ್ಯಾ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಇದಾದ ಬಳಿಕ ರಷ್ಯಾ ದೇಶವು ಮಕ್ಕಳಿಗೆ ರಷ್ಯಾದ ನಾಗರಿಕತ್ವ ನೀಡಿದೆ. ರಷ್ಯಾ ಸರ್ಕಾರವು ಎಮರ್ಜೆನ್ಸಿ ಟ್ರಾವೆಲ್ ಡಾಕ್ಯುಮೆಂಟ್ ಅನ್ನು ಮುಂದಿನ ಕ್ರಮಕ್ಕಾಗಿ ನೀಡಿದೆ. ಎಮರ್ಜೆನ್ಸಿ ಟ್ರಾವೆಲ್ ಡಾಕ್ಯುಮೆಂಟ್ ವ್ಯಾಲಿಡಿಟಿಯು ಸೆಪ್ಟೆಂಬರ್ 25 ರಿಂದ ಆಕ್ಟೋಬರ್ 9 ರವರೆಗೆ ಇದೆ.
ಹೀಗಾಗಿ ಕೇಂದ್ರ ಸರ್ಕಾರವು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ, ಮಹಿಳೆ ಮತ್ತು ಇಬ್ಬರು ಮಕ್ಕಳಿಗೆ ಭಾರತ ಬಿಟ್ಟು ರಷ್ಯಾ ದೇಶಕ್ಕೆ ಹೋಗಲು ಎಕ್ಸಿಟ್ ಪರ್ಮಿಟ್ ಅನ್ನು ನೀಡಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.
ಮಹಿಳೆ ನೀನಾ ಕುಟಿನಾ ಮತ್ತು ಮಕ್ಕಳು ರಷ್ಯಾದಿಂದ ಭಾರತಕ್ಕೆ ಬಂದಿದ್ದಾರೆ. ಭಾರತದಲ್ಲಿ ವೀಸಾ ಅವಧಿ ಮುಗಿದ ಮೇಲೂ ವಾಸ ಇದ್ದಾರೆ. ಹೀಗಾಗಿ ಇವರನ್ನು ಅವರ ಸ್ವಂತ ದೇಶವಾದ ರಷ್ಯಾ ದೇಶಕ್ಕೆ ವಾಪಸ್ ಕಳಿಸುವುದು ಸೂಕ್ತ ಎಂದು ಹೈಕೋರ್ಟ್ ಆದೇಶ ನೀಡಿದೆ.
ಇನ್ನೂ ಹೈಕೋರ್ಟ್ ನಲ್ಲಿ ವಾದಿಸಿದ ಕೇಂದ್ರ ಸರ್ಕಾರದ ಪರ ವಕೀಲ ಅಡಿಷನಲ್ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಕೇಂದ್ರ ಸರ್ಕಾರಕ್ಕೆ ವಿದೇಶದಿಂದ ಬಂದು ಅವಧಿ ಮೀರಿ ವಾಸ ಮಾಡಿದ ಯಾವುದೇ ವ್ಯಕ್ತಿಯನ್ನಾಗಲೀ, ಗಡೀಪಾರು ಮಾಡುವ ಅಧಿಕಾರ ಇದೆ. ಆದರೇ, ಈ ಕೇಸ್ ನಲ್ಲಿ ಗಡೀಪಾರು ಮಾಡುತ್ತಿಲ್ಲ, ರಷ್ಯಾದ ಮಹಿಳೆ ನೀನಾ ಕುಟೀನಾ 2017 ರಲ್ಲೇ ಭಾರತಕ್ಕೆ ಬಂದಿದ್ದಾರೆ. ಭಾರತದಲ್ಲಿ ಅನಧಿಕೃತವಾಗಿ ವಾಸ ಇದ್ದಾರೆ. ತಾಯಿ ಮತ್ತು ಇಬ್ಬರು ಮಕ್ಕಳನ್ನು ರಷ್ಯಾಕ್ಕೆ ವಾಪಸ್ ಕಳಿಸುವುದನ್ನು ಗಡೀಪಾರು ಎಂದು ಪರಿಗಣಿಸಬೇಕಾಗಿಲ್ಲ ಎಂದು ವಾದಿಸಿದ್ದರು.
ಎರಡು ತಿಂಗಳ ಹಿಂದೆ ರಷ್ಯಾದ ಮಹಿಳೆ ನೀನಾ ಕುಟೀನಾ ಹಾಗೂ ಇಬ್ಬರು ಮಕ್ಕಳನ್ನು ಗೋಕರ್ಣದ ಬಳಿಯ ರಾಮತೀರ್ಥ ಬೆಟ್ಟದ ಗುಹೆಯಿಂದ ಸ್ಥಳೀಯ ಪೊಲೀಸರು ರಕ್ಷಿಸಿ ಹೊರಗೆ ಕರೆ ತಂದಿದ್ದರು. ಅದರ ನ್ಯೂಸ್ ಫಸ್ಟ್ ವಿಡಿಯೋ ಲಿಂಕ್ ಇಲ್ಲಿ ನೀಡಿದ್ದೇವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.