/newsfirstlive-kannada/media/media_files/2025/09/01/dowry-death-poojasri-2025-09-01-15-01-25.jpg)
ಗಂಡನ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ಪೂಜಾಶ್ರೀ
ಗಂಡನ ಅನೈತಿಕ ಸಂಬಂಧದಿಂದ ನೊಂದು ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಘಾತಕಾರಿ ಘಟನೆಯೊಂದು ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ನಡೆದಿದೆ. ಪೂಜಾಶ್ರೀ ಎಂಬ 28 ವರ್ಷದ ಮಹಿಳೆ ಮೂರು ವರ್ಷದ ಹಿಂದೆ ಪೋಷಕರು ನಿಶ್ಚಯಿಸಿದ್ದ ನಂದೀಶ್ ಜೊತೆ ವಿವಾಹವಾಗಿದ್ದರು. ಪೂಜಾಶ್ರೀ- ನಂದೀಶ್ ದಾಂಪತ್ಯಕ್ಕೆ ಒಂದು ಹೆಣ್ಣು ಮಗು ಕೂಡ ಇದೆ. ಪತಿ ನಂದೀಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೇ, ಪೂಜಾಶ್ರೀ ಕೂಡ ಖಾಸಗಿ ಬ್ಯಾಂಕ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೇ, ಕಳೆದ ಒಂದು ವರ್ಷದಿಂದ ಪತಿ ನಂದೀಶ್ ಗೆ ಅನೈತಿಕ ಸಂಬಂಧ ಇರುವುದು ಪೂಜಾಶ್ರೀಗೆ ಗೊತ್ತಾಗಿದೆ.
ಪತಿ ನಂದೀಶ್ ರನ್ನು ಅನೈತಿಕ ಸಂಬಂಧದ ಬಗ್ಗೆ ಪೂಜಾಶ್ರೀ ಪ್ರಶ್ನಿಸಿದ್ದಾರೆ.
ಈ ವೇಳೆ ನಂದೀಶ್ ತಾಯಿ, ನಿಮ್ಮ ಮನೆಯಿಂದ ವರದಕ್ಷಿಣೆ ತೆಗೆದುಕೊಂಜು ಬಾ ಎಂದು ಪೂಜಾಶ್ರೀಗೆ ಹೇಳಿದ್ದಾರೆ. ಬಳಿಕ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಮನೆಯಲ್ಲಿ ಎರಡು ಮೂರು ಭಾರಿ ರಾಜೀ ಪಂಚಾಯಿತಿ ನಡೆದಿದೆ. ಪೂಜಾಶ್ರೀ ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ಹೋಗಿದ್ದರು.
ಬಳಿಕ ಮತ್ತೆ ವರದಕ್ಷಿಣೆ ಕಿರುಕುಳ ನೀಡಲ್ಲ, ಅನೈತಿಕ ಸಂಬಂಧ ಬೆಳೆಸಲ್ಲ ಎಂದು ಭರವಸೆ ನೀಡಿದ್ದ ಪತಿ ನಂದೀಶ್, ಪತ್ನಿ ಪೂಜಾಶ್ರೀಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ.
ಪೂಜಾಶ್ರೀ ಹಾಗೂ ಪತಿ ನಂದೀಶ್
ಆದರೇ, ಮೂರು ದಿನಗಳ ಹಿಂದೆ ನಂದೀಶ್ ಮತ್ತೆ ಜಗಳ ತೆಗೆದು ಪತ್ನಿ ಪೂಜಾಶ್ರೀ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಪೂಜಾಶ್ರೀ ಮತ್ತೆ ತಾಯಿ ಮನೆಗೆ ಹೋಗಿದ್ದಳು. ಮರು ದಿನ ಬೆಳಿಗ್ಗೆ ಪೂಜಾಶ್ರೀ ತವರು ಮನೆಗೆ ಹೋಗಿ ಹೊಸ ಕಥೆ ಕಟ್ಟಿ ಕರೆದುಕೊಂಡು ಹೋಗಿದ್ದ ಪತಿ ನಂದೀಶ್. ಆದರೇ, ನಿನ್ನೆ ಬೆಳಿಗ್ಗೆ ಪೂಜಾಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಘಟನೆ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಾಗಿದೆ. ಮೃತ ಪೂಜಾಶ್ರೀ ಪೋಷಕರ ದೂರಿನ ಆಧಾರದ ಮೇಲೆ ಪತಿ ನಂದೀಶ್ ನನ್ನು ಬಂಧಿಸಲಾಗಿದೆ. ಆದರೇ ಗಂಡ-ಹೆಂಡತಿ ಜಗಳದಿಂದ ತಾಯಿಯ ಜೀವ ಹೋಗಿದೆ. ಪತಿ ಜೈಲು ಪಾಲಾಗುತ್ತಿದ್ದಾರೆ. ಮಗು ಅನಾಥವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.