/newsfirstlive-kannada/media/media_files/2025/10/15/murder-by-doctor-2025-10-15-16-28-18.jpg)
ಕೃತಿಕಾ ರೆಡ್ಡಿ ಮತ್ತು ಮಹೇಂದ್ರ ರೆಡ್ಡಿ, ಪೊಲೀಸ್ ಪತ್ರಿಕಾ ಪ್ರಕಟಣೆ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿರುವ ಡಾಕ್ಟರ್ ಮಹೇಂದ್ರ ರೆಡ್ಡಿ ವಿರುದ್ಧ ತಾನು ತಾಳಿ ಕಟ್ಟಿ ಅದ್ದೂರಿಯಾಗಿ ವಿವಾಹವಾದ ಪತ್ನಿಯನ್ನೇ ಕೊಲೆಗೈದ ಆರೋಪ ಕೇಳಿ ಬಂದಿದೆ. ಪತ್ನಿ ಕೃತಿಕಾ ರೆಡ್ಡಿಗೆ ಅನಾಸ್ತೇಶಿಯ ಇಂಜೆಕ್ಷನ್ ಅನ್ನು ಅತಿಯಾಗಿ ನೀಡಿ ಕೊಲೆ ಮಾಡಿದ್ದಾರೆಂದು ವೈದ್ಯಕೀಯ ಪರೀಕ್ಷೆಯ ವರದಿಯಿಂದ ದೃಢಪಟ್ಟಿದೆ.
ಈ ಕೊಲೆಯ ಬಗ್ಗೆ ಪತ್ನಿ ಡಾಕ್ಟರ್ ಕೃತಿಕಾ ರೆಡ್ಡಿ ಕುಟುಂಬ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ನೀಡಿದೆ. ಕೃತಿಕಾ ರೆಡ್ಡಿ ಸಾವಿಗೆ ನ್ಯಾಯ ಬೇಕೆಂದು ಕೃತಿಕಾ ರೆಡ್ಡಿ ತಂದೆ ಮುನಿರೆಡ್ಡಿ ಆಗ್ರಹಿಸಿದ್ದಾರೆ.
ಕೃತಿಕಾ ರೆಡ್ಡಿ ಹಾಗೂ ಮಹೇಂದ್ರ ರೆಡ್ಡಿ ವಿವಾಹ ಹಾಗೂ ಕೊಲೆಯ ಸಂಚಿನ ಸಂಪೂರ್ಣ ವಿವರ ಇಲ್ಲಿದೆ ಓದಿ.
ಬೆಂಗಳೂರಿನ ಪ್ರತಿಭಾವಂತ ಚರ್ಮ ತಜ್ಞೆ ಡಾ. ಕೃತಿಕಾ ಎಂ. ರೆಡ್ಡಿ (28) ಅವರನ್ನು 24 ಏಪ್ರಿಲ್ 2025 ರಂದು ಅವರ ಪತಿ ಡಾ. ಮಹೇಂದ್ರ ರೆಡ್ಡಿ ಜಿ.ಎಸ್ (ಗುಂಜೂರಿನ ಶ್ರೀನಿವಾಸ ರೆಡ್ಡಿ ಜಿ.ಆರ್ ಮತ್ತು ಪ್ರಮೀಲಾ ಅವರ ಪುತ್ರ) ಅವರು ಹತ್ಯೆ ಮಾಡಿದರೆಂದು ಆರೋಪಿಸಲಾಗಿದೆ.
ವಿಶಿಷ್ಟ ವೈದ್ಯೆ ಮತ್ತು ಪಾಂಡಿತ್ಯಶಾಲಿ ವಿದ್ಯಾರ್ಥಿನಿ ಡಾಕ್ಟರ್ ಕೃತಿಕಾ 1996 ರ ಮೇ 14 ರಂದು ಜನಿಸಿದ್ದರು. ಡಾ. ಕೃತಿಕಾ ತಮ್ಮ ತಲೆಮಾರಿನ ಅತ್ಯಂತ ಪ್ರತಿಭಾವಂತ ವೈದ್ಯಕೀಯ ವೃತ್ತಿಪರರಲ್ಲಿ ಒಬ್ಬರು. ಅವರು Ryan International School ನಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ, Narayana PU College ನಲ್ಲಿ ಪಿಯು ಶಿಕ್ಷಣ ಪಡೆದರು . ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಪದವಿಗಳನ್ನು ಗಳಿಸಿದ್ದಾರೆ . ಎಂ.ಬಿ.ಬಿ.ಎಸ್ – ವೈದೇಹಿ ಮೆಡಿಕಲ್ ಕಾಲೇಜ್, ಬೆಂಗಳೂರುಎಂ.ಡಿ (ಡರ್ಮಟಾಲಜಿ) – ನವೋದಯ ಮೆಡಿಕಲ್ ಕಾಲೇಜ್, ರಾಯಚೂರು, ಡಿ.ಎನ್.ಬಿ (ಡರ್ಮಟಾಲಜಿ, ವಿನೇರಿಯಾಲಜಿ ಮತ್ತು ಲೆಪ್ರೋಸಿ) – ಎನ್.ಬಿ.ಇಂ.ಎಸ್ಎಫ್.ಆರ್.ಜಿಯು.ಎಚ್.ಎಸ್ (ಡರ್ಮಾಟೋಸರ್ಜರಿ) – ರೂಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಡರ್ಮಟಾಲಜಿಕಲ್ ಸೈನ್ಸಸ್, ಆರ್.ಜಿಯು.ಎಚ್.ಎಸ್ ಅಕಾಡೆಮಿಕ್ ಕ್ಷೇತ್ರದಲ್ಲಿ ಅತಿದೊಡ್ಡ ಸಾಧನೆ ಮಾಡಿದ ಅವರು ತಮ್ಮ ಕನಸಿನ ಕ್ಲಿನಿಕ್ ಸ್ಕಿನ್ ಮತ್ತು ಸ್ಕಾಲ್ಪೆಲ್ (Skin & Scalpel)” ಅನ್ನು 4 ಮೇ 2025 ರಂದು ಮಾರಥಹಳ್ಳಿಯಲ್ಲಿ ಉದ್ಘಾಟಿಸಲು ಸಜ್ಜಾಗಿದ್ದರು.
2024 ರ ಮೇ 26ರಂದು ಅವರ ವಿವಾಹವಾದ 11 ತಿಂಗಳಾದ ಕೆಲವೇ ದಿನಗಳಲ್ಲಿ, 2025 ಏಪ್ರಿಲ್ 24 ರಂದು ಡಾ. ಕೃತಿಕಾ ತಮ್ಮ ಮನೆಯಲ್ಲಿ ಪ್ರೊಪೋಫೋಲ್ ಎನ್ನುವ ಅನಸ್ತೇಶಿಯಾ ಔಷಧಿಯ ಅತಿಯಾದ ಡೋಸ್‌ನಿಂದ ಮೃತಪಟ್ಟಿದ್ದಾರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರೊಪೋಫೋಲ್ ಶಸ್ತ್ರಚಿಕಿತ್ಸಾ ಕೋಣೆಯಲ್ಲೇ ಮಾತ್ರ ಬಳಸಬೇಕಾದ ನಿಯಂತ್ರಿತ ಔಷಧಿ. ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಆ ಔಷಧಿಯ ಅಂಶಗಳು ವಿವಿಧ ಅಂಗಾಂಗಗಳಲ್ಲಿ ಪತ್ತೆಯಾದವು . ಇದರಿಂದ ಉದ್ದೇಶಪೂರ್ವಕವಾಗಿ ಒಳ ಚುಚ್ಚುಮದ್ದು ನೀಡಲಾಗಿದೆ ಎಂಬುದು ದೃಢಪಟ್ಟಿದೆ. ತನಿಖೆ ಪ್ರಕಾರ, ವಿಕ್ಟೋರಿಯಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕನಾದ ಮಹೇಂದ್ರ ರೆಡ್ಡಿಯವರು ತಮ್ಮ ವೃತ್ತಿ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು, ಆ ಆಸ್ಪತ್ರೆಯಿಂದ ಔಷಧಿಗಳನ್ನು ತರಿಸಿ ಮನೆಯಲ್ಲಿ ನೀಡಿದರೆಂದು ಆರೋಪಿಸಲಾಗಿದೆ. ನಂತರ ಅವರು ಈ ಘಟನೆ ಸ್ವಾಭಾವಿಕ ಸಾವು ಎಂದು ತೋರಿಸಲು ಯತ್ನಿಸಿ, ಕುಟುಂಬದವರನ್ನು ಪೊಲೀಸ್ ದೂರು ಕೊಡದಂತೆ ಮತ್ತು ಮರಣೋತ್ತರ ಪರೀಕ್ಷೆ ನಿರಾಕರಿಸಲು ಒತ್ತಾಯಿಸಿದ್ದರೆಂದು ತಿಳಿದುಬಂದಿದೆ. ಈ ಸಂದರ್ಭ, ಮೃತಳ ಅಕ್ಕ ಡಾ. ನಿಕಿತಾ ಎಂ. ರೆಡ್ಡಿ (ರೇಡಿಯಾಲಜಿಸ್ಟ್) ಅವರು ಅನುಮಾನ ವ್ಯಕ್ತಪಡಿಸಿ, 24 ಏಪ್ರಿಲ್ 2025 ರಂದು ಮಾರತ್ ಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ನಂತರ UDR (Unnatural Death Report) ಪ್ರಕರಣವನ್ನು ದಾಖಲಿಸಲಾಯಿತು.
ಆರೋಪಿಯ ಹಿನ್ನೆಲೆ
ಆರೋಪಿಯ ಕುಟುಂಬಕ್ಕೆ ಹಿಂದಿನಿಂದ ಅಪರಾಧ ಹಿನ್ನೆಲೆ ಇದೆ. ಅವರ ಅವಳಿ ಸಹೋದರ ಡಾ. ನಾಗೇಂದ್ರ ರೆಡ್ಡಿ ಜಿ.ಎಸ್ ವಿರುದ್ಧ 2018ರಲ್ಲಿ HAL ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ವಂಚನೆ ಮತ್ತು ಅಪರಾಧ ಪ್ರಕರಣಗಳನ್ನು ದಾಖಲಿಸಿದ್ದರು . ಮೂರು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿತ್ತು. 2025 ಏಪ್ರಿಲ್ 23 ರಂದು ಅಂದರೇ, ಕೃತಿಕಾ ಸಾಯುವ ಒಂದು ದಿನ ಮೊದಲು ಆ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ತೀರ್ಮಾನ ಹೊರಬಂದಿತ್ತು.
ಆದರೆ 2023 ಮಾರ್ಚ್ 1 ರಂದು, ಮಹೇಂದ್ರ ರೆಡ್ಡಿ ಜಿ.ಎಸ್ ಮತ್ತು ಮತ್ತೊಬ್ಬ ಸಹೋದರ ರಾಘವ ರೆಡ್ಡಿ ಜಿ.ಎಸ್ ಇವರನ್ನು ಸಾಕ್ಷಿಗಳಿಗೆ ಬೆದರಿಕೆ ಪ್ರಕರಣದಲ್ಲೂ ಉಲ್ಲೇಖಿಸಲಾಗಿದೆ. ಈ ಮಾಹಿತಿಯನ್ನು ಕೃತಿಕಾ ಕುಟುಂಬದವರಿಂದ ಮದುವೆ ಸಮಯದಲ್ಲಿ ಗೌಪ್ಯವಾಗಿಡಲಾಗಿತ್ತು.
ಬಂಧನ ಮತ್ತು ತನಿಖೆ
2025 ಅಕ್ಟೋಬರ್ 14ರಂದು ಮೃತಳ ತಂದೆ ಶ್ರೀ ಮುನಿರೆಡ್ಡಿ ಕೆ. ಅವರು ಅಧಿಕೃತ ದೂರು ಸಲ್ಲಿಸಿದ ನಂತರ, ಮಾರತಹಳ್ಳಿ ಪೊಲೀಸರು ಭಾರತೀಯ ನ್ಯಾಯಕ ಸಂಹಿತೆ (BNS) 2023ರ ಪ್ರಕಾರ, ಕಲಂ 103 (ಕೊಲೆ ವಿಭಾಗ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದರು. ಪೊಲೀಸರು ತಕ್ಷಣ ತನಿಖೆ ನಡೆಸಿ, ಆರೋಪಿತನಾದ ಡಾ. ಮಹೇಂದ್ರ ರೆಡ್ಡಿ ಜಿ.ಎಸ್ ಅವರನ್ನು ಮೂರು ಗಂಟೆಗಳೊಳಗೆ ಉಡುಪಿಯ ಮಣಿಪಾಲ್ ಬಳಿ ಬಂಧಿಸಿದರು.
ಆರೋಪಿಯು ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದಾನೆಂದು LOOK OUT CIRCULAR (LOC) ಈಗಾಗಲೇ ಹೊರಡಿಸಲಾಗಿತ್ತು.
ಆರೋಪಿಯು ಪ್ರಸ್ತುತ ಪೊಲೀಸ್ ಬಂಧನದಲ್ಲಿದ್ದು, ತನಿಖೆಯು ಮುಂದುವರಿದಿದೆ.
ಕೃತಿಕಾ ಕುಟುಂಬದ ಹೇಳಿಕೆ
ಡಾ. ಕೃತಿಕಾ ತಮ್ಮ ಪತಿಯನ್ನು ಸಂಪೂರ್ಣವಾಗಿ ನಂಬಿದ್ದರು . ಪತಿಯ ಪ್ರೀತಿ ಮತ್ತು ವೃತ್ತಿಪರ ಪ್ರಾಮಾಣಿಕತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಆದರೆ ಜೀವಗಳನ್ನು ಉಳಿಸುವ ಜ್ಞಾನವನ್ನೇ ಅವರ ಜೀವ ಅಂತ್ಯಗೊಳಿಸಲು ಬಳಸಲಾಯಿತು. ನಮ್ಮ ಕುಟುಂಬ ಈ ಕ್ರೂರ ಕೃತ್ಯಕ್ಕೆ ಕಠಿಣವಾದ ಶಿಕ್ಷೆ ಕೋರುತ್ತಿದೆ. ಕೃತಿಕಾ ನ್ಯಾಯ ಪಡೆಯುವುದು ಪ್ರತಿ ನಂಬಿಕೆಯುಳ್ಳ ಮಹಿಳೆಗೆ ನ್ಯಾಯ ಸಿಕ್ಕಂತೆ. ನಾವು ಪೊಲೀಸರಿಗೂ, ನ್ಯಾಯಾಂಗ ವ್ಯವಸ್ಥೆಯ ಮೇಲೂ ಸಂಪೂರ್ಣ ಭರವಸೆ ಇಟ್ಟಿದ್ದೇವೆ, ನ್ಯಾಯ ಖಚಿತವಾಗಿ ಲಭ್ಯವಾಗಲಿದೆ ಎನ್ನುವ ವಿಶ್ವಾಸದಲ್ಲಿದ್ದೇವೆ ಎಂದು ಕೃತಿಕಾ ತಂದೆ ಶ್ರೀ ಮುನಿ ರೆಡ್ಡಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.