/newsfirstlive-kannada/media/media_files/2025/08/25/mla-veerendra-pappy-arrest-2025-08-25-13-37-04.jpg)
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ ಜಫ್ತಿಯಾದ 12 ಕೋಟಿ ಹಣ
ಅಲ್ಲಿ ಇಂದ್ರಲೋಕವನ್ನೆ ಬೆಚ್ಚಿ ಬೀಳಿಸೋ ಸಾಮ್ರಾಜ್ಯವಿತ್ತು. ಕುಬೇರನನ್ನೇ ನಾಚಿಸೋ ಸಂಪತ್ತು ಇತ್ತು. ಅದನ್ನ ನೋಡಿ ಸ್ವತಃ ಇ.ಡಿ ಅಧಿಕಾರಿಗಳು ಶಾಕ್ ಆಗಿ ಹೋಗಿದ್ರು. ಅಷ್ಟಕ್ಕೂ ನಾವು ಹೇಳ್ತಾ ಇರೋದು ಯಾವುದೋ ರಾಜಮನೆತನದ ವೈಭೋಗದ ಬಗ್ಗೆ ಅಲ್ಲ. ನಮ್ಮ ಚಿತ್ರದುರ್ಗದ ಕಾಂಗ್ರೆಸ್ ಶಾಸಕರಾಗಿರೋ ವೀರೇಂದ್ರ ಪಪ್ಪಿ ಬಗ್ಗೆ. ಅವರ ಮನೆ ಮೇಲೆ ಮತ್ತು ಬ್ಯುಸಿನೆಸ್ ಸೆಂಟರ್‌ಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದು ಏಕೆ? ದಾಳಿ ವೇಳೆ ಸಿಕ್ಕಿರೋ ಸಂಪತ್ತು ಏನೇನು? ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ವೀರೇಂದ್ರ ಪಪ್ಪಿ ಸಾಮ್ರಾಜ್ಯ ನಿರ್ಮಿಸಿದ್ದು ಹೇಗೆ? ಆ ಬಗ್ಗೆ ಫುಲ್ ಡೀಟೈಲ್ಸ್ ಈ ರಿಪೋರ್ಟ್‌ನಲ್ಲಿದೆ.
E.D. ಶಾಕ್ ದೃಶ್ಯ-01
ಕಂತೆ ಕಂತೆ ನೋಟು!
ಕಂತೆ ಕಂತೆ ಹಣದ ರಾಶಿ ಸಿಕ್ಕಿದ್ದು ನಮ್ಮ ರಾಜ್ಯದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರ ಮನೆಯಲ್ಲಿ, ಅವರ ಒಡೆತನದ ಬ್ಯುಸಿನೆಸ್ ಸೆಂಟರ್‌ಗಳಲ್ಲಿ. ಅಲ್ಲಿ ಸಿಕ್ಕಿದ್ದು ಬರೋಬ್ಬರಿ 12 ಕೋಟಿ ರೂಪಾಯಿ ಕ್ಯಾಶ್ ಹಣ.
ವೀರೇಂದ್ರ ಪಪ್ಪಿ ಮನೆಯಲ್ಲಿ ಸಿಕ್ಕ 12 ಕೋಟಿ ರೂಪಾಯಿ ಕ್ಯಾಶ್
E.D. ಶಾಕ್ ದೃಶ್ಯ-02
ರಾಶಿ ರಾಶಿ ಫಾರಿನ್ ಕರೆನ್ಸಿ!
ರಾಶಿ ರಾಶಿ ಹಣದ ಸಿಗೋದು, ಚಿನ್ನಾಭರಣಗಳ ಸಾಮ್ರಾಜ್ಯ ದರ್ಶನ ಆಗೋದು ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳಿಗೆ ಹೊಸದಲ್ಲ. ಯಾಕಂದ್ರೆ, ಪ್ರತಿ ವರ್ಷ ಏನಿಲ್ಲ ಅಂದ್ರೂ ನೂರಾರು ದಾಳಿಗಳನ್ನ ಅವ್ರು ಮಾಡ್ತಾನೇ ಇರ್ತಾರೆ. ಆದ್ರೆ, ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ದಾಳಿ ಆದಾಗ ಇಡಿ ಅಧಿಕಾರಿಗಳು ಅಕ್ಷರಶಃ ಶಾಕ್ ಅಗಿದ್ದಾರೆ. ಕಾರಣ ಅಲ್ಲಿ, ದೇಶಿ ಕರೆನ್ಸಿ ಅಷ್ಟೇ ಅಲ್ಲ, ರಾಶಿ ರಾಶಿ ವಿದೇಶಿ ಕರೆನ್ಸಿ ನೋಟಗಳು ಕಣ್ಣಿಗೆ ಕುಕ್ಕುವಂತಿದ್ದವು.
ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ ಸಿಕ್ಕ 1 ಕೋಟಿ ರೂಪಾಯಿ ವಿದೇಶಿ ಕರೆನ್ಸಿ ದೃಶ್ಯ.
E.D ಶಾಕ್ ದೃಶ್ಯ-03
ಮೂಟ್ಟೆಗಟ್ಟಲೇ ಚಿನ್ನಾಭರಣ!
ಚಿನ್ನ ಚಿನ್ನ ಚಿನ್ನ... ಎಲ್ಲಿ ನೋಡಿದ್ರೂ ಚಿನ್ನ. ಶಾಸಕರ ಮನೆ ಮೇಲೆ ರೇಡ್ ಆದಂತಹ ಸಂದರ್ಭದಲ್ಲಿ ಇಡಿ ಅಧಿಕಾರಿಗಳಿಗೆ ಆಗಿರೋ ಮತ್ತೊಂದ್ ಶಾಕ್ ಅಂದ್ರೆ ಇದೆ ನೋಡಿ. ಸುಮಾರು 6 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಸುಮಾರು 10 ಕೆಜಿ ಬೆಳ್ಳಿ ಸಿಕ್ಕಿದೆ. ಇಷ್ಟೇ ಅಲ್ಲ, ವೀರೇಂದ್ರ ಪಪ್ಪಿಯ ಕುಬೇರ ಸಾಮ್ರಾಜ್ಯ ನೋಡಿ ರೇಡ್ ಮಾಡೋಕೆ ಹೋಗಿರೋ ಅಧಿಕಾರಿಗಳೇ ಶೇಕ್ ಆಗಿ ಹೋಗಿದ್ದಾರೆ.
ವೀರೇಂದ್ರ ಪಪ್ಪಿ ಮನೆಯಲ್ಲಿ ಸಿಕ್ಕ ಚಿನ್ನ, ಬೆಳ್ಳಿ ಆಭರಣಗಳು.
ಶಾಸಕ ವೀರೇಂದ್ರ ಪಪ್ಪಿ ಅರೆಸ್ಟ್, ಆ.28ರ ವರೆಗೂ ED ಕಸ್ಟಡಿಗೆ!
ಎರಡು ದಿನ.. 31 ಸ್ಥಳ.. ನೂರಾರು ಅಧಿಕಾರಿಗಳು.. ಸಿಕ್ಕಿದ್ದೇನು?
ವೀರೇಂದ್ರ ಪಪ್ಪಿ ಮೇಲೆ ಆನ್‌ಲೈನ್ ಬೆಟ್ಟಿಂಗ್, ಆಫ್‌ಲೈನ್ ಬೆಟ್ಟಿಂಗ್, ಅಕ್ರಮ ಹಣ ವರ್ಗಾವಣೆ ಆರೋಪವಿತ್ತು. ಇದೇ ಹಿನ್ನೆಲೆಯಲ್ಲಿ ಚಿತ್ರದುರ್ಗದ ಶಾಸಕರಿಗೆ ಸಂಬಂಧ ಪಟ್ಟ ಒಂದಲ್ಲ ಎರಡಲ್ಲ ಸುಮಾರು 31 ಸ್ಥಳದ ಮೇಲೆ ಇ.ಡಿ. ಅಧಿಕಾರಿಗಳು ರೇಡ್ ಮಾಡಿದ್ರು. ಆ ರೇಡ್ ವೇಳೆ ಅಧಿಕಾರಿಗಳು ಶಾಕ್ ಆಗಿದ್ದು ಏಕೆ? ಇಂದ್ರಲೋಕವೇ ಶೇಕ್ ಆಗಿದ್ದೇಕೆ? ಅನ್ನೋದನ್ನ ಹೇಳ್ತೀವಿ. ಅದ್ಕೂ ಮುನ್ನ ವೀರೇಂದ್ರ ಪಪ್ಪಿ ಅರೆಸ್ಟ್ ಆಗಿರೋ ಕಥೆಯನ್ನ ಹೇಳಿ ಬಿಡ್ತೀವಿ ನೋಡಿ. ಇ.ಡಿ ಅಧಿಕಾರಿಗಳು.. ಅಂದ್ರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಸ್ಟ್ 22 ಮತ್ತು 23 ರಂದು ವೀರೇಂದ್ರ ಪಪ್ಪಿ ಮನೆ, ಆಫೀಸ್, ಬ್ಯುಸಿನೆಸ್ ಸೆಂಟರ್‌ಗಳು, ಆಪ್ತರ ಮನೆಗಳನ್ನ ಮೇಲೆ ದಾಳಿ ಮಾಡಿದಾಗ ವೀರೇಂದ್ರ ಪಪ್ಪಿ ಸ್ಥಳದಲ್ಲಿ ಇರಲಿಲ್ಲ.
ವೀರೇಂದ್ರ ಪಪ್ಪಿ ಬ್ಯುಸಿನೆಸ್ ವ್ಯವಹಾರವೊಂದರ ಸಲುವಾಗಿ ಸಿಕ್ಕಿಂನ ಗ್ಯಾಂಗ್ಟಕ್‌ಗೆ ಹೋಗಿದ್ದಾರೆ ಅನ್ನೋ ಮಾಹಿತಿ ಇಡಿ ಅಧಿಕಾರಿಗಳಿಗೆ ಮೊದಲೇ ಸಿಕ್ಕಿತ್ತು. ಇದೇ ಹಿನ್ನೆಲೆಯಲ್ಲಿ ಮುಂಚಿತವಾಗಿ ಪ್ಲ್ಯಾನ್ ಮಾಡಿದ್ದ ಇ.ಡಿ ಅಧಿಕಾರಿಗಳು, ಇತ್ತ ದಾಳಿ ಆಗ್ತಿದ್ದಂತೆ ಇನ್ನೊಂದ್ ಟೀಮ್ ಸಿಕ್ಕಿಂನಲ್ಲಿ ಬೀಡು ಬಿಟ್ಟಿತ್ತು. ತಕ್ಷಣವೇ ವೀರೇಂದ್ರ ಪಪ್ಪಿಯನ್ನ ಅರೆಸ್ಟ್ ಮಾಡೋದಕ್ಕೆ ಏನ್ ಬೇಕೋ ಅದೆಲ್ಲ ಸಿದ್ಧತೆಯನ್ನ ಗೌಪ್ಯವಾಗಿಯೇ ಮಾಡ್ಕೊಂಡಿದ್ರು. ಹಾಗೇ ಸಿಕ್ಕಿಂನಲ್ಲಿ ವಶಕ್ಕೆ ಪಡೀತಾ ಇದ್ದಂತೆ ಸಿಕ್ಕಿಂ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡ್ಸಿದ್ದಾರೆ. ಅಲ್ಲಿಂದ ನೇರವಾಗಿ ಶನಿವಾರ ರಾತ್ರಿ ಬೆಂಗಳೂರಿಗೆ ಕರ್ಕೊಂಡ್ ಬಂದಿದ್ದಾರೆ. ಬೆಳಗ್ಗೆ ಬೆಂಗಳೂರಿನ ಕೋರಮಂಗಲದ ಎನ್‌ಜಿವಿಯಲ್ಲಿರುವ 35 ಸಿಸಿಹೆಚ್ ನ್ಯಾಯಾಧೀಶರ ಮುಂದೆ ಹಾಜರು ಪಡ್ಸಿದ್ದಾರೆ. ಈ ಸಂದರ್ಭದಲ್ಲಿ ಇ.ಡಿ ಅಧಿಕಾರಿಗಳು 14 ದಿನ ಕಸ್ಟಡಿಗೆ ಮನವಿ ಮಾಡಿದ್ರು. ಆದ್ರೆ, ನ್ಯಾಯಾಲಯ ಆಗಸ್ಟ್ 28ರ ವರೆಗೆ ಮಾತ್ರ ಇಡಿ ಕಸ್ಟಿಗೆ ನೀಡಿ ಆದೇಶ ಹೊರಡಿಸಿದೆ.
ವೀರೇಂದ್ರ ಪಪ್ಪಿ ಖಂಡಿತವಾಗಿಯೂ ಜಾಮೀನು ಮೊರೆ ಹೋಗ್ತಾರೆ. ನ್ಯಾಯಾಲಯ ಬೇಲ್ ಕೊಡ್ಬೇಕೋ? ಬೇಡವೋ? ಅನ್ನೋದನ್ನ ತೀರ್ಮಾನ ಮಾಡುತ್ತೆ. ಆದ್ರೆ, ಇಡಿ ಅಧಿಕಾರಿಗಳು ವೀರೇಂದ್ರ ಪಪ್ಪಿ ಮನೆ ಮೇಲೆ, ಬ್ಯುಸಿನೆಸ್ ಸೆಂಟರ್‌ಗಳ ಮೇಲೆ ದಾಳಿ ಮಾಡಿದಂತಹ ಸಂದರ್ಭದಲ್ಲಿ ಸಿಕ್ಕಿರೋ ಕುಬೇರ ಸಂಪತ್ತು ನಾವು ನೀವು ಮೂಗಿನ ಮೇಲೆ ಬೆರಳಿಟ್ಟುಕುಳ್ಳುವಂತಿದೆ. ಸ್ವತಃ ಇಡಿ ಅಧಿಕಾರಿಗಳೇ ಶಾಕ್ ಆಗುವಂತಿದೆ. ಹಾಗಾದ್ರೆ, ವೀರೇಂದ್ರ ಪಪ್ಪಿ ಮನೆಯಲ್ಲಿ ಸಿಕ್ಕಿದ್ದು ಏನೇನು?
ಕುಬೇರ ಸಾಮ್ರಾಜ್ಯ!
ಮನೆ ಮತ್ತು ಕ್ಯಾಸಿನೋದಲ್ಲಿ ಸಿಕ್ಕಿರೋ ಹಣ ₹12 ಕೋಟಿ!
₹1 ಕೋಟಿ ಮೌಲ್ಯದ ಫಾರಿನ್ ಕರೆನ್ಸಿ ಪತ್ತೆ, ಇ.ಡಿ ವಶಕ್ಕೆ!
₹6 ಕೋಟಿ ಮೌಲ್ಯದ ಚಿನ್ನಾಭರಣ ಶಾಸಕರ ಮನೆಯಲ್ಲಿ ಪತ್ತೆ!
ಸುಮಾರು 10 ಕೆಜಿ ಅಷ್ಟು ಬೆಳ್ಳಿ ಆಭರಣಗಳು ಸಿಕ್ಕಿವೆ!
ಫ್ಯಾನ್ಸಿ ನಂಬರ್ ಹೊಂದಿರೋ 4 ಐಷಾರಾಮಿ ಕಾರುಗಳು!
ವೀರೇಂದ್ರ ಪಪ್ಪಿಗೆ ಸೇರಿದ 17 ಬ್ಯಾಂಕ್ ಅಕೌಂಟ್ ಸೀಜ್!
ಶಾಸಕ ವೀರೇಂದ್ರ ಪಪ್ಪಿಗೆ ಸೇರಿದ ಎರಡು ಲಾಕರ್ ಸೀಜ್!
ಭಾರೀ ಪ್ರಮಾಣದಲ್ಲಿ ಆಸ್ತಿ ಪ್ರಮಾಣದ ಪತ್ರಗಳು ಪತ್ತೆ!
ಇ.ಡಿ. ಅಧಿಕಾರಿಗಳು ದಾಳಿ ಮಾಡಿದಂತಹ ಸಂದರ್ಭದಲ್ಲಿ ವೀರೇಂದ್ರ ಪಪ್ಪಿ ಮತ್ತು ಅವರ ಒಡೆತನದ ಕ್ಯಾಸಿನೋದಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿ ಪತ್ತೆಯಾಗಿದೆ. ಅದರಲ್ಲಿ ಸುಮಾರು 1 ಕೋಟಿ ಮೌಲ್ಯದ ಫಾರಿನ್ ಕರೆನ್ಸಿ ಪತ್ತೆಯಾಗಿದ್ದು ಅದನ್ನ ಇಡಿ ಅಧಿಕಾರಿಗಳು ವಶಕ್ಕೆ ಪಡ್ಕೊಂಡಿದ್ದಾರೆ. ಇನ್ನು ಸುಮಾರು ₹6 ಕೋಟಿ ಮೌಲ್ಯದ ಚಿನ್ನಾಭರಣ ಶಾಸಕರ ಮನೆಯಲ್ಲಿ ಪತ್ತೆಯಾಗಿದೆ ಅಂತ ಹೇಳಲಾಗ್ತಿದೆ. ಹಾಗೇ ಸುಮಾರು 10 ಕೆಜಿ ಅಷ್ಟು ಬೆಳ್ಳಿ ಆಭರಣಗಳು ಸಿಕ್ಕಿವೆ. ಫ್ಯಾನ್ಸಿ ನಂಬರ್ ಹೊಂದಿರೋ 4 ಐಶಾರಾಮಿ ಕಾರುಗಳು ಪತ್ತೆಯಾಗಿವೆ. ವೀರೇಂದ್ರ ಪಪ್ಪಿಗೆ ಸೇರಿದ 17 ಬ್ಯಾಂಕ್ ಅಕೌಂಟ್‌ಗಳನ್ನ ಇಡಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಹಾಗೇ ಚಿತ್ರದುರ್ಗ ಕ್ಷೇತ್ರದ ಶಾಸಕರಿಗೆ ಸೇರಿದ್ದ ಎರಡು ಬ್ಯಾಂಕ್ ಲಾಕರ್ಗಳನ್ನು ಸೀಜ್ ಮಾಡಲಾಗಿದೆ. ಇನ್ನು ಮನೆ ಮತ್ತು ಬ್ಯುಸಿನೆಸ್ ಸೆಂಟರ್ ಮೇಲೆ ರೇಡ್ ಮಾಡಿದಂತಹ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಆಸ್ತಿ ಪತ್ರಗಳನ್ನ ಅಧಿಕಾರಿಗಳು ವಶಕ್ಕೆ ಪಡ್ಕೊಂಡಿದ್ದಾರೆ ಅಂತ ಹೇಳಲಾಗ್ತಿದೆ.
ವೀರೇಂದ್ರ ಪಪ್ಪಿ ಮನೆಯ ಲಾಕರ್ ನಲ್ಲಿದ್ದ ಕೋಟಿಗಟ್ಟಲೇ ಹಣದ ರಾಶಿ!
ಇ.ಡಿ ಅಧಿಕಾರಿಗಳು ಚಿತ್ರದುರ್ಗದ 6 ಸ್ಥಳಗಳು, ಬೆಂಗಳೂರಿನ 10 ಸ್ಥಳಗಳು, ಜೋಧ್‌ಪುರದ 3 ಸ್ಥಳಗಳು, ಹುಬ್ಬಳ್ಳಿಯ1 ಸ್ಥಳ, ಮುಂಬೈನ 2 ಸ್ಥಳಗಳು ಮತ್ತು ಗೋವಾದ 8 ಸ್ಥಳ ಸೇರಿದಂತೆ 31 ಸ್ಥಳದಲ್ಲಿ ದಾಳಿ ಮಾಡಿದ್ರು. ಇದರಲ್ಲಿ ಪಪ್ಪಿಗೆ ಸಂಬಂಧಿಸಿದ ಐದು ಕ್ಯಾಸಿನೊಗಳಾದ ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ ಮತ್ತು ಬಿಗ್ ಡ್ಯಾಡಿ ಕ್ಯಾಸಿನೊ ಕೂಡ ಸೇರಿತ್ತು.
ಅಂತಾರಾಷ್ಟ್ರೀಯ ಗ್ಯಾಂಬ್ಲಿಂಗ್, ಐಶಾರಾಮಿ ಕ್ಲಬ್ ಸದಸ್ಯತ್ವ!
ವೀರೇಂದ್ರ ಪಪ್ಪಿ ಆಪ್ತರ ಮನೆಗಳ ಮೇಲೂ ನಡೆದಿತ್ತು ಐಟಿ ದಾಳಿ!
ದಾಳಿ ಮಾಡಿದಂತಹ ಇ.ಡಿ. ಅಧಿಕಾರಿಗಳಿಗೆ ವಿದೇಶಿ ಕರೆನ್ಸಿ ನೋಡಿಯೇ ಶಾಕ್ ಆಗಿತ್ತು. ಯಾಕಂದ್ರೆ, ಆ ಕರೆನ್ಸಿ ಮೌಲ್ಯ ಸುಮಾರು 1 ಕೋಟಿ ರೂಪಾಯಿ ಅಂತ ಅಂದಾಜು ಮಾಡಲಾಗಿದೆ. ಬೇರೆ ಬೇರೆ ದೇಶಕ್ಕೆ ಸಂಬಂಧಿಸಿದ ಕರೆನ್ಸಿ ಅದಾಗಿತ್ತು. ಹಾಗೇ ಅದನ್ನ ನೋಡಿದ ತಕ್ಷಣ ವೀರೇಂದ್ರ ಪಪ್ಪಿ ಬ್ಯುಸಿನೆಸ್ ಕೇವಲ ಕರ್ನಾಟಕ, ಗೋವಾಗೆ ಸೀಮಿತವಾಗಿಲ್ಲ. ಅದು ಬೇರೆ ಬೇರೆ ದೇಶಕ್ಕೂ ವಿಸ್ತರಿಸಿದೆ ಅನ್ನೋದ್ ಇ.ಡಿ. ಅಧಿಕಾರಿಗಳಿಗೆ ಅರಿವಾಗಿದೆ. ಹಾಗೇ ಇಷ್ಟೊಂದ್ ಫಾರಿನ್ ಕರೆನ್ಸಿ ಎಲ್ಲಿಂದ ಬಂತು? ಯಾಕಾಗಿ ಇಟ್ಕೊಂಡಿದ್ರು? ಅನ್ನೋ ಬಗ್ಗೆ ತನಿಖೆ ಮಾಡಲಿದ್ದಾರೆ. ಹಾಗೇ ವೀರೇಂದ್ರ ಪಪ್ಪಿ ಆಪ್ತರ ಮನೆಗಳ ಮೇಲೆ. ಸಂಬಂಧಿಕರ ಮನೆಗಳ ಮೇಲೂ ದಾಳಿ ಮಾಡಿ ದಾಖಲೆ ಪತ್ರಗಳನ್ನ ವಶಕ್ಕೆ ಪಡ್ಕೊಂಡಿದ್ದಾರೆ. ಆಪ್ತರ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ಮಾಡೋದು ಯಾಕೆ ಅಂದ್ರೆ, ಸಾಮಾನ್ಯವಾಗಿ ಬ್ಯುಸಿನೆಸ್ ಮ್ಯಾನ್‌ಗಳು, ರಾಜಕಾರಣಿಗಳು ಬೇನಾಮಿ ಆಸ್ತಿ ಮಾಡೋ ಸಾಧ್ಯತೆ ಇರುತ್ತೆ. ಇದೇ ಹಿನ್ನೆಲೆಯಲ್ಲಿ ವೀರೇಂದ್ರ ಪಪ್ಪಿ ಸಂಬಂಧಿಕರು ಮತ್ತು ಆಪ್ತರ ಮನೆಗಳು ಇ.ಡಿ ಅಧಿಕಾರಿಗಳ ಟಾರ್ಗೆಟ್ ಆಗಿತ್ತು.
ಇನ್ನು ರೇಡ್ ಮಾಡಿದಂತಹ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಗ್ಯಾಂಬ್ಲಿಂಗ್ ಮತ್ತು ಐಷಾರಾಮಿ ಕ್ಲಬ್ ಸದಸ್ಯತ್ವ ಇರೋದು ಸಾಬೀತಾಗಿದೆ. ಹೌದು, ದಾಳಿ ವೇಳೆ ಅಧಿಕಾರಿಗಳಿಗೆ ಹಲವಾರು ಅಂತಾರಾಷ್ಟ್ರೀಯ ಕ್ಯಾಸಿನೊ ಮತ್ತು ಐಷಾರಾಮಿ ಕ್ಲಬ್‌ಗಳ ಸದಸ್ಯತ್ವ ಕಾರ್ಡ್‌ಗಳು ದೊರೆತಿವೆ. ಇವುಗಳಲ್ಲಿ ಎಂಜಿಎಂ ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಬೆಲ್ಲಾಜಿಯೊ ಕ್ಯಾಸಿನೊ, ಮರೀನಾ ಕ್ಯಾಸಿನೊ ಮತ್ತು ಕ್ಯಾಸಿನೊ ಜ್ಯುವೆಲ್‌ನ ಸದಸ್ಯತ್ವ ಕಾರ್ಡ್‌ಗಳು ಸೇರಿವೆ. ಇದರ ಜೊತೆಗೆ, ತಾಜ್, ಹಯಾತ್ ಮತ್ತು ಲೀಲಾ ಅಂತಹ ಪ್ರತಿಷ್ಠಿತ ಹೋಟೆಲ್‌ಗಳ ಐಷಾರಾಮಿ ಆತಿಥ್ಯ ಸದಸ್ಯತ್ವ ಕಾರ್ಡ್‌ಗಳೂ ಪತ್ತೆಯಾಗಿವೆ.
ದಾಳಿಗೆ ಕಾರಣ-01
ಆನ್‌ಲೈನ್ ಬೆಟ್ಟಿಂಗ್, ಆಫ್‌ಲೈನ್ ಬೆಟ್ಟಿಂಗ್!
ಕೆಲವೇ ಕೆಲವು ವರ್ಷಗಳಲ್ಲಿ ವೀರೇಂದ್ರ ಪಪ್ಪಿ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿ ಬೆಳೆದಿದ್ರು. ಇವ್ರ ಒಡೆತನದ ಕ್ಯಾಸಿನೋಗಳು ಗೋವಾ, ಶ್ರೀಲಂಕಾ ಸೇರಿದಂತೆ ವಿವಿಧ ದೇಶದಲ್ಲಿ ಇದ್ವು ಅಂತ ಹೇಳಲಾಗ್ತಿದೆ. ಆದ್ರೆ, ಇವ್ರು ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ದಂಧೆ ನಡೆಸ್ತಿದ್ದಾರೆ ಅನ್ನೋ ಆರೋಪವಿತ್ತು. ಆ ಮೂಲಕ ಸಾವಿರಾರು ಕೋಟಿ ವರ್ಗಾವಣೆ ಮಾಡ್ತಿದ್ದಾರೆ ಅನ್ನೋ ಅನುಮಾನವೂ ಇತ್ತು. ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿಯೂ ಮೊಬೈಲ್‌ಗಳು ಇರೋದ್ರಿಂದ ಆನ್‌ನೈನ್ ಬೆಟ್ಟಿಂಗ್ ದಂಧೆ ಬೇಕಾಬಿಟ್ಟಿಯಾಗಿ ಬೆಳೆದು ಬಿಟ್ಟಿದೆ. ಈ ಜಾಲದಲ್ಲಿ ವೀರೇಂದ್ರ ಪಪ್ಪಿ ತಮ್ಮದೇ ಸ್ವಂತ ಆ್ಯಂಪ್ ಕ್ರಿಯೆಟ್ ಮಾಡ್ಕೊಂಡ್ ದಂಧೆ ನಡೆಸ್ತಿದ್ರು ಅನ್ನೋ ದೂರು ಇ.ಡಿ. ಅಧಿಕಾರಿಗಳಿಗೆ ಬಂದಿತ್ತು. ಈ ಬಗ್ಗೆ ಗೋವಾದಲ್ಲಿ ದೂರು ಕೂಡ ದಾಖಲಾಗಿತ್ತು. ಇದು ವೀರೇಂದ್ರ ಪಪ್ಪಿ ಮೇಲೆ ದಾಳಿ ಆಗೋದಕ್ಕೆ ಬಹುಮುಖ್ಯ ಕಾರಣ ಅಂತ ಹೇಳಲಾಗ್ತಿದೆ.
ದಾಳಿಗೆ ಕಾರಣ-02
ಅಕ್ರಮ ಹಣ ವರ್ಗಾವಣೆ ಶಂಕೆ!
ವೀರೇಂದ್ರ ಪಪ್ಪಿಗೆ ಸಂಬಂಧಿಸಿದ ಬ್ಯುಸಿನೆಸ್ ಗೋವಾದಲ್ಲಿದೆ. ಅಲ್ಲಿಯೇ ಇಡಿ ಅಧಿಕಾರಿಗಳು ಶಾಸಕರ ಮೇಲೆ ಇಸಿಐಆರ್ ದಾಖಲು ಮಾಡ್ಕೊಂಡಿದ್ರು. ಇದಕ್ಕೆ ಕಾರಣ, ಅಕ್ರಮ ಹಣ ವರ್ಗಾವಣೆ ಮಾಡ್ತಾರೆ ಅನ್ನೋದು. ಹೌದು, ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಮೂಲಕ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಹಣವನ್ನ ದೇಶ ವಿದೇಶಗಳಿಗೆ ವರ್ಗಾವಣೆ ಮಾಡ್ತಿದ್ದಾರೆ ಅನ್ನೋ ಶಂಕೆ ಇತ್ತು. ಈ ಹಿನ್ನೆಲೆಯನ್ನು ಇಟ್ಟುಕೊಂಡು ಇ.ಡಿ. ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದ್ರೆ, ಅದೆಷ್ಟು ಕೋಟಿ ವರ್ಗಾವಣೆಯಾಗಿದೆ? ಯಾವ ಯಾವ ದೇಶಕ್ಕೆ ವರ್ಗಾವಣೆಯಾಗಿದೆ? ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದ್ರೆ, ಆನ್‌ಲೈನ್ ಬೆಟ್ಟಿಂಗ್ ದಂಧೆ ಕಾನೂನು ಬಾಹಿರವಾಗಿದ್ರೂ ಕಳ್ಳ ಮಾರ್ಗದಲ್ಲಿ ಆ ದಂಧೆ ನಡೀತಾನೆ ಇದೆ.
ದಾಳಿಗೆ ಕಾರಣ-03
ಬ್ಲಾಕ್ ಮನಿ ವೈಟ್ ಮನಿ ಮಾಡ್ತಾ ಇದ್ರಾ?
ಕ್ಯಾಸಿನೋದಲ್ಲಿ, ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ದಂಧೆಯಲ್ಲಿ ಕಪ್ಪು ಹಣವನ್ನ ವೈಟ್ ಮನಿ ಮಾಡಲಾಗುತ್ತೆ ಅನ್ನೋ ಗುಮಾನಿ ಇದ್ದೇ ಇದೆ. ಅದು ಹೇಗೆ ಅಂದ್ರೆ, ಅಕ್ರಮ ಮಾರ್ಗದಲ್ಲಿ, ಅಂದ್ರೆ ನಾನೂನು ಬಾಹಿರವಾದ ಮಾರ್ಗ ಬ್ಯುಸಿನೆಸ್‌ನಲ್ಲಿ ಮಾಡಿದ ಹಣವನ್ನ.. ಬೇರೆ ಬೇರೆ ಉದ್ಯಮಕ್ಕೆ ವಿನಿಯೋಗಿಸಿ ವೈಟ್ ಮನಿಯಾಗಿ ಮಾಡೋದು. ಈ ಕೆಲ್ಸವನ್ನ ವೀರೇಂದ್ರ ಪಪ್ಪಿ ಕೂಡ ಮಾಡ್ತಾ ಇದ್ರು ಅನ್ನೋ ಶಂಕೆ ಇ.ಡಿ. ಅಧಿಕಾರಿಗಳಿಗೆ ಇತ್ತು. ಪಪ್ಪಿಗೆ ಬೇರೆ ಬೇರೆ ದೇಶದಲ್ಲಿ ಉದ್ಯಮ ಸಾಮ್ರಾಜ್ಯ ಇರೋದ್ರಿಂದ ಇಂತಾವೊಂದ್ ಶಂಕೆಯಲ್ಲಿ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದ್ರೆ, ಅದರ ಸತ್ಯಾಸತ್ಯತೆ ಏನು ಅನ್ನೋದು ಇಡಿ ಅಧಿಕಾರಿಗಳಿಗೆ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ. ಬಟ್, ಸಾಮಾನ್ಯ ಕುಟುಂಬದ ಕುಡಿಯಾಗಿದ್ದ ವೀರೇಂದ್ರ ಪಪ್ಪಿ ಇಂದ್ರಲೋಕವನ್ನೇ ನಾಚಿಸೋ ರೀತಿಯಲ್ಲಿ ಸಂಪತ್ತಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಅನ್ನೋದ್ ನಿಜಕ್ಕೂ ರೋಚಕ.. ರಣರೋಚಕ.
ಒಂದು ರೂಪಾಯಿಯಲ್ಲಿ ನೂರು ರೂಪಾಯಿ ಮಾಡೋದು... ಒಂದು ಕೋಟಿಯನ್ನ ನೂರು ಕೋಟಿಗೆ ಏರಿಸೋದು... ಅಂತಾ ಕಲೆಗಾರಿಕೆ ಎಲ್ಲರಿಗೂ ಕರಗತವಾಗಿರೋದಿಲ್ಲ. ಆದ್ರೆ, ವೀರೇಂದ್ರ ಪಪ್ಪಿ ಸಣ್ಣ ವಯಸ್ಸಿನಲ್ಲಿಯೇ ಅಂತಾವೊಂದ್ ವಿದ್ಯೆ ಕಲಿತ್ಕೊಂಡಿದ್ದು ಪಕ್ಕಾ. ಹಾಗಾದ್ರೆ, ಚಿತ್ರದುರ್ಗ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಶಾಸಕರ ಸಾಮ್ರಾಜ್ಯ ಸ್ಥಾಪನೆ ಹೇಗಾಯ್ತು? ಬ್ಯುಸಿನೆಸ್‌ನಲ್ಲಿದ್ದ ಪಪ್ಪಿ ರಾಜಕೀಯಕ್ಕೆ ಎಂಟ್ರಿಯಾಗಿದ್ದು ಯಾಕೆ?
ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ ಕಂಡಿರೋ ಸಂಪತ್ತಿನ ಸಾಮ್ರಾಜ್ಯವನ್ನ ನೋಡಿ ಇ.ಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ... ಎಲ್ಲಿ ನೋಡಿದ್ರೂ ಕಂತೆ ಕಂತೆ ಹಣ... ವಿದೇಶಿ ಕರೆನ್ಸಿ... ಚಿನ್ನಾಭರಣ ಕಣ್ಣಿಗೆ ಕಾಣಿಸ್ತಿತ್ತು. ಹಾಗಾದ್ರೆ, ಇ.ಡಿ ಅಧಿಕಾರಿಗಳು ನಡೆಸಿದ್ದ ಅತೀ ದೊಡ್ಡ ದಾಳಿ ಇದೆನಾ ಅಂತ ಕೇಳಿದ್ರೆ ಖಂಡಿತವಾಗಿಲೂ ಅಲ್ಲ. ಯಾಕಂದ್ರೆ, ಇದಕ್ಕಿಂತ ಅದೆಷ್ಟೋ ದೊಡ್ಡ ದಾಳಿಯನ್ನ ಇ.ಡಿ ಅಧಿಕಾರಿಗಳು ಮಾಡಿದ್ದಾರೆ. ಇದಕ್ಕೂ ಹೆಚ್ಚಿನ ಕಾಂಚಾಣ ವಶಕ್ಕೆ ಪಡ್ಕೊಂಡಿದ್ದಾರೆ. ಚಿನ್ನಾಭರಣಗಳನ್ನ ಜಪ್ತಿ ಮಾಡಿದ್ದಾರೆ. ಆಸ್ತಿ ಪತ್ರಗಳನ್ನ ವಶಕ್ಕೆ ಪಡ್ಕೊಂಡಿದ್ದಾರೆ. ಆದ್ರೆ, ವೀರೇಂದ್ರ ಪಪ್ಪಿ ಮನೆಯಲ್ಲಿ ಅಧಿಕಾರಿಗಳಿಗೆ ಶಾಕ್ ಆಗಿದ್ದು ವಿದೇಶಿ ಕರೆನ್ಸಿ. ಹೌದು, ಸುಮಾರು 1 ಕೋಟಿಗೂ ಮೀರಿದ ವಿದೇಶಿ ಕರೆನ್ಸಿ ಪಪ್ಪಿ ಮನೆಯಲ್ಲಿ ಪತ್ತೆಯಾಗಿದೆ. ಅದನ್ನ ನೋಡಿ ಅಧಿಕಾರಿಗಳು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಅಷ್ಟಕ್ಕೂ ಅಷ್ಟೊಂದ್ ವಿದೇಶಿ ಹಣ ಹೇಗೆ ಬಂತು ಅನ್ನೋ ಬಗ್ಗೆ ಇ.ಡಿ. ಅಧಿಕಾರಿಗಳು ಖಂಡಿತವಾಗಿಯೂ ತನಿಖೆ ಮಾಡ್ತಾರೆ. ಆದ್ರೆ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ವೀರೇಂದ್ರ ಪಪ್ಪಿ ಐಶಾರಾಮಿ ಸಾಮ್ರಾಜ್ಯ ನಿರ್ಮಿಸಿದ್ದು ಹೇಗೆ? ರಾಜಕೀಯ ಎಂಟ್ರಿ ಹೇಗಿತ್ತು? ಅಂತ ನೋಡ್ತಾ ಹೋದ್ರೆ ಭಾರೀ ಇನ್‌ಟ್ರೆಸ್ಟಿಂಗ್ ವಿಚಾರಗಳು ತೆರೆದುಕೊಳ್ತಾವೆ.
ಬಡ್ಡಿ ದಂಧೆ ಮಾಡ್ತಾ ಇದ್ರಾ ಶಾಸಕ ವೀರೇಂದ್ರ ಪಪ್ಪಿ?
ಬೆಟ್ಟಿಂಗ್ ದಂಧೆಯಲ್ಲಿ ಕೋಟಿ ಕೋಟಿ ದುಡ್ಡು ಮಾಡಿದ್ರಾ?
ಇವತ್ತು ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ ಕೋಟಿ ಕೋಟಿ ಹಣವೂ ಪತ್ತೆಯಾಗಿದೆ. ಆಸ್ತಿ ಪತ್ರಗಳು ಪತ್ತೆಯಾಗಿವೆ. ಐಶಾರಾಮಿ ಕಾರುಗಳು ಸಿಕ್ಕಿವೆ. ಅವರ ಮಾಲಿಕತ್ವದ ಕ್ಯಾಸಿನೋಗಳು ಇವೆ ಅಂತ ಹೇಳಲಾಗಿದ್ದು, ಅವುಗಳ ಮೇಲೂ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಾಗಾದ್ರೆ, ವೀರೇಂದ್ರ ಪಪ್ಪಿ ಬೈ ಬರ್ತ್ ಗೋಲ್ಡನ್ ಸ್ಪೋನ್ ಆಗಿದ್ರಾ ಅಂತ ನೋಡ್ತಾ ಹೋದ್ರೆ ಇಲ್ಲ ಅನ್ನೋ ಉತ್ತರ ಚಿತ್ರದುರ್ಗದ ಜನರೇ ಹೇಳ್ತಿದ್ದಾರೆ.
ಸಾಮ್ಯಾನ ಕುಟುಂಬದ ಕುಡಿಯಾಗಿದ್ದ ವೀರೇಂದ್ರ ಪಪ್ಪಿ ಆರಂಭದಲ್ಲಿ ಬಡ್ಡಿ ವ್ಯವಹಾರಕ್ಕೆ ಧುಮುಕುತ್ತಾರೆ ಅಂತಾ ಹೇಳಲಾಗ್ತಿದೆ. ಹೌದು, ಬಡ್ಡಿಗೆ ಹಣಕೊಟ್ಟು ಹಂತ ಹಂತವಾಗಿ ಬೆಳೆಯುತ್ತಾ ಬರ್ತಾರಂತೆ. ಆಮೇಲೆ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಇಳೀತಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಅದ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ದಂಧೆಯಲ್ಲಿ ವೀರೇಂದ್ರ ಪಪ್ಪಿ ಆರೋಪಿಯಾಗಿದ್ದು ಕೇಸ್‌ಗಳು ದಾಖಲಾಗಿವೆ. ಇನ್ನು ಬೆಟ್ಟಿಂಗ್ ದಂಧೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ಮಾಡೋ ಇವ್ರು ಆ ಹಣವನ್ನ ಬೇರೆ ಬೇರೆ ಉದ್ಯಮಕ್ಕೆ ಹೂಡಿಕೆ ಮಾಡ್ತಾರೆ. ಹನಿ ಹನಿ ಸೇರಿದ್ರೆ ಹಳ್ಳ ಅನ್ನೋ ಹಾಗೇ ಕೋಟಿ ಕೋಟಿ ಸೇರಿ ನೂರಾರು ಕೋಟಿ ಅನ್ನೋ ರೀತಿಯಲ್ಲಿ ಸಾಮ್ರಾಜ್ಯ ವಿಸ್ತರಿಸಿದ್ದಾರೆ.
ಆಫ್‌ಲೈನ್ ಬೆಟ್ಟಿಂಗ್‌ನಿಂದ ಆನ್‌ಲೈನ್ ಬೆಟ್ಟಿಂಗ್‌ಗೆ ಶಿಫ್ಟ್?
ಬೇರೆ ಬೇರೆ ದೇಶಕ್ಕೂ ಬ್ಯುಸಿನೆಸ್ ವಿಸ್ತರಿಸಿದ್ದ ವೀರೇಂದ್ರ ಪಪ್ಪಿ!
ವೀರೇಂದ್ರ ಪಪ್ಪಿಗೆ ಕೈಯಲ್ಲಿರೋ 1 ರೂಪಾಯಿಯನ್ನ 100 ರೂಪಾಯಿಗೆ ವಿಸ್ತರಿಸೋದು ಹೇಗೆ ಅಂತ ಗೊತ್ತು. ಹಾಗೇ 1 ಕೋಟಿಯನ್ನ ಹತ್ತಾರು ಕೋಟಿಗೆ ಏರಿಸೋದ್ ಹೇಗೆ ಅನ್ನೋದೂ ಗೊತ್ತು. ಇಂಥ ಕಲೆಗಾರಿಕೆಯನ್ನ ವೀರೇಂದ್ರ ಪಪ್ಪಿ ಬಾಲ್ಯದಲ್ಲಿಯೇ ಕಲಿತ್ಕೊಂಡಿರ್ತಾರೆ. ಅದು ಹೇಗೆ ಅಂದ್ರೆ ಬಡ್ಡಿ ದಂಧೆ ಮತ್ತು ಬೆಟ್ಟಿಂಗ್‌ನಿಂದ ಅಂತ ಹೇಳಲಾಗ್ತಿದೆ. ಹಾಗೇ ಬೆಟ್ಟಿಂಗ್ ದಂಧೆಯಲ್ಲಿ ಭಾರೀ ಪ್ರಮಾಣದ ಹಣದ ವಹಿವಾಟು ನೋಡಿದಂತಹ ವೀರೇಂದ್ರ ಪಪ್ಪಿ ಅಲ್ಲಿಂದ ಆನ್‌ಲೈನ್ ಬೆಟ್ಟಿಂಗ್‌ಗೆ ತಮ್ಮ ಸಾಮ್ರಾಜ್ಯವನ್ನ ವಿಸ್ತರಣೆ ಮಾಡ್ತಾರೆ ಎನ್ನಲಾಗಿದೆ. ಇದೀಗ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು ಅದೇ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಆ ಮೂಲಕ ಅಕ್ರಮ ಹಣ ವಹಿವಾಟು ನಡೆಸ್ತಿದ್ದಾರೆ ಅನ್ನೋ ವಿಚಾರಕ್ಕೆ. ಇನ್ನು ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಇಳಿದ್ಮೇಲೆ ಪಪ್ಪಿ ತಿರುಗಿ ನೋಡಿದ್ದೇ ಇಲ್ಲ. ಅಲ್ಲಿಂದ ಕುಬೇರನೇ ನಾಚುವಂತೆ ಸಾಮ್ರಾಜ್ಯವನ್ನ ವಿಸ್ತರಣೆ ಮಾಡ್ತಾ ಹೋಗ್ತಾರೆ. ಹಾಗೇ ಬೇರೆ ಬೇರೆ ದೇಶಕ್ಕೂ ಬ್ಯುಸಿನೆಸ್ ವಿಸ್ತರಣೆ ಮಾಡ್ತಾರೆ.
ಇ.ಡಿ ರೇಡ್ ವೇಳೆ ವೀರೇಂದ್ರ ಪಪ್ಪಿ ಮನೆಯಲ್ಲಿ ಸಿಕ್ಕಿರೋ ಕಂತೆ ಕತೆ ವಿದೇಶಿ ನೋಟುಗಳೇ ಇವ್ರಿಗೆ ವಿದೇಶದಲ್ಲಿ ವ್ಯವಹಾರ ಇತ್ತು. ಅದು ತುಂಬಾ ಲಾಭದಾಯಕವಾಗಿತ್ತು ಅನ್ನೋದ್ ಕನ್ಫರ್ಮ್. ಯಾಕಂದ್ರೆ, ಯಾರು ಸುಖಾಸುಮ್ಮನೇ ಮನೆಯಲ್ಲಿ ಕಂತೆ ಕಂತೆ ವಿದೇಶಿ ನೋಟೋಗಳನ್ನ ಇಟ್ಟುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಹಾಗೊಂದ್ ವೇಳೆ ವಿದೇಶಿ ಹಣದ ಮೇಲೆ ವ್ಯಾಮೋಹ ಇದ್ರೆ ಒಂದೋ ಎರಡೋ ನೋಟೋಗಳನ್ನ ಇಟ್ಕೊಳ್ಳುವ ಸಾಧ್ಯತೆ ಇರುತ್ತೆ. ಆದ್ರೆ, ಇ.ಡಿ ದಾಳಿ ವೇಳೆ ಸಿಕ್ಕಿದ್ದು ಬರೋಬ್ಬರಿ 1 ಕೋಟಿ ಮೌಲ್ಯದ ವಿದೇಶಿ ನೋಟು.
ಬ್ಯುಸಿನೆಸ್‌ನಲ್ಲಿದ್ದ ಪಪ್ಪಿಯ ರಾಜಕೀಯ ಎಂಟ್ರಿಯಲ್ಲಿ ರಹಸ್ಯ!
ಜೆಡಿಎಸ್‌ನಲ್ಲಿ ಸ್ಪರ್ಧೆ ಮಾಡಿ ಎದುರಾಳಿ ನಡುಗಿಸಿದ್ದ ಪಪ್ಪಿ!
ಕಾಂಗ್ರೆಸ್‌ಗೆ ಜಂಪ್ ಆಗಿ ಭರ್ಜರಿ ಗೆಲುವು ಸಾಧಿಸಿದ್ರು!
ಬ್ಯುಸಿನೆಸ್ ಮ್ಯಾನ್‌ಗಳು ರಾಜಕೀಯಕ್ಕೆ ಎಂಟ್ರಿಯಾಗೋದು ಹೊಸ ವಿಷ್ಯ ಏನಿಲ್ಲ. ಅಂತವರು ರಾಜಕೀಯಕ್ಕೆ ಎಂಟ್ರಿಯಾಗ್ತಾರೆ ಅಂದ್ರೆ ಅಲ್ಲಿ ಏನಾದ್ರೂ ಪ್ಲ್ಯಾನ್‌ಗಳು ಇದ್ದೇ ಇರ್ತಾವೆ. ಈ ಹಿಂದೆ ವೀರೇಂದ್ರ ಪಪ್ಪಿ ಮನೆಯ ಮೇಲೆ 2016 ರಲ್ಲಿ ಐಟಿ ದಾಳಿಯಾಗಿತ್ತು. ಆ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ಹಣವನ್ನ ವಶಪಡಿಸಿಕೊಳ್ಳಲಾಗಿತ್ತು. ಅನಂತರ ವೀರೇಂದ್ರ ಪಪ್ಪಿ ರಾಜಕೀಯದಲ್ಲಿ ಕಾಣಿಸಿಕೊಳ್ಳಲು ಶುರು ಮಾಡ್ತಾರೆ. ಹಾಗೇ 2018ರ ಲ್ಲಿ ಜೆಡಿಎಸ್‌ನಿಂದ ಟಿಕೆಟ್ ಪಡ್ಕೊಂಡ್ ಸ್ಪರ್ಧೆಯನ್ನೂ ಮಾಡ್ತಾರೆ. ವಿಧಾನಸಭೆಗೆ ಸ್ಪರ್ಧೆ ಮಾಡಿದ ಮೊದಲ ಬಾರಿಗೆ ಎದುರಾಳಿಯನ್ನ ನಡುಗಿಸಿ ಬಿಡ್ತಾರೆ. ಸುಮಾರು 49 ಸಾವಿರಕ್ಕೂ ಹೆಚ್ಚಿನ ವೋಟ್‌ಗಳನ್ನ ಪಡ್ಕೊಂಡ್ ಎರಡನೇ ಸ್ಥಾನಕ್ಕೆ ತೃಪ್ತರಾಗ್ತಾರೆ. 82 ಸಾವಿರ ವೋಟ್ ಪಡೆದಿದ್ದ ಬಿಜೆಪಿಯ ತಿಪ್ಪಾರೆಡ್ಡಿ ಗೆಲುವು ಸಾಧಿಸಿದ್ದರು.
ಜೆಡಿಎಸ್‌ನಲ್ಲಿದ್ರೆ ಕ್ಷೇತ್ರದಲ್ಲಿ ಗೆಲುವು ಕಷ್ಟ ಅನ್ನೋದ್ ಬಹುಶಃ ವೀರೇಂದ್ರ ಪಪ್ಪಿಗೆ ಆ ಸಂದರ್ಭದಲ್ಲಿ ಅರಿವಾಗುತ್ತೆ. ಹೀಗಾಗಿಯೇ ನಿಧಾನಕ್ಕೆ ಕಾಂಗ್ರೆಸ್‌ಗೆ ಜಂಪ್ ಆಗ್ತಾರೆ. 2023ರ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡ್ಕೊಂಡ್ ಅಖಾಡಕ್ಕಿಳಿತಾರೆ. ಕ್ಷೇತ್ರಾದ್ಯಂತ ಭರ್ಜರಿ ಕ್ಯಾಂಪೇನ್ ಮಾಡ್ತಾ ಗೆಲ್ಲೋ ಕ್ಯಾಂಡಿಡೇಟ್ ತಾನೇ ಅಂತ ಬಿಂಬ್ಬಿಸ್ಕೊಳ್ತಾರೆ. ಹಾಗೇ ರಿಸಲ್ಟ್ ಬಂದ್ಮೇಲೆ ಬರೋಬ್ಬರಿ 53 ಸಾವಿರ ವೋಟ್‌ಗಳ ಅಂತರದಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡ್ತಾರೆ. ಈ ರೀತಿಯಾಗಿ ರಾಜಕೀಯದಲ್ಲೂ, ಬ್ಯುಸಿನೆಸ್‌ನಲ್ಲೂ ಸಾಮ್ರಾಜ್ಯ ವಿಸ್ತರಣೆ ಮಾಡ್ಕೊಂಡಿದ್ದ ವೀರೇಂದ್ರ ಪಪ್ಪಿ ಈಗ ಇ.ಡಿ. ಇಕ್ಕಳದಲ್ಲಿ ತಗ್ಲಾಕೊಂಡಿದ್ದಾರೆ. ಇದ್ರಿಂದ ಹೊರಬರ್ತಾರಾ? ಇಲ್ಲವೇ ಅಲ್ಲಿಯೇ ತಗ್ಲಾಕೊಂಡ್ ವಿಲವಿಲ ಒದ್ದಾಡ್ತಾರಾ? ಅನ್ನೋದನ್ನ ಕಾದು ನೋಡೋಣ.
134 ಕೋಟಿ ರೂಪಾಯಿ ಆಸ್ತಿಪಾಸ್ತಿ ಅಧಿಕೃತ ಘೋಷಣೆ
ಇನ್ನೂ 2023 ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ವೀರೇಂದ್ರ ಪಪ್ಪಿ, ಬರೋಬ್ಬರಿ 134 ಕೋಟಿ ರೂಪಾಯಿ ಆಸ್ತಿಪಾಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗದ ಎದುರು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಜೊತೆಗೆ 19 ಕೋಟಿ ರೂಪಾಯಿ ಸಾಲ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.