/newsfirstlive-kannada/media/media_files/2025/08/23/mask-man-face-revealed022-2025-08-23-12-53-07.jpg)
ಮಾಸ್ಕ್ ಮ್ಯಾನ್ ಚಿನ್ನಯ್ಯ ಅಂಡ್ ಟೀಮ್ ನಿಂದ ಸಾಕಷ್ಟು ಕಾನೂನು ಉಲಂಘನೆ
ಎಲ್ಲರ ಬುರುಡೇಲೂ ಒಂದೇ ಮೆದುಳಂತೆ..ಆದ್ರೆ, ಬುದ್ಧಿ ಒಂದಿಲ್ಲ ಅನ್ನೋ ಸಾಲುಗಳು ಬುರುಡೆ ಗ್ಯಾಂಗ್ಗೇ ನೀಟಾಗಿಯೇ ಸೂಟ್ ಆಗುತ್ತೆ. ಧರ್ಮಸ್ಥಳದ ವಿರುದ್ಧ ಬುರುಡೆ ಷಡ್ಯಂತ್ರ ಮಾಡಿದ ಬುರುಡೆ ಟೀಮ್ ಅದಕ್ಕಾಗಿ ಚಿನ್ನಯ್ಯ ಅನ್ನೋ ಮಾಸ್ಕ್ಮ್ಯಾನ್ ಹುಟ್ಟಿಸಿತ್ತು..ಆದ್ರೆ, ತೋಡಿದ ಗುಂಡಿಗಳಲ್ಲಿ ಮೂಳೆಗಳು ಸಿಕ್ಕೇ ಸಿಗುತ್ತೆ ಅನ್ನೋ ವಿಶ್ವಾಸ ಅವರಿಗೆ ಯಾರ್ ಕೊಟ್ರೋ ಗೊತ್ತಿಲ್ಲ..ಚೆನ್ನ ಫೇಲ್ ಆಗಿ ತನ್ನ ಸೂತ್ರಧಾರರ ಬುಡಕ್ಕೇ ತಂದಿಟ್ಟಿದ್ದಾನೆ..ಚೆನ್ನ ಅನ್ನೋ ಎರೆಹುಳು ಬಳಸಿಕೊಂಡು ದೊಡ್ಡ ಬೇಟೆಗೆ ನಿಂತಿದ್ದ ಸೂತ್ರದಾರರ ಬೇಟೆಗೇ ಎಸ್ಐಟಿ ಟೊಂಕ ಕಟ್ಟಿದೆ..
ಆಟ ಶುರು..ಅಸಲಿ ಆಟ ಇದೀಗ ಶುರುವಾಗಿದೆ.ಅಂದಹಾಗೇ ಇದು ಅಂತಿಂಥಾ ಆಟ ಅಲ್ಲ. ಕಳೆದ ಎರಡು ತಿಂಗಳುಗಳಿಂದ ಬೇಕಾಬಿಟ್ಟಿ ಬುರುಡೆ ಬಿಟ್ಟು ಇಡೀ ರಾಜ್ಯದ ಜನರನ್ನೇ ಮಕ್ಕರ್ ಮಾಡಿದ ಗ್ಯಾಂಗ್ನ ಬೇಟೆಯ ಆಟ. ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೀನಿ. ಆ ಶವಗಳಲ್ಲಿ ಹೆಣ್ಣುಮಕ್ಕಳ ಹೆಣಗಳೇ ಜಾಸ್ತಿ. ಆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯದ ಕುರುಹುಗಳಿದ್ದವು ಅಂತಾ ಕಂಡ ಕಂಡಲ್ಲಿ ಗುಂಡಿ ಅಗೆಸಿದ ಚಿನ್ನಯ್ಯ, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಿಯ ವೀಕ್ಷಕರೇ, ಟೈಮ್ ಅನ್ನೋದು ಹೇಗಿರುತ್ತೆ ನೋಡಿ. ಇದೇ ಜಸ್ಟ್ ಮೂರ್ನಾಲ್ಕು ದಿನಗಳ ಹಿಂದೆ ಬುರುಡೆ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ ಇದ್ದ ರೀತಿ ಹೇಗಿತ್ತು?..ರಾಶಿ ರಾಶಿ ಮೂಳೆಗಳನ್ನ ಹುಡುಕಿಕೊಡ್ತೀನಿ ಅಂತಾ ಬದವನಿಗೆ ಸಿಕ್ಕಾಪಟ್ಟೆ ರಕ್ಷಣೆ ಇತ್ತು..ವಿಟ್ನೆಸ್ ಪ್ರೊಟೆಕ್ಷನ್ ಌಕ್ಟ್ನ ಬಲವಿತ್ತು..ಬೆಳಗ್ಗೆ ಲಾಯರ್ಸ್ ಜೊತೆಗೇ ಬರಬೇಕಿತ್ತು..ಮೂಳೆ ಇರೋ ಜಾಗ ತೋರಿಸಬೇಕಿತ್ತು..ಸಂಜೆ ಮತ್ತೆ ಹೋಗಬೇಕಿತ್ತು..ಅಷ್ಟೇ, ಹೀಗಿದ್ದ ಮಾಸ್ಕ್ಮ್ಯಾನ್ ತಾನಾಗೇ ತನ್ನದೇ ಗುಂಡಿತೋಡಿಕೊಳ್ತಾನೆ ಅಂತಾ ಯಾರಿಗೂ ಒಂದು ಸಣ್ಣ ಅಂದಾಜು ಕೂಡ ಇರಲಿಲ್ಲ
ಚಿನ್ನಯ್ಯ ಹೀಗೆ ಮಾಸ್ಕ್ ಹಾಕೊಂಡು ರಾಜ್ಯದ ಜನರ ಮುಂದೆ ಸುಳ್ಳಿನ ಗುಂಡಿ ತೋಡಿದ್ದು, ಒಂದಲ್ಲ. ಎರಡಲ್ಲ...ಬರೋಬ್ಬರಿ 16 ದಿನಗಳು..ಸರ್ಕಾರ ಹಾಗೂ ಎಸ್ಐಟಿ ಪೊಲೀಸರ ದಿಕ್ಕನ್ನೇ ತಪ್ಪಿಸಿ ಪ್ರಾಯಶ್ಚಿತದ ನಾಟಕ ಆಡಿದ ಚಿನ್ನಯ್ಯನ ಡ್ರಾಮಾದ ಸೀನ್ ಶುಕ್ರವಾರ ಬೆಳಗ್ಗೆ 11 ಗಂಟೆಯ ಬಳಿಕ ಕಂಪ್ಲೀಟ್ ಚೇಂಜ್ ಆಗಿಬಿಡ್ತು. ಧರ್ಮಸ್ಥಳ ಬುರುಡೆಗಳ ರಹಸ್ಯದ ಸಾಕ್ಷಿದಾರನಾಗಿ ಬಂದವನು ಕೊನೆಗೆ ಆರೋಪಿಯಾಗಿ ಪೊಲೀಸರಿಗೆ ಲಾಕ್ ಆಗ್ಬಿಟ್ಟ..ಧರ್ಮಸ್ಥಳದ ವಿರುದ್ಧ ನಾನ್ ಹೇಳಿದ್ದೆಲ್ಲಾ ಸುಳ್ಳು ಸ್ವಾಮಿ.ನನ್ನನ್ನ ಈ ರೀತಿ ಹೇಳೋದಕ್ಕೆ ಒತ್ತಡ ಹಾಕಿದ್ರು ಅಂತಾ ತನ್ನ ಬೆನ್ನ ಹಿಂದಿರುವ ಸೂತ್ರದಾರರ ಬಗ್ಗೆ ಸತ್ಯ ಕಕ್ಕಿಬಿಟ್ಟ..ಚಿನ್ನಯ್ಯ ಹೀಗೆ, ಅಪ್ರೂವರ್ ಆಗ್ತಿದ್ದನಂತೆ ಇವನನ್ನ ಗಾಳ ಮಾಡ್ಕೊಂಡು ದೊಡ್ಡ ಬೇಟೆಗೆ ಹಾತೊರೆಯುತ್ತಿದ್ದ ಬುರುಡೆ ಗ್ಯಾಂಗ್ಗೆ ಸಿಕ್ಕಾಪಟ್ಟೆ ನಡುಕ ಶುರುವಾಗಿದೆ. ಯಾಕಂದ್ರೆ, ನಮಗೆ ಸಿಕ್ಕಿರೋ ಮಾಹಿತಿ ಪ್ರಕಾರ ತನ್ನನ್ನ ಯಾಱರು ದಾಳವಾಗಿ ಮಾಡ್ಕೊಂಡ್ರು ಅನ್ನೋರ ಹೆಸರುಗಳನ್ನ ಚಿನ್ನಯ್ಯ ಈಗಾಗಲೇ ಪೊಲೀಸರ ಮುಂದ ಬಾಯ್ಬಿಟ್ಟಿದ್ದಾನೆ. ಈ ಮಧ್ಯೆ ಬುರುಡೆ ಗ್ಯಾಂಗ್ನ ಷಡ್ಯಂತ್ರದ ವಿಚಾರದಲ್ಲಿ ಮತ್ತಷ್ಟು ಸ್ಫೋಟಕ ವಿಚಾರಗಳು ಹೊರಬರ್ತಿವೆ. ಅವ್ರು ಚಿನ್ನಯ್ಯನನ್ನ ಧರ್ಮಸ್ಥಳದ ವಿರುದ್ಧ ಆರೋಪ ಮಾಡೋದಕ್ಕೆ ಯಾವ್ಯಾವ ರೀತಿ ಅವನನ್ನ ಬಳಸಿಕೊಂಡ್ರು ಅನ್ನೋ ಸ್ಫೋಟಕ ಇನ್ಫಾರ್ಮೇಷನ್ಸ್ ಸಿಕ್ಕಿದೆ...
ಚೆನ್ನನ ಗಾಳಕ್ಕೆ ಸಿಲುಕಿಸಿದವರ ಬೇಟೆಗೇ ಎಸ್ಐಟಿ ಟೊಂಕ!
ಮೊಬೈಲ್ ಇಲ್ಲ ಎಂದ ಮಾಸ್ಕ್ಮ್ಯಾನ್, ಎಲ್ಲೋಯ್ತು ಚೆನ್ನ?
ಬುರುಡೆ ಮ್ಯಾನ್ ಚೆನ್ನನ ವಿಚಾರದಲ್ಲಿ ನಾವ್ ಆಗಲೇ ಹೇಳಿದ್ದನ್ನ ನೀವು ಸೂಕ್ಷ್ಮವಾಗಿ ಗಮನಿಸಿದ್ರೆ ಒಂದು ವಿಷ್ಯ ಅರ್ಥವಾಗುತ್ತೆ. ಚೆನ್ನ ತಾನು ಹೂತಿರೋ ಹೆಣಗಳ ಮೂಳೆಗಳಿರುವ ಜಾಗ ತೋರಿಸ್ತೀನಿ ಅಂತಾ ನಿತ್ಯ ಬರ್ತಿದ್ದಾಗ ಅವನಿಗೆ ವಿಟ್ನೆಸ್ ಪ್ರೊಟೆಕ್ಷನ್ ಌಕ್ಟ್ನ ರಕ್ಷಣೆ ಇತ್ತು. ಲಾಯರ್ ಜೊತೆಗೇ ಬರ್ತಿದ್ದ, ಲಾಯರ್ ಜೊತೆಗೇ ಹೋಗ್ತಿದ್ದ. ಸದಾಕಾಲ ವಕೀಲರ ಜೊತೆಗೇ ಇರ್ತಿದ್ದರಿಂದ ಎಸ್ಐಟಿಯವರಿಗೆ ಚೆನ್ನನಿಗೆ ಗದರಿಸಿಯೋ, ಜೋರು ಮಾಡಿಯೋ ಸತ್ಯ ಬಾಯಿಬಿಡಿಸೋದಕ್ಕೆ ಆಗಿರಲಿಲ್ಲ..ಆದ್ರೆ, ಅದ್ಯಾವಾಗ ಚೆನ್ನನನ್ನೇ ವಿಚಾರಣೆ ಮಾಡಲು ಎಸ್ಐಟಿ ನಿರ್ಧರಿಸಿತೋ ಶನಿ ಚಿನ್ನಯ್ಯನ ಹೇಗಲೇರಿತ್ತು . ಶನಿವಾರ ವಿಚಾರಣೆ ವೇಳೆ ತನ್ನನ್ನ ಯಾವುದೋ ಒಂದು ತಂಡ ಬೆದರಿಸಿ ಈ ರೀತಿ ಸುಳ್ಳು ಹೇಳುವಂತೆ ಒತ್ತಡ ಹಾಕಿದೆ ಅನ್ನೋದನ್ನು ಎಸ್ಐಟಿ ಎದುರು ಚಿನ್ನಯ್ಯ ಬಾಯ್ಬಿಟ್ಟಿದ್ದ. ಚಿನ್ನಯ್ಯ ಹಾಗೆ ಹೇಳ್ತಿದ್ದಂತೆ ಎಸ್ಐಟಿಗೂ ಬುರುಡೆಗಳ ವಿಚಾರದಲ್ಲಿ ಹುಟ್ಕೊಂಡಿದ್ದ ಡೌಟ್ ಕ್ಲಿಯರ್ ಆಗಿತ್ತು. ಆದರೇ, ಚೆನ್ನ ಅಪ್ರೂವರ್ ಆಗ್ತಿದ್ದಂತೆ ಮತ್ತಷ್ಟು ರಹಸ್ಯ ಭೇದಿಸೋಕೆ ಎಸ್ಐಟಿ ಚೆನ್ನನಿಗೆ ಕೇಳಿದ ಒಂದೇ ಒಂದು ಪ್ರಶ್ನೆ ಅಂದ್ರೆ ನಿನ್ನ ಮೊಬೈಲ್ ಎಲ್ಲಿ ಅನ್ನೋದು..ಎಸ್ಐಟಿಯ ಮೊಬೈಲ್ ಎಲ್ಲಿ ಅನ್ನೋ ಪ್ರಶ್ನೆಗೆ ಚೆನ್ನ ಕೊಟ್ಟ ಆನ್ಸರ್ ಏನ್ ಗೊತ್ತಾ? ಇಲ್ಲ ಅಂತಾ ನನ್ ಹತ್ರ ಮೊಬೈಲ್ ಇಲ್ಲ ಅಂತಾ.
ಈ ಕಾಲದಲ್ಲಿ ಮಾಸ್ಕ್ ಮ್ಯಾನ್ ಅಂಥವರ ಬಳಿ ಮೊಬೈಲ್ ಇಲ್ವಾ? ಇಲ್ಲ ಅಲ್ಲ.. ಇತ್ತು..ಚೆನ್ನನ ಬಳಿ ಮೊಬೈಲ್ ಇತ್ತು..ನೋಡಿ..ಚೆನ್ನನನ್ನ ಧರ್ಮಸ್ಥಳದ ವಿರುದ್ಧ ಎತ್ತಿಕಟ್ಟಿದ ಸೂತ್ರಧಾರರು ಅದೆಷ್ಟರ ಮಟ್ಟಿಗೆ ಪ್ರಳಯಾಂತಕ ರೀತಿಯಲ್ಲಿ ಮಾಡಿರೋ ಮತ್ತೊಂದು ಪ್ಲಾನ್ ಇದು..ಚೆನ್ನನಿಗೆ ಒಂದಷ್ಟು ದುಡ್ಡು ಕೊಟ್ಟು ಸುಳ್ಳು ಹೇಳು ಅಂತಾ ಹೇಳಿದವರಿಗೆ ಎಲ್ಲೋ ಒಂದು ಕಡೆ ಆತನ ಮೇಲೂ ನಂಬಿಕೆ ಇಲ್ಲದೇ ಹೋಗಿತ್ತು..ಎಲ್ಲಿ ಯಾವುದೇ ಸಮಯದಲ್ಲಿ ಚೆನ್ನನ ಮೈಂಡ್ ಬದಲಾಗಿ ಧರ್ಮಸ್ಥಳ ಪರವಾಗಿರೋರನ್ನ ಈತ ಕಾಂಟ್ಯಾಕ್ಟ್ ಮಾಡಿಬಿಡ್ತಾನೋ ಅನ್ನೋ ಭಯದಲ್ಲಿ ಷಡ್ಯಂತ್ರದ ಸೂತ್ರಧಾರರು ಈತನ ಬಳಿಯಿದ್ದ ಮೊಬೈಲನ್ನೂ ಕಸಿದುಕೊಂಡಿದ್ದಾರೆ..
ಕೋರ್ಟ್ಗೆ ಬುರುಡೆ ತಂದ ದಿನವೇ ಇಲ್ಲವಾಯ್ತು ಮೊಬೈಲ್!
ಅಂದೇ ಮೊಬೈಲ್ ಕಸಿದುಕೊಂಡಿದ್ದ ‘ಬುರುಡೆ’ ಸೂತ್ರಧಾರರು!
ಕೆಲ ದಿನಗಳ ಹಿಂದಷ್ಟೇ ನಾನು ಧರ್ಮಸ್ಥಳದಲ್ಲಿ ಶವಗಳನ್ನ ಹೂತಿದ್ದೀನಿ ಅಂತಾ ಕೋರ್ಟ್ಗೆ ಚೆನ್ನಾ ಅದ್ಯಾವಾಗ ಬುರುಡೆ ಸಮೇತ ಬಂದನೋ. ಅಂದೇ ಷಡ್ಯಂತ್ರದ ಸೂತ್ರಧಾರರಿಗೆ ಒಂದಂತೂ ಕನ್ಫರ್ಮ್ ಆಗಿತ್ತು..ಇದು ರಾಜ್ಯದ್ಯಾಂತ ಬೆಂಕಿ ಬಿರುಗಾಳಿಯಂತಹ ಸುದ್ದಿ ಆಗುತ್ತೆ, ಸರ್ಕಾರದ ಮಟ್ಟದಲ್ಲೂ ಸಂಚಲನ ಸೃಷ್ಟಿಸುತ್ತೆ ಅನ್ನೋದು ಪಕ್ಕಾ ಆಗಿತ್ತು .ಆ ಕಾರಣದಿಂದಲೇ ಚೆನ್ನನನ್ನ ವಕೀಲರನ್ನ ಹೊರತುಪಡಿಸಿ ಬೇರೆ ಯಾರೂ ಹತ್ತಿರ ಸುಳಿಯದಂತೆ ಮಾಡಿದ್ದರು. ತಲೆಬುರುಡೆಯನ್ನ ಕೋರ್ಟ್ಗೆ ತಂದ ದಿನವೇ ಇವನ ಮೊಬೈಲ್ನ ಕೂಡ ಕಿತ್ತುಕೊಂಡ ಅವರು, ಯಾವುದೇ ಫೋನ್ ಸಂಪರ್ಕದಿಂದಲೂ ಚೆನ್ನನನ್ನ ದೂರವಿಟ್ಟರು ಅನ್ನೋದನ್ನ ಎಸ್ಐಟಿ ಅಧಿಕಾರಿಗಳ ಮುಂದೆಯೇ ಚೆನ್ನ ಹೇಳಿದ್ದಾನೆ ಅನ್ನೋದು ನಮಗೆ ಸಿಕ್ಕಿರೋ ಮಾಹಿತಿ..ಈ ಕಾರಣದಿಂದಾನೇ ಸದ್ಯ ಚೆನ್ನನ ಮೊಬೈಲ್ ಹಿಂದೆ ಎಸ್ಐಟಿ ಅಧಿಕಾರಿಗಳು ಬಿದ್ದಿದ್ದಾರೆ..ಒಂದು ವೇಳೆ ಆ ಮೊಬೈಲ್ ಏನಾದ್ರೂ ಸಿಕ್ತು ಅಂತಾದ್ರೆ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದ ಗ್ಯಾಂಗ್ನ ಪತ್ತೆ ಪಕ್ಕಾ ಆಗೇ ಆಗುತ್ತೆ. ಚೆನ್ನನ ಮೊಬೈಲ್ನ ಕಾಲ್ ಡೀಟೇಲ್ಸ್ ಟ್ರ್ಯಾಕ್ ಮಾಡಿದ್ರೆ, ಇವನಿಗೆ ಬುರುಡೆ ಕೊಟ್ಟು ಕಳುಹಿಸಿದವರು ಕೂಡ ಯಾರು ಅನ್ನೋದು ಬಯಲಾಗದೇ ಇರೋದಿಲ್ಲ. ಈ ಕಾರಣದಿಂದಾನೇ ಚೆನ್ನನ ಮೊಬೈಲ್ ಬೆನ್ನತ್ತಿದ್ದಾರೆ, ಎಸ್ಐಟಿ ಅಧಿಕಾರಿಗಳು .
ಚಿನ್ನಯ್ಯ ಕೋರ್ಟ್ಗೆ ತಂದ ಬುರುಡೆ ಮಹಿಳೆಯದ್ದಲ್ವಾ?
ಬುರುಡೆ ಬಗ್ಗೆ ಬುರುಡೆ ಬಿಟ್ಟಿದ್ದಕ್ಕೆ ಅರೆಸ್ಟ್ ಆದನಾ ಚಿನ್ನಯ್ಯ?
ಹಾಗಾದ್ರೆ, ಚೆನ್ನನಿಗೆ ಬುರುಡೆ ಕೊಟ್ಟು ಕಳುಹಿಸಿದವರು ಯಾರು?
ಬುರುಡೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಕೊಟ್ಟಿದ್ದು ಬೇರೇನೂ ಅಲ್ಲ..ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಬುರುಡೆ ಅಂತಾ ಚಿನ್ನಯ್ಯ ಕೋರ್ಟ್ಗೆ ತಂದಿದ್ದನಲ್ಲ ಅದೇ ಬುರುಡೆ.. ಒಂದು ಕಡೆ ಎಸ್ಐಟಿ ಅಧಿಕಾರಿಗಳು ಚೆನ್ನನ ಮೊಬೈಲ್ ಬೆನ್ನತ್ತಿದ್ರೆ, ಮತ್ತೊಂದು ಕಡೆ ಚೆನ್ನನಿಗೆ ಬುರುಡೆ ಕೊಟ್ಟು ಕಳುಹಿಸಿದ್ಯಾರು ಅನ್ನೋದು ಇನ್ನೂ ನಿಗೂಢವಾಗಿದೆ .ಬುರುಡೆ ಕೊಟ್ಟು ಕಳುಹಿಸಿದವ್ರು ಇಂಥಾವ್ರೇ ಅಂತಾ ಚಿನ್ನಯ್ಯ ಎಸ್ಐಟಿ ಅಧಿಕಾರಿಗಳ ಎದುರು ಈಗಾಗಲೇ ಬಾಯ್ಬಿಟ್ಟಿದ್ದರೂ ಕೂಡ ಅದು ಸಾಬೀತಾಗದೇ ನಾವು ಹೆಸರು ಹೇಳುವ ಹಾಗಿಲ್ಲ..ಆದ್ರೆ, ಇದೇ ಬುರುಡೆಯ ವಿಚಾರದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಕೂಡ ಗೊತ್ತಾಗಿದೆ.ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಬುರುಡೆ ಅಂತಾ ಚೆನ್ನ ತಂದಿದ್ದು ಮಹಿಳೆಯದ್ದೇ ಅಲ್ಲ ಎಂಬುದು ದೃಢಪಟ್ಟಿದೆ. ಚಿನ್ನಯ್ಯ ತಂದಿದ್ದದ್ದು ಪುರುಷನ ಬುರುಡೆ ಅಂತಾ 17 ಲ್ಯಾಬ್‌ಗಳಿಂದ ವರದಿ ಸಿಕ್ಕಿದೆಯಂತೆ. ಜೊತೆಗೆ ಬುರುಡೆಗೆ ಅಂಟಿದ ಮಣ್ಣಿದೆಯಲ್ಲ, ಅದು ಧರ್ಮಸ್ಥಳ ಭಾಗದ್ದೇ ಅಲ್ಲ ಅನ್ನೋದು ಗೊತ್ತಾಗಿದ್ದು, ಇದೇ ಪ್ರಕರಣಕ್ಕೆ ಕೊಟ್ಟ ಅತೀ ದೊಡ್ಡ ಹಾಗೂ ಹೊಸ ತಿರುವು ಅಂದ್ರೆ ತಪ್ಪಾಗೋದಿಲ್ಲ
ಚಿನ್ನಯ್ಯ ತಾನು ಬುರುಡೆ ಎಲ್ಲಿಂದ ತಂದೆ ಅನ್ನೋದನ್ನ ಎಸ್ಐಟಿ ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳುತ್ತಿಲ್ಲ. ಆದ್ರೆ, ಬುರುಡೆ ಕೊಟ್ಟವರು ಯಾರು ಅನ್ನೋದರ ಬಗ್ಗೆ ಹೇಳಿದ್ದಾನೆ ಅನ್ನೋ ವಿಚಾರ ಗೊತ್ತಾಗ್ತಿದೆ. ನಮಗೆ ಮೇಲ್ನೋಟಕ್ಕೆ ಸಿಕ್ಕಿರೋ ಮತ್ತೊಂದು ಇಂಟರೆಸ್ಟಿಂಗ್ ಮಾಹಿತಿ ಅಂದ್ರೆ, ಷಡ್ಯಂತ್ರದ ಸೂತ್ರಧಾರರು ತಲೆಬುರುಡೆಯನ್ನ ಯಾವುದೋ ವೈದ್ಯಕೀಯ ಕಾಲೇಜೋ ಅಥವಾ ಸಂಗ್ರಹಾಲಯದಿಂದ ತಂದಿರೋ ಸಂಶಯವಿದೆ..ಅಲ್ಲಿಂದ ಬುರುಡೆ ತಂದು ಅದನ್ನ ಸೂತ್ರಧಾರರು ಹೂತು, ಬಳಿಕ ಅವರೇ ತೋಡಿ ಬುರುಡೆ ಹೊರತೆಗೆದಿರಬಹುದು ಎನ್ನುವ ಸಂಶಯ ಹುಟ್ಟಿದೆ. ಈ ಕಾರಣಕ್ಕೇನೇ .ಚೆನ್ನಯ್ಯನಿಗೆ ಬುರುಡೆ ಕೊಟ್ಟವರು ಯಾರು ಅನ್ನೋದು ಗೊತ್ತಾದ್ರೆ, ಅವನ ಬಳಿ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಪೊಲೀಸರು ಆಚೆ ತೆಗೆಯೋದಕ್ಕೆ ನೋಡ್ತಿದ್ದಾರೆ.
14ನೇ ಪಾಯಿಂಟ್ ಷಡ್ಯಂತ್ರ ಸೂತ್ರಧಾರರ ಸುಳಿವು ಕೊಟ್ಟಿತ್ತು!
ಚೆನ್ನನ ಬುರುಡೆ ಚೆನ್ನಾಟಗಳ ಮೇಲೆ ಎಸ್ಐಟಿಗೆ ಅನುಮಾನ ಬರೋದಕ್ಕೆ ಕಾರಣವಾದ ಮತ್ತೊಂದು ವಿಚಾರವಿದೆ. ನಿಮಗೆ ಚಿನ್ನಯ್ಯ ಅಗೆಸಿದ 17 ಗುಂಡಿಗಳಲ್ಲಿ 14ನೇ ಗುಂಡಿ ನೆನಪಿರಬಹುದು. ಆ 14ನೇ ಪಾಯಿಂಟ್ನಲ್ಲಿ ಅಗೆದಾಗ ಪುರುಷನ ಮೃತದೇಹವೊಂದು ಪತ್ತೆಯಾಗಿತ್ತಲ್ಲ..ಹಾಗೇ ಪತ್ತೆಯಾದ ಮೃತದೇಹ ಜಸ್ಟ್ ಒಂದು ವರ್ಷದ ಹಿಂದಷ್ಟೇ ಮೃತಪಟ್ಟ ವ್ಯಕ್ತಿಯದ್ದಾಗಿತ್ತು. ಹೀಗಾಗಿಯೇ 11 ವರ್ಷಗಳ ಹಿಂದೆ ಹೆಣಗಳನ್ನ ಹೂತೆ ಅಂತಿರೋ ದೂರುದಾರನಿಗೆ ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿ ಬಗ್ಗೆ ಹೇಗೆ ಮಾಹಿತಿ ಇತ್ತು ಅನ್ನೋ ಪ್ರಶ್ನೆಯೂ ಎಸ್ಐಟಿಗೆ ಮೂಡಿತ್ತು..ಇದನ್ನೇ ಚೆನ್ನನ್ನ ವಿರುದ್ಧ ಮತ್ತೊಂದು ಪ್ರಬಲ ಪುರಾವೆಯಾಗಿ ಎಸ್‌ಐಟಿ ಪರಿಗಣಿಸಿದ್ದು ಅನ್ನೋದು ಗೊತ್ತಾಗಿರೋ ಮಾಹಿತಿ..ಅಂದಹಾಗೇ, ಚೆನ್ನನಿಗೆ ಆ ಮಾಹಿತಿಯನ್ನ ಸೂತ್ರಧಾರರು ಬಿಟ್ರೆ ಇನ್ಯಾರು ಕೊಟ್ಟಿರೋದಕ್ಕೆ ಸಾಧ್ಯ?
ಅಷ್ಟಕ್ಕೂ, ಚೆನ್ನನ ಕೈಗೆ ಬುರುಡೆ ಕೊಟ್ಟು ಕೋರ್ಟ್ಗೆ ಕಳುಹಿಸಿದ್ದ ಬುರುಡೆ ಟೀಮ್ ಆರಂಭದಲ್ಲೇ ಕಾನೂನು ಉಲ್ಲಂಘನೆ ಮಾಡಿದ್ದೇಗೆ? ಎಸ್ಐಟಿಗೆ ಸದ್ಯ ಸವಾಲಾಗಿರೋ ವಿಷ್ಯಗಳೇನು? ಅಂತ ಅಂದರೇ, ಭೂಮಿಯೊಳಗೆ ಇರುವ ಯಾವುದೇ ಶವಗಳನ್ನು ತಹಸೀಲ್ದಾರ್, ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಮಾತ್ರ ಪೊಲೀಸರು ಹೊರ ತೆಗೆಯಬೇಕು. ಇದು ಕಾನೂನು. ಸಾಮಾನ್ಯ ವ್ಯಕ್ತಿಗಳೇ, ಭೂಮಿಯನ್ನು ಅಗೆದು ಯಾವುದೇ ಶವದ ತಲೆ ಬುರುಡೆ, ಮೂಳೆಗಳನ್ನು ತೆಗೆಯುವಂತಿಲ್ಲ. ಆದರೇ, ಮಾಸ್ಕ್ ಮ್ಯಾನ್ ಚೆನ್ನಯ್ಯ ತಾನೇ ಭೂಮಿ ಅಗೆದು ತಲೆ ಬುರುಡೆ ತಂದಿದ್ದೇನೆ ಎಂದು ಎಸ್‌ಐಟಿ ಅಧಿಕಾರಿಗಳಿಗೆ, ಕೋರ್ಟ್ ಗೆ ಹೇಳಿಕೆ ಕೊಟ್ಟಿದ್ದಾನೆ. ಅದು ನಿಜವಾಗಿದ್ದರೇ, ಅದೇ ಕಾನೂನು ಉಲಂಘನೆ. ಈ ಅಂಶವನ್ನು ಈಗ ಖುದ್ದು ರಾಜ್ಯದ ಸಹಕಾರ ಖಾತೆ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ, ವಕೀಲರೂ ಆದ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಹೀಗಾಗಿ ತಾನೇ ಭೂಮಿ ಅಗೆದು ತಲೆ ಬುರುಡೆಯನ್ನು ತಂದೆ ಎಂದು ಚೆನ್ನಯ್ಯ ಹೇಳಿದ್ದು ಕೂಡ ಕಾನೂನಿನ ಉಲಂಘನೆ.
ಮಾಸ್ಕ್ ಮ್ಯಾನ್ ಚಿನ್ನಯ್ಯನ ಅಸಲಿ ಮುಖ ಅನಾವರಣ.
ಯಾಮಾರಿಸೋನು ಒಬ್ಬರು, ಇಬ್ಬರಿಗೆ ಯಾಮಾರಿಸಬಹುದು..ಹತ್ತು ಜನಕ್ಕೆ ಯಾಮಾರಿಸಬಹುದು..ಆದ್ರೆ, ಒಂದಿಡೀ ರಾಜ್ಯಕ್ಕೇ ಯಾಮಾರಿಸೋದಕ್ಕಾಗುತ್ತಾ? ಚಾನ್ಸೇ ಇಲ್ಲ..ಆ ಕೆಲಸ ಮಾಡೋದಕ್ಕೆ ಹೋದ ಚಿನ್ನಯ್ಯ ಅಂದರ್ ಆಗಿದ್ದಾನೆ.ಆದ್ರೆ, ಚಿನ್ನಯ್ಯನಿಗೆ ತಾನು ತಾನಾಗಿಯೇ ತನಗೆ ಅನ್ನ ಹಾಕಿದ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ಬೇಕು ಅನ್ನೋ ಮನಸ್ಸಿರಲಿಲ್ಲ .ಬದಲಾಗಿ, ಈತನ ಹಿಂದೆ ಒಂದು ದೊಡ್ಡ ತಂಡವೇ ಕೆಲಸ ಮಾಡಿದೆ ಅನ್ನೋದು ಈಗಾಗಲೇ ಬಟಾಬಯಲಾಗಿರೋ ಮಾಹಿತಿ..ತಂಡದಲ್ಲಿ ಯಾಱರಿದ್ರು ಅವ್ರಲ್ಲಿ ಯಾಱರು ಯಾವ್ ರೀತಿಯ ಕೆಲಸವನ್ನ ಚಿನ್ನಯ್ಯನಿಗೆ ವಹಿಸಿದ್ದರು ಅನ್ನೋ ಸತ್ಯ ತಿಳ್ಕೊಳ್ಳೋದಕ್ಕಾಗಿಯೇ ಎಸ್ಐಟಿ ಚಿನ್ನಯ್ಯನನ್ನ ಕಸ್ಟಡಿಗೆ ಪಡ್ಕೊಂಡಿದೆ..ಬಿಎನ್ಎಸ್ 183 ಅಡಿ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ..ಟ್ರಯಲ್ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಲು ಸಾಧ್ಯವಿಲ್ಲ. ಹೀಗಾಗಿ, ಪ್ರಧಾನ ನ್ಯಾಯಾಧೀಶರ ಎದುರೇ ಆತನ ಸ್ಟೇಟ್ಮೆಂಟ್ ರೆಕಾರ್ಡ್ ಮಾಡಿಸಲಿದ್ದು, ಬುರುಡೆ ಗ್ಯಾಂಗ್ಗೆ ಆತನ ಹೇಳಿಕೆ ಕಂಟಕವಾಗೋದ್ರಲ್ಲಿ ಡೌಟೇ ಬೇಡ. ಅದಕ್ಕೂ ಮುನ್ನ ಚೆನ್ನನ ವಿಚಾರಣಾ ಹೇಳಿಕೆಯ ಆಧಾರದಲ್ಲಿ ಬುರುಡೆ ಗ್ಯಾಂಗ್ನ ಒಬ್ಬೊಬ್ಬರಿಗೂ ನೋಟಿಸ್ ನೀಡಲು ಎಸ್ಐಟಿ ಮುಂದಾಗಿದೆ . ಈ ಮಧ್ಯೆ ಧರ್ಮಸ್ಥಳದ ವಿರುದ್ಧ ಬುರುಡೆ ಷಡ್ಯಂತ್ರಕ್ಕೆ ದೆಹಲಿಯ ಲಿಂಕ್ ಇರುವ ಸ್ಫೋಟಕ ವಿಚಾರ ಬಯಲಾಗಿದೆ..
ತಲೆಬುರುಡೆ ದೆಹಲಿಗೂ ಕೊಂಡೊಯ್ದಿದ್ದ ಬುರುಡೆ ಗ್ಯಾಂಗ್
ವಕೀಲರೊಬ್ಬರ ಭೇಟಿ..ಅಲ್ಲೇ ನಡೆಯಿತಾ ಷಡ್ಯಂತ್ರ?
ಅದ್ಯಾವಾಗ ಧರ್ಮಸ್ಥಳದ ವಿರುದ್ಧ ಷಡ್ಯಂತ್ರಕ್ಕೆ ಚಿನ್ನಯ್ಯ ಒಪ್ಪಿದನೋ..ಆಪರೇಷನ್ ತಲೆಬುರುಡೆಯ ಮುಂದುವರಿದ ಭಾಗ ದೆಹಲಿಗೆ ಶಿಫ್ಟ್ ಆಗಿತ್ತು..ಅಷ್ಟರಲ್ಲಾಗಲೇ ಷಡ್ಯಂತ್ರದ ತಂಡಕ್ಕೆ ಸುಜಾತ ಭಟ್ ಕೂಡ ಸೇರ್ಪಡೆಗೊಂಡಿದ್ದಳು. ಮುಂದೆ ರಸವತ್ತಾದ ಸ್ಕ್ರಿಪ್ಟ್ ರಚಿಸಿದ್ದ ಬುರುಡೆ ಗ್ಯಾಂಗ್ ಸುಜಾತ ಹಾಗೂ ಚಿನ್ನಯ್ಯ ಇಬ್ಬರನ್ನೂ ಕರ್ಕೊಂಡು ದೆಹಲಿಗೂ ಹೋಗಿತ್ತು ಅನ್ನೋ ಸ್ಫೋಟಕ ಮಾಹಿತಿ ಸಿಕ್ಕಿದೆ..ಅಷ್ಟೇ ಅಲ್ಲ, ದೆಹಲಿಗೆ ತಾವು ರೆಡಿಮಾಡಿದ್ದ ಬುರುಡೆಯನ್ನೂ ಕೊಂಡೊಯ್ದಿದ್ದರು..ಅಲ್ಲಿ ವಕೀಲರೊಬ್ಬರನ್ನ ಭೇಟಿ ಮಾಡಿದ್ದರು. ವಕೀಲರಿಗೆ ಬುರುಡೆ ಸಮೇತ ಇಡಿ ಪ್ರಕರಣದ ಕಥೆ ಹೇಳಿದ್ದರಂತೆ..ಈ ರೀತಿ ದೆಹಲಿ ಮಟ್ಟದಲ್ಲಿ ಬುರುಡೆ ಬಿಡೋದಕ್ಕೆ ಬ್ಲೂಪ್ರಿಂಟ್ ರಚಿಸಲಾಗಿತ್ತು ಅನ್ನೋದು ಕೇಳಿಬರ್ತಿರೋ ವಿಚಾರ. ದೆಹಲಿಗೆ ಕೊಂಡೊಯ್ದಿದ್ದ ತಲೆಬುರುಡೆಯನ್ನೇ ಚೆನ್ನ ಕೋರ್ಟ್ಗೆ ತಂದಿದ್ದು ಅನ್ನೋದನ್ನ ಗೊತ್ತು ಮಾಡ್ಕೊಂಡಿರೋ ಎಸ್ಐಟಿ, ಬುರುಡೆಯ ಟ್ರ್ಯಾಕ್ ರೆಕಾರ್ಡ್ ಸಿದ್ಧಪಡಿಸ್ತಿದ್ದಾರೆ.
ಚಿನ್ನಯ್ಯನ ಬಂಧಿಸಿದ್ದೇ ಒಳ್ಳೆದಾಯ್ತು ಎಂದ ಮಟ್ಟಣ್ಣನವರ್?
ಮಾಸ್ಕ್ ಮ್ಯಾನ್ಗೆ ನಾರ್ಕೋ ಟೆಸ್ಟ್ ಮಾಡಿ ಎಂದಿದ್ದೇಕೆ?
ಅದ್ಯಾವಾಗ ಎಸ್ಐಟಿ ಚಿನ್ನಯ್ಯನ ಬಂಧನ ಮಾಡ್ತೋ..ಇಡೀ ರಾಜ್ಯದ ಜನರ ಕಣ್ಣು ತಿರುಗಿದ್ದು ಮೂರು ಜನರ ಮೇಲೆ.. ಒಂದು ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್, ಮತ್ತೊಬ್ಬ ಮಹೇಶ್ ತಿಮರೋಡಿ, ಇನ್ನೊಬ್ಬ ಯೂಟ್ಯೂಬರ್ ಸಮೀರ್. ಚಿನ್ನಯ್ಯನಿಗೂ, ಈ ಮೂವರಿಗೂ ಲಿಂಕ್ ಇದೆ ಅನ್ನೋ ವದಂತಿ ಈಗಲೂ ಹಬ್ಬಿದೆ.
ಸುಜಾತ ಭಟ್ ಯೂ ಟ್ಯೂಬ್ ಚಾನಲ್ ಗೆ ನೀಡಿದ ಹೇಳಿಕೆಯಲ್ಲಿ ಗಿರೀಶ್ ಮಟ್ಟಣನವರ್ ಜೊತೆಗೆ ಜಯಂತ್ ಎನ್ನುವವರ ಹೆಸರೂ ಕೂಡ ಇದೆ. ಆ ಕಾರಣಕ್ಕಾಗಿ ಎಸ್ಐಟಿ ಈ ನಾಲ್ವರಿಗೂ ಯಾವಾಗ ಬೇಕಾದ್ರೂ ನೋಟಿಸ್ ನೀಡಬಹುದು .ಯ್ಯೂಟೂಬರ್ ಸಮೀರ್ ಈಗಾಗಲೇ ವಿಚಾರಣೆಗೆ ಹಾಜರಾಗಿದ್ದು, ಎಸ್ಐಟಿಯಿಂದ ಪ್ರಶ್ನೆಗಳ ಪ್ರವಾಹವನ್ನೇ ಎದುರಿಸಿದ್ದಾನೆ..ಆದ್ರೆ, ಎಸ್ಐಟಿಗೂ ಹಾಗೂ ರಾಜ್ಯದ ಜನರಿಗೂ ಗೊತ್ತಾಗಬೇಕಿರೋ ವಿಚಾರ ಏನಂದ್ರೆ ಚಿನ್ನಯನಿಗೂ ಈ ನಾಲ್ವರಿಗೂ ಸಂಬಂಧ ಇತ್ತಾ? ಇದ್ದರೂ ಏನು ಅನ್ನೋದು? ಆ ಪ್ರಶ್ನೆಗೆ ಖುದ್ದು ಉತ್ತರ ನೀಡಿರೋ ಗಿರೀಶ್ ಮಟ್ಟಣ್ಣವರ್ ಚಿನ್ನಯ್ಯನ ಬಂಧಿಸಿದ್ದೇ ಒಳ್ಳೆದಾಯ್ತು ಎಂದಿದ್ದಾರೆ..ಅಷ್ಟೇ, ಅಲ್ಲ ಮಾಸ್ಕ್ಮ್ಯಾನ್ಗೆ ನಾರ್ಕೋ ಟೆಸ್ಟ್ ಅಂದ್ರೆ ಸುಳ್ಳು ಪತ್ತೆ ಪರೀಕ್ಷೆ ಮಾಡಿಸಿ ಅಂತಲೂ ಒತ್ತಾಯಿಸಿದ್ದಾರೆ..
ನಮ್ಮನ್ನ ಎಸ್ಐಟಿ ಕರೆದರೆ ಚಿನ್ನಯ್ಯನಿಗೂ ನಮಗೂ ಹೇಗ್ ಪರಿಚಯ ಇತ್ತು ಅಂತಾ ಹೇಳ್ತೀವಿ ಅಂದಿದ್ದಾರೆ ಗಿರೀಶ್ ಮಟ್ಟಣ್ಣನವರ್..ಸರಿ, ಮಟ್ಟಣ್ಣನವರ್ ಹೇಳಿದಂತೆ ಎಸ್ಐಟಿಯೇ ಸತ್ಯ ಏನು ಅನ್ನೋದನ್ನ ಪತ್ತೆ ಹಚ್ಚಲಿ..ಎಸ್ಐಟಿ ವಶದಲ್ಲಿ ಚಿನ್ನಯ್ಯ ಇನ್ನೂ 10 ದಿನಗಳು ಇರ್ತಾನಲ್ವಾ ಆದ್ರೂ ಈ ಹತ್ತು ದಿನಗಳಲ್ಲಿ ಎಸ್ಐಟಿ ಯಾವೆಲ್ಲಾ ರೀತಿ ಚಿನ್ನಯ್ಯನ ಬಳಿ ಇನ್ನಷ್ಟು ಬುರುಡೆ ರಹಸ್ಯಗಳನ್ನ ಹೊರ ತೆಗೆಯಬಹುದು ಅಂತ ನೋಡುವುದಾದರೇ,
ಎಸ್ಐಟಿ ಪ್ಲ್ಯಾನ್ ಏನು?
ಪ್ಲ್ಯಾನ್ -1
ಆರೋಪಿ ಚಿನ್ನಯ್ಯ @ ಚೆನ್ನನ ಇನ್ನಷ್ಟು ತೀವ್ರ ವಿಚಾರಣೆ ನಡೆಸೋದು
ಪ್ಲ್ಯಾನ್-2
ಚೆನ್ನ ಹೇಳಿರುವ ಸೂತ್ರಧಾರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದು
ಪ್ಲ್ಯಾನ್-3
ಇಲ್ಲಿವರೆಗೂ ನಡೆದಿರುವ ಬುರುಡೆ ಕಥೆಗೆ ಪ್ಲ್ಯಾನ್ ಮಾಡಿದ್ದು ಹೇಗೆಂಬ ಮಾಹಿತಿ?
ಪ್ಲ್ಯಾನ್-4
ಪಾತ್ರಧಾರಿಗಳು, ಸೂತ್ರಧಾರಿಗಳು ಎಲ್ಲೆಲ್ಲಿ ಭೇಟಿ ಮಾಡಿದ್ದರು, ಎಷ್ಟು ಬಾರಿ ಭೇಟಿ?
ಪ್ಲ್ಯಾನ್-5
ಇಡೀ ಬುರುಡೆ ಪ್ರಕರಣದ ಹಿಂದಿರುವ ಮಾಸ್ಟರ್ ಮೈಂಡ್/ಮೈಂಡ್ಗಳು ಯಾರು?
ಆರೋಪಿ ಚಿನ್ನಯ್ಯ @ ಚೆನ್ನನನ್ನ ಇನ್ನಷ್ಟು ತೀವ್ರ ವಿಚಾರಣೆ ನಡೆಸಲಿದ್ದಾರೆ ಎಸ್ಐಟಿ ಅಧಿಕಾರಿಗಳು. ಚೆನ್ನ ಹೇಳಿರುವ ಸೂತ್ರಧಾರಿಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕ್ತಾರೆ..ಇಲ್ಲಿವರೆಗೂ ನಡೆದಿರುವ ಬುರುಡೆ ಕಥೆಗೆ ಪ್ಲ್ಯಾನ್ ಮಾಡಿದ್ದು ಹೇಗೆಂಬುದನ್ನೂ ಪತ್ತೆ ಹಚ್ಚಲಾಗುತ್ತೆ . ಪಾತ್ರಧಾರಿಗಳು, ಸೂತ್ರಧಾರಿಗಳು ಎಲ್ಲೆಲ್ಲಿ ಭೇಟಿ ಮಾಡಿದ್ದರು, ಎಷ್ಟು ಬಾರಿ ಭೇಟಿಯಾಗಿದ್ದರು ಅನ್ನೋದು, ಜೊತೆಗೆ ಇಡೀ ಬುರುಡೆ ಪ್ರಕರಣದ ಹಿಂದಿರುವ ಮಾಸ್ಟರ್ ಮೈಂಡ್/ಮೈಂಡ್ಗಳು ಯಾರು ಅನ್ನೋದನ್ನ ಪತ್ತೆ ಹಚ್ಚಿ ಅವರ ಹೆಡೆಮುರಿಕಟ್ಟುವ ಕೆಲಸ ಪಕ್ಕಾ ಆಗುತ್ತೆ ಅನ್ನೋದು ಎಲ್ಲರ ನಂಬಿಕೆ . ಒಂದಲ್ಲ...ನೂರಾರು ಶವಗಳನ್ನ ಧರ್ಮಸ್ಥಳದಲ್ಲಿ ಹೂತಿದ್ದಾಗಿ ಹೇಳಿದ್ದ ಚಿನ್ನಯ್ಯ ಬಂಧನವಾದ ಕ್ಷಣದಿಂದ ಪ್ರಕರಣದಲ್ಲಿ ಹೊಸ ಹೊಸ ವಿಚಾರಗಳು ಬೆಳಕಿಗೆ ಬರ್ತಾನೆ ಇವೆ..ಒಂದ್ ಕಡೆ ನಾಪತ್ತೆಯಾಗಿರೋ ಚಿನ್ನಯ್ಯನ ಮೊಬೈಲ್, ಮತ್ತೊಂದು ಕಡೆ ಭೂಮಿಯಿಂದ ತಾವೇ ಹೊರತೆಗೆದ ಬುರುಡೆ ಇವೆರಡರ ಒಳಗಿರೋ ಸತ್ಯ ಸಾಕು, ಶ್ರೀಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಿದವರ ಹೆಡೆಮುರಿಕಟ್ಟೋದಕ್ಕೆ ಅನ್ನೋದು ಕಾನೂನು ತಜ್ಞರ ಮಾತು.
ಮಾಸ್ಕ್ ಮ್ಯಾನ್ ಚಿನ್ನಯ್ಯನ ಪೋಟೋಗಳು.
ವಿಶೇಷ ಸೂಚನೆ: ಎಲ್ಲ ಕೇಬಲ್ ಮತ್ತು ಡಿಟಿಎಚ್ ಚಾನಲ್ ಗಳಲ್ಲಿ ನ್ಯೂಸ್ ಫಸ್ಟ್ ಕನ್ನಡ ಚಾನಲ್ ಲಭ್ಯ.