/newsfirstlive-kannada/media/media_files/2025/07/31/rinku_singh_-rahi-2025-07-31-21-04-17.jpg)
ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಉಪವಿಭಾಗಾಧಿಕಾರಿ ಹುದ್ದೆಗೆ ನೇಮಕವಾದ 24 ಗಂಟೆಯಲ್ಲೇ ಆ ಹುದ್ದೆಯಿಂದ ವರ್ಗಾವಣೆಯಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ವಕೀಲರ ಎದುರು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ತಪ್ಪೊಪ್ಪಿಕೊಂಡು ಬಸ್ಕಿ ಹೊಡೆದ ಘಟನೆ. ಐಎಎಸ್ ಅಧಿಕಾರಿ ರಿಂಕು ಸಿಂಗ್ ರಾಹಿ, ಉತ್ತರ ಪ್ರದೇಶದ ಶಹಜಾನ್ ಪುರ ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿಯಾಗಿ ಜುಲೈ 29 ರಂದು ನೇಮಕವಾಗಿದ್ದರು. ಅಂದು ಮಧ್ಯಾಹ್ನ 2 ಗಂಟೆಗೆ ಕಚೇರಿಗೆ ಹೋಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದಾದ ಬಳಿಕ ಕಚೇರಿ ಸುತ್ತ ಪರಿಶೀಲನೆಗೆ ತೆರಳಿದ್ದಾರೆ. ಈ ವೇಳೆ ವಕೀಲರೊಬ್ಬರ ಕ್ಲರ್ಕ್ ಅಜನಯರಾಮ ಎಂಬಾತ, ತಹಸೀಲ್ದಾರ್ ಕಚೇರಿಯ ಕಂಪೌಂಡ್ ಗೋಡೆಗೆ ಮೂತ್ರ ಮಾಡುತ್ತಿದ್ದರು. ಇದನ್ನು ನೋಡಿದ ಉಪವಿಭಾಗಾಧಿಕಾರಿ ರಿಂಕು ಸಿಂಗ್ ರಾಹಿ, ಆ ಕ್ಲರ್ಕ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹತ್ತಿರದಲ್ಲೇ ಇರುವ ಶೌಚಾಲಯ ಬಳಸುವಂತೆ ಹೇಳಿದ್ದಾರೆ. ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿಲ್ಲ. ಬಳಸುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪವಿಭಾಗಾಧಿಕಾರಿ ರಿಂಕು ಸಿಂಗ್ ರಾಹಿ, ಕಂಪೌಂಡ್‌ಗೆ ಮೂತ್ರ ವಿಸರ್ಜಿಸಿದ್ದಕ್ಕೆ ಬಸ್ಕಿ ಹೊಡೆಯುವಂತೆ ಹೇಳಿದ್ದಾರೆ. ವಕೀಲರ ಕ್ಲರ್ಕ್ ನಿಂದ ಸ್ಥಳದಲ್ಲೇ ಶಿಕ್ಷೆಯಾಗಿ ಬಸ್ಕಿ ಹೊಡೆಸಿದ್ದಾರೆ. ಇದು ಅಲ್ಲೇ ವಿವಾದವಾಗಿ ಪರಿವರ್ತನೆಯಾಯಿತು. ವಕೀಲರ ಕ್ಲರ್ಕ್ ಗೆ ಬಸ್ಕಿ ಹೊಡೆಸಿದ್ದ ವಿಷಯ ವಕೀಲರ ವಲಯದಲ್ಲಿ ಬೇಗ ಹರಡಿತು. ವಕೀಲರೆಲ್ಲಾ ಸೇರಿ ಹೊಸ ಉಪವಿಭಾಗಾಧಿಕಾರಿ ರಿಂಕು ಸಿಂಗ್ ರಾಹಿಯನ್ನು ತರಾಟೆಗೆ ತೆಗೆದುಕೊಂಡರು. ಉಪವಿಭಾಗಾಧಿಕಾರಿ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ಕ್ಲರ್ಕ್ ಅನ್ನು ನೀನು ಅಪಮಾನ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದರು. ಕ್ಲರ್ಕ್ ಗೆ ಶಿಕ್ಷೆ ವಿಧಿಸಿ ಬಸ್ಕಿ ಹೊಡೆಸಿದ್ದು ಸರಿಯಲ್ಲ ಎಂದು ಹೇಳಿದ್ದರು. ಸರ್ಕಾರ, ಜಿಲ್ಲಾಡಳಿತವೇ ಶೌಚಾಲಯದ ಸ್ವಚ್ಛತೆ ಕಾಪಾಡಲು ವಿಫಲವಾಗಿರುವಾಗ, ವಕೀಲರು, ಕ್ಲರ್ಕ್ ಗಳು ಎಲ್ಲಿ ಮೂತ್ರ ವಿಸರ್ಜನೆ ಮಾಡಲು ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.
ವಕೀಲರ ಕ್ಲರ್ಕ್ ಗೆ ನೀವು ಬಸ್ಕಿ ಶಿಕ್ಷೆ ವಿಧಿಸಿದ್ದೀರಿ. ನೀವು ಅದೇ ಶಿಕ್ಷೆ ಅನುಭವಿಸಬೇಕು ಎಂದು ವಕೀಲರು ಉಪವಿಭಾಗಾಧಿಕಾರಿ ರಿಂಕು ಸಿಂಗ್ ರಾಹಿಗೆ ಆಗ್ರಹಿಸಿದ್ದಾರೆ. ಇದಕ್ಕೆ ವಕೀಲರೆಲ್ಲರೂ ಅಶ್ಚರ್ಯಗೊಳ್ಳುವಂತೆ ಉಪವಿಭಾಗಾಧಿಕಾರಿ ರಿಂಕು ಸಿಂಗ್ ರಾಹಿ ಅದಕ್ಕೆ ತಕ್ಷಣವೇ ಒಪ್ಪಿಕೊಂಡಿದ್ದಾರೆ. ತನ್ನ ಕಿವಿ ಹಿಡಿದುಕೊಂಡು ತಕ್ಷಣವೇ ಬಸ್ಕಿ ಹೊಡೆಯಲು ಆರಂಭಿಸಿಯೇಬಿಟ್ಟರು. ಸ್ಥಳದಲ್ಲಿದ್ದವರು ಉಪವಿಭಾಗಾಧಿಕಾರಿ ರಿಂಕು ಸಿಂಗ್ ರಾಹಿರನ್ನು ಬಸ್ಕಿ ಹೊಡೆಯುವುದರಿಂದ ತಡೆಯಲು ಯತ್ನಿಸಿದ್ದಾರೆ. ಆದರೇ, ರಿಂಕು ಸಿಂಗ್ ರಾಹಿ ಕೇಳಲೇ ಇಲ್ಲ. ಐದು ಬಸ್ಕಿ ಹೊಡೆದು ಬಿಟ್ಟರು. ಇದು ಸರ್ಕಾರ, ಜಿಲ್ಲಾಡಳಿತವು ತನ್ನ ತಪ್ಪುಗಳನ್ನು ಒಪ್ಪಿಕೊಂಡ ಸಾಂಕೇತಿಕ ಕ್ರಮವಾಗಿ ಬಿಂಬಿತವಾಯಿತು.
ಇನ್ನೂ ಶೌಚಾಲಯಗಳನ್ನು ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳುತ್ತೇವೆ ಎಂದು ರಿಂಕು ಸಿಂಗ್ ರಾಹಿ ವಕೀಲರಿಗೆ ಭರವಸೆ ನೀಡಿದ್ದರು.
ಐಎಎಸ್ ಅಧಿಕಾರಿ ರಿಂಕು ಸಿಂಗ್ ರಾಹಿ ವಕೀಲರ ಎದುರು ಬಸ್ಕಿ ಹೊಡೆದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ರಿಂಕು ಸಿಂಗ್ ರಾಹಿಯನ್ನು ಪ್ರಶಂಸಿಸಿದ್ದಾರೆ. ರಿಂಕು ಸಿಂಗ್ ಗೆ ಪ್ರಾಮಾಣಿಕತೆ ಇದೆ ಎಂದು ಕೊಂಡಾಡಿದ್ದಾರೆ. ಇನ್ನೂ ಈ ಕೆಲವರು ಈ ಎಪಿಸೋಡ್ ಅಧಿಕಾರಿಯ ಘನತೆಗೆ ಈ ಘಟನೆ ಧಕ್ಕೆ ಎಂದು ಟೀಕಿಸಿದ್ದಾರೆ.
ರಾತ್ರಿ ಕಳೆದು ಬೆಳಗಾಗುವುದರೊಳಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ರಿಂಕು ಸಿಂಗ್ ರಾಹಿಯನ್ನು ಲಕ್ನೋದ ಬೋರ್ಡ್ ಆಫ್ ರೆವಿನ್ಯೂಗೆ ವರ್ಗಾವಣೆ ಮಾಡಿದೆ.
ರಿಂಕು ಸಿಂಗ್ ರಾಹಿ ಹಿನ್ನಲೆ ಏನು ಗೊತ್ತಾ? ಬುಲೆಟ್ ಗೆ ಎದೆಯೊಡ್ಡಿದವರು!! ಕಣ್ಣು ಕಳೆದುಕೊಂಡ್ರು!
ಈ ರಿಂಕು ಸಿಂಗ್ ರಾಹಿ ಹಿನ್ನಲೆ ಏನು ಅಂತ ನೋಡಿದರೇ, ನೀವು ಶಾಕ್ ಆಗುತ್ತೀರಾ. 2023 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ರಿಂಕು ಸಿಂಗ್ ರಾಹಿ, ಇದಕ್ಕೂ ಮೊದಲು ಇದೇ ಉತ್ತರ ಪ್ರದೇಶದಲ್ಲಿ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತೀರ್ಣರಾಗಿ ಯುಪಿಎಎಸ್ ಅಧಿಕಾರಿಯಾಗಿದ್ದರು, ಅಂದರೇ, ನಮ್ಮ ಕರ್ನಾಟಕದ ಕೆಎಎಸ್ ಅಧಿಕಾರಿಯ ದರ್ಜೆಯ ಅಧಿಕಾರಿಯಾಗಿದ್ದರು. ಆ ವೇಳೆ ನೂರಾರು ಕೋಟಿ ರೂಪಾಯಿ ಹಗರಣವನ್ನ ಬಯಲಿಗೆಳೆದಿದ್ದರು. ಇದರಿಂದ ಇವರ ಮೇಲೆ ಟೆನ್ನಿಸ್ ಆಡುವಾಗ ಗುಂಡಿನ ದಾಳಿ ನಡೆದಿತ್ತು. ಈ ಗುಂಡಿನ ದಾಳಿಯಲ್ಲಿ ಕಣ್ಣು, ಕಿವಿಗೆ ಗುಂಡು ತಗುಲಿದ್ದವು. ಒಂದು ಕಣ್ಣು ಅನ್ನೇ ರಿಂಕು ಸಿಂಗ್ ರಾಹಿ ಕಳೆದುಕೊಂಡಿದ್ದಾರೆ. ಒಂದು ಕಿವಿ ಕೂಡ ಸರಿಯಾಗಿ ಕೇಳಲ್ಲ. ಮುಖ ಕೂಡ ಗುಂಡಿನ ದಾಳಿ, ಬುಲೆಟ್ ಏಟಿಯಿಂದ ವಿರೂಪವಾಗಿದೆ. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು, ಸರ್ಜರಿಗೊಳಗಾಗಿದ್ದಾರೆ. ಆದರೂ, ಜೀವನದಲ್ಲಿ ಧೃತಿಗೆಡದೇ, ಯುಪಿಎಸ್‌ಸಿ ಪರೀಕ್ಷೆ ಬರೆದು ಅಖಿಲ ಭಾರತ ಮಟ್ಟದಲ್ಲಿ 683ನೇ ರಾಂಕ್ ಗಳಿಸಿದ್ದರು. ಬಳಿಕ ಐಎಎಸ್ ಆಗಿ ಆಯ್ಕೆಯಾಗಿ ಉಪವಿಭಾಗಾಧಿಕಾರಿಯಾಗಿ ಶಹಜಾನ್ ಪುರಕ್ಕೆ ಬಂದಿದ್ದರು. ಈ ವೇಳೆ ಕರ್ತವ್ಯದ ಮೊದಲ ದಿನವೇ ವಕೀಲರ ಜೊತೆ ಸಂಘರ್ಷ, ಬಸ್ಕಿ ಘಟನೆಗಳು ನಡೆದು ಹೋದವು. ಇವುಗಳಿಂದ ಈಗ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದಾರೆ.
ಚಂದ್ರಮೋಹನ್, ನ್ಯೂಸ್ ಫಸ್ಟ್.