/newsfirstlive-kannada/media/media_files/2025/09/15/maharashtra-worker-2025-09-15-18-51-34.jpg)
IT ಉದ್ಯೋಗಿಗಳ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆಗಳಿಗೆ ಹೆಚ್ಚಿಸೋ ಬಗ್ಗೆ ನಿಯಮ ರೂಪಿಸಲು ಕರ್ನಾಟಕ ಸರ್ಕಾರ ಇತ್ತೀಚೆಗೆ ಮುಂದಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಐಟಿ ವಲಯದಲ್ಲಿ ದೈನಂದಿನ ಕೆಲಸದ ಸಮಯವನ್ನು ವಿಸ್ತರಿಸುವ ಪ್ರಸ್ತಾವನೆ ಕೈ ಬಿಟ್ಟಿದ್ದೇವೆ ಎಂದು ಸರ್ಕಾರವೇ ತಿಳಿಸಿತ್ತು. ಹೀಗಿರುವಾಗಲೇ ಕರ್ನಾಟಕದ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಕಾರ್ಮಿಕ ವಲಯಕ್ಕೆ ಆಘಾತ ನೀಡೋ ನಿರ್ಧಾರವೊಂದು ತೆಗೆದುಕೊಳ್ಳಲಾಗಿದೆ.
ಮಹಾರಾಷ್ಟ್ರದಲ್ಲಿ ಸರ್ಕಾರ, ರಾಜ್ಯ ಸಚಿವ ಸಂಪುಟ ಕಾರ್ಖಾನೆ ಕಾಯ್ದೆಗೆ ತಿದ್ದುಪಡಿಯನ್ನು ಅನುಮೋದಿಸಿದೆ. ಇದರ ಪ್ರಕಾರ ಕಾರ್ಮಿಕರು ದಿನಕ್ಕೆ 9 ಗಂಟೆಗಳ ಬದಲು ಇನ್ಮುಂದೆ 12 ಗಂಟೆಗಳವರೆಗೆ ಕೆಲಸ ಮಾಡಬೇಕಿದೆ. ಈ ಬಗ್ಗೆ ಮಾತಾಡಿರೋ ರಾಜ್ಯ ಕಾರ್ಮಿಕ ಸಚಿವ ಆಕಾಶ್ ಫಂಡ್ಕರ್, ಕಾರ್ಮಿಕರು ಹೆಚ್ಚುವರಿ ಸಮಯ ಕೆಲಸ ಮಾಡಬೇಕು. ಅದರಿಂದ ಅವರಿಗೆ ಹೆಚ್ಚಿನ ಆರ್ಥಿಕ ಪ್ರಯೋಜನ ದೊರೆಯುತ್ತೆ ಅಂತ ಹೇಳಿದ್ದಾರೆ. ಆದರೆ, ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ವ್ಯಾಪಕ ವಿರೋಧ ಕೇಳಿ ಬಂದಿದೆ.
ಈ ಹಿಂದೆ ಉದ್ಯೋಗಿಗಳು ವಾರಕ್ಕೆ ಗರಿಷ್ಠ 48 ಗಂಟೆಗಳವರೆಗೆ ಮಾತ್ರ ಕೆಲಸ ಮಾಡಬಹುದಾಗಿತ್ತು. ಈಗ ಇದರ ಮಿತಿಯನ್ನು 60 ಗಂಟೆಗಳವರೆಗೆ ವಿಸ್ತರಿಸಲಾಗಿದೆ. ಅಷ್ಟೇ ಅಲ್ಲ ಓವರ್ ಟೈಮ್ ಗರಿಷ್ಠ ಮಿತಿಯನ್ನು 115 ಗಂಟೆಯಿಂದ 144 ಗಂಟೆಗಳವರೆಗೆ ಹೆಚ್ಚಿಸಲಾಗಿದೆ.
ಈಗ ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರದಿಂದಾಗಿ ಕಾರ್ಮಿಕರು ದಿನನಿತ್ಯ 12 ಗಂಟೆಗಳವರೆಗೆ ಕೆಲಸ ಮಾಡಲೇಬೇಕಿದೆ. ಕೆಲಸದ ಅವಧಿಯಲ್ಲಿ ಕಾರ್ಮಿಕರಿಗೆ 5 ಗಂಟೆಗಳ ನಂತರ 30 ನಿಮಿಷ ಬ್ರೇಕ್ ಮತ್ತು 6 ಗಂಟೆಗಳ ನಂತರ ಮತ್ತೊಂದು 30 ನಿಮಿಷ ಬ್ರೇಕ್ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಇನ್ನು, ಸರ್ಕಾರದ ಹೊಸ ರೂಲ್ಸ್ ಯಾರ್ ಯಾರಿಗೆ ಅಪ್ಲೈ ಆಗುತ್ತೆ
ಕೇವಲ ಐಟಿ ಸೆಕ್ಟರ್ ಮಾತ್ರವಲ್ಲ ಅಂಗಡಿಗಳು, ಮಾಲ್‌ಗಳು ಹಾಗೂ ಇತರೆ ಸಂಸ್ಥೆಗಳಲ್ಲೂ ಕೆಲಸದ ಟೈಮಿಂಗ್ ಅನ್ನ ರಿವೈಸ್ ಮಾಡಲಾಗಿದೆ. ಕೆಲವು ಕಡೆ ಕೆಲಸದ ಅವಧಿಯನ್ನು 9 ಗಂಟೆಯಿಂದ 10 ಗಂಟೆಗಳವರೆಗೆ ವಿಸ್ತರಿಸಲಾಗಿದೆ. ಈ ತಿದ್ದುಪಡಿ 20 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿದು ಬಂದಿದೆ.
ಒಂದೆಡೆ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ಈ ತಿದ್ದುಪಡಿ ರಾಜ್ಯದ ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ಇನ್ನೊಂದೆಡೆ ಈ ಪ್ರಕ್ರಿಯೆಯಲ್ಲಿ ಕಾರ್ಮಿಕರ ಹಕ್ಕುಗಳ ರಕ್ಷಣೆಯನ್ನು ಸರ್ಕಾರ ಹೇಗೆ ಮಾಡುತ್ತೆ ಅನ್ನೋ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಪರ ವಿರೋಧದ ಚರ್ಚೆ ಜೋರಾಗಿ ನಡೀತಿರುವಾಗಲೇ, ಕೆಲವು ಉದ್ಯಮಿಗಳು ಕರ್ನಾಟಕ ಸೇರಿದಂತೆ ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲೂ ಈ ರೂಲ್ಸ್ ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.