Advertisment

ಇಂದು ಕೂಡ ಕುಸಿದ ಭಾರತದ ಷೇರುಪೇಟೆ: ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ. ನಷ್ಟ!

ಭಾರತದ ಷೇರು ಪೇಟೆ ಇಂದು ಕೂಡ ತನ್ನ ಕುಸಿತ ಮುಂದುವರಿಸಿದೆ. ಮೊನ್ನೆ ಸೋಮವಾರ ಷೇರುಪೇಟೆ ಕುಸಿದು ಹೂಡಿಕೆದಾರರಿಗೆ 6 ರಿಂದ 9 ಲಕ್ಷ ಕೋಟಿ ರೂಪಾಯಿ ನಷ್ಟವಾಗಿತ್ತು. ಇಂದು ಷೇರುಪೇಟೆ ಕುಸಿತದಿಂದ ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ. ನಷ್ಟವಾಗಿದೆ. ಇದೆಲ್ಲಾ ಯುದ್ಧದ ಎಫೆಕ್ಟ್.

author-image
Chandramohan
Stock Market: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಷೇರು ಮಾರುಕಟ್ಟೆಯಲ್ಲಿ ಸಂಚಲನ..!
Advertisment


ಭಾರತದ ಷೇರು ಮಾರುಕಟ್ಟೆ ಇಂದು ಕೂಡ ತನ್ನ ಕುಸಿತವನ್ನು ಮುಂದುವರಿಸಿದೆ. ಜಾಗತಿಕ ಮಟ್ಟದ ಸಂಘರ್ಷ, ಅಮೆರಿಕಾ- ಇರಾನ್ ಯುದ್ಧ, ಕಚ್ಚಾತೈಲದ ಬೆಲೆ ಏರಿಕೆಯಿಂದಾಗಿ ಷೇರುಪೇಟೆ ಕುಸಿದಿದೆ. ಸೆನ್ಸೆಕ್ಸ್ ಇಂದು 1,700 ಪಾಯಿಂಟ್ ಕುಸಿದಿದೆ. ಇಂದು ಷೇರು ಮಾರ್ಕೆಟ್ 11 ತಿಂಗಳ ಕನಿಷ್ಠ ಮಟ್ಟವಾದ 78,443 ಪಾಯಿಂಟ್ ಗೆ ಕುಸಿದಿದೆ.  ಷೇರು ಮಾರುಕಟ್ಟೆ ಶೇ.2.24 ರಷ್ಟು ಕುಸಿದಿದೆ. 
ಇನ್ನೂ ನಿಫ್ಟಿ ಕೂಡ ಹೋಳಿ ಹಬ್ಬದ ರಜೆಯ ಮಾರನೇ ದಿನವಾದ ಇಂದು ಶೇ.2.25 ರಷ್ಟು ಕುಸಿದಿದೆ. ನಿಫ್ಟಿ ಕಳೆದ 10 ತಿಂಗಳ ಕನಿಷ್ಠ ಮಟ್ಟವಾದ 24,305 ಪಾಯಿಂಟ್ ಗೆ ಕುಸಿದಿದೆ. 
ಷೇರು ಹೂಡಿಕೆದಾರರು ಇಂದು ಬರೋಬ್ಬರಿ 8 ಲಕ್ಷ ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಷೇರು ಮಾರ್ಕೆಟ್ ನಲ್ಲಿ ಷೇರು ಟ್ರೇಡಿಂಗ್ ಶುರುವಾದ ಮೊದಲ 2 ಗಂಟೆಯಲ್ಲಿ ಹೂಡಿಕೆದಾರರು 8 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. 

ಇಂದು ಷೇರು ಮಾರುಕಟ್ಟೆ ಕುಸಿಯಲು ಕೆಲ ಪ್ರಮುಖ ಕಾರಣಗಳು.
1-ಪಶ್ಚಿಮ ಏಷ್ಯಾ ಬಿಕ್ಕಟ್ಟು-- ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು, ಯುದ್ಧದ ಪರಿಸ್ಥಿತಿಯಿಂದಾಗಿ ಹೂಡಿಕೆದಾರರು ತಮ್ಮ ಷೇರು ಮಾರಾಟಕ್ಕೆ ಮುಗಿಬಿದ್ದಿದ್ದಾರೆ. ಇರಾನ್ ಹೊಸದಾಗಿ ಗಲ್ಪ್ ರಾಷ್ಟ್ರಗಳ ಮೇಲೆ ತನ್ನ ಪ್ರತಿ ದಾಳಿಯನ್ನು ಮುಂದುವರಿಸಿದೆ. ಈ ಯುದ್ಧದಿಂದಾಗಿ ಕಚ್ಚಾತೈಲ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಸರಪಳಿ ಮೇಲೆ ನೆಗೆಟಿವ್ ಇಂಪ್ಯಾಕ್ಟ್ ಆಗುತ್ತೆ. ಜೊತೆಗೆ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತೆ. ಜಾಗತಿಕ ಅಶ್ಚಿತತೆಯ ಕಾರಣದಿಂದಾಗಿ ಷೇರು ಮಾರಾಟ ಹೆಚ್ಚಾಗಿದ್ದರಿಂದ ಷೇರು ಮಾರುಕಟ್ಟೆ ಕುಸಿದಿದೆ. 
ಭಾರತದ ದೃಷ್ಟಿಕೋನದಿಂದ ನೋಡುವುದಾದರೇ, ಭಾರತವು ಶೇ.80 ರಷ್ಟು ಕಚ್ಚಾತೈಲವನ್ನು ವಿದೇಶಗಳಿಂದ ಅಮದು ಮಾಡಿಕೊಳ್ಳುತ್ತಿದೆ. ಕಚ್ಚಾತೈಲದ ಬೆಲೆ ಏರಿಕೆಯಾಗುವುದರಿಂದ ಭಾರತದಲ್ಲಿ ಸಾಗಣೆ ವೆಚ್ಚ ಏರಿಕೆಯಾಗಿ ಹಣದುಬ್ಬರ ಉಂಟಾಗುತ್ತೆ. ಹಣದುಬ್ಬರ ಉಂಟಾದರೇ, ಬ್ಯಾಂಕ್ ಬಡ್ಡಿದರಗಳು ಏರಿಕೆಯಾಗುತ್ತಾವೆ. ಹೀಗಾಗಿ ಕಚ್ಚಾತೈಲದ ಬೆಲೆ ಏರಿಕೆಯೂ ಭಾರತದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ. ಈ ಯುದ್ಧ ಎಷ್ಟು ದಿನದವರೆಗೂ ನಡೆಯುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ. ಕನಿಷ್ಠ ನಾಲ್ಕು ವಾರ ಯುದ್ಧ ಮಾಡುತ್ತೇವೆ ಎಂದು ಒಮ್ಮೆ ಹೇಳಿದರೇ, ಮತ್ತೊಮ್ಮೆ ಎಷ್ಟು ದಿನ ಬೇಕಾದರೂ ಯುದ್ಧ ಮಾಡುತ್ತೇವೆ ಎಂದು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. 

Advertisment

2- ಕಚ್ಚಾತೈಲದ ಬೆಲೆ ಏರಿಕೆ-- ಇರಾನ್ ಹಾಗೂ ಅಮೆರಿಕಾ ಸಂಘರ್ಷದ ಕಾರಣದಿಂದ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ. ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ 82.11 ಡಾಲರ್ ಗೆ ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲೇ ಕಚ್ಚಾತೈಲದ ಬೆಲೆ ಶೇ.17 ರಷ್ಟು ಏರಿಕೆಯಾಗಿದೆ. ಇದು ಹೆಚ್ಚಿನ ಕಚ್ಚಾತೈಲ ಅಮದು ಮಾಡಿಕೊಳ್ಳುವ ಭಾರತದ ಪಾಲಿಗೆ ಕೆಟ್ಟ ಸುದ್ದಿ. ಹೀಗಾಗಿ ಭಾರತದ ಷೇರು ಪೇಟೆ ಕುಸಿಯಲು ಕಚ್ಚಾತೈಲದ ಬೆಲೆ ಏರಿಕೆಯೂ ಕಾರಣ. ಕಚ್ಚಾತೈಲದ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರದ ಆದಾಯಕ್ಕೆ ಹೊಡೆತ ಬಿದ್ದು ಖರ್ಚು ಹೆಚ್ಚಾಗುತ್ತೆ. ತೈಲ ಅಮದಿಗೆ ಹೆಚ್ಚಿನ ಹಣ ವೆಚ್ಚ ಮಾಡಬೇಕಾಗುತ್ತೆ. ಇದರಿಂದ ಸರ್ಕಾರದ ವಿತ್ತೀಯ ಕೊರತೆ ಹೆಚ್ಚಾಗುತ್ತೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತೆ. ಹಣದುಬ್ಬರವಾಗುತ್ತೆ. ಅಂತಿಮವಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಈಗಾಗಲೇ 92.17 ರೂಪಾಯಿಗೆ ಕುಸಿದಿದೆ.
3-ಜಾಗತಿಕ ಮಾರುಕಟ್ಟೆಗಳ ಪ್ರಭಾವ- ಜಾಗತಿಕ ಮಟ್ಟದಲ್ಲೂ ವಿವಿಧ ದೇಶಗಳ ಷೇರು ಮಾರುಕಟ್ಟೆ ಕುಸಿದಿವೆ. ಇದು ಭಾರತೀಯ ಷೇರು ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ. ದಕ್ಷಿಣ ಕೋರಿಯಾ ಷೇರು ಮಾರುಕಟ್ಟೆ ಶೇ.10 ರಷ್ಟು ಕುಸಿದಿದೆ. ಜಪಾನ್ ನ ನಿಕ್ಕಿ225, ಶಾಂಘೈನ ಎಸ್‌ಎಸ್ಇ ಕಂಪೋಸಿಟ್, ಹಾಂಗ್ ಕಾಂಗ್‌ನ ಷೇರು ಮಾರುಕಟ್ಟೆಗಳು ಕುಸಿದಿವೆ. ಮಂಗಳವಾರ ಅಮೆರಿಕಾದ ಷೇರು ಮಾರುಕಟ್ಟೆ ಕೂಡ ಕುಸಿದಿತ್ತು. ಇದು ಭಾರತದ ಷೇರುಪೇಟೆ ಮೇಲೂ ಪರಿಣಾಮ ಬೀರಿದೆ.
4- ಎಫ್‌ಐಐ ಮಾರಾಟ- ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ಸೋಮವಾರ 3,295 ಕೋಟಿ ರೂಪಾಯಿ ಈಕ್ವಿಟಿ ಮಾರಾಟ ಮಾಡಿ ತಮ್ಮ ಬಂಡವಾಳ ಹಿಂತೆಗೆದುಕೊಂಡಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಈ ನಡೆ, ಭಾರತೀಯ ಹೂಡಿಕೆದಾರರ ಮೇಲೂ ಪ್ರಭಾವ ಬೀರಿದೆ. 
5- ದುರ್ಬಲ ರೂಪಾಯಿ ಮೌಲ್ಯ- ಇಂದು ಅಮೆರಿಕಾದ ಡಾಲರ್ ಎದುರು ರೂಪಾಯಿ ಮೌಲ್ಯ 92.18 ಪೈಸೆಗೆ ಕುಸಿದಿದೆ. ಜಾಗತಿಕ ಬಿಕ್ಕಟ್ಟಿನ ಸನ್ನಿವೇಶದಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ. ಹೀಗಾಗಿ ಈಗ ಭಾರತವು ಅಮದಿಗೆ ಹೆಚ್ಚಿನ ಹಣ ನೀಡಬೇಕಾಗಿದೆ. ದುರ್ಬಲ ರೂಪಾಯಿ ಮೌಲ್ಯ, ರೂಪಾಯಿ ಮೌಲ್ಯ ಕುಸಿತಕ್ಕೆ ಷೇರು ಮಾರುಕಟ್ಟೆ ಸ್ಪಂದಿಸಿದ್ದರಿಂದ ಮಾರುಕಟ್ಟೆ ಕುಸಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IT SHARES DOWN SHARE MARKET TRADING Share market down
Advertisment
Advertisment
Advertisment