/newsfirstlive-kannada/media/media_files/2025/09/04/jayadeva-hospital-bangalore-2025-09-04-12-35-41.jpg)
ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರ ಆಯ್ಕೆ ಕಸರತ್ತು ಆರಂಭವಾಗಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹೊಸ ನಿರ್ದೇಶಕರ ಆಯ್ಕೆಗಾಗಿ ಸಭೆ ನಡೆಯುತ್ತಿದೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿದೆ. ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. 20 ವರ್ಷಗಳ ನಂತರ ನಿರ್ದೇಶಕರ ಆಯ್ಕೆಗೆ ಸಂದರ್ಶನ ನಡೆಯುತ್ತಿರುವುದು ವಿಶೇಷ.
ಸಿಎಂ ಸಿದ್ದರಾಮಯ್ಯರಿಂದ ನಿರ್ದೇಶಕರ ಆಯ್ಕೆಗೆ ಸಂದರ್ಶನ
ಸಂದರ್ಶನವನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿರುವ ಸಿಎಂ ಸಿದ್ದರಾಮಯ್ಯ ಅವರೇ ನಡೆಸುತ್ತಿರುವುದು ವಿಶೇಷ. 11 ಮಂದಿ ಹಿರಿಯ ವೈದ್ಯರು ಸಂದರ್ಶನದಲ್ಲಿ ಭಾಗಿಯಾಗುತ್ತಿದ್ದಾರೆ. ಅರ್ಹತೆ ಇದ್ದವರಿಗೆ ನಿರ್ದೇಶಕ ಸ್ಥಾನ ಕೊಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ರಾಜಕೀಯ ಪಕ್ಷಗಳ ಮುಖಂಡರ ಲಾಬಿಯನ್ನು ತಿರಸ್ಕರಿಸಿ, ನೇರ ಸಂದರ್ಶನವನ್ನು ಸಿಎಂ ಸಿದ್ದರಾಮಯ್ಯ ನಡೆಸುತ್ತಿದ್ದಾರೆ.
ಸದ್ಯ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಡಾಕ್ಟರ್ ರವೀಂದ್ರನಾಥ ನಿರ್ದೇಶಕರಾಗಿದ್ದಾರೆ. ರವೀಂದ್ರನಾಥ್ ಅವರ ಸೇವಾವಧಿ ಮುಗಿದಿರುವುದರಿಂದ ಹೊಸಬರನ್ನು ನಿರ್ದೇಶಕರಾಗಿ ಆಯ್ಕೆ ಮಾಡಿ ನೇಮಕ ಮಾಡಬೇಕಾಗಿದೆ. ಹೀಗಾಗಿ ಹೊಸ ನಿರ್ದೇಶಕರ ಆಯ್ಕೆಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ವೈದ್ಯರುಗಳ ಸಂದರ್ಶನ ನಡೆಸುತ್ತಿರುವುದು ವಿಶೇಷ.
ಡಾ.ಸಿ.ಎನ್.ಮಂಜುನಾಥ್ ಕಾಲಾವಧಿಯಲ್ಲಿ ಅಭಿವೃದ್ದಿ ಹೊಂದಿದ ಜಯದೇವ ಆಸ್ಪತ್ರೆ
2023ರ ಅಂತ್ಯದವರೆಗೂ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಡಾ.ಸಿ.ಎನ್.ಮಂಜುನಾಥ್ ನಿರ್ದೇಶಕರಾಗಿದ್ದರು. ಬಳಿಕ ರಾಜಕೀಯ ರಂಗ ಪ್ರವೇಶಿಸಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಡಾ.ಸಿ.ಎನ್.ಮಂಜುನಾಥ್ ಸುದೀರ್ಘ 17 ವರ್ಷಗಳ ಅವಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ನಿರ್ದೇಶಕರಾಗಿದ್ದರು. ಆಸ್ಪತ್ರೆಯಲ್ಲಿ ನಿರ್ದೇಶಕ ಸ್ಥಾನವೇ ಮುಖ್ಯಸ್ಥ ಹುದ್ದೆ ಇದ್ದಂತೆ. ಹೀಗಾಗಿ ನಿರ್ದೇಶಕರಾಗಿ ರಾಜ್ಯ ಸರ್ಕಾರಿಂದ ನೇಮಕವಾದವರು ಆಸ್ಪತ್ರೆಯ ಮುಖ್ಯಸ್ಥರಾಗಿ ನೇಮಕವಾದಂತೆ.
ಡಾ.ಸಿ.ಎನ್.ಮಂಜುನಾಥ್ ಅವರು ಆಸ್ಪತ್ರೆಯ ನಿರ್ದೇಶಕರಾಗಿ ಆಸ್ಪತ್ರೆಯ ಮೂಲಸೌಕರ್ಯವನ್ನು ಉನ್ನತ ದರ್ಜೆಗೆ ಏರಿಸಿದ್ದಾರೆ. ಯಾವುದೇ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಸರ್ಕಾರಿ ಆಸ್ಪತ್ರೆಯಾಗಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಅಭಿವೃದ್ದಿಪಡಿಸಿದ್ದಾರೆ. ಒಮ್ಮೆ ಸಚಿವರಾಗಿದ್ದ ರಾಮಚಂದ್ರೇಗೌಡ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದಾಗ, ಇದು ಸರ್ಕಾರಿ ಆಸ್ಪತ್ರೆಯೋ, ಖಾಸಗಿ ಆಸ್ಪತ್ರೆಯೋ ಎಂಬ ಪ್ರಶ್ನೆ ಕೇಳಿದ್ದರು. ಸರ್ಕಾರಿ ಆಸ್ಪತ್ರೆ ಎಂದು ಹೇಳಿದ್ದಾಗ ರಾಮಚಂದ್ರೇಗೌಡ ಶಾಕ್ ಆಗಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಇಷ್ಟೊಂದು ಕ್ಲೀನ್ ನೆಸ್, ಉತ್ತಮ ಮೂಲಸೌಕರ್ಯ ನಿರ್ಮಾಣ ಸಾಧ್ಯವೇ ಎಂದು ಅಶ್ಚರ್ಯಚಕಿತರಾಗಿದ್ದರು.
ಇನ್ಪೋಸಿಸ್ ಸೇರಿದಂತೆ ವಿವಿಧ ಕಂಪನಿಗಳಿಂದ ಸಿಎಸ್‌ಆರ್ ನೆರವು, ಕಟ್ಟಡ ನಿರ್ಮಾಣಕ್ಕೆ ನೆರವು ಸೇರಿದಂತೆ ವಿವಿಧ ನೆರವುಗಳನ್ನು ಪಡೆದು ಸರ್ಕಾರಿ ಆಸ್ಪತ್ರೆಯೊಂದನ್ನು ಖಾಸಗಿ ಆಸ್ಪತ್ರೆಗಳನ್ನು ಮೀರಿಸುವ ರೀತಿಯಲ್ಲಿ ಡಾ.ಸಿ.ಎನ್.ಮಂಜುನಾಥ್ ಅಭಿವೃದ್ದಿಪಡಿಸಿದ್ದಾರೆ. ಜಯದೇವ ಆಸ್ಪತ್ರೆಯನ್ನು ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯನ್ನಾಗಿ ಮಾಡಿದ್ದಾರೆ. ಡಾಕ್ಟರ್ ಸಿ.ಎನ್.ಮಂಜುನಾಥ್ ಕಾಲಾವಧಿಯಲ್ಲಿ ಜಯದೇವ ಆಸ್ಪತ್ರೆಯು ಸಾಕಷ್ಟು ಉನ್ನತ ಸ್ಥಾನಕ್ಕೇರಿದೆ.
ಹೀಗಾಗಿ ಇಂಥ ಪ್ರತಿಷ್ಠಿತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ನಿರ್ದೇಶಕ ಸ್ಥಾನವೇ ಪ್ರತಿಷ್ಠಿತ ಸ್ಥಾನ ಇದ್ದಂತೆ. ರಾಜ್ಯದ ಆಸ್ಪತ್ರೆಗಳಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೇ ಪ್ರತಿಷ್ಠಿತ ಸಂಸ್ಥೆಯಾಗಿದೆ. ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಕಲ್ಬುರ್ಗಿ, ಮೈಸೂರಿನಲ್ಲೂ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಶಾಖೆಗಳನ್ನು ಜನರ ಬೇಡಿಕೆಯ ಕಾರಣದಿಂದ ತೆರೆಯಲಾಗಿದೆ. ದೂರದ ಜಿಲ್ಲೆಗಳಿಂದ ಜನರು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬರುವುದು ಕಷ್ಟ ಎಂಬ ಕಾರಣದಿಂದ ಮೈಸೂರು, ಕಲ್ಬುರ್ಗಿಯಲ್ಲೂ ಆಸ್ಪತ್ರೆಯ ಶಾಖೆಗಳನ್ನು ತೆರೆಯಲಾಗಿದೆ.
ಇಂದಿಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೃದ್ರೋಗಿಗಳು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಗೆ ಚಿಕಿತ್ಸೆ ಪಡೆಯಲು ಬರುತ್ತಾರೆ. ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ ಹಾರ್ಟ್ ಸರ್ಜರಿಗಳನ್ನ ಮಾಡಲಾಗುತ್ತೆ. ಆಯುಷ್ಮಾನ್ ಭಾರತ್ ಸ್ಕೀಮ್ ನಡಿ ನೋಂದಾಯಿತರಾದವರಿಗೂ ಉಚಿತ ಹಾರ್ಟ್ ಸರ್ಜರಿಗಳನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಾಡಲಾಗುತ್ತೆ.
ಈಗ ಇಂಥ ಪ್ರತಿಷ್ಠಿತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಹೊಸ ನಿರ್ದೇಶಕರಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.