ನಟ ದರ್ಶನ್ ಬಂಧನದಿಂದ ಮತ್ತೆ ಜೈಲು ಪಾಲಾಗುವವರೆಗೂ ಬಿ.ದಯಾನಂದ್ ಪಾತ್ರ ಏನ್ ಗೊತ್ತಾ?

ಸ್ಟಾರ್ ನಟ ದರ್ಶನ್ ಬಂಧನದಿಂದ ಮತ್ತೆ ಜೈಲು ಪಾಲಾಗುವವರೆಗೂ ಐಪಿಎಸ್ ಅಧಿಕಾರಿ ಬಿ.ದಯಾನಂದ್ ಅವರ ಪಾತ್ರ ಇದೆ. ಮುಂದೆ ಜೈಲಿನಲ್ಲಿ ನಟ ದರ್ಶನ್ ಗೆ ಮತ್ತೆ ರಾಜಾತಿಥ್ಯ ಸಿಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಬಿ.ದಯಾನಂದ್ ಅವರಿಗೆ ಇದೆ. ನಟ ದರ್ಶನ್ ಗೆ ಈ ಬಾರಿ ಸಿಂಹಸ್ವಪ್ನ ಆಗಿರೋದು ಬಿ.ದಯಾನಂದ್ ಮತ್ತು ಎಸಿಪಿ ಚಂದನ್.

author-image
Chandramohan
ex BANGALORE CP DAYANANDA

ಹಿಂದಿನ ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್

Advertisment
  • ನಟ ದರ್ಶನ್ ಬಂಧನದಿಂದ ಮತ್ತೆ ಜೈಲು ಪಾಲಾಗುವವರೆಗೂ ಬಿ.ದಯಾನಂದ್ ಪಾತ್ರ ಇದೆ
  • ನಟ ದರ್ಶನ್ ಬಂಧನದ ದಿಟ್ಟ ತೀರ್ಮಾನ ಕೈಗೊಂಡಿದ್ದು ಬಿ.ದಯಾನಂದ್
  • ಬಿ.ದಯಾನಂದ್ ಸದ್ಯ ಜೈಲು ಎಡಿಜಿಪಿ ಆಗಿ ನೇಮಕ

ಈಗ ದರ್ಶನ್ ಮತ್ತೊಮ್ಮೆ ಜೈಲು ಪಾಲಾಗುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸುಪ್ರೀಂಕೋರ್ಟ್ ಜಾಮೀನು ರದ್ದುಪಡಿಸಿದ್ದರಿಂದ ಮತ್ತೊಮ್ಮೆ ಜೈಲು ಪಾಲಾಗುತ್ತಿದ್ದಾರೆ. 
ನಟ ದರ್ಶನ್ ಬಂಧನದಿಂದ ಮತ್ತೊಮ್ಮೆ ಜೈಲು ಪಾಲಾಗುವವರೆಗೂ ಐಪಿಎಸ್ ಅಧಿಕಾರಿ ಬಿ.ದಯಾನಂದ್ ಪಾತ್ರ ಇದೆ. ಮುಂದೆಯೂ ದರ್ಶನ್ ಜೈಲು ವಾಸದ ಸಮಯದಲ್ಲೂ ಬಿ.ದಯಾನಂದ್ ಅವರ ಪಾತ್ರ ಇರಲಿದೆ. ನಟ ದರ್ಶನ್ ಗೆ ಈ ಭಾರಿ ಸಿಂಹಸ್ವಪ್ನ ಆಗಿರೋದು ಬಿ.ದಯಾನಂದ್ ಮತ್ತು ಎಸಿಪಿ ಚಂದನ್  ಎಂಬ ಇಬ್ಬರು ಪೊಲೀಸ್ ಅಧಿಕಾರಿಗಳು ಅನ್ನೋದು ವಿಶೇಷ. 
  ಸ್ಟಾರ್ ನಟ ದರ್ಶನ್ ನನ್ನು ಕೊಲೆ ಕೇಸ್ ನಲ್ಲಿ ಬಂಧಿಸುವುದು ಪೊಲೀಸರ  ಪಾಲಿಗೆ ಸುಲಭದ ತೀರ್ಮಾನ ಆಗಿರಲಿಲ್ಲ. ಆದರೇ, ಸ್ಟಾರ್ ನಟ, ಮಾಸ್ ಹೀರೋ,  ದೊಡ್ಡ ಫ್ಯಾನ್ ಫಾಲೋಯಿಂಗ್ ಯಾವುದನ್ನೂ  ನೋಡದೇ, ಕೊಲೆ ಕೇಸ್ ನಲ್ಲಿ ಬಂಧಿಸುವ ದಿಟ್ಟ ತೀರ್ಮಾನ ಕೈಗೊಂಡಿದ್ದು, ಈ ಹಿಂದೆ ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ಬಿ.ದಯಾನಂದ್.   ಅವರ ದಿಟ್ಟ ನಿರ್ಧಾರ, ಕಾನೂನು ಎತ್ತಿ ಹಿಡಿಯಬೇಕೆಂಬ ಮನೋಭಾವ, ಕಾನೂನು ಎಲ್ಲರಿಗೂ ಒಂದೇ ಎನ್ನುವ ಧೋರಣೆಗಳ ಕಾರಣದಿಂದ ನಟ ದರ್ಶನ್ ಬಂಧನ ಸಾಧ್ಯವಾಯಿತು. ಇಲ್ಲದಿದ್ದರೇ, ನಟ ದರ್ಶನ್ ಬಂಧಿಸದೇ, ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಸರೆಂಡರ್ ಆಗಿದ್ದ ನಾಲ್ವರೇ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳು ಎಂದು ಹೇಳಿ ಕೈ ತೊಳೆದುಕೊಂಡು ಬಿಡಬಹುದಿತ್ತು. ಯಾರೂ ಆಗ ಪೊಲೀಸರನ್ನು ಪ್ರಶ್ನಿಸುತ್ತಿರಲಿಲ್ಲ. ಯಾರಿಗೂ ಈ ಕೇಸ್ ನಲ್ಲಿ ನಟ ದರ್ಶನ್ ಭಾಗಿಯಾಗಿದ್ದಾನೆ ಎಂಬುದು ಗೊತ್ತಿರಲಿಲ್ಲ. ಆದರೇ, ಅನಾಥ ಶವ ಪತ್ತೆ ಕೇಸ್ ಅನ್ನು ಅಳಕ್ಕೆ ಇಳಿದು ತನಿಖೆ ಮಾಡಿದ ಪರಿಣಾಮವೇ ರೇಣುಕಾಸ್ವಾಮಿ ಎಂಬ ಅನಾಥ ಶವದ ಕೇಸ್ ನಲ್ಲಿ ನಟ ದರ್ಶನ್ ಭಾಗಿಯಾಗಿದ್ದಾನೆ ಎಂಬ ಅಂಶ ಪೊಲೀಸರಿಗೆ ಗೊತ್ತಾಯಿತು. ಪೊಲೀಸರಿಗೆ ದರ್ಶನ್ ಭಾಗಿ ಎಂಬುದು ಗೊತ್ತಾದ ಮೇಲೂ , ಆತ ಸ್ಟಾರ್ ನಟ. ಆತನನ್ನು ಬಂಧಿಸಿದರೇ, ಗಲಾಟೆಯಾಗಬಹುದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಭಾವಿಸಿ, ಆತನನ್ನು  ಬಂಧಿಸದೆಯೇ ಬಿಡಬಹುದಿತ್ತು. ಆದರೇ, ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ದಯಾನಂದ್ ಆ ರೀತಿ ಯೋಚಿಸಲಿಲ್ಲ. ಯಾರೇ ಆಗಿರಲಿ, ಎಷ್ಟೇ ಪ್ರಭಾವಿಯಾಗಿರಲಿ. ಕಾನೂನು ಮುಂದೆ ಎಲ್ಲರೂ ಸಮಾನರು, ಕಾನೂನು ಮುಂದೆ ಎಲ್ಲರೂ ಒಂದೇ. ಹೀಗಾಗಿ ದರ್ಶನ್ ಬಂಧನಕ್ಕೆ  ಎಸಿಪಿ ಚಂದನ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಬಿ. ದಯಾನಂದ್. ಮತ್ತೊಂದೆಡೆ ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಗೆ ಈ ಕೊಲೆ ಕೇಸ್ ಬಗ್ಗೆ ಯಾವ ರೀತಿ ಹೇಳಬೇಕೋ ಅದೇ ರೀತಿ ಹೇಳಿ, ದರ್ಶನ್ ಬಂಧನಕ್ಕೆ ರಾಜ್ಯ ಸರ್ಕಾರದಿಂದ ಅಡ್ಡಿ ಬರದಂತೆ ನೋಡಿಕೊಂಡಿದ್ದರು. ಜೊತೆಗೆ ರೇಣುಕಾಸ್ವಾಮಿಗೆ ಯಾವ ರೀತಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬುದನ್ನು ಸಿಎಂ ಸಿದ್ದರಾಮಯ್ಯಗೂ ಪೋಟೋ, ವಿಡಿಯೋ ಸಾಕ್ಷ್ಯ ಸಮೇತ ವಿವರಿಸಿ, ದರ್ಶನ್ ಬಂಧನಕ್ಕೆ  ಒಪ್ಪಿಗೆ ಪಡೆಯುವಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ಬಿ.ದಯಾನಂದ್ ಯಶಸ್ವಿಯಾಗಿದ್ದರು. 
ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ದಯಾನಂದ್, ಕೆಳ ಹಂತದ ಇನ್ಸ್ ಪೆಕ್ಟರ್, ಎಸಿಪಿಗಳಿಗೆ ದರ್ಶನ್ ಬಂಧನಕ್ಕೆ  ಒಪ್ಪಿಗೆ ಕೊಡದೇ ಇದ್ದರೇ, ಕೆಳ ಹಂತದ ಅಧಿಕಾರಿಗಳು ದರ್ಶನ್ ಬಂಧನಕ್ಕೆ ಮುಂದಾಗುತ್ತಿರಲಿಲ್ಲ.  ದರ್ಶನ್ ತನ್ನ ಪ್ರಭಾವ ಬಳಸದಂತೆ ಪೊಲೀಸರು ಎಲ್ಲ ರೀತಿಯಲ್ಲೂ ಮುಂಜಾಗ್ರತೆ ವಹಿಸಿದ್ದರು. ದರ್ಶನ್ ಗೆ ಕಾಂಗ್ರೆಸ್ ಪಕ್ಷದಲ್ಲೂ ಪ್ರಭಾವಿಯಾಗಿರುವ ನಾಯಕರ ಜೊತೆ  ಆಪ್ತತೆ ಇದೆ. ದಾವಣಗೆರೆ, ಮಂಡ್ಯ, ಧಾರವಾಡ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಭಾವಿ ಸಚಿವರುಗಳ ಜೊತೆ ನಟ ದರ್ಶನ್ ಗೆ  ಆಪ್ತತೆ ಇತ್ತು. ನಂಟು ಇತ್ತು. ಆ ಪ್ರಭಾವ ಬಳಸಲು ಅವಕಾಶವೇ ಸಿಗದಂತೆ ಪೊಲೀಸರು ಎಚ್ಚರಿಕೆ  ವಹಿಸಿದ್ದರು. ದರ್ಶನ್ ಗೆ ಗೊತ್ತಾಗದಂತೆ ರೇಣುಕಾಸ್ವಾಮಿ ಅನಾಥ ಶವದ ತನಿಖೆ ನಡೆಸಿ, ದರ್ಶನ್ ಭುಜದ ಮೇಲೆ ಖಾಕಿ ಪಡೆ ಕೈ ಹಾಕಿ, ಮೈಸೂರಿನಲ್ಲಿ ಪೊಲೀಸ್ ಜೀಪ್  ಹತ್ತಿಸಿದ್ದು ಎಸಿಪಿ ಚಂದನ್ ಅಂಡ್ ಟೀಮ್. 
ದರ್ಶನ್ ನನ್ನು ಬಂಧಿಸಿದಾಗ ಬಿ.ದಯಾನಂದ್ ಅವರು ಬೆಂಗಳೂರು ಪೊಲೀಸ್ ಕಮೀಷನರ್  ಆಗಿದ್ದರು. ದರ್ಶನ್ ಗೆ ಕೊಲೆ ಕೇಸ್ ನಲ್ಲಿ ಹೈಕೋರ್ಟ್ ನಿಂದ ಜಾಮೀನು ಸಿಕ್ಕ ಬಳಿಕ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆಯ ತೀರ್ಮಾನ ಕೈಗೊಂಡಿದ್ದು ಬಿ.ದಯಾನಂದ್. 

ex BANGALORE CP DAYANANDA333


ಆದರೇ, ದರ್ಶನ್ ಗೆ ಈಗ ಸುಪ್ರೀಂಕೋರ್ಟ್ ನಿಂದ ಜಾಮೀನು ರದ್ದಾಗಿರುವ ಈ ವೇಳೆಯಲ್ಲಿ ಬಿ. ದಯಾನಂದ್ ಬೆಂಗಳೂರು ಪೊಲೀಸ್ ಕಮೀಷನರ್ ಆಗಿಲ್ಲ. ಬಿ. ದಯಾನಂದ್ ಈಗ ಜೈಲು ಎಡಿಜಿಪಿ ಆಗಿದ್ದಾರೆ. ರಾಜ್ಯದ ಎಲ್ಲ ಜೈಲುಗಳಿಗೂ ಬಿ.ದಯಾನಂದ್ ಅವರೇ ಎಡಿಜಿಪಿ.  ಹೀಗಾಗಿ ಈಗ ನಟ ದರ್ಶನ್ ಜೈಲು ಸೇರಿದ ಬಳಿಕ ಮತ್ತೆ ಜೈಲಿನಲ್ಲಿ ರಾಜಾತಿಥ್ಯವನ್ನು ಈ ಭಾರಿ ಪಡೆಯಲು ಸಾಧ್ಯವೇ ಇಲ್ಲ. ದರ್ಶನ್ ನನ್ನು  ಈ  ಭಾರಿ ಬೆಂಗಳೂರು ಜೈಲಿನಲ್ಲಿ ಇರಿಸಬೇಕೋ ಇಲ್ಲವೇ ಬಳ್ಳಾರಿ ಜೈಲಿನಲ್ಲಿ ಇರಿಸಬೇಕೋ ಅನ್ನೋ ಬಗ್ಗೆಯೂ ಬಿ.ದಯಾನಂದ್  ಅವರೇ ತೀರ್ಮಾನ ಕೈಗೊಳ್ಳುತ್ತಾರೆ. ಬಹುತೇಕ ನಟ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಕಳಿಸುವ ಸಾಧ್ಯತೆ ಇದೆ. ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಗೆ ಯಾವುದೇ ರಾಜಾತಿಥ್ಯ ಸಿಗದಂತೆ ಬಿ.ದಯಾನಂದ್ ಹದ್ದಿನ ಕಣ್ಣು ಇಡಲಿದ್ದಾರೆ. ಹೀಗಾಗಿ ದರ್ಶನ್ ಪಾಲಿಗೆ ಬಿ.ದಯಾನಂದ್ ಅವರೇ ಸಿಂಹಸ್ವಪ್ನ. 
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಬಂಧನದಿಂದ ಹಿಡಿದು ಈಗ ಮತ್ತೆ 2ನೇ ಭಾರಿಗೆ  ಈ ಕೇಸ್ ನಲ್ಲಿ ಜೈಲು ಪಾಲಾಗುವವರೆಗೂ ಬಿ.ದಯಾನಂದ್ ಅವರ ಪಾತ್ರ ಇದೆ. ಜೈಲಿನಲ್ಲಿ ಮುಂದೆ ಯಾವುದೇ ರಾಜಾತಿಥ್ಯ ಸಿಗದಂತೆ ದಯಾನಂದ್ ನೋಡಿಕೊಳ್ಳುತ್ತಾರೆ ಎಂಬ ಭರವಸೆ ರಾಜ್ಯದ ಜನರಿಗೆ ಇದೆ.  ದರ್ಶನ್ ಗೆ ಕೊಲೆ ಕೇಸ್ ನಲ್ಲಿ ಶಿಕ್ಷೆ ನೀಡಬೇಕೋ ಬೇಡವೋ ಎಂಬುದನ್ನು ಬೆಂಗಳೂರಿನ ಕೋರ್ಟ್ ನಿರ್ಧರಿಸಲಿದೆ. ಅಲ್ಲಿಯವರೆಗೂ ನಟ ದರ್ಶನ್, ಪವಿತ್ರಾ ಗೌಡ, ಪ್ರದೋಷ್, ಜಗದೀಶ್, ಅನುಕುಮಾರ್ ಸೇರಿದಂತೆ 7  ಆರೋಪಿಗಳು ಜೈಲು ಮುದ್ದೆ ಮುರಿಯಬೇಕಾಗುತ್ತೆ . 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

B DAYANANDA BANGALORE POLICE COMMISSONER JAIL ADGP ACP CHANDAN
Advertisment