/newsfirstlive-kannada/media/media_files/2025/09/12/kolar-teacher-manjula-attacked-2025-09-12-17-48-19.jpg)
ಹಲ್ಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಶಿಕ್ಷಕಿ ಮಂಜುಳ
ಶಾಲೆಗೆ ಬಾರದ ವಿದ್ಯಾರ್ಥಿಯನ್ನು ಪ್ರಶ್ನೆ ಮಾಡಿದ್ದಕ್ಕೆ ವಿದ್ಯಾರ್ಥಿಯ ತಂದೆ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಕ್ಷೇತ್ರನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕ್ಷೇತ್ರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳ ಮೇಲೆ ವಿದ್ಯಾರ್ಥಿಯೊಬ್ಬನ ತಂದೆ ಚೌಡಪ್ಪ ಎಂಬಾತ ಹಲ್ಲೆ ನಡೆಸಿದ್ದಾನೆ. ಚೌಡಪ್ಪ ತಳ್ಳಿದ ವೇಳೆ, ಶಾಲೆಯ ಬಾಗಿಲು ಶಿಕ್ಷಕಿಯ ತಲೆಗೆ ತಗುಲಿ ಗಾಯವಾಗಿದೆ. ಚೌಡಪ್ಪ ಪುತ್ರ ಚರಣ್ ಎಂಬ ವಿದ್ಯಾರ್ಥಿ ಎರಡು ದಿನ ಶಾಲೆಗೆ ಬಾರದ್ದನ್ನು ಶಿಕ್ಷಕಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಕೋಪಗೊಂಡಿದ್ದ ವಿದ್ಯಾರ್ಥಿ ಚರಣ್ ತಂದೆ ಚೌಡಪ್ಪ ಶಾಲೆಗೆ ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಶಿಕ್ಷಕಿ ಮಂಜುಳ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿಕ್ಷಕಿ ಮಂಜುಳ ಮೇಲೆ ಹಲ್ಲೆ ನಡೆಸಿದ ಚೌಡಪ್ಪ, ತನ್ನ ಕುಟುಂಬ ಸಮೇತ ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ಕ್ಷೇತ್ರನಹಳ್ಳಿ ಗ್ರಾಮದ ಶಾಲೆಗೆ ಮಾಸ್ತಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.