/newsfirstlive-kannada/media/media_files/2025/08/26/bangalore-tunnel-road-project-03-2025-08-26-17-07-35.jpg)
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದ ಸರ್ಕಾರ
ಐಟಿ ಸಿಟಿ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲಾ ಹೆಸರಾಗಿರುವ ನಮ್ಮ ಬೆಂಗಳೂರು ದಿನೇ ದಿನೇ ಎಲ್ಲ ಕಡೆ ಬೆಳೆಯುತ್ತಿದೆ. ನಗರದಲ್ಲಿರುವ ಐ.ಟಿ, ಬಿಟಿ ಕಂಪನಿಗಳಿಂದಾಗಿ ಹೊರ ರಾಜ್ಯದ ಯುವಜನತೆ ಕೂಡ ಉದ್ಯೋಗ ಅರಸಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಬರುತ್ತಿದ್ದಾರೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಬೆಂಗಳೂರು ನಗರದ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ.
ಬೆಂಗಳೂರಿನಲ್ಲಿ ನಿತ್ಯ 2 ಸಾವಿರ ವಾಹನ ನೋಂದಣಿ
ಬೆಂಗಳೂರಿನಲ್ಲಿವೆ 1.23 ಕೋಟಿ ವಾಹನಗಳು
ಬೆಂಗಳೂರಿನಲ್ಲಿ ಜನರ ಆದಾಯ ಹೆಚ್ಚಾದಂತೆ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ 2 ಸಾವಿರ ಹೊಸ ವಾಹನಗಳು ಆರ್‌ಟಿಓ ಕಚೇರಿಗಳಲ್ಲಿ ನೋಂದಾಣಿಯಾಗಿ ರಸ್ತೆಗೆ ಇಳಿಯುತ್ತಿವೆ. 2024-25 ರಲ್ಲಿ 7.22 ಲಕ್ಷ ಹೊಸ ವಾಹನಗಳು ನೋಂದಾಣಿಯಾಗಿ ರಸ್ತೆಗೆ ಇಳಿದಿವೆ. ಇದರಲ್ಲಿ 4.68 ಲಕ್ಷ ದ್ವಿಚಕ್ರ ವಾಹನಗಳಾದರೇ, 1.45 ಲಕ್ಷ ಕಾರ್ ಗಳು ರಿಜಿಸ್ಟ್ರೇಷನ್ ಆಗಿ ರಸ್ತೆಗೆ ಇಳಿದಿವೆ.
ಇಡೀ ಕರ್ನಾಟಕ ರಾಜ್ಯದಲ್ಲಿರುವ ಕಾರ್ ಗಳ ಪೈಕಿ ಅರ್ಧದಷ್ಟು ಕಾರ್ ಗಳು ರಾಜಧಾನಿ ಬೆಂಗಳೂರಿನಲ್ಲೇ ಇವೆ. ರಾಜಧಾನಿ ಬೆಂಗಳೂರಿನಲ್ಲಿ 2024-25 ರಲ್ಲಿ ಬರೋಬ್ಬರಿ 1.23 ಕೋಟಿ ವಾಹನಗಳಿವೆ. ಇಡೀ ಕರ್ನಾಟಕದಲ್ಲಿ 3.34 ಕೋಟಿ ವಾಹನಗಳಿದ್ದರೇ, ಇದರ ಹತ್ತಿರ ಹತ್ತಿರ ಅರ್ಧದಷ್ಟು ವಾಹನಗಳು ರಾಜಧಾನಿ ಬೆಂಗಳೂರಿನಲ್ಲಿವೆ. ಬೆಂಗಳೂರಿನಲ್ಲಿ ಮೆಟ್ರೋ ಟ್ರೇನ್ ಸಂಪರ್ಕ ಇದೆ. ಬಿಎಂಟಿಸಿ ಬಸ್ ಗಳಿವೆ. ಟ್ರೇನ್ ಸೌಲಭ್ಯ ಕೂಡ ಕೆಲ ಮಾರ್ಗದಲ್ಲಿದೆ. ಆದರೂ, ವಾಹನಗಳ ಸಂಖ್ಯೆ ಮತ್ತು ಜನಸಂಖ್ಯೆ ಎರಡು ಕೂಡ ವೇಗವಾಗಿ ಬೆಳೆಯುತ್ತಿದೆ. ಸದ್ಯ ಬೆಂಗಳೂರಿನ ಜನಸಂಖ್ಯೆ 1.40 ಕೋಟಿಗೆ ಏರಿಕೆಯಾಗಿದೆ. ಇದರಿಂದಾಗಿ ಹೆಚ್ಚಾಗುತ್ತಿರುವ ಜನಸಂಖ್ಯೆ ಮತ್ತು ವಾಹನಗಳಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗುತ್ತಿದೆ. ರಸ್ತೆಗಳನ್ನು ಎಲ್ಲ ಕಡೆ ಅಗಲೀಕರಣ ಮಾಡಲು ಕಟ್ಟಡಗಳಿಂದಾಗಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಂದೇ ರಸ್ತೆಯ ಮೇಲೆ ಮೇಲ್ಸೇತುವೆ, ಮೆಟ್ರೋ ಮೇಲ್ಸೇತುವೆಯನ್ನು ನಿರ್ಮಾಣ ಮಾಡುವ ಪ್ರಯೋಗ ಕೂಡ ಜಯದೇವ ಆಸ್ಪತ್ರೆ ಜಂಕ್ಷನ್ ಬಳಿ ಆಗಿದೆ. ಆದರೇ, ಎಲ್ಲ ಕಡೆ ಮೇಲ್ಸೇತುವೆ, ಮೆಟ್ರೋ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗಲ್ಲ. ಹೀಗಾಗಿ ಈಗ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸುರಂಗ ಮಾರ್ಗದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸುರಂಗ ಮಾರ್ಗದ ರಸ್ತೆ ನಿರ್ಮಾಣದಿಂದ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಭವಿಷ್ಯದ ಏರುವ ಜನಸಂಖ್ಯೆ ಮತ್ತು ಹೆಚ್ಚಾಗುವ ವಾಹನಗಳ ಸಂಖ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಸುರಂಗ ಮಾರ್ಗ ನಿರ್ಮಾಣವೇ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಎಂಬುದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅಭಿಪ್ರಾಯ. ಜೊತೆಗೆ ವಿದೇಶಗಳಂತೆ ಬೆಂಗಳೂರನಲ್ಲೂ ಸುರಂಗ ಮಾರ್ಗದ ರಸ್ತೆ ನಿರ್ಮಾಣವಾದರೇ, ಮೂಲಸೌಕರ್ಯ ಅಭಿವೃದ್ದಿಯಲ್ಲಿ ಬೇರೆ ನಗರಗಳಂತೆ ಬೆಂಗಳೂರು ಕೂಡ ಒಂದು ಹೆಜ್ಜೆ ಮುಂದೆ ಇಟ್ಟಂತೆ ಆಗುತ್ತೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗೋದು ಹೆಬ್ಬಾಳ ಪ್ಲೈ ಓವರ್ ಬಳಿ. ಹೀಗಾಗಿ ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ವರೆಗೂ ಸುರಂಗ ಮಾರ್ಗದ ರಸ್ತೆಯನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ವರೆಗೂ ಸುರಂಗ ಮಾರ್ಗ ನಿರ್ಮಿಸಿದರೇ, 16.74 ಕಿಲೋಮೀಟರ್ ಉದ್ದವಾಗಲಿದೆ. ಸುರಂಗ ಮಾರ್ಗದ ರಸ್ತೆ ನಿರ್ಮಾಣಕ್ಕಾಗಿ ಬರೋಬ್ಬರಿ 17,698 ಕೋಟಿ ರೂಪಾಯಿ ವೆಚ್ಚವಾಗಲಿದೆ. ಪ್ರತಿ ಕಿಲೋಮೀಟರ್ ಸುರಂಗ ರಸ್ತೆ ನಿರ್ಮಾಣಕ್ಕಾಗಿ 1,050 ಕೋಟಿ ರೂಪಾಯಿ ವೆಚ್ಚವಾಗುವುದು ವಿಶೇಷ. ಭೂಮಿಯೊಳಗೆ ಮೂರು ಪಥದ ದ್ವಿಮುಖ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತೆ. ಸುರಂಗ ಮಾರ್ಗದ ರಸ್ತೆಗಾಗಿ 80 ಎಕರೆ ಜಾಗದ ಅಗತ್ಯ ಇದೆ. ಇದರ ಪೈಕಿ 60 ಎಕರೆ ಸರ್ಕಾರಿ ಭೂಮಿ ಇದ್ದರೇ, ಇನ್ನೂ 20 ಎಕರೆ ಮಾತ್ರ ಖಾಸಗಿ ಭೂಮಿಯನ್ನು ಸರ್ಕಾರ ಖರೀದಿ ಮಾಡಬೇಕಾಗಿದೆ. ಸುರಂಗ ಮಾರ್ಗದ ರಸ್ತೆಯಲ್ಲಿ ಕಾರ್ ಗಳಿಗೆ ಮಾತ್ರ ಎಂಟ್ರಿಯಾಗಲು ಅವಕಾಶ ನೀಡಲಾಗುತ್ತೆ. ಬೈಕ್, ಲಾರಿ, ಟ್ರಕ್ ಗಳಿಗೆ ಸುರಂಗ ಮಾರ್ಗದ ರಸ್ತೆಯಲ್ಲಿ ಎಂಟ್ರಿ ಇರಲ್ಲ. ಸುರಂಗ ಮಾರ್ಗದ ರಸ್ತೆಗೆ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತೆ. ಟೋಲ್ ಶುಲ್ಕ ಕಾರ್ ಗೆ 330 ರೂಪಾಯಿ ನಿಗದಿಪಡಿಸಲಾಗುತ್ತಿದೆ. ಇನ್ನೂ ಈ ಸುರಂಗ ಮಾರ್ಗದ ರಸ್ತೆ ನಿರ್ಮಾಣಕ್ಕಾಗಿ ಕಂಪನಿಗಳಿಗೆ ಬಿಡ್ ಮಾಡಲು ಆಕ್ಟೋಬರ್ 3 ರವರೆಗೆ ಅವಕಾಶ ನೀಡಲಾಗಿದೆ. ಬಿ ಸ್ಮೈಲ್ ಕಂಪನಿಯು ಸುರಂಗ ಮಾರ್ಗ ರಸ್ತೆ ನಿರ್ಮಾಣದ ಬಗ್ಗೆ ತಾಂತ್ರಿಕ ಸರ್ವೇಯನ್ನು ನಡೆಸಿದೆ. 2 ಪ್ಯಾಕೇಜ್ ಗಳಲ್ಲಿ ಕಾಮಗಾರಿ ಕೈಗೊಳ್ಳುವ ಪ್ಲ್ಯಾನ್ ಇದೆ. ಕಾಮಗಾರಿ ಮುಗಿಸಲು ಕಂಪನಿಗಳಿಗೆ 50 ತಿಂಗಳ ಗಡುವು ನೀಡಲಾಗಿದೆ.
ಬೆಂಗಳೂರು ಸುರಂಗ ರಸ್ತೆ ಹೈಲೆಟ್ಸ್ :
- ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ವರೆಗೆ ನಿರ್ಮಾಣ
- 16.74 ಕಿ.ಮೀ ಉದ್ದ ಸುರಂಗ ರಸ್ತೆ
- 17,698 ಕೋಟಿ ರೂಪಾಯಿ ವೆಚ್ಚ
- ಮೂರು ಪಥದ ದ್ವಿಮುಖ ರಸ್ತೆ
- 80 ಎಕರೆ ಜಾಗ
- ಟೋಲ್ ಶುಲ್ಕ 330 ರೂಪಾಯಿ
- ಅಕ್ಟೋಬರ್ 3ರವೆರೆಗೆ ಬಿಡ್ ಮಾಡಲು ಅವಕಾಶ
- ತಾಂತ್ರಿಕ ಸರ್ವೆ ಕೈಗೊಂಡಿರುವ ಬಿ ಸ್ಮೈಲ್ ಕಂಪನಿ
- 2 ಪ್ಯಾಕೇಜ್ ಗಳಲ್ಲಿ ಕಾಮಗಾರಿ
- 50 ತಿಂಗಳ ಗಡುವು
- ಹೆಬ್ಬಾಳದ ಎಸ್ಟಿಮ್ ಮಾಲ್‌ನಿಂದ - ಶೇಷಾದ್ರಿ ರಸ್ತೆಯ ರೇಸ್ ಕೋರ್ಸ್ ಜಂಕ್ಷನ್ ವರೆಗೆ 8.74 ಕಿ.ಮೀ
- ಶೇಷಾದ್ರಿ ರಸ್ತೆಯ ರೇಸ್‌ಕೋರ್ಸ್ ಜಂಕ್ಷನ್‌ನಿಂದ - ಸಿಲ್ಕ್ ಬೋರ್ಡ್ ವರೆಗೆ 7.99 ಕಿ.ಮೀ ಉದ್ದ
ಸುರಂಗ ಮಾರ್ಗದ ರಸ್ತೆ ನಿರ್ಮಾಣದ ಪರ-ವಿರೋಧ ಚರ್ಚೆಗಳು ಬೆಂಗಳೂರನಲ್ಲಿ ನಡೆಯುತ್ತಿವೆ. ಬಹಳಷ್ಟು ಮಂದಿ ಸುರಂಗ ಮಾರ್ಗದ ರಸ್ತೆ ಬೆಂಗಳೂರಿನಂಥ ಟೆಕ್ ಸಿಟಿಗೆ ಬೇಕು ಎಂದು ವಾದಿಸುತ್ತಿದ್ದಾರೆ. ಇನ್ನೂ ಕೆಲವರು ಸುರಂಗ ಮಾರ್ಗದ ರಸ್ತೆ ಸುಲಭವಲ್ಲ, ಸಾಧುವೂ ಅಲ್ಲ, ಅದರಿಂದ ಸಮಸ್ಯೆಗಳೇ ಹೆಚ್ಚು. ಬೆಂಗಳೂರಿಗೆ ಸೂಕ್ತವಾಗಲ್ಲ ಎನ್ನುತ್ತಿದ್ದಾರೆ. ಈ ಎರಡು ವಾದಗಳನ್ನು ಈಗ ನಿಮ್ಮ ಮುಂದೆ ಇಡುತ್ತಿದ್ದೇವೆ.
ಸುರಂಗ ಮಾರ್ಗದ ರಸ್ತೆಯ ಅನುಕೂಲಗಳು
ಸುರಂಗ ಮಾರ್ಗದ ರಸ್ತೆಯನ್ನು ಭೂಮಿಯಿಂದ 140 ಅಡಿ ಅಳದಲ್ಲಿ ಸುರಂಗ ಕೊರೆದು ನಿರ್ಮಿಸಲಾಗುತ್ತೆ.
ಇದರಿಂದ ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತೆ. ಬೆಂಗಳೂರಿನ ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗುತ್ತೆ. ಕಾರ್ ಗಳೆಲ್ಲಾ ಸುರಂಗ ಮಾರ್ಗದ ರಸ್ತೆಯಲ್ಲಿ ಸಂಚರಿಸಲು ಅವಕಾಶ ಇರೋದರಿಂದ ಸಂಚಾರ ದಟ್ಟಣೆ ಕಡಿಮೆಯಾಗುತ್ತೆ.
ರಸ್ತೆಗಳ ಮೇಲೆ ಕೆಲವೊಂದು ನೈಸರ್ಗಿಕ ಅಡೆತಡೆಗಳು ಎದುರಾಗುತ್ತಾವೆ.ಆದರೇ, ಸುರಂಗ ಮಾರ್ಗದಲ್ಲಿ ಆ ರೀತಿಯಾದ ಸಮಸ್ಯೆಗಳು ಇರಲ್ಲ. ಇನ್ನೂ ಸುರಂಗ ಮಾರ್ಗದ ರಸ್ತೆಯಿಂದ ಸಾರಿಗೆ ದಕ್ಷತೆ ಹೆಚ್ಚಳವಾಗುತ್ತೆ. ಭೂಮಿಯ ಮೇಲೆ ರಸ್ತೆ ನಿರ್ಮಾಣಕ್ಕೆ ಹಾಗೂ ರಸ್ತೆ ಅಗಲೀಕರಣಕ್ಕೆ ಭೂಮಿ ಬಳಕೆ ಹೆಚ್ಚಾಗಿ ಬೇಕಾಗುತ್ತೆ. ಆದರೇ, ಸುರಂಗ ಮಾರ್ಗವನ್ನು ಭೂಮಿಯೊಳಗೆ ಕೊರೆಯುವುದರಿಂದ ಭೂಮಿ ಬಳಕೆ ಕಡಿಮೆಯಾಗಿರುತ್ತೆ. ಇನ್ನೂ ಸುರಂಗ ಮಾರ್ಗದ ಪ್ರಯಾಣವು ಸುರಕ್ಷಿತ ಪ್ರಯಾಣ ಎಂಬ ಲೆಕ್ಕಾಚಾರ ಇದೆ. ಸುರಂಗ ಮಾರ್ಗದಲ್ಲಿ ದ್ವಿಪಥ ಹೆದ್ದಾರಿ ನಿರ್ಮಿಸುವುದರಿಂದ ಅಪಘಾತಗಳ ಸಂಖ್ಯೆ ಕಡಿಮೆ ಇರುತ್ತೆ. ಸುರಂಗ ಮಾರ್ಗದ ರಸ್ತೆಗಳಲ್ಲಿ ಕಾರ್ ಗಳು ಮಾತ್ರ ಸಂಚರಿಸುವುದರಿಂದ ವಾಹನ ಸಂಚಾರದ ವೇಗ ಹೆಚ್ಚಾಗಿರುತ್ತೆ. ಬೇಗನೇ ಒಂದು ಸ್ಥಳದಿಂದ ಇನ್ನೊಂದು ಸ್ಥಳ ತಲುಪಬಹುದು.
ಸುರಂಗ ಮಾರ್ಗದ ರಸ್ತೆಯ ಅನುಕೂಲಗಳು
- ಸಂಚಾರ ದಟ್ಟಣೆ ಕಡಿಮೆ
- ನೈಸರ್ಗಿಕ ಅಡೆತಡೆಗೆ ಸಹಾಯ
- ಸಾರಿಗೆ ದಕ್ಷತೆ ಹೆಚ್ಚಳ
- ಭೂಮಿ ಬಳಕೆ ಕಡಿಮೆ
- ಸುರಕ್ಷಿತ ಪ್ರಯಾಣ
- ಅಪಘಾತಗಳ ಸಂಖ್ಯೆ ಕಡಿಮೆ
- ವಾಹನ ಸಂಚಾರದ ವೇಗ ಹೆಚ್ಚಳ
ಇನ್ನೂ ಬೆಂಗಳೂರಿನಲ್ಲಿ ಸುರಂಗ ಮಾರ್ಗ ಕೊರೆದು ರಸ್ತೆ ನಿರ್ಮಾಣದಿಂದ ಕೆಲ ಅನಾನುಕೂಲಗಳೂ ಇವೆ. ವಿದೇಶಗಳಂತೆ ಬೆಂಗಳೂರಿಗೆ ಸುರಂಗ ಮಾರ್ಗದ ರಸ್ತೆ ನಿರ್ಮಾಣ ಸೂಕ್ತವಲ್ಲ ಎಂದು ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೇ, ಸುರಂಗ ಮಾರ್ಗದ ರಸ್ತೆ ನಿರ್ಮಾಣದ ಅನಾನುಕೂಲಗಳೇನು ಅಂತ ನೋಡುವುದಾದರೇ,
ಸುರಂಗ ಮಾರ್ಗದ ರಸ್ತೆ ನಿರ್ಮಾಣಕ್ಕೆ ದುಬಾರಿ ವೆಚ್ಚ ಮಾಡಬೇಕಾಗುತ್ತೆ. ಪ್ರತಿ ಕಿಲೋಮೀಟರ್ ಗೆ 1,050 ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತೆ. ಜೊತೆಗೆ ಸುರಂಗ ಮಾರ್ಗದ ರಸ್ತೆಯಲ್ಲಿ ಕಾರ್ ನಲ್ಲಿ ಪ್ರಯಾಣ ಮಾಡಲು ಕೂಡ ದುಬಾರಿ ಟೋಲ್ ಶುಲ್ಕ ಪಾವತಿಸಬೇಕಾಗುತ್ತೆ. ಬರೀ 16 ಕಿ.ಮೀ. ಸಂಚಾರಕ್ಕೆ 330 ರೂಪಾಯಿ ಟೋಲ್ ಶುಲ್ಕ ನೀಡಬೇಕಾಗುತ್ತೆ.
ಇನ್ನೂ ಬೆಂಗಳೂರಿನಲ್ಲಿ ಸುರಂಗ ಮಾರ್ಗದ ರಸ್ತೆ ನಿರ್ಮಿಸಿದರೂ, ಇದರಲ್ಲಿ 1,500 ವಾಹನಗಳು ಮಾತ್ರ ಒಮ್ಮೆಲ್ಲೇ ಸಂಚರಿಸಬಹುದು. ಆದರೇ, ಬೆಂಗಳೂರಿನಲ್ಲಿ 1.23 ಕೋಟಿ ವಾಹನಗಳಿವೆ. ಇನ್ನೂ ಈ ಸುರಂಗ ಮಾರ್ಗದ ರಸ್ತೆಯೂ ಜನರ ಮಧ್ಯೆ ಆರ್ಥಿಕ ತಾರತಮ್ಯಕ್ಕೂ ಕಾರಣವಾಗುತ್ತೆ. ಹಣ ಇದ್ದವರು, ಶ್ರೀಮಂತರು ಮಾತ್ರ ತಮ್ಮ ಕಾರ್ ಗಳಲ್ಲಿ ಸುರಂಗ ಮಾರ್ಗ ರಸ್ತೆಯನ್ನು ಬಳಸುತ್ತಾರೆ. ಇನ್ನೂ ಸುರಂಗ ಮಾರ್ಗದ ರಸ್ತೆ ನಿರ್ಮಾಣದಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತೆ ಎಂದು ಪರಿಸರವಾದಿಗಳು ವಿರೋಧ ವ್ಯಕ್ತಪಡಡಿಸುತ್ತಿದ್ದಾರೆ. ಭೂಕುಸಿತ ಸಂಭವಿಸುತ್ತೆ. ಮಣ್ಣಿನ ಸವೆತ ಸಂಭವಿಸುತ್ತೆ. ಜೊತೆಗೆ ಬೋರ್ ವೆಲ್ ಸೇರಿದಂತೆ ಜಲಮೂಲಗಳಿಗೂ ಹಾನಿ ಉಂಟಾಗುತ್ತೆ ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಸುರಂಗ ಮಾರ್ಗದೊಳಗೆ ಏನಾದರೂ ಅಗ್ನಿ ಅನಾಹುತ ಸಂಭವಿಸಿದರೇ, ಬೇಗನೇ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ಜನರನ್ನು ರಕ್ಷಣೆ ಮಾಡುವುದು ಕಷ್ಟ. ಹೀಗಾಗಿ ದುರಂತದ ಅಪಾಯವೂ ಇದೆ. ಇನ್ನೂ ನಮ್ಮ ಬೆಂಗಳೂರನಲ್ಲಿ, ನಮ್ಮ ದೇಶದಲ್ಲಿ ಯಾವುದೇ ಕಾಮಗಾರಿಗಳೂ ಕೂಡ ಕಾಲಮಿತಿಯಲ್ಲಿ ಮುಗಿಯಲ್ಲ. ಹೀಗಾಗಿ ಸುರಂಗ ಮಾರ್ಗದ ರಸ್ತೆ ನಿರ್ಮಾಣ ಕಾಮಗಾರಿಯೂ ಕೂಡ 50 ತಿಂಗಳ ಡೆಡ್ ಲೈನ್ ನಲ್ಲಿ ಮುಗಿಯಲ್ಲ. ಇದರಿಂದ ಸುರಂಗ ಮಾರ್ಗದ ರಸ್ತೆ ನಿರ್ಮಾಣದ ವೆಚ್ಚ ಅಂದುಕೊಂಡಿದ್ದಕ್ಕಿಂತ ಮತ್ತಷ್ಟು ಹೆಚ್ಚಾಗುತ್ತೆ ಎಂಬ ಆತಂಕವೂ ಇದೆ.
ಸುರಂಗ ಮಾರ್ಗದ ರಸ್ತೆಯ ಅನಾನುಕೂಲ
- ದುಬಾರಿ ನಿರ್ಮಾಣ ವೆಚ್ಚ
- ದುಬಾರಿ ಟೋಲ್ ಶುಲ್ಕ
- ಕಡಿಮೆ ಸಾರಿಗೆ ಸಾಮರ್ಥ್ಯ
- ಆರ್ಥಿಕ ತಾರತಮ್ಯ
- ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ
(ಭೂಕುಸಿತ, ಮಣ್ಣನ ಸವೆತ, ಜಲಮೂಲ ಹಾನಿ)
- ನಿರ್ವಹಣೆ ವೆಚ್ಚ ದುಬಾರಿ
- ದುರಂತದ ಅಪಾಯ
- ನಿಧಾನಗತಿಯ ಕಾಮಗಾರಿ
ಬೆಂಗಳೂರಿನ ಸುರಂಗ ಮಾರ್ಗದ ರಸ್ತೆ ನಿರ್ಮಾಣದ ಈ ಎಲ್ಲ ಪರ-ವಿರೋಧಗಳ ಮಧ್ಯೆ ರಾಜ್ಯ ಸರ್ಕಾರ ಈಗಾಗಲೇ ಕಾಮಗಾರಿಗೆ ಟೆಂಡರ್ ಕರೆದಿದೆ. ಟೆಂಡರ್ ಅಂತಿಮವಾದ ಬಳಿಕ ಟೆಂಡರ್ ಪಡೆದ ಕಂಪನಿ ಎಷ್ಟು ಬೇಗ ಕಾಮಗಾರಿ ಮುಗಿಸುತ್ತೆ ಎಂಬುದೇ ಕುತೂಹಲ.
ಇನ್ನೂ ನಮ್ಮ ದೇಶದಲ್ಲಿ ಮುಂಬೈನಲ್ಲಿ ಸುರಂಗ ಮಾರ್ಗದ ರಸ್ತೆ ನಿರ್ಮಿಸಲಾಗಿದೆ. ದೆಹಲಿಯಲ್ಲೂ ಪ್ರಗತಿ ಮೈದಾನದ ಬಳಿ ಸುರಂಗ ಮಾರ್ಗದ ರಸ್ತೆ ನಿರ್ಮಿಸಲಾಗಿದೆ. ವಿದೇಶಗಳಲ್ಲೂ ಸುರಂಗ ಮಾರ್ಗದ ರಸ್ತೆ ಇದೆ. ಹೀಗಾಗಿ ಬೆಂಗಳೂರಿನ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸುರಂಗ ಮಾರ್ಗದ ರಸ್ತೆ ನಿರ್ಮಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅನೇಕರು ರಾಜ್ಯ ಸರ್ಕಾರ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ.
ವರದಿ -ರಘುಪಾಲ್, ನ್ಯೂಸ್ ಫಸ್ಟ್ ಮೆಟ್ರೋ ಬ್ಯೂರೋ ಮುಖ್ಯಸ್ಥರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.