/newsfirstlive-kannada/media/post_attachments/wp-content/uploads/2025/07/DOGS.jpg)
ಕರ್ನಾಟಕದಲ್ಲೂ ಬೀದಿನಾಯಿ ಹಿಡಿದು ಡಾಗ್ ಶೆಲ್ಟರ್ ಹೋಮ್ ಗೆ ಹಾಕಲು ಆಗ್ರಹ
ಸುಪ್ರೀಂಕೋರ್ಟ್ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಎನ್‌ಸಿಆರ್ ನಗರಗಳಲ್ಲಿ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಹೋಮ್ ಗಳಿಗೆ ಹಾಕಲು ಆದೇಶ ನೀಡಿದೆ. ಸುಪ್ರೀಂಕೋರ್ಟ್ ಈ ಆದೇಶಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲ ಶ್ವಾನಪ್ರಿಯರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಈಗ ಕೊಟ್ಟಿರುವ ಆದೇಶ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದ ನಗರಗಳಿಗೆ ಮಾತ್ರ ಸೀಮಿತವಾಗಿದೆ. ಇದನ್ನು ದೇಶಾದ್ಯಂತ ವಿಸ್ತರಿಸಬೇಕೆಂಬ ಆಗ್ರಹ ಕೂಡ ಕೇಳಿ ಬರುತ್ತಿದೆ. ನಮ್ಮ ಕರ್ನಾಟಕ ರಾಜ್ಯದಲ್ಲೂ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಗಳಿಗೆ ಹಾಕಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ನಿನ್ನೆಯೂ ಕರ್ನಾಟಕದ ವಿಧಾನಸಭೆಯಲ್ಲೂ ಬೀದಿನಾಯಿಗಳನ್ನು ಸುಪ್ರೀಂಕೋರ್ಟ್ ಆದೇಶದಂತೆ ಹಿಡಿದು ಡಾಗ್ ಶೆಲ್ಟರ್ ಗಳಿಗೆ ಹಾಕಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಇವತ್ತು ಕೂಡ ವಿರೋಧ ಪಕ್ಷದ ಸದಸ್ಯರುಗಳು ಮತ್ತೆ ಬೀದಿನಾಯಿಗಳ ವಿಷಯ ಪ್ರಸ್ತಾಪಿಸಿದ್ದಾರೆ. ಇವತ್ತು ಕೂಡ ವಿಧಾನಸಭೆಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಚರ್ಚೆಯಾಗಿದೆ.
ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರೂಲಿಂಗ್ ನೀಡಿದೆ . ಅದನ್ನು ಎಲ್ಲರೂ ಪಾಲನೆ ಮಾಡಬೇಕು . ಸುಪ್ರೀಂ ಕೋರ್ಟ್ ನಾಯಿಗಳನ್ನ ಕೊಲ್ಲಲು ಹೇಳಿಲ್ಲ. ನಾಯಿಗಳನ್ನ ಸೇಫ್ ಜಾಗದಲ್ಲಿ ಹಾಕಬೇಕು ಎಂದು ಹೇಳಿದೆ . ದೆಹಲಿಗೆ ಮಾತ್ರ ತೀರ್ಪು ಸೀಮಿತವಾಗದೆ, ಎಲ್ಲೆಡೆ ಆ ತೀರ್ಪು ಅನ್ನು ಅಳವಡಿಸಬೇಕು ಎಂದು ಬಿಜೆಪಿ ಶಾಸಕ ಡಾಕ್ಟರ್ ಭರತ್ ಶೆಟ್ಟಿ ವಿಧಾನಸೌಧದಲ್ಲಿ ಒತ್ತಾಯಿಸಿದ್ದಾರೆ. ಡಾಗ್ ಶೆಲ್ಟರ್ ನಿಂದ ಮತ್ತೆ ಬೀದಿನಾಯಿಗಳು ಈಚೆಗೆ ಬರದಂತೆ ಕ್ರಮ ಆಗಬೇಕು. ರೇಬೀಸ್ ಬಂದಿರೋ ನಾಯಿಗಳು ಹಾಗೂ ಬೀದಿ ನಾಯಿಗಳು ಕಚ್ಚಿ ಅನೇಕರು ಸಾವನ್ನಪ್ಪಿದ್ದಾರೆ. ಅಟ್ಯಾಕ್ ಮಾಡೋ ದೃಶ್ಯಗಳನ್ನು ನೋಡಿದ್ದೇವೆ . ಹಾಗಂತ ನಾಯಿಗಳನ್ನ ಕೊಲ್ಲಲು ನಾವು ಹೇಳುತ್ತಿಲ್ಲ. ಸೇಫಾಗಿ ಒಂದು ಕಡೆ ಕೂಡಿಹಾಕಬೇಕು. ಬಿರಿಯಾನಿ ಕೊಟ್ರೆ ಜನರ ಮೇಲೆ ನಾಯಿಗಳು ದಾಳಿ ಮಾಡುತ್ತಾವೆ. ಬಿರಿಯಾನಿ ಕೊಡೋದನ್ನು ನಿಲ್ಲಿಸಬೇಕು ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.
ಇನ್ನೂ ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಶಾಸಕ ಹಾಗೂ ಜೆಡಿಎಲ್‌ಪಿ ನಾಯಕ ಸಿ.ಬಿ. ಸುರೇಶ್ ಬಾಬು ಅವರು ಬೀದಿ ನಾಯಿಗಳ ಹಾವಳಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸುಪ್ರೀಂಕೋರ್ಟ್ ಮೊನ್ನೆ ಆದೇಶ ಮಾಡಿದೆ. ಈ ಬಗ್ಗೆ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಸುರೇಶ್ ಬಾಬು ಒತ್ತಾಯಿಸಿದ್ದಾರೆ. ಈ ವೇಳೆ ಬಿಜೆಪಿಯ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ ಹಾಗೂ ಮಲ್ಲೇಶ್ವರ ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಕೂಡ ಇದೇ ಒತ್ತಾಯ ಮಾಡಿದ್ದಾರೆ. ಬೀದಿನಾಯಿ ಕಡಿತದಿಂದ ರೇಬೀಸ್ ಬಂದಿದೆ. ಸಾಕಷ್ಟು ಜನರಿಗೆ ಬೀದಿ ನಾಯಿಗಳಿಂದ ತೊಂದರೆಯಾಗಿದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಶಾಸಕರ ಭವನದಲ್ಲಿ ಕೂಡ ಬೀದಿ ನಾಯಿಗಳಿವೆ. ಶಾಸಕರ ಭವನದಲ್ಲಿ ಶಾಸಕರ ಕೊಠಡಿಗಳ ಬಾಗಿಲು ಅನ್ನು ಬೆಳಿಗ್ಗೆ ತೆರೆದರೆ ಒಳಗೆ ಬರುತ್ತವೆ. ಇದಕ್ಕೆ ಕಡಿವಾಣ ಹಾಕಿಸಿ ಎಂದು ಶಾಸಕರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.