/newsfirstlive-kannada/media/media_files/2025/08/25/state-government-appointment02-2025-08-25-17-54-20.jpg)
ರಾಜ್ಯ ಸರ್ಕಾರದಿಂದ ಸದ್ಯದಲ್ಲೇ ಹೊಸ ನೇಮಕಾತಿಗೆ ಆದೇಶ
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸರ್ಕಾರಿ ನೌಕರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವವರಿಗೆ ಇದು ಗುಡ್ ನ್ಯೂಸ್ . ಕರ್ನಾಟಕ ರಾಜ್ಯ ಸರ್ಕಾರ ಸದ್ಯದಲ್ಲೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಿದೆ. ಕಳೆದ 10 ತಿಂಗಳಿನಿಂದ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಯಾವುದೇ ಇಲಾಖೆಯಲ್ಲೂ ಹೊಸ ನೇಮಕಾತಿಗಳೇ ನಡೆಯುತ್ತಿಲ್ಲ. ಎಲ್ಲ ಹೊಸ ನೇಮಕಾತಿಗಳನ್ನು ರಾಜ್ಯ ಸರ್ಕಾರವೇ ಸ್ಥಗಿತಗೊಳಿಸಿದೆ. ಪದವಿ, ಮಾಸ್ಟರ್ ಡಿಗ್ರಿ ಪಡೆದವರು ಸರ್ಕಾರಿ ಉದ್ಯೋಗ ಸಿಗದೇ, ಯುವನಿಧಿ ಹಣಕ್ಕೆ ತೃಪ್ತಿಪಡಬೇಕಾಗಿದೆ. ಆದರೇ, ಈಗ ಸರ್ಕಾರಿ ನೌಕರಿಯನ್ನು ಪಡೆಯುವ ಅವಕಾಶದ ಬಾಗಿಲುಗಳು ಮತ್ತೆ ತೆರೆದುಕೊಳ್ಳುತ್ತಿವೆ.
ಕರ್ನಾಟಕ ರಾಜ್ಯ ಸರ್ಕಾರ ಕಳೆದ ವರ್ಷದ ನವಂಬರ್ ನಿಂದ ಸರ್ಕಾರಿ ನೇಮಕಾತಿಗಳನ್ನು ಸ್ಥಗಿತಗೊಳಿಸಿದೆ. ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಪರಿಷ್ಕರಣೆ ಮಾಡಬೇಕು. ಎಸ್.ಸಿ. ಒಳಮೀಸಲಾತಿ ಪರಿಷ್ಕರಣೆ ಮುಗಿಯುವರೆಗೂ ಯಾವುದೇ ಸರ್ಕಾರಿ ಇಲಾಖೆಗಳಲ್ಲೂ ನೇಮಕಾತಿ ಮಾಡಿಕೊಳ್ಳದಂತೆ ಕಳೆದ ವರ್ಷದ ನವಂಬರ್ 25 ರಂದು ಆದೇಶ ಹೊರಡಿಸಿ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಿತ್ತು.
ಈಗ ರಾಜ್ಯದ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲೂ ದಲಿತ ಒಳ ಮೀಸಲಾತಿಯ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಮಾಡಿದ್ದ ಶಿಫಾರಸ್ಸುಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿ ಶೇ.17 ರ ಮೀಸಲಾತಿಯನ್ನು ಮೂರು ವರ್ಗಗಳಿಗೆ ಹಂಚಿಕೆ ಮಾಡಿದೆ. ಈಗ ಇನ್ನೇನಿದ್ದರೂ, ಒಳ ಮೀಸಲಾತಿ ಪರಿಷ್ಕರಣೆಯ ಆದೇಶ ಹೊರಬೀಳುವುದು ಮಾತ್ರ ಬಾಕಿ ಇದೆ. ಅಧಿಕೃತ ಅಧಿಸೂಚನೆಯನ್ನು ಗೆಜೆಟ್ ನಲ್ಲಿ ಪ್ರಕಟಿಸಬೇಕು. ಆದಾದ ಬಳಿಕ ರಾಜ್ಯದಲ್ಲಿ ರಾಜ್ಯ ಸರ್ಕಾರಿ ನೌಕರರ ನೇಮಕಾತಿ ಪ್ರಕ್ರಿಯೆ ಮತ್ತೆ ಶುರುವಾಗಲಿದೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಂಬಂಧ ನಿಯಮಾವಳಿ ಸಿದ್ದಪಡಿಸಬೇಕಾಗಿದೆ. ಇದಾದ ಬಳಿಕ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮತ್ತೆ ಹೊಸ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ರಾಜ್ಯದಲ್ಲಿ 2 ಲಕ್ಷದ 76 ಸಾವಿರ ಹುದ್ದೆ ಖಾಲಿ
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಬರೋಬ್ಬರಿ 2 ಲಕ್ಷದ 76 ಸಾವಿರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಬಹುತೇಕ ಇಲಾಖೆಗಳಲ್ಲೂ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕಾದ ಒತ್ತಡದಲ್ಲಿ ನೌಕರರು ಇದ್ದಾರೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿದೆ.
ರಾಜ್ಯದಲ್ಲಿ ಎ ದರ್ಜೆಯ 16,017 ಹುದ್ದೆಗಳು ಖಾಲಿ ಇವೆ. ಬಿ ದರ್ಜೆಯ 16,734 ಹುದ್ದೆಗಳು ಖಾಲಿ ಇವೆ. ಇನ್ನೂ ಸಿ ದರ್ಜೆಯ 1,66,021 ಹುದ್ದೆಗಳು ಖಾಲಿ ಇವೆ. ಡಿ ದರ್ಜೆಯ 77,614 ಹುದ್ದೆಗಳು ಖಾಲಿ ಇವೆ ಎಂದು ರಾಜ್ಯ ಸರ್ಕಾರವೇ ವಿಧಾನಸಭೆಗೆ ತಿಳಿಸಿದೆ. ಯಾವ್ಯಾವ ಇಲಾಖೆಗಳಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂದು ನೋಡುವುದಾದರೇ
ವಿವಿಧ ಇಲಾಖೆಗಳ ಹುದ್ದೆಗಳ ಖಾಲಿ ವಿವರ
ಕೃಷಿ ಇಲಾಖೆ | 6,773 ಹುದ್ದೆ ಖಾಲಿ |
ಪಶು ಸಂಗೋಪನೆ | 10,755 |
ಸಹಕಾರ | 4855 |
ಆರ್ಥಿಕ ಇಲಾಖೆ | 9536 |
ಅರಣ್ಯ ಇಲಾಖೆ | 6337 |
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ | 8,334 |
ಉನ್ನತ ಶಿಕ್ಷಣ | 13,227 |
ಕಾನೂನು | 7,853 |
ಡಿಪಿಎಆರ್ | 6,191 |
ಒಳಾಡಳಿತ | 26,168 |
ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆ | 9980 |
ಶಾಲಾ ಶಿಕ್ಷಣ ಇಲಾಖೆ | 70,727 |
ತೋಟಗಾರಿಕೆ ಇಲಾಖೆ | 2969 |
ಕಾರ್ಮಿಕ ಇಲಾಖೆ | 2613 |
ಅಲ್ಪಸಂಖ್ಯಾತ ಇಲಾಖೆ | 4159 |
ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ | 37,069 |
ಕಂದಾಯ ಇಲಾಖೆ | 11,145 |
ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಇಲಾಖೆ | 10,898 |
ಹೀಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ 2 ಲಕ್ಷದ 76 ಸಾವಿರಕ್ಕೂ ಹೆಚ್ಚು. ನಿರುದ್ಯೋಗಿಗಳಿಗೂ ಉದ್ಯೋಗ ಸಿಗುತ್ತಿಲ್ಲ. ಸರ್ಕಾರಿ ಖಾಲಿ ಹುದ್ದೆಗಳು ಭರ್ತಿಯಾಗುತ್ತಿಲ್ಲ. ಕೋಚಿಂಗ್ ಇನ್ಸಿಟಿಟ್ಯೂಷನ್ ಗಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕೋಚಿಂಗ್ ಪಡೆದವರು ನಮ್ಮ ವಯೋಮಿತಿ ಮೀರುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಈಗ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಪರಿಷ್ಕರಣೆಯಾಗಿ ಹಂಚಿಕೆಯಾಗಿರುವುದರಿಂದ ಸರ್ಕಾರಿ ನೇಮಕಾತಿಗೆ ಇದ್ದ ತಡೆ ನಿವಾರಣೆಯಾದಂತೆ ಆಗಿದೆ. ಇನ್ನೂ ರಾಜ್ಯ ಸರ್ಕಾರ ಹೊಸ ನೇಮಕಾತಿಗಳಿಗೆ ಹಸಿರು ನಿಶಾನೆ ತೋರಿಸುವುದಷ್ಟೇ ಬಾಕಿ ಇದೆ.
ಈಗಾಗಲೇ ಅನೇಕ ಇಲಾಖೆಗಳಲ್ಲಿ ನಡೆಯುತ್ತಿದ್ದ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಕಳೆದ ವರ್ಷದ ನವಂಬರ್ ನಲ್ಲಿ ಸ್ಥಗಿತಗೊಳಿಸಲಾಗಿದೆ. ಸ್ಥಗಿತಗೊಳಿಸಿರುವ ಹಂತದಿಂದಲೇ ಈಗ ಮುಂದುವರಿಸಿ ನೇಮಕಾತಿ ಆದೇಶವನ್ನು ಅರ್ಹ ಅಭ್ಯರ್ಥಿಗಳಿಗೆ ನೀಡಬೇಕಾಗಿದೆ.
ಯಾವ್ಯಾವ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಯಾವ ಹಂತದಲ್ಲಿದೆ
- ಭೂ ಮಾಪನ ಇಲಾಖೆಯು 650 ಭೂಮಾಪಕ ನೇಮಕಕ್ಕೆ ಕೆಪಿಎಸ್‌ಸಿ ಮೂಲಕ ಅಧಿಸೂಚನೆ ಹೊರಡಿಸಲಿದೆ.
- ಕೆಪಿಎಸ್‌ಸಿ ನಡೆಸುತ್ತಿರುವ 247 ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ನೇಮಕ ಪ್ರಕ್ರಿಯೆ ಕೊನೆ ಹಂತದಲ್ಲಿದೆ
- ಗ್ರಾಮ ಪಂಚಾಯಿತಿ ಕಾರ್ಯದರ್ಶಿ(ಗ್ರೇಡ್-1) ವೃಂದದ ಕರಡು ಜೇಷ್ಠತಾ ಪಟ್ಟಿ ಪ್ರಕಟ, ಆಕ್ಷೇಪಣೆ ಪರಿಶೀಲನಾ ಹಂತದಲ್ಲಿದೆ.
- ಆರ್‌ಡಿಪಿಆರ್ ಇಲಾಖೆಯಿಂದ 212 ಗ್ರಾಮ ಪಂಚಾಯಿತಿ ಕಾರ್ಯದರ್ಶಿ, 298 ಗ್ರಾ.ಪಂ. ಕಾರ್ಯರ್ಶಿ ಗ್ರೇಡ್-2, 87 ಎಸ್‌ಡಿಎ ನೇಮಕಕ್ಕೆ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಕೆ
- ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಪ್ರಾಥಮಿಕ ಶಾಲೆಗಳ 4,882 ಹಾಗೂ ಪ್ರೌಢಶಾಲೆಗಳ 385 ಹುದ್ದೆ ಸೇರಿ 5,267 ಹುದ್ದೆ ಭರ್ತಿ ಪ್ರಕ್ರಿಯೆ ಮುಂದುವರಿಸಬೇಕು.
- ಸರ್ಕಾರಿ ಪಿಯು ಕಾಲೇಜುಗಳ 814 ಉಪನ್ಯಾಸಕರ ಹುದ್ದೆ ಭರ್ತಿಗೆ ಮೀಸಲಾತಿ ನಿಗದಿಪಡಿಸಬೇಕು.
ಹೀಗೆ ವಿವಿಧ ಇಲಾಖೆಗಲ್ಲಿ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದ್ದು, ಮುಂದುವರಿಸಬೇಕಾಗಿದೆ. ಗೌರಿ ಗಣೇಶ ಹಬ್ಬದ ಬಳಿಕ ಈ ಎಲ್ಲ ನೇಮಕಾತಿ ಪ್ರಕ್ರಿಯೆ ಮುಂದುವರಿಸುವುದರ ಜೊತೆಗೆ ಹೊಸ ನೇಮಕಾತಿಗೂ ರಾಜ್ಯ ಸರ್ಕಾರ, ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಹೊಸ ನೇಮಕಾತಿಗಳು ಈಗ ವೇಗ ಪಡೆದುಕೊಳ್ಳಲಿವೆ.
ಸದ್ಯದಲ್ಲೇ 80 ಸಾವಿರ ಹುದ್ದೆಗೆ ನೇಮಕಾತಿ
ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 2 ಲಕ್ಷದ 76 ಸಾವಿರ ಹುದ್ದೆಗಳ ಪೈಕಿ ಸಿ ಮತ್ತು ಡಿ ಗ್ರೂಪ್‌ನ 80 ಸಾವಿರ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಈಗ ಗೌರಿ ಗಣೇಶ ಹಬ್ಬ ಕಳೆದ ಬಳಿಕ ಸಾವಿರಾರು ಹುದ್ದೆಗಳನ್ನು ಸದ್ಯದಲ್ಲೇ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು 80 ಸಾವಿರ ನೌಕರರ ನೇಮಕಾತಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಿವೆ. ಕೆಲ ಇಲಾಖೆಗಳ ಪ್ರಸ್ತಾವನೆ ಹಣಕಾಸು ಇಲಾಖೆಯಲ್ಲಿದ್ದರೇ, ಇನ್ನೂ ಕೆಲ ಇಲಾಖೆಗಳ ಪ್ರಸ್ತಾವನೆಗಳು ಆಯಾ ಇಲಾಖೆಯ ಹಂತದಲ್ಲೇ ಇವೆ. ಈ ಎಲ್ಲ ಪ್ರಸ್ತಾನೆಗಳನ್ನು ಹಣಕಾಸು ಇಲಾಖೆ ಹಾಗೂ ರಾಜ್ಯ ಸರ್ಕಾರದ ಅಂತಿಮ ಒಪ್ಪಿಗೆ ಪಡೆದು ಕೆಪಿಎಸ್‌ಸಿ ಮೂಲಕ ನೇರ ನೇಮಕಾತಿ ಮಾಡಿಕೊಳ್ಳು ಪ್ರಕ್ರಿಯೆಯನ್ನು ಆರಂಭಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.