/newsfirstlive-kannada/media/media_files/2025/07/31/karnataka-lokayukta-rain-in-koppala-2025-07-31-22-09-37.png)
ಕೊಪ್ಪಳ: ದಿನಗೂಲಿ ನೌಕರನೊಬ್ಬ ಜೀವನ ಪೂರ್ತಿ ದುಡಿದರೂ ಎಷ್ಟು ಹಣ, ಆಸ್ತಿ ಸಂಪಾದಿಸಬಹುದು? ಆಯಾ ದಿನದ ಖರ್ಚು, ತಿಂಗಳ ಖರ್ಚಿಗೆ ಬೇಕಾದಷ್ಟು ಹಣವನ್ನು ಸಂಪಾದಿಸಬಹುದು ಎಂದು ನೀವು ಹೇಳಬಹುದು. ಆದರೇ, ಕೊಪ್ಪಳ ಜಿಲ್ಲೆಯಲ್ಲೊಬ್ಬ ದಿನಗೂಲಿ ನೌಕರನೊಬ್ಬ ಹತ್ತಾರು ಕೋಟಿ ರೂಪಾಯಿ ಆಸ್ತಿಪಾಸ್ತಿ ಸಂಪಾದಿಸಿದ್ದಾನೆ. ಆದರೇ, ಇದೆಲ್ಲಾ ಸಕ್ರಮವಲ್ಲ, ಆಕ್ರಮ ಸಂಪಾದನೆ. ದಿನಗೂಲಿ ನೌಕರನ ಮನೆಯಲ್ಲೇ ಭಾರಿ ಸಂಪತ್ತು ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಕೊಪ್ಪಳದ ಕೆ.ಆರ್.ಐ.ಡಿ.ಎಸ್. ನಲ್ಲಿ ಹೊರಗುತ್ತಿಗೆ ನೌಕರನಾಗಿದ್ದ ಕಳಕಪ್ಪ ಎಂಬ ವ್ಯಕ್ತಿಯ ಮನೆಯ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿಪಾಸ್ತಿಯನ್ನು ಕಳಕಪ್ಪ ಆಕ್ರಮವಾಗಿ ಸಂಪಾದಿಸಿರುವುದು ಪತ್ತೆಯಾಗಿದೆ. ದಾಳಿ ವೇಳೆ ಕಳಕಪ್ಪನಿಗೆ ಸೇರಿದ 24 ಮನೆ, 5 ನಿವೇಶನಗಳ ದಾಖಲೆ ಪತ್ರಗಳು ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿವೆ. ಈ ಮನೆ, ಸೈಟ್ ಗಳನ್ನು ಕಳಕಪ್ಪ ತನ್ನ ಹೆಸರಿನ ಜೊತೆಗೆ ತನ್ನ ಹೆಂಡತಿ, ಸೋದರನ ಹೆಸರಿನಲ್ಲೂ ರಿಜಿಸ್ಟರ್ ಮಾಡಿಸಿಟ್ಟಿದ್ದಾನೆ. ಮನೆಯಲ್ಲಿ ಅಪಾರ ಪ್ರಮಾಣದ ಬಂಗಾರ , ಭೂಮಿಯ ದಾಖಲೆಪತ್ರಗಳು ಸಿಕ್ಕಿವೆ. ಇನ್ನೂ ಈ ಕಳಕಪ್ಪ, ಕೆಆರ್‌ಐಡಿಎಲ್ ನಲ್ಲಿ ನಡೆದಿರುವ 72 ಕೋಟಿ ರೂಪಾಯಿಗಳ ಆಕ್ರಮದ ಪ್ರಮುಖ ಕಿಂಗ್ ಪಿನ್ ಆಗಿದ್ದಾನೆ.