/newsfirstlive-kannada/media/media_files/2025/09/01/self-employment01-2025-09-01-17-41-10.jpg)
ಸ್ವ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಯೋಜನೆ
ಸ್ವಯಂ ಉದ್ಯೋಗ ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಅನ್ನೋದು ಎಷ್ಟೋ ಯುವಕರ ಕನಸು. ಈ ರೀತಿ ಕನಸು ಕಾಣೋರಿಗೆ ರಾಜ್ಯ ಸರ್ಕಾರ ಗುಡ್ನ್ಯೂಸ್ ನೀಡಿದೆ. ಸ್ವಯಂ ಉದ್ಯೋಗ ಮಾಡಬೇಕು ಅಂತಿರೋ ಯುವಕರ ಬೆನ್ನುತಟ್ಟಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಜಾರಿಗೊಳಿಸಿದೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಾಯ ನೀಡುವುದು ಈ ಯೋಜನೆಯ ಗುರಿ.
ಹಾಗಾದ್ರೆ ಈ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಏನೆಲ್ಲಾ ಸಾಲ ಸೌಲಭ್ಯ ಇದೆ? ಸಹಾಯಧನ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ? ಅಂತಾ ನೋಡೋಣ ಬನ್ನಿ.
ಮೊದಲಿಗೆ ಏನಿದು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ? ಅಂತಾ ನೋಡೋದಾದ್ರೆ
ಇದು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸೋ ಕರ್ನಾಟಕ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ಜಾರಿಗೆ ತಂದ ಸ್ಕೀಮ್ ಇದಾಗಿದೆ. ಕುರಿ/ ಹಂದಿ/ ಮೊಲ ಸಾಕಾಣಿಕೆ ಮಾಡೋರಿಗೆ ಮತ್ತು ರೈತರಿಂದ ತರಕಾರಿ, ಹಣ್ಣುಗಳನ್ನು ಖರೀದಿಸಿ ತಳ್ಳುವ ಗಾಡಿಯಲ್ಲಿ ಮಾರಾಟ ಮಾಡಬೇಕು ಅಂತಿರೋ ನಿರುದ್ಯೋಗ ಯುವಕರಿಗೆ ಸಾಲ ಮತ್ತು ಸಹಾಯಧನ ಮಂಜೂರು ಮಾಡಲಿದೆ.
ಈ ಸ್ಕೀಮ್ ಅಡಿಯಲ್ಲಿ ಸ್ವಯಂ ಉದ್ಯೋಗಕ್ಕಾಗಿ ನೇರ ಸಾಲಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿಯ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಕಿರು ಆರ್ಥಿಕ ಚಟುವಟಿಕೆಗಳಿಗೆ ನೇರಸಾಲ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10, 2025 ಕೊನೆಯ ದಿನ.
ಇನ್ನೂ ಯೋಜನೆಗೆ ಅರ್ಹತಾ ಮಾನದಂಡಗಳು ಏನಂದ್ರೆ
ಪರಿಶಿಷ್ಟ ಜಾತಿಗೆ ಸೇರಿದ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡಲಾಗುವುದು. ಪೆಟ್ಟಿ ಅಂಗಡಿ, ಸಿದ್ಧ ಉಡುಪುಗಳ ಅಂಗಡಿ, ಕುರಿ ಮತ್ತು ಮೇಕೆ ಸಾಕಣೆ, ಮೀನುಗಾರಿಕೆ, ಹಣ್ಣು ಮತ್ತು ತರಕಾರಿ ಅಂಗಡಿ, ಟೈಲರಿಂಗ್ ಮುಂತಾದವು ಮಾಡೋರಿಗೆ ಸಾಲ ನೀಡಲಾಗುವುದು. ಸುಮಾರು 1 ಕೋಟಿವರೆಗೂ ಸಾಲ ನೀಡಲಿದ್ದು, ಇದರಲ್ಲಿ 50 ಲಕ್ಷ ರೂ. ಸಬ್ಸಿಡಿ ಆಗಿರುತ್ತೆ. ಬಾಕಿ ಸಾಲದ ಮೊತ್ತವನ್ನು ಶೇ. 4ರ ಬಡ್ಡಿ ದರದಲ್ಲಿ 30 ಸಮಾನ ಕಂತುಗಳಲ್ಲಿ ನಿಗಮಕ್ಕೆ ರೀಪೇಮೆಂಟ್ ಮಾಡಬೇಕು.
ಈ ಸಾಲ ಯೋಜನೆಗೆ ಬೇಕಿರುವ ಅರ್ಹತೆಗಳಂದ್ರೆ,
ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿರಬೇಕು. ಕರ್ನಾಟಕ ಸರ್ಕಾರದಿಂದ ನೀಡಲಾದ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು ಅಥವಾ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು, ಹಿಂದೆ ಈ ಸೌಲಭ್ಯ ಪಡೆದಿರಬಾರದು. ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರಿಯಲ್ಲಿರಬಾರದು. ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.1.50 ಲಕ್ಷ ಹಾಗೂ ನಗರ ಪ್ರದೇಶದವರಿಗೆ ರೂ.2.00 ಲಕ್ಷಗಳ ಮಿತಿಯೊಳಗಿರಬೇಕು. ಇವ್ರ ವಯಸ್ಸು 21 ವರ್ಷದಿಂದ 50 ವರ್ಷದ ಒಳಗೆ ಇರಬೇಕು. ಸಹಾಯಧನ ಮತ್ತು ಸಾಲವನ್ನು ನೇರವಾಗಿ ಫಲಾನುಭವಿಗಳಿಗೆ, ಮಾರಾಟಗಾರರಿಗೆ ಬಿಡುಗಡೆ ಮಾಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in/ ಅಥವಾ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಬೇಕು. ಸೇವಾ ಸಿಂಧು ಪೋರ್ಟಲ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ವಿಭಾಗವನ್ನು ಆಯ್ಕೆ ಮಾಡಬೇಕು. ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಮೇಲೆ ಕ್ಲಿಕ್ ಮಾಡಿ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನೋಂದಾಯಿತ ಇಮೇಲ್ ಐಡಿ /ಮೊಬೈಲ್ ಸಂಖ್ಯೆ ಮತ್ತು OTP ಮೂಲಕ ರಿಜಿಸ್ಟರ್ ಮಾಡಬೇಕು. ನಿಮ್ಮ ವೈಯಕ್ತಿಕ ವಿಳಾಸ ಮತ್ತು ಬ್ಯಾಂಕಿಂಗ್ ವಿವರಗಳನ್ನು ಒದಗಿಸಬೇಕು. ಅರ್ಜಿ ಸಲ್ಲಿಸಿದ ನಂತರ ನೀವು ಅರ್ಜಿ ಐಡಿಯನ್ನು ಸ್ವೀಕರಿಸುತ್ತೀರಿ. ಪೋರ್ಟಲ್‌ನಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೀವು ಈ ಐಡಿಯನ್ನು ಬಳಸಬಹುದು.
ಇನ್ನೂ ಅರ್ಜಿ ಸಲ್ಲಿಸಲು ಅಭ್ಯರ್ಥಿ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಕಡ್ಡಾಯವಾಗಿರುತ್ತೆ ಎನ್ನುವುದನ್ನು ಮರೆಯಬೇಡಿ.
ಸಮಾಜ ಕಲ್ಯಾಣ ಇಲಾಖೆಯ ನಿಗಮಗಳ ಅಡಿಯಲ್ಲಿ ಜಾರಿಗೆ ತರಲಾದ ಸ್ವಯಂ ಉದ್ಯೋಗ (ನೇರಸಾಲ) ಯೋಜನೆಗೆ ಅರ್ಜಿ ಆಹ್ವಾನಿಸಿಲಾಗಿದೆ.
— ಸಮಾಜ ಕಲ್ಯಾಣ ಇಲಾಖೆ (@SWDGoK) August 17, 2025
ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಹಣ್ಣು ಮತ್ತು ತರಕಾರಿ, ಮೀನು ಮಾಂಸ ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ.
ಘಟಕ ವೆಚ್ಚ: ರೂ. 1 ಲಕ್ಷ… pic.twitter.com/fAa6rk9yay
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.