/newsfirstlive-kannada/media/media_files/2025/10/14/lokayurkuta-raid-in-karnataka02-2025-10-14-17-18-13.jpg)
ಲೋಕಾಯುಕ್ತದಿಂದ ವಿವಿಧ ಅಧಿಕಾರಿಗಳ ಮೇಲೆ ದಾಳಿ
ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲದಂತಾಗಿದೆ. ಅಕ್ರಮಗಳ ಪುನರಾವರ್ತನೆ ಮುನ್ನುಡಿ ಬರೆದಿದೆ.. ಇವತ್ತು ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರು ಬೆವರುವಂತೆ ಮಾಡಿದ್ದಾರೆ.. ರಾಜ್ಯದ ಹಲವೆಡೆ ಏಕಕಾಲಕ್ಕೆ ದಾಳಿ ನಡೆದಿದ್ದು ಭ್ರಷ್ಟರ ಜನ್ಮ ಜಾಲಾಡಿದ್ದಾರೆ..
ಬೆಂಗಳೂರು.. ಬೀದರ್.. ದಾವಣಗೆರೆ.. ಚಿತ್ರದುರ್ಗ.. ಶಿವಮೊಗ್ಗ.. ಕಾರವಾರ ಹೀಗೆ ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಬೇಟೆ ಮುಂದುವರಿಸಿದ್ದಾರೆ.. ಇವತ್ತು ಮುಂಜಾನೆಯೇ ಫೀಲ್ಡಿಗಿಳಿದ ಅಧಿಕಾರಿಗಳು ಭ್ರಷ್ಟರ ಬೆವರಿಳಿಸಿದ್ದಾರೆ.. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳನ್ನು ಹೆಕ್ಕಿ ತೆಗೆದಿದ್ದಾರೆ.
ಬೆಳ್ಳಂಬೆಳಗ್ಗೆ ಭ್ರಷ್ಟರ ಕೋಟೆಗೆ ಲೋಕಾಯುಕ್ತ ಲಗ್ಗೆ
ಕೃಷಿ ಇಲಾಖೆ ಅಧಿಕಾರಿಯ ಬಳಿ ಅಗಣಿತ ಸಂಪತ್ತು!
ಇವತ್ತು ಬೆಳಗ್ಗೆಯೇ ಬೀದರ್​​​ನ ಕೃಷಿ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್, ಭ್ರಷ್ಟ ಅಧಿಕಾರಿ ಧೂಳಪ್ಪ ಹೊಸಾಳೆಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್​ ಕೊಟ್ಟಿದ್ದಾರೆ.. ಔರಾದ್ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಧೂಳಪ್ಪ ಹೊಸಾಳೆ ಆದಾಯಕ್ಕಿಂತ ಹೆಚ್ಚಿನ ಗಳಿಕೆ ಆರೋಪ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ 4 ಕಡೆ ದಾಳಿ ನಡೆಸಿದ್ರು.. ದಾಳಿ ವೇಳೆ ಬರೋಬ್ಬರಿ ಧೂಳಪ್ಪ ಹೊಸಾಳೆ ತಂದೆಯ ಮನೆಯಲ್ಲಿ 80 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದೆ. ಧೂಳಪ್ಪ ಹೊಸಾಳೆ ಮನೆಯಲ್ಲಿ 2 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಸ್ಥಿರ ಆಸ್ತಿಯು 1.82 ಕೋಟಿ ರೂ ಪತ್ತೆಯಾದರೇ, ಚರ ಆಸ್ತಿಯು 1.56 ಕೋಟಿ ರೂಪಾಯಿ ಆಸ್ತಿ ಪತ್ತೆಯಾಗಿದೆ. 160 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. 2006 ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ್ದಾರೆ. ಬ್ಯಾಂಕ್ ಖಾತೆಯಲ್ಲಿ 16 ಲಕ್ಷ ರೂಪಾಯಿ ಠೇವಣಿ ಪತ್ತೆಯಾಗಿದೆ. ಬೀದರ್ ನಲ್ಲಿ 2 ನಿವೇಶನ ಪತ್ತೆಯಾಗಿವೆ ಎಂದು ಲೋಕಾಯುಕ್ತ ಎಸ್.ಪಿ. ಸಿದ್ದರಾಜು ಮಾಹಿತಿ ನೀಡಿದ್ದಾರೆ.
ಕಂದಾಯ ನಿರೀಕ್ಷಕ ಅಧಿಕಾರಿಗೆ ಲೋಕಾಯುಕ್ತ ಶಾಕ್
ಹಾವೇರಿಯಲ್ಲಿ ಇಬ್ಬರು ಅಧಿಕಾರಿಗಳಿಗೆ ಲೋಕಾಯುಕ್ತ ಚಳಿ ಬಿಡಿಸಿದೆ.. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕಂದಾಯ ನೀರಿಕ್ಷಕ ಅಶೋಕ ಅರಳೇಶ್ವರ ಮತ್ತು ಸವಣೂರು ತಾಲೂಕಿನ ಪಂಚಾಯತಿ ಇಓ ಬಸವೇಶ್ವರ ಶಿಡೇನೂರು ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ರು.. ಕಂದಾಯ ನೀರೀಕ್ಷಕರಾಗಿರೋ ಅಶೋಕ ಅರಳೇಶ್ವರ್​​ ಬಳಿ 2 ಐಷಾರಾಮಿ ಮನೆ, 2 ಸೈಟ್, 11 ಎಕರೆ ಜಮೀನು, ಸೇರಿ 1 ಕೋಟಿ 35 ಲಕ್ಷ 96 ಸಾವಿರದ 462 ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ಮನೆಯಲ್ಲಿ ನಗದು ಚಿನ್ನಾಭರಣ ಪತ್ತೆಯಾಗಿದೆ..
ದಾವಣೆಗೆರೆಯಲ್ಲಿ ಇಬ್ಬರು ಅಧಿಕಾರಿಗಳ ಮೇಲೆ ದಾಳಿ
ಇತ್ತ ದಾವಣಗೆರೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಇಬ್ಬರು ಅಧಿಕಾರಿಗಳ ಮನೆ ಕಚೇರಿ ದಾಳಿ ನಡೆಸಿದ್ರು.. ದಾವಣಗೆರೆ KRDILನ AE ಜಗದೀಶ್ ನಾಯ್ಕ್ ಮತ್ತು ಆಹಾರ ನಾಗರಿಕ ಸರಬರಾಜು ಇಲಾಖೆ SDA ನಡುವಿನ ಮನಿಗೆ ಸಂಬಂಧಪಟ್ಟ 10 ಕಡೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲಿಸಿದ್ರು..
ಕ್ರೆಡಿಲ್​ನ ಇಂಜಿನಿಯರ್ ಮನೆ ಮೇಲೆ ‘ಲೋಕಾ’ ರೇಡ್​
ಮತ್ತೊಂದೆಡೆ ಶಿವಮೊಗ್ಗದಲ್ಲಿ ಕ್ರೆಡಿಲ್​ನ ಇಂಜಿನಿಯರ್ ಜಗದೀಶ ನಾಯ್ಕ ನಿವಾಸದ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ರು.. ದಾವಣಗೆರೆಯ ಲೋಕಾಯುಕ್ತ ಅಧಿಕಾರಿಗಳ ತಂಡ ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಜಗದೀಶ ನಾಯ್ಕಗೆ ಸೇರಿದ ಕೃಷಿ ನಗರ ಹಾಗೂ ಇಂದ್ರಾ ನಗರದಲ್ಲಿರುವ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನ ತಡಕಾಡಿದ್ರು..
RTO ಅಧಿಕಾರಿ, ಬ್ರೋಕರ್​​ ಜನ್ಮ ಜಾಲಾಡಿದ ‘ಲೋಕಾ’
ಇತ್ತ, ಉಡುಪಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳಂಬೆಳಗ್ಗೆ ಭ್ರಷ್ಟರಿಗೆ ಶಾಕ್​ ಕೊಟ್ಟಿದ್ದಾರೆ.. RTO ಅಧಿಕಾರಿ ಲಕ್ಷ್ಮೀನಾರಾಯಣ ಪಿ ನಾಯಕ್ ವಿರುದ್ಧ ಸಾರ್ವಜನಿಕ ದೂರಿನ ಹಿನ್ನೆಲೆ ಅಧಿಕಾರಿಗಳು ಸರ್ಚ್​ ಮಾಡಿದ್ದು, ಮೂರು ಕಡೆ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ.. ಜೊತೆಗೆ ಲಾಕರ್ ಕೂಡ ಪರಿಶೀಲಿಸಿದ್ದು, ಆಸ್ತಿ ವಿವರಗಳ ದಾಖಲೆ ಕಲೆ ಹಾಕಿದ್ದಾರೆ.. ಇನ್ನ, ಆರ್​ಟಿಓ ಕಚೇರಿಯ ಬ್ರೋಕರ್ ರವಿ ಶೇರಿಗಾರ್ ಮನೆಯಲ್ಲೂ ನಗದು ಪತ್ತೆಯಾಗಿದೆ..
ಬೆಂಗಳೂರಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ದಾಳಿ
ಇನ್ನು ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪದಲ್ಲಿ ಬೆಂಗಳೂರಿನಲ್ಲಿ ಮೆಡಿಕಲ್ ಅಧಿಕಾರಿ ಹಾಗೂ PU ಬೋರ್ಡ್ ನಿರ್ದೇಶಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕೆಂಗೇರಿಯ ಸ್ಯಾಟಲೈಟ್ ಟೌನ್​ನಲ್ಲಿರೋ ಪಿ.ಯು ಬೋರ್ಡ್ ನಿರ್ದೇಶಕಿ ಸುಮಂಗಳ ಮನೆಯಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳು ತಡಕಾಡಿದ್ದಾರೆ. ಸುಮಂಗಲ ಅವರ ಮನೆಯಲ್ಲಿ ಒಂದೂವರೆ ಕೆಜಿ ಯಷ್ಟು ಚಿನ್ನ ಸಿಕ್ಕಿದೆ. ಸುಮಂಗಲ ಅವರು ಬೆಂಗಳೂರು ನಗರದಲ್ಲಿ ಹಲವು ಕಡೆ ಬಾಡಿಗೆ ಮನೆಗಳನ್ನು ಹೊಂದಿದ್ದಾರೆ.
ಆಲಮಟ್ಟಿ ಬಲದಂಡೆ ಯೋಜನೆ JEಗೆ ಲೋಕಾ ಬಿಸಿ
ಆಲಮಟ್ಟಿ ಬಲದಂಡೆ ಯೋಜನೆ ಜೂನಿಯರ್ ಇಂಜಿನಿಯರ್​ಗೆ ಲೋಕಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.. ಬಾಗಲಕೋಟೆಯ ನವನಗರ ಸೆಕ್ಟರ್ ನಂಬರ್ 16ರಲ್ಲಿರುವ ಚೇತನ್ ಮಲಜಿ ಮನೆಗೆ ಲಗ್ಗೆ ಇಟ್ಟ ಅಧಿಕಾರಿಗಳು ವಿವಿಧ ದಾಖಲಾತಿಗಳನ್ನ ಪರಿಶೀಲನೆ ನಡೆಸಿದ್ದಾರೆ..
ಒಟ್ಟಾರೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ಆದಾಯ ಮೀರಿ ಸಂಪತ್ತು ಗಳಿಸಿದವರಿಗೆ ಲೋಕಾಯುಕ್ತ ದಾಳಿಯಿಂದ ನಡುಕ ಆಗಿರೋದಂತೂ ಸುಳ್ಳಲ್ಲ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.