Advertisment

ಮಹೇಶ್‌ ಜೋಶಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ: ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ

ಕನ್ನಡ ಸಾಹಿತ್ಯ ಪರಿಷತ್‌ಗೆ ರಾಜ್ಯ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಕಸಾಪ ಮಾಜಿ ಅಧ್ಯಕ್ಷ ಮಹೇಶ್ ಜೋಶಿ ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನಿಡುಮಾಮಿಡಿ ಮಠದ ಪೀಠಾಧಿಪತಿ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಹೇಳಿದ್ದಾರೆ.

author-image
Chandramohan
NIDUMAMIDI SWAMIJI
Advertisment


ವೈಯಕ್ತಿಕವಾಗಿ ಟೀಕೆ-ಟಿಪ್ಪಣಿಗಳನ್ನು ಗೌರವದಿಂದ ಸ್ವೀಕರಿಸಿ,  ಸನ್ನಡತೆ ತೋರದೆ  ಪ್ರತಿಕಾರ ತೆಗೆದುಕೊಳ್ಳುವ ಮನಸ್ಥಿತಿ ತೋರಿದ್ದರಿಂದ ಇಂದು ಕನ್ನಡ ಸಾಹಿತ್ಯ ಪರಿಷತ್ತಿಗೆ ಆಡಳಿತಾಧಿಕಾರಿ ನೇಮಕ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡನೆಯ ಬಾರಿ ಆಡಳಿತಾಧಿಕಾರಿ ನೇಮಿಸುವ ಸಂದರ್ಭ ಬಂದಿದ್ದು ಒಳ್ಳೆಯ ಸೂಚನೆ ಅಲ್ಲ. ಇನ್ನು ಮುಂದಾದರೂ ಮಾಜಿ ಅಧ್ಯಕ್ಷ ಡಾ.ಮಹೇಶ್ ಜೋಶಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಬಿಎಂಶ್ರೀ ಸಭಾಂಗಣದಲ್ಲಿ ಕನ್ನಡ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ 47ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ,  ಮಾತನಾಡಿದ ಅವರು, ಕನ್ನಡದ ಪರವಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳಲ್ಲಿ ಪ್ರಮುಖವಾಗಿ ಕನ್ನಡ ಸಂಘರ್ಷ ಸಮಿತಿಯೂ ಒಂದಾಗಿದೆ. ಅನೇಕ ದಶಕಗಳಿಂದ ಸಮಿತಿ ಕನ್ನಡ ಕಟ್ಟಾಳು ಹಾಗೂ ನಿಸ್ಸೀಮ ಕನ್ನಡತಿ ಎನ್ನುವ ಪ್ರಶಸ್ತಿಗಳನ್ನು  ಕೊಡುತ್ತಾ ಬರುತ್ತಿದೆ. ಕನ್ನಡಕ್ಕೆ ಆಪತ್ತು ಬಂದಾಗೆಲ್ಲಾ ಧ್ವನಿ ಎತ್ತಿರುವ ಸಂಘಟನೆಗಳಲ್ಲಿ ಒಂದಾಗಿದೆ ಎಂದರು.

Advertisment

ಕಸಾಪ ವಿವಾದದ ಗೂಡಾಗಿದೆ. ಹಿಂದೆ ವಿವಾದಗಳು ಉಂಟಾಗಿಲ್ಲ ಎಂದಲ್ಲ. ಆಯಾ ಸಂದರ್ಭಕ್ಕೆ ವಿವಾದಗಳು ಕಾಣಿಸಿಕೊಂಡರೂ, ತಕ್ಷಣ ಬಗೆಹರಿಯುತ್ತಿದ್ದವು. ಆದರೆ ಇಂದು ಕಸಾಪ ಬಹಳ ಇಕ್ಕಟ್ಟು, ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆಯೇನೋ? ಎಂದು ಅನಿಸುತ್ತಿದೆ. ಜೋಶಿ ಬುದ್ದಿವಂತರು, ಬಹಳ ಕ್ರಿಯಾಶಾಲಿಗಳು, ಒಳ್ಳೆಯ ಸಂಘಟಕರು. ಈ ಹಿಂದೆ ಅವರು ವಿವಿಧ ಹುದ್ದೆಗಳಲ್ಲಿ ಅಧಿಕಾರದಲ್ಲಿದ್ದಾಗ ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೇಲೆ ಅವರು, ಅವರ ಗೌರವವನ್ನು ಕಡಿಮೆ ಮಾಡಿಕೊಂಡಿದ್ದಲ್ಲದೇ, ಪರಿಷತ್ತಿನ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಈಗ ಸಾಹಿತ್ಯ ಪರಿಷತ್ತು ಎಂದರೆ, ಸಾಹಿತಿಗಳ ವಿರುದ್ಧ ಎನ್ನುವ ರೀತಿಯಲ್ಲಿ ಮಾಡಿರುವುದು ವಿಷಾದನೀಯ ಬೆಳವಣಿಗೆ. ಸಾಹಿತಿಗಳನ್ನೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಆಗಬಾರದಿತ್ತು. ಸಾಹಿತಿಗಳು ಪ್ರಶ್ನಿಸುವುದು, ಪ್ರತಿಭಟಿಸುವುದು ಸಹಜ. ಅದು ಸಾಹಿತಿಗಳ ಗುಣ. ಪರಿಷತ್ತಿನ ಹಿತದೃಷ್ಟಿಯಿಂದ ಸಲಹೆ ಸೂಚನೆಗಳನ್ನು ಕೊಟ್ಟರೆ ಅಧ್ಯಕ್ಷ ಸ್ಥಾನದಲ್ಲಿರುವವರು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ನಕಾರಾತ್ಮಕವಾಗಿ ತೆಗೆದುಕೊಂಡು ಹಠಸಾಧನೆ ಮಾಡುವುದು, ಅಧಿಕಾರದ ಮನೋಭಾವ ತೋರುವುದು ಒಳ್ಳೆಯ ನಡವಳಿಕೆ ಅಲ್ಲ ಎಂದು ಅಭಿಪ್ರಾಯ ಪಟ್ಟರು.

ಸಾಹಿತಿಗಳ ಅಜೀವ ಸದಸ್ಯತ್ವವನ್ನು ರದ್ದು  ಮಾಡುವುದು, ಅವರ ಮೇಲೆ ಪ್ರಕರಣ ದಾಖಲಿಸುವುದು, ಬೆದರಿಸಿ ಬಾಯಿ ಮುಚ್ಚಿಸುವ ಕಾರ್ಯದಲ್ಲಿ  ಮಹೇಶ್  ಜೋಶಿ ತೊಡಗಬಾರದಿತ್ತು. ಸಾಹಿತ್ಯ ಪರಿಷತ್ತನ್ನು ಭಯದಲ್ಲಿರಿಸಿ ಕಟ್ಟಲು ಸಾಧ್ಯವಿಲ್ಲ. ಅದನ್ನು ಪ್ರೀತಿ, ವಿಶ್ವಾಸದಿಂದ ಕಟ್ಟಬೇಕು. ಹಿಂದೆ ಇದ್ದ ಮಹನೀಯರೆಲ್ಲ ಅವರವರ ಮಿತಿಯೊಳಗೆ ಸಾಕಷ್ಟು ಒಳ್ಳೆಯ ಕೆಲಸ ಮಾಡಿ ಪರಿಷತ್ತನ್ನು ಬೆಳೆಸಿದ್ದಾರೆ. ಜೋಶಿ ಅದೇ ದಾರಿಯಲ್ಲಿ ಹೋಗಿದ್ದರೆ ಚೆನ್ನಾಗಿರುತ್ತಿತ್ತು. ಅವರಿಗೂ ಒಳ್ಳೆಯ ಹೆಸರು ಬರುತ್ತಿತ್ತು. ಪರಿಷತ್ತೂ ಉನ್ನತ ಮಟ್ಟಕ್ಕೆ ಏರುತ್ತಿತ್ತು.

Advertisment

 ಕನ್ನಡದ ಪ್ರಸಿದ್ಧ ಲೇಖಕರು ವಿದ್ವಾಂಸರು ಆಗಿರುವ ಹಿರಿಯರು ಆಗಿರುವ ಹರಿಹರಪ್ರಿಯ ಅವರು, ವಿವಿ ಕೊಟ್ಟಿರುವ ಗೌರವ ಡಾಕ್ಟರೇಟ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಕೊಟ್ಟಿರುದ್ದ  ಪ್ರಶಸ್ತಿಫಲಕಗಳು ಸುಟ್ಟುಹಾಕಿದ್ದಾರೆ ಎನ್ನುವ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ವ್ಯವಸ್ಥೆ, ಸಮಾಜ, ಸರಕಾರದ ಬಗ್ಗೆ ಅಸಮಾಧಾನ ಇದ್ದರೆ ಅವರು ಗೌರವ ಡಾಕ್ಟರೇಟ್ ಅನ್ನು, ಪ್ರಶಸ್ತಿಯನ್ನು ಅವರವರಿಗೆ ಹಿಂದಿರುಗಿಸುವ ಕೆಲಸ ಮಾಡಬಹುದಾಗಿತ್ತು. ಆದರೆ ಸುಟ್ಟು ಹಾಕಿದ್ದು, ಸಾಧುವಾದ ನಡವಳಿಕೆ ಅಲ್ಲ. ಇದು ಅಸಹಜ ನಡವಳಿಕೆ. ಇಂತಹ ನಡವಳಿಕೆ ಕೂಡದು.

ನಿಮ್ಮ ಮೇಲಿನ ಗೌರವದಿಂದ ಪ್ರಶಸ್ತಿ ಕೊಟ್ಟಾಗ, ತೆಗೆದುಕೊಳ್ಳುವಾಗ ಪ್ರೀತಿ, ವಿಶ್ವಾಸದಿಂದ ತೆಗೆದುಕೊಂಡಿದ್ದು, ಅದನ್ನು ಸುಟ್ಟು ಹಾಕುವುದು ಅತಿರೇಖದ ವರ್ತನೆಯಾಗುತ್ತದೆ. ಆದರೆ ತಿರಸ್ಕಾರದಿಂದ ನೋಡುತ್ತಿದ್ದಾರೆ, ನನ್ನ ಮನವಿಗೆ ಸ್ಪಂದಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿಸುತ್ತಿವೆ. ಹಾಗಾಗಿ ಅವರು ನೋವಿನಿಂದಲೂ ಮಾಡಿರಬಹುದು. ಅವರ ಮನವಿಗಳಿಗೆ ಸರಕಾರವೂ ಸ್ಪಂದಿಸಬೇಕು. ಅಷ್ಟೇ ಅಲ್ಲ ಅಲ್ಲಿನ ಜನಪ್ರತಿನಿಧಿಗಳು, ಅಲ್ಲಿನ ಸಾಹಿತ್ಯ ಪ್ರಿಯರು ಅವರ ಸಹಾಯಕ್ಕೆ ನಿಲ್ಲಬೇಕು. ಇದಕ್ಕೆ ಮುಖ್ಯವಾಗಿ ಬೇರೆಯವರು ಕಾರಣ ಅಲ್ಲ. ಈ ಪರಿಸ್ಥಿತಿಗೆ ಅವರ  ಅಪ್ರಿಯ ನಡವಳಿಕೆಯೇ ಕಾರಣ. ಅವರು ಸೌಜನ್ಯದಿಂದ ನಡೆದುಕೊಂಡಿದ್ದರೆ, ಅವರನ್ನು ಯಾರೂ ದೂರ ಇಡುತ್ತಿರಲಿಲ್ಲ. ಅವರಾಗಿಯೇ ಎಲ್ಲರನ್ನೂ ದೂರ ಮಾಡಿಕೊಳ್ಳುತ್ತಿರುವುದು. ಅವರ  ಜಗಳಗಂಟಿತನ ಸ್ವಭಾವದಿಂದ ಹೊರಗೆ ಬಂದರೆ, ಅವರಿಗೆ ಎಲ್ಲರೂ ಆಧರಿಸುತ್ತಾರೆ. ಜಗಳಗಂಟಿತನ ಮಾಡುತ್ತಾ ಹೋದರೆ, ಎಲ್ಲರೂ ದೂರ ಆಗುತ್ತಾರೆ. ಇದು ಜನರ ತಪ್ಪಲ್ಲ, ಸಾಹಿತಿಗಳ ತಪ್ಪು ಎಂದು ಅನಿಸುತ್ತದೆ ಎಂದು  :ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ  ಅಭಿಪ್ರಾಯ ಪಟ್ಟರು.

NIDUMAMIDI SWAMIJI 02





ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್‌ ಹಾನಗಲ್‌ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಕನ್ನಡದ ಹಿನ್ನೆಡೆಗೆ ನಾವೇ ಕಾರಣರು. ಪರಭಾಷಿಕರ ಜೊತೆ ಕನ್ನಡದಲ್ಲೇ ಮಾತನಾಡಬೇಕು. ಅವರು ಅನಿವಾರ್ಯವಾಗಿ ಕನ್ನಡ ಕಲಿಯುವ ವಾತಾವರಣ ಸೃಷ್ಟಿಯಾಗಬೇಕು. ಸುಮಾರು ಶೇಕಡಾ 47 ರಷ್ಟು ಪರಭಾಷಿಕರು ಕನ್ನಡ ನಾಡಿನಲ್ಲಿ ಇದ್ದಾರೆ. ಅವರಿಗೆ ಕನ್ನಡ ಕಲಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

Advertisment

ಕನ್ನಡಪರ ಹೋರಾಟಗಾರ ರಾಮಣ್ಣ ಎಚ್.ಕೋಡಿಹೊಸಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಅಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ ಆಶಯ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ತಾ.ಸಿ.ತಿಮ್ಮಯ್ಯ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಇಂದಿರಾ ಶರಣ್‌ ಜಮ್ಮಲದಿನ್ನಿ ಕಾರ್ಯಕ್ರಮ ನಿರೂಪಿಸಿದರು.

NIDUMAMIDI SWAMIJI ON KASAPA MAHESH JOSHI
Advertisment
Advertisment
Advertisment