ಮಾಲೇಗಾಂವ್ ಬಾಂಬ್ ಸ್ಪೋಟ ಕೇಸ್ ನ ಎಲ್ಲ 7 ಆರೋಪಿಗಳು ಖುಲಾಸೆ

ಮುಂಬೈನ ಎನ್‌ಐಎ ಸ್ಪೆಷಲ್ ಕೋರ್ಟ್ ನಿಂದ ಮಹತ್ವದ ತೀರ್ಪು. ಮಾಲೇಗಾಂವ್ ಬಾಂಬ್ ಸ್ಪೋಟ ಕೇಸ್ ನ ಎಲ್ಲ 7 ಆರೋಪಿಗಳು ಖುಲಾಸೆ

author-image
Siddeshkumar H P
Malegaon-blast-case-Special-NIA-court-acquits_Sadvi-Prajna-singh-Thakur_Purohit
Advertisment

ಮಹಾರಾಷ್ಟ್ರದ  ನಾಸಿಕ್ ಜಿಲ್ಲೆಯಲ್ಲಿರುವ ಮಾಲೇಗಾಂವ್ ಟೌನ್‌ ನಲ್ಲಿ 17 ವರ್ಷಗಳ ಹಿಂದೆ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪು ಇವತ್ತು ಪ್ರಕಟವಾಗಿದೆ.  ಬಾಂಬ್ ಸ್ಪೋಟದಲ್ಲಿ 6 ಮಂದಿ ಸಾವನ್ನಪ್ಪಿ, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಬಾಂಬ್ ಸ್ಪೋಟ ಪ್ರಕರಣದ ಎಲ್ಲ 7 ಮಂದಿ ಆರೋಪಿಗಳನ್ನು ಇಂದು ಖುಲಾಸೆಗೊಳಿಸಿ ಮುಂಬೈನ ಸ್ಪೆಷಲ್ ಕೋರ್ಟ್ ತೀರ್ಪು ನೀಡಿದೆ. ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್, ಆರ್ಮಿಯ ಮಾಜಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಸೇರಿದಂತೆ ಎಲ್ಲ 7 ಮಂದಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. 


ಮಾಲೇಗಾಂವ್ ಟೌನ್‌ನ ಭಿಕು ಚೌಕ್ ನಲ್ಲಿ 2008ರ ಸೆಪ್ಟೆಂಬರ್ 29 ರ ರಾತ್ರಿ ಬಾಂಬ್ ಸ್ಪೋಟ ಸಂಭವಿಸಿತ್ತು. ಮುಂಬೈನಿಂದ 200 ಕಿಲೋಮೀಟರ್ ದೂರದ ಮಾಲೇಗಾಂವ್‌ ನಲ್ಲಿ ಪವಿತ್ರ ರಂಜಾನ್ ತಿಂಗಳಲ್ಲಿ ಸ್ಪೋಟ ಸಂಭವಿಸಿತ್ತು. ಈ ಕೇಸ್ ನಲ್ಲಿ ಪ್ರಾಸಿಕ್ಯೂಷನ್ ಆರೋಪಿಗಳ ವಿರುದ್ಧದ  ಆರೋಪವನ್ನು ಸಾಬೀತುಪಡಿಸಲು ವಿಫಲವಾಗಿದೆ.  ಹೀಗಾಗಿ ಎಲ್ಲ 7 ಮಂದಿ ಆರೋಪಿಗಳು ಅನುಮಾನದ ಲಾಭ ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಸ್ಪೋಟದಲ್ಲಿ ಬಳಕೆಯಾದ ಮೋಟಾರ್ ಸೈಕಲ್ ಪ್ರಜ್ಞಾ ಠಾಕೂರ್ ರದ್ದು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಮೋಟಾರ್ ಸೈಕಲ್‌ನ ಇಂಜಿನ್ ನಂಬರ್ ಸ್ಪಷ್ಟವಾಗಿಲ್ಲ. ಬೈಕ್‌ನ ಚಾಸಿ ನಂಬರ್ ಅಳಿಸಿ ಹೋಗಿದೆ. ಭಯೋತ್ಪಾದನೆಗೆ ಯಾವುದೇ ಧರ್ಮ ಇಲ್ಲ. ಆದರೇ, ಬರೀ ಊಹೆಯ ಆಧಾರದ ಮೇಲೆ ಯಾರನ್ನೂ ಅಪರಾಧಿಗಳೆಂದು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. 

ಮಾಲೇಗಾಂವ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿಗಳು

  • ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಭೋಪಾಲ್ ಕ್ಷೇತ್ರದ ಮಾಜಿ ಸಂಸದೆ
  • ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಮಿಲಿಟರಿ ಇಂಟಲಿಜೆನ್ಸ್ ಅಧಿಕಾರಿ
  • ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ
  • ಅಜಯ ರಹೀರಕರ್
  • ಸುಧಾಕರ್ ದ್ವಿವೇದಿ,
  • ಸುಧಾಕರ್ ಚತುರ್ವೇದಿ
  • ಸಮೀರ್ ಕುಲಕರ್ಣಿ

ಈ ಎಲ್ಲ ಆರೋಪಿಗಳ ವಿರುದ್ಧ ಯುಎಪಿಎ  ಅಡಿ ಹಾಗೂ ಐಪಿಸಿ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಿಸಲಾಗಿತ್ತು. ಸಂಚು, ಕೊಲೆ, ಕೊಲೆಗೆ ಯತ್ನ, ದ್ವೇಷ ಬಿತ್ತುವುದು, ಸ್ವಪ್ರೇರಣೆಯಿಂದ ಗಾಯಗೊಳಿಸುವುದು ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಿಸಲಾಗಿತ್ತು. ಮುಂಬೈನ ಎನ್‌ಐಎ ಕೋರ್ಟ್ ನಲ್ಲಿ ವಿಸ್ತೃತ ವಿಚಾರಣೆ ನಡೆದಿತ್ತು. 

ಪ್ರಾರಂಭದಲ್ಲಿ ತನಿಖೆಯನ್ನು ಮಹಾರಾಷ್ಟ್ರದ ಎಟಿಎಸ್ ನಡೆಸಿತ್ತು. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ತನಿಖೆ ನಡೆಸಿದ್ದರು. ಆದರೇ, ಹೇಮಂತ್ ಕರ್ಕರೆ, 2008ರ ನವಂಬರ್‌ 26ರ ಮುಂಬೈ ದಾಳಿ ವೇಳೆ ಭಯೋತ್ಪಾದಕರ ದಾಳಿಯ ವೇಳೆ ಸಾವನ್ನಪ್ಪಿದ್ದರು. 
ಮಹಾರಾಷ್ಟ್ರ ಎಟಿಎಸ್‌ 2008ರ ಆಕ್ಟೋಬರ್ ನಲ್ಲಿ ಈ ಕೇಸ್ ನಲ್ಲಿ ಮೊದಲ ಬಂಧನ ಮಾಡಿತ್ತು. ಸ್ಪೋಟದಲ್ಲಿ ಬಳಸಿದ್ದ ಬೈಕ್, ಪ್ರಜ್ಞಾ ಸಿಂಗ್ ಠಾಕೂರ್‌ಗೆ ಸೇರಿದ್ದು ಎಂದು ಎಟಿಎಸ್ ಹೇಳಿತ್ತು. ಬೈಕ್ ಅನ್ನು ಪ್ರಜ್ಞಾ ಸಿಂಗ್ ಠಾಕೂರ್, ಸಂಚುಕೋರರಿಗೆ ನೀಡಿದ್ದರು. ಮೂಲಭೂತವಾದಿ ಸಂಘಟನೆ ಅಭಿನವ್ ಭಾರತ್ ಸದಸ್ಯರು ಈ ಸ್ಪೋಟದಲ್ಲಿ ಭಾಗಿಯಾಗಿದ್ದಾರೆ ಎಂದು ಎಟಿಎಸ್ ಹೇಳಿತ್ತು. 

ಪ್ರಾಸಿಕ್ಯೂಷನಲ್ ಸ್ಪೋಟ ನಡೆದಿದೆ ಎನ್ನುವುದನ್ನು ಯಶಸ್ವಿಯಾಗಿ ಸಾಬೀತುಪಡಿಸಿದೆ. ಆದರೇ, ಎನ್‌ಐಎ, ಬೈಕ್ ನಲ್ಲಿ ಬಾಂಬ್ ಜೋಡಿಸಲಾಗಿತ್ತು ಎನ್ನುವುದನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ತೀರ್ಪೀನಲ್ಲಿ ಹೇಳಿದೆ. ಸ್ಪೋಟದಲ್ಲಿ ಆರ್‌ಡಿಎಕ್ಸ್ ಬಳಕೆ ಮಾಡಲಾಗಿದೆ ಎಂಬ ಆರೋಪ ಇದೆ. ಆದರೇ, ಆರ್‌ಡಿಎಕ್ಸ್ ಅನ್ನು ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಮನೆಯಲ್ಲಿ ಸಂಗ್ರಹಿಸಲಾಗಿತ್ತು ಎಂಬುದಕ್ಕೆ ಸಾಕ್ಷ್ಯ ಇಲ್ಲ. ಜೊತೆಗೆ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಬಾಂಬ್ ಅನ್ನು ಜೋಡಿಸಿದ್ದರು ಎಂಬುದಕ್ಕೂ ಸಾಕ್ಷ್ಯ ಇಲ್ಲ. ಜೊತೆಗೆ ಬೈಕ್ ಗೆ ಪ್ರಜ್ಞಾ ಸಿಂಗ್ ಠಾಕೂರ್ ಮಾಲೀಕರು ಎಂಬುದಕ್ಕೂ ಸಾಕ್ಷ್ಯ ಇಲ್ಲ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. 

ಕೆಲ  ಆರೋಪಿಗಳ ಕಸ್ಟಡಿ, ಟ್ರೀಟ್ ಮೆಂಟ್ ಗೆ ಸಂಬಂಧಿಸಿದ ದಾಖಲೆಗಳನ್ನು ಕೆಲ ಮಟ್ಟಿಗೆ ತಿರುಚಲಾಗಿದೆ. ಬರೀ ಅನುಮಾನ, ಊಹೆ ಆಧಾರದ ಮೇಲೆ ಅಪರಾಧಿ ಎಂದು ತೀರ್ಪು ನೀಡಲಾಗಲ್ಲ. ಅನುಮಾನದ ಲಾಭ ಆರೋಪಿಗಳಿಗೆ ಸಿಗಬೇಕು ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. 

ಇಂದು ಮುಂಬೈನ ಎನ್‌ಐಎ ವಿಶೇಷ ಕೋರ್ಟ್ ತೀರ್ಪು ನೀಡುವಾಗ ಎಲ್ಲ 7 ಮಂದಿ ಆರೋಪಿಗಳು ಕೋರ್ಟ್ ನಲ್ಲಿ ಹಾಜರಿದ್ದರು. ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ಪ್ರಜ್ಞಾ ಸಿಂಗ್ ಠಾಕೂರ್, ಈ ಕೇಸ್ ನಿಂದಾಗಿ ತಮ್ಮ ಇಡೀ ಜೀವನ ಹಾಳಾಯಿತು. ತಪ್ಪಿತಸ್ಥರಿಗೆ ದೇವರೇ ಶಿಕ್ಷೆ ಕೊಡ್ತಾರೆ ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ. ನಾನು ಪ್ರಾರಂಭದಿಂದ ಹೇಳುತ್ತಿದ್ದೇನೆ, ತನಿಖೆಗೆ ಕರೆಯಲು ಏನಾದರೂ ಆಧಾರ, ಸಾಕ್ಷ್ಯ ಇರಬೇಕು. ನನ್ನನ್ನು ತನಿಖೆಗೆ ಕರೆದರು. ಬಂಧಿಸಿ, ಕಿರುಕುಳ ನೀಡಿದ್ದರು. ಈ ಕೇಸ್ ನನ್ನ ಇಡೀ ಜೀವನವನ್ನು ಹಾಳು ಮಾಡಿತು. ನಾನು ಸನ್ಯಾಸಿ ಜೀವನ ನಡೆಸುತ್ತಿದ್ದೇನೆ. ಆದರೇ, ನನ್ನನ್ನು ಆರೋಪಿಯನ್ನಾಗಿ ಮಾಡಿದ್ದರು. ಯಾರೂ ಕೂಡ ನಮ್ಮ ಜೊತೆ ಬೆಂಬಲವಾಗಿ ನಿಲ್ಲಲಿಲ್ಲ. ನಾನು ಬದುಕಿರಲು, ಸನ್ಯಾಸಿಯಾಗಿ ಇರುವುದೇ ಕಾರಣ ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ. 

ಚಂದ್ರಮೋಹನ್, ನ್ಯೂಸ್ ಫಸ್ಟ್

Advertisment