/newsfirstlive-kannada/media/media_files/2025/09/16/high-court-and-kyn-2025-09-16-16-36-34.jpg)
K.Y.ನಂಜೇಗೌಡ ಆಯ್ಕೆ ಅಸಿಂಧು ಎಂದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ ಇಂದು ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಿ ಆದೇಶ ನೀಡಿದೆ. ಮುಂದಿನ ನಾಲ್ಕು ವಾರಗಳಲ್ಲಿ ಮತಗಳ ಮರುಎಣಿಕೆಗೂ ಆದೇಶ ನೀಡಿದೆ.
ಹೈಕೋರ್ಟ್ ಆದೇಶದ ಬಗ್ಗೆ ಕೋಲಾರದ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಹೈಕೋರ್ಟ್ ಆದೇಶ ಅಚ್ಚರಿ ತಂದಿದೆ ಎಂದಿದ್ದಾರೆ. ಚುನಾವಣೆಯನ್ನು ಅಸಿಂಧುಗೊಳಿಸಿ ಮರುಎಣಿಕೆಗೆ ಆದೇಶ ನೀಡಿರುವುದು ಬೇಸರದ ವಿಚಾರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಎದುರಾಳಿ ಅಭ್ಯರ್ಥಿ ಮರು ಎಣಿಕೆ ಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದರು. ನಾನು ಈಗ ಹಿರಿಯ ವಕೀಲರೊಂದಿಗೆ ಮಾತನಾಡುತ್ತೇನೆ. ಮರು ಎಣಿಕೆಗೆ ಮಾತ್ರ ಆದೇಶವಾಗಿದ್ದರೆ ನಾನು ಸ್ವಾಗತಿಸುತಿದ್ದೆ. ಮರು ಎಣಿಕೆಗೆ ಆದೇಶ ಆಗಿದ್ದರೂ, ನಾನೇ ಗೆಲ್ಲವು ವಿಶ್ವಾಸ ಇದೆ. ಆದರೆ ಚುನಾವಣೆಯನ್ನು ಅಸಿಂಧು ಮಾಡಿ ಮರು ಎಣಿಕೆ ಆದೇಶ ಕೊಟ್ಟಿದ್ದಾರೆ. 30 ದಿನಗಳ ತಡೆಯಾಜ್ಞೆ ನೀಡಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡಿದ್ದಾರೆ . ನನಗೆ ಬೇಸರವಾದ ವಿಚಾರ ಎಂದರೆ ಚುನಾವಣೆ ಅಸಿಂಧು ಮಾಡಿ ಮರು ಎಣಿಕೆಗೆ ಆದೇಶ ನೀಡಿರುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದಾರೆ.
ಈ ಕುರಿತು ಹಿರಿಯ ವಕೀಲರೊಂದಿಗೆ ಚರ್ಚಿಸಿ ಸುಪ್ರೀಂ ಕೋರ್ಟ್ ನಲ್ಲಿ ಚಾಲೆಂಜ್ ಮಾಡುತ್ತೇನೆ. ನಾನು ಈ ಆದೇಶ ನಿರೀಕ್ಷಿಸಿರಲಿಲ್ಲ. ಈ ಹಿಂದೆಯೂ ಹೇಳಿದ್ದೆ. ಕೇವಲ ಮರು ಎಣಿಕೆ ಆಗಿದಿದ್ದರೇ, ನಾನು ಸುಪ್ರೀಂಕೋರ್ಟ್ ಗೆ ಅಪೀಲು ಹೋಗುತ್ತಿರಲಿಲ್ಲ. ಇವತ್ತಿನ ತೀರ್ಪು ನನಗೆ ಸಮಾಧಾನವಿಲ್ಲ . ಆದ್ದರಿಂದ ನಾನು ಸುಪ್ರಿಂಗೆ ಹೋಗುತ್ತೇನೆ .
ನನಗೆ ಇನ್ನೂ ಆದೇಶದ ಪ್ರತಿ ಬಂದಿಲ್ಲ . ಕೌಂಟಿಂಗ್ ಮೇಲೆ ನನಗೆ ಅನುಮಾನ ಇಲ್ಲ . ನಾನು ವಿಜಯಿ ಆಗಿದ್ದೇನೆ ಎಂದು ಪ್ರಕಟ ಮಾಡಿದ್ದಾರೆ. ಈ ಆದೇಶದಿಂದ ನನಗೆ ತುಂಬಾ ಬೇಸರವಾಗಿದೆ. ಮರು ಎಣಿಕೆ ನಡೆದರೇ, ಮತ್ತೇ ನಾನೇ ಗೆಲ್ಲುತ್ತೇನೆ. ನನಗೂ ಅದಕ್ಕೂ ಸಂಬಂಧ ಇಲ್ಲ. ಮತ ಎಣಿಕೆ ದಿನದಂದು ಸ್ಥಳದಲ್ಲಿ ನಾನು ಇರಲಿಲ್ಲ. ಕೌಂಟಿಂಗ್ ಅಂತಿಮವಾದ ನಂತರ ನಾನು ಮತ ಎಣಿಕೆ ಕೇಂದ್ರದ ಒಳಗೆ ಹೋಗಿದ್ದೇನೆ. ಮತ ಎಣಿಕೆ ಕೆಲಸ ಅಧಿಕಾರಿಗಳದ್ದು . ಯಾವ ರೀತಿ ಮಾಡಬೇಕು ಎಂಬುದು ಅವರಿಗೆ ಬಿಟ್ಟಿದ್ದು. ಅದರ ಬಗ್ಗೆ ನಾನು ಮಾತನಾಡೋಲ್ಲ ಎಂದು ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.